ಕೋಲಾರ, ಮೇ.15: ಕೋಲಾರ(Kolar) ನಗರ ಅಥವಾ ಆಂಧ್ರ, ತಮಿಳುನಾಡಿನ ಗಡಿಯಲ್ಲೇ ಇರಲಿ ಯಾವ ಸಮಯದಲ್ಲಾದರೂ ಮದ್ಯ ಸಿಗುತ್ತದೆ. ಕೋಲಾರದಲ್ಲಿ ಸದ್ಯ ಅಬಕಾರಿ ಇಲಾಖೆ(Excise department) ಇದ್ದು ಇಲ್ಲದಂತಾಗಿದ್ದು, ಹಾಗಾಗಿ ಜಿಲ್ಲೆಯಲ್ಲಿ ಬಾರ್ಗಳ ಅಬ್ಬರ ಜೊರಾಗಿದೆ. ಬಾರ್ಗಳನ್ನು ಯಾವಾಗ ಬೇಕಾದರೂ ತೆಗೆಯಬಹುದು, ಮುಚ್ಚಬಹುದು. ಇಲ್ಲಿ ಯಾರೂ ಹೇಳುವವರಿಲ್ಲ. ಕೋಲಾರ ಜಿಲ್ಲೆಯ ಬಹುತೇಕ ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 6 ಗಂಟೆಗೆ ಬಾರ್ಗಳು ತೆರೆದಿರುತ್ತವೆ. ಅಷ್ಟೇ ಅಲ್ಲ, ಜಿಲ್ಲೆಯ ಆಂಧ್ರ ಮತ್ತು ತಮಿಳುನಾಡಿನ ಗಡಿಯಲ್ಲೂ ಕೂಡ ಬಾರ್ಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತವೆ.
ಇನ್ನು ಕೋಲಾರದಲ್ಲಿ ಬಾರ್ಗಳು, ಅದರಲ್ಲೂ ಸಿಎಲ್-7 ಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಕಳೆದೊಂದು ವರ್ಷದಲ್ಲಿ ನಿರೀಕ್ಷೆಗೂ ಮೀರಿದ ಬಾರ್ಗಳು ತೆರೆಯಲಾಗಿವೆ. ಅದರಲ್ಲೂ ಆಂಧ್ರದಲ್ಲಿ ಮದ್ಯದ ಬೆಲೆ ಹೆಚ್ಚಳ ಮಾಡಿದ ಹಿನ್ನೆಲೆ ಹಾಗೂ ಮದ್ಯದ ಗುಣಮಟ್ಟ ಸರಿ ಇಲ್ಲ ಎನ್ನುವ ಕಾರಣಕ್ಕೆ ಆಂಧ್ರದ ಮದ್ಯ ಪ್ರಿಯರು ಕರ್ನಾಟಕದ ಗಡಿಯ ಬಾರ್ಗಳಿಗೆ ಕುಡಿಯಲು ಬರುತ್ತಾರೆ ಎನ್ನುವ ಕಾರಣಕ್ಕೆ ನಗರ ಪ್ರದೇಶದ ಬಾರ್ಗಳನ್ನು ಗಡಿಗೆ ಸ್ಥಳಾಂತರ ಮಾಡಿದ್ದಾರೆ. ಅಲ್ಲದೆ ಹೊಸದಾಗಿ ಬಾರ್ಗಳನ್ನು ತೆರೆಯಲಾಗಿದೆ. ಹಾಗಾಗಿ ಅಬಕಾರಿ ಇಲಾಖೆ ನಮಗೆ ವ್ಯಾಪಾರ ಆದರೆ ಸಾಕು ಎಂದು ತಲೆ ಕೆಡಿಸಿಕೊಳ್ಳುತ್ತಿಲ್ಲ.
ಇದನ್ನೂ ಓದಿ:ಮದ್ಯಪ್ರಿಯರಿಗೆ ಗುಡ್ನ್ಯೂಸ್ ; ಮದ್ಯ ಮಾರಾಟ ನಿಷೇಧ ಅವಧಿ ಇಳಿಕೆ!
ಯಾರಾದರೂ ದೂರು ಕೊಟ್ಟರೂ ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಬಾರ್ ಮಾಲೀಕರು ಹಾಗೂ ಮದ್ಯ ಪ್ರಿಯರಿಗೆ ಕಡಿವಾಣ ಇಲ್ಲದಂತಾಗಿದೆ. ಕೂಡಲೇ ಸರ್ಕಾರ ಕುಡಿದ ಮತ್ತಿನಲ್ಲಿರುವ ಅಬಕಾರಿ ಇಲಾಖೆಯನ್ನು ಬಡಿದೆಚ್ಚರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಒಟ್ಟಾರೆ ಕೋಲಾರದಲ್ಲಿ ಏನು ಸಿಗುತ್ತದೇಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಹೆಜ್ಜೆ ಹೆಜ್ಜೆಗೂ ಎಣ್ಣೆಯಂತೂ ಸಿಗುತ್ತಿದೆ. ಹಾಗಾಗಿ ಜಿಲ್ಲೆಯಲ್ಲಿ ಮದ್ಯ ಪ್ರಿಯರ ಸಂಖ್ಯೆ ಕೂಡ ಖುಷಿಯಾಗಿ ಎಲ್ಲೆಂದರಲ್ಲಿ ಕುಡಿದು ಮಲಗಿರುತ್ತಾರೆ. ಒಂದು ಕಾಲದಲ್ಲಿ ಚಿನ್ನದ ನಾಡು ಎಂದು ಹೆಸರು ಪಡೆದಿದ್ದ ಜಿಲ್ಲೆ, ಸದ್ಯ ಈಗ ಕುಡುಕರ ಸ್ವರ್ಗ ಎನ್ನುವ ಹೆಸರು ಪಡೆಯುವಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:42 pm, Wed, 15 May 24