ಕೋಲಾರ ಕಾಂಗ್ರೆಸ್ ಬಣ ರಾಜಕೀಯ ತಾರಕಕ್ಕೆ: ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿಸಲು ಮುನಿಯಪ್ಪ ಪಟ್ಟು
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಗೊಂದಲ ಇನ್ನೂ ಮುಂದುವರಿದಿದೆ. ಈ ಮಧ್ಯೆ ಕೋಲಾರದಲ್ಲಿ ಬಣ ರಾಜಕೀಯ ತೀವ್ರಗೊಂಡಿದೆ. ಸಚಿವ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವಿನ ಗುದ್ದಾಟ ಹೆಚ್ಚಾಗಿದ್ದು, ರಾಜ್ಯ ಕಾಂಗ್ರೆಸ್ ನಾಯಕರಿಗೆ ತಲೆಬಿಸಿಯಾಗಿ ಪರಿಣಮಿಸಿದೆ.
ಬೆಂಗಳೂರು, ಮಾರ್ಚ್ 22: ಲೋಕಸಭೆ ಚುನಾವಣೆಗೆ (Lok Sabha Election) ಕರ್ನಾಟಕದ ಕಾಂಗ್ರೆಸ್ (Congress) ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಇನ್ನು ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಬಾಕಿ ಇದೆ. ಈ ಮಧ್ಯೆ ಕೋಲಾರದಲ್ಲಿ (Kolar) ಬಣ ರಾಜಕೀಯ ತಾರಕಕ್ಕೇರಿದೆ. ಸಚಿವ ಕೆಎಚ್ ಮುನಿಯಪ್ಪ (KH Muniyappa) ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವಣ ತಿಕ್ಕಾಟ ಹೆಚ್ಚಾಗಿದೆ. ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವಂತೆ ಮುನಿಯಪ್ಪ ಪಟ್ಟು ಹಿಡಿದಿದ್ದರೆ, ಅವರಿಗೆ ಟಿಕೆಟ್ ನೀಡಿದರೆ ಕೆಲಸವೇ ಮಾಡುವುದಿಲ್ಲ ಎಂದು ರಮೇಶ್ ಕುಮಾರ್ ಬಣ್ಣಪಟ್ಟು ಹಿಡಿದಿದೆ.
ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಅಳಿಯ ಚಿಕ್ಕಪೆದ್ದಣ್ಣಗೆ ನೀಡುವಂತೆ ಮುನಿಯಪ್ಪ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದ್ದಾರೆ. ಇಷ್ಟೇ ಅಲ್ಲದೆ, ಹೈಕಮಾಂಡ್ ನಾಯಕರಿಗೂ ಈಗಾಗಲೇ ಮಾಡಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮ್ಮತಿಸಿದರೆ ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿಕ್ಕಪೆದ್ದಣ್ಣ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಸಚಿವ ಮಹದೇವಪ್ಪ ಚಾಮರಾಜನಗರ ಕ್ಷೇತ್ರದಿಂದ ಕಣಕ್ಕಿಳಿಯಲು ಹಿಂದೇಟು ಹಾಕಿದ್ದಾರೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ ಟಿಕೆಟ್ ತಮಗೆ ನೀಡಬೇಕು ಎಂದು ಮಾಜಿ ಸಿಎಂ ವಿರಪ್ಪ ಮೊಯ್ಲಿ ಪಟ್ಟು ಹಿಡಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಕೋಲಾರದಲ್ಲಿ ಬಣ ರಾಜಕೀಯ ತಾರಕಕ್ಕೇರಿದೆ.
ಕೋಲಾರದ ಬಣ ರಾಜಕೀಯಕ್ಕೆ ಮದ್ದು ಅರೆಯಲಾಗದೆ ರಾಜ್ಯ ಕಾಂಗ್ರೆಸ್ ನಾಯಕರು ಒದ್ದಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ರನ್ನು ಭೇಟಿಯಾಗಿ ಮುನಿಯಪ್ಪ ಮಾತುಕತೆ ನಡೆಸುತ್ತಿದ್ದಾರೆ. ಜೊತೆಗೆ ಅಳಿಯನಿಗೆ ಟಿಕೆಟ್ ನೀಡುವಂತೆ ಲಾಬಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಲೋಕಸಭಾ ಟಿಕೆಟ್ ಹಂಚಿಕೆಯಲ್ಲಿ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದ ಕಾಂಗ್ರೆಸ್, ಕರ್ನಾಟಕದ ಐವರು ಸಚಿವರ ಮಕ್ಕಳಿಗೆ ಟಿಕೆಟ್!
ಚಾಮರಾನಜಗರದಲ್ಲಿ ಮುಂದುವರಿದ ಗೊಂದಲ
ಚಾಮರಾಜನಗರ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿಯೂ ಗೊಂದಲ ಸೃಷ್ಟಿಯಾಗಿದ್ದು, ಟಿಕೆಟ್ ಆಕಾಂಕ್ಷಿ ಸುನೀಲ್ ಬೋಸ್ ದೇಗುಲ ಸುತ್ತಾಟ ನಡೆಸುತ್ತಿದ್ದಾರೆ. ಸುನೀಲ್ ಬೋಸ್ ಸಚಿವ ಮಹದೇವಪ್ಪ ಪುತ್ರರಾಗಿದ್ದಾರೆ. ನಂಜನಗೂಡು ನಂಜುಂಡೇಶ್ವರ ರಥವನ್ನು ಎಳೆದ ಸುನೀಲ್ ಬೋಸ್, ಬಳಿಕ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ. ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಸುನೀಲ್ ಬೋಸ್ ಇದ್ದಾರೆ. ಆದರೆ, ಈ ವರೆಗೂ ಗೊಂದಲದ ಚಾಮರಾಜನಗರ ಲೋಕಸಭ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ ಗೂಡಾಗಿದೆ. ಕಾಂಗ್ರೆಸ್ ನ ಮೂರನೇ ಪಟ್ಟಿಯಲ್ಲಿ ಸುನೀಲ್ ಬೋಸ್ ಹೆಸರು ಪ್ರಕಟವಾಗುವ ನಿರೀಕ್ಷೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ