
ಕೋಲಾರ, ಜುಲೈ 26: ದೇಶ ವಿರೋಧಿ (Anti National) ಚಟುವಟಿಕೆಗಳಲ್ಲಿ ತೊಡಗಿದ ಹಾಗೂ ಉಗ್ರವಾದಿ ಸಂಘಟನೆಗಳ (Terrorist Organization) ಕುರಿತು ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಆರೋಪದಡಿ ಕೆಜಿಎಫ್ (KGF) ತಾಲೂಕಿನ ದ್ಯಾವರಹಳ್ಳಿ ಗ್ರಾಮದ ಓರ್ವ ಬಾಲಕನನ್ನು ಆಂತರಿಕ ಭದ್ರತಾ ಅಧಿಕಾರಿಗಳು ಮತ್ತು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬಾಲಕ ಉಗ್ರಗಾಮಿ ಸಂಘಟನೆಗೆ ಸಂಬಂಧಿಸಿದಂತೆ ಕೆಲವೊಂದು ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದನು. ಅಲ್ಲದೆ, ಪದೇ ಪದೇ ಉಗ್ರಗಾಮಿ ಸಂಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡುತ್ತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇಡೀ ದಿನ ಆತನನ್ನು ವಿಚಾರಣೆ ನಡೆಸಿ, ನಂತರ ಆತನನ್ನು ಬೇತಮಂಗಲ ಪೊಲೀಸರ ವಶಕ್ಕೆ ನೀಡಿದರು.
ಬಾಲಕ ಮೂಲತಃ ಆಂದ್ರ ಪ್ರದೇಶದ ಮುಸ್ಲಿಂ ಕುಟುಂಬಕ್ಕೆ ಸೇರಿದವನು. ಬಾಲಕನ ಕುಟುಂಬ ಹಲವು ವರ್ಷಗಳ ಹಿಂದೆ ಆಂದ್ರ ಪ್ರದೇಶದ ರಾಮಕುಪ್ಪಂ ತೊರೆದು ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ದ್ಯಾವರಹಳ್ಳಿ ಗ್ರಾಮದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬೆಂಗಳೂರು, ಕೋಲಾರದಲ್ಲಿ NIA ದಾಳಿ: ಒಟ್ಟು ಮೂವರು ಶಂಕಿತ ಉಗ್ರರ ಬಂಧನ..!
ಬಾಲಕ ಮೇಡಹಳ್ಳಿ ಬಳಿ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಈತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಆತಂಕರಿ ಭದ್ರತಾ ಅಧಿಕಾರಿಗಳು ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಬಾಲಕನ ವಿರುದ್ಧ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೇಶದ್ರೋಹ ಹಾಗೂ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಆರೋಪಿ ಬಾಲಕನ್ನು ಪೊಲೀಸರು ಬಂಧಿಸಿ ಕೆಜಿಎಫ್ ಬಾಲ ಮಂದಿರದಲ್ಲಿ ಇರಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Published On - 7:09 pm, Sat, 26 July 25