ಅದು ಹಸಿದವರ ಹೊಟ್ಟೆ ತುಂಬಿಸುವ, ಬಡವರು ಹಾಗೂ ನಿರ್ಗತಿಕರ ಪಾಲಿಸಿ ಮಹತ್ವಪೂರ್ಣ ಯೋಜನೆ, ಸಿಎಂ ಸಿದ್ದರಾಮಯ್ಯ ಅವರ ಕನಸಿನ ಕೂಸು ಹಾಗೂ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್. ಆದರೆ ಕೋಲಾರ ಜಿಲ್ಲಾ ಕೇಂದ್ರದಲ್ಲೇ ಈ ಯೋಜನೆಗೆ ಗ್ರಹಣ ಹಿಡಿದಿದೆ, ಹೊತ್ತು ಹೊತ್ತಿಗೆ ಹಸಿದವರ ಹೊಟ್ಟೆ ತುಂಬಿಸಬೇಕಿದ್ದ ಇಂದಿರಾ ಕ್ಯಾಂಟೀನ್ ಕಿಲುಬು ಹಿಡಿಯುತ್ತಿದೆ. ಇಂದಿರಾ ಕ್ಯಾಂಟೀನ್ನಲ್ಲಿ ತಿಂಡಿ ತಿನ್ನುತ್ತಿರುವ ಬೆರಳೆಣಿಕೆಯಷ್ಟು ಜನ, ಇಂದಿರಾ ಕ್ಯಾಂಟೀನ್ ಸುತ್ತಮುತ್ತ ಕಸದ ರಾಶಿ, ಕ್ಯಾಂಟೀನ್ ಆವರಣದಲ್ಲೇ ಸತ್ತು ಬಿದ್ದಿರುವ ಹೆಗ್ಗಣ, ಇಂದಿರಾ ಕ್ಯಾಂಟೀನ್ ಒಳಗೆ ತುಕ್ಕು ಹಿಡಿದಿರುವ ಪಾತ್ರೆ ಸಾಮಾನುಗಳು, ಯಂತ್ರಗಳು, ಈ ಎಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ನಗರದ ಇಂದಿರಾ ಕ್ಯಾಂಟೀನ್ ಬಳಿ.
ಹೌದು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಇಂದಿರಾ ಕ್ಯಾಂಟೀನ್ ಕೂಡಾ ಒಂದು. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹತ್ವ ಕಳೆದುಕೊಂಡಿದ್ದ ಇಂದಿರಾ ಕ್ಯಾಂಟೀನ್, ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ಚಾಲ್ತಿಗೆ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳೇ ಕಳೆದರೂ ಅನೇಕ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ಗೆ ಮತ್ತೆ ಮರು ಜೀವ ಸಿಕ್ಕಿಲ್ಲ. ಅದರಲ್ಲೂ ಕೋಲಾರ ಜಿಲ್ಲಾ ಕೇಂದ್ರದಲ್ಲಿ ಹಳೇ ಬಸ್ ನಿಲ್ದಾಣದ ಹೂವಿನ ಮಾರುಕಟ್ಟೆಯ ಹಿಂಭಾಗದಲ್ಲಿ ಮಾಡಲಾಗಿರುವ ಇಂದಿರಾ ಕ್ಯಾಂಟೀನ್ ಬಳಿ ಶುಚಿತ್ವ, ನೀರಿನ ಕೊರತೆ ಹಾಗೂ ಸರಿಯಾದ ನಿರ್ವಹಣೆ ಇಲ್ಲದ ಪರಿಣಾಮವಾಗಿ ಇಂದಿರಾ ಕ್ಯಾಂಟೀನ್ಗೆ ಗ್ರಹಣ ಹಿಡಿದಿದೆ.
ಕೋವಿಡ್ ಸಂದರ್ಭದಲ್ಲಿ ಹಾಗೂ ಅದಕ್ಕೂ ಮೊದಲು ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿನ ಇಂದಿರಾ ಕ್ಯಾಂಟೀನ್ನಲ್ಲಿ ಊಟ ತಿಂಡಿ ಮಾಡುತ್ತಿದ್ದರು. ಆದರೆ ಈಗ ಕೇವಲ ಇನ್ನೂರರಿಂದ ಮುನ್ನೂರು ಜನರಿಗೆ ಊಟ ಮಾಡಿ ಬಡಿಸೋದು ಕಷ್ಟದ ಕೆಲಸವಾಗಿದೆ. ಕಾರಣ ಇಂದಿರಾ ಕ್ಯಾಂಟೀನ್ನಲ್ಲಿರುವ ಯಂತ್ರೋಪರಣ, ಅಡುಗೆ ಮಾಡುವ ಪಾತ್ರೆ ಸಾಮಾನುಗಳು ತುಕ್ಕು ಹಿಡಿದಿರುವುದು, ವಾಟರ್ ಫಿಲ್ಟರ್ ಕೆಟ್ಟು ನಿಂತಿರುವುದು, ಜೊತೆಗೆ ಸಿಬ್ಬಂದಿ ಕೊರತೆ ಇದೆ, ನಿತ್ಯದ ನಿರ್ವಹಣೆಗೆ ಕೇವಲ ಮೂರು ಜನ ಸಿಬ್ಬಂದಿ ಇದ್ದಾರೆ.
ನಿತ್ಯ ಊಟ, ತಿಂಡಿ ಮಾಡೋದಕ್ಕೆ ಇಲ್ಲಿ ಸರಿಯಾದ ಆಹಾರ ಸಾಮಗ್ರಿ ಸರಬರಾಜು ಆಗುತ್ತಿಲ್ಲ. ಇದಕ್ಕಿಂತ ಮಿಗಿಲಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗಿರುವ ಜಾಗದ ಸುತ್ತಲೂ ಗಬ್ಬು ವಾಸನೆ ಇದ್ದು ಕ್ಯಾಂಟೀನ್ ಪಕ್ಕದಲ್ಲೇ ಕಸದ ರಾಶಿ ಹಾಕಲಾಗಿದೆ. ಹಾಗಾಗಿ ಶುಚಿತ್ವ ಇಲ್ಲದ ಕಾರಣ ಯಾರೂ ಇಲ್ಲಿಗೆ ಊಟ ತಿಂಡಿ ತಿನ್ನೋದಕ್ಕೆ ಬರೋದಿಲ್ಲ ಅನ್ನೋದು ಜನರ ಮಾತು.
ಇದನ್ನೂ ಓದಿ: Indira Canteen: ಸಿಎಂ ಸಿದ್ದರಾಮಯ್ಯ ಕನಸಿನ ಕೂಸಿನ ಯೋಜನೆಗೆ ಕಗ್ಗತ್ತಲು!
ಇನ್ನು ಇಂದಿರಾ ಕ್ಯಾಂಟೀನ್ ಕೋವಿಡ್ ಸಂದರ್ಭದಲ್ಲಿ ಹಾಗೂ ಅದಕ್ಕೂ ಮೊದಲು ಚೆನ್ನಾಗಿ ನಡೆಯುತ್ತಿತ್ತು, ಆಗ ಒಳ್ಳೆಯ ಸಿಬ್ಬಂದಿ ಹಾಗೂ ನಿರ್ವಹಣೆ ಕೂಡಾ ಚೆನ್ನಾಗಿತ್ತು, ಆದರೆ ಈಗ ಅದರ ನಿರ್ವಹಣೆ ಇಲ್ಲ, ನೀರಿಲ್ಲ, ಸುತ್ತಲೂ ಕಸದ ರಾಶಿ ಕ್ಲೀನ್ ಮಾಡೋರಿಲ್ಲ, ಹೂವಿನ ಮಾರುಕಟ್ಟೆಯ ಕಸದ ರಾಶಿಯನ್ನೆಲ್ಲಾ ತಂದು ಇಲ್ಲೇ ಬಿಸಾಡುತ್ತಾರೆ, ಅಕ್ಕ ಪಕ್ಕದಲ್ಲಿರುವ ಬಾರ್ನ ಕಸವನ್ನು ಕೂಡಾ ಇದೇ ಇಂದಿರಾ ಕ್ಯಾಂಟೀನ್ ಬಳಿ ತಂದು ಬಿಸಾಡುತ್ತಿದ್ದಾರೆ.
ಇದು ಒಂದು ಕಡೆ ಆದ್ರೆ ಮತ್ತೊಂದು ಕಡೆ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಸರಿಯಾದ ಅನುದಾನ ಬಿಡುಗಡೆ ಮಾಡುತ್ತಿಲ್ಲ, ಕೆಟ್ಟು ನಿಂತಿರುವ ಯಂತ್ರೋಪಕರಣ ಗಳು,ವಾಟರ್ ಫಿಲ್ಟರ್ ಯಾವುದನ್ನೂ ರಿಪೇರಿ ಮಾಡದ, ಪಾತ್ರೆ ಸಾಮಾನು ಎಲ್ಲವೂ ಕೂಡಾ ತುಕ್ಕು ಹಿಡಿಯುತ್ತಿದೆ. ಇನ್ನು ಇಲ್ಲಿ ಮುಖ್ಯವಾಗಿ ಸಿಬ್ಬಂದಿಯ ಕೊರತೆ ಇದೆ. ಮೂರೇ ಜನ ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಂಬಳ ಕೊಟ್ಟು ಆರೇಳು ತಿಂಗಳು ಕಳೆದಿದೆ. ಹಾಗಾಗಿ ಇಂದಿರಾ ಕ್ಯಾಂಟೀನ್ ಗಷ್ಟೇ ಅಲ್ಲ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಸಂಕಷ್ಟ ಎದುರಾಗಿದ್ದು, ಕೋಲಾರ ಜಿಲ್ಲಾ ಕೇಂದ್ರದಲ್ಲಿರುವ ಇಂದಿರಾ ಕ್ಯಾಂಟೀನ್ ಕೇವಲ ಹೆಸರಿಗಷ್ಟೇ ನಡೆಯುತ್ತಿದೆ ಎನ್ನುವ ಸ್ಥಿತಿ ಇದೆ.
ಒಟ್ಟಾರೆ ಬಡವರ ಹಸಿವು ನೀಗಿಸಬೇಕಿದ್ದ ಇಂದಿರಾ ಕ್ಯಾಂಟೀನ್ಗೆ ಕೋಲಾರದಲ್ಲಿ ಗ್ರಹಣ ಹಿಡಿದಿದ್ದು ಸರಿಯಾದ ನಿರ್ವಹಣೆ ಇಲ್ಲದೆ ಕ್ಯಾಂಟೀನ್ ಇದ್ದೂ ಇಲ್ಲದಂತಾಗಿದೆ, ಹಾಗಾಗಿ ಇಂದಿರಾ ಕ್ಯಾಂಟೀನ್ ಸರಿಯಾದ ರೀತಿಯಲ್ಲಿ ಮಾಡಿ, ಸರಿಯಾದ ನಿರ್ವಹಣೆ ಮಾಡಬೇಕು ಅನ್ನೋದು ಸ್ಥಳೀಯರ ಆಗ್ರಹವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:39 pm, Mon, 6 November 23