ಕೋಲಾರ ಜಿಲ್ಲಾ ಕಾಂಗ್ರೆಸ್​ ಗುಂಪುಗಾರಿಕೆ ಮಧ್ಯೆ ಕೋಮುಲ್ ಅಧ್ಯಕ್ಷ ಗಾದಿಗೆ ದಲಿತ ಕಾರ್ಡ್​​​​ ಗೇಮ್​! 

ಕೋಲಾರ ಹಾಲು ಒಕ್ಕೂಟದ ಚುನಾವಣೆಯಲ್ಲಿ ಇತಿಹಾಸ ನಿರ್ಮಾಣವಾಗಿದೆ. ಮೊದಲ ಬಾರಿಗೆ ಪರಿಶಿಷ್ಟ ಜಾತಿಯವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್‌ನ ಎರಡು ಬಣಗಳ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಪರಿಶಿಷ್ಟ ಜಾತಿಯ ನಿರ್ದೇಶಕರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಒತ್ತಾಯ ಜೋರಾಗಿದೆ.

ಕೋಲಾರ ಜಿಲ್ಲಾ ಕಾಂಗ್ರೆಸ್​ ಗುಂಪುಗಾರಿಕೆ ಮಧ್ಯೆ ಕೋಮುಲ್ ಅಧ್ಯಕ್ಷ ಗಾದಿಗೆ ದಲಿತ ಕಾರ್ಡ್​​​​ ಗೇಮ್​! 
ಕೋಮುಲ್
Updated By: ಗಂಗಾಧರ​ ಬ. ಸಾಬೋಜಿ

Updated on: Jun 30, 2025 | 10:06 AM

ಕೋಲಾರ, ಜೂನ್​ 30: ಅದು ಬರೋಬ್ಬರಿ 38 ವರ್ಷಗಳ ಹಿಂದೆ ಸ್ಥಾಪನೆಯಾದ ಹೈನೋದ್ಯಮ ಆಧಾರಿತ ಸಹಕಾರಿ ಸಂಸ್ಥೆ ಕೋಮುಲ್ (komul). ಆದರೆ ಆ ಸಹಕಾರಿ ಸಂಸ್ಥೆಯಲ್ಲಿ ಮೀಸಲಾತಿ ಇಲ್ಲದ ಕಾರಣ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿಯವರೊಬ್ಬರು (Scheduled caste) ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಪರಿಶಿಷ್ಟ ಜಾತಿಯ ನಿರ್ದೇಶಕರನ್ನೇ ಹಾಲು ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಒತ್ತಾಯ ಜೋರಾಗಿದೆ.

ಕಾಂಗ್ರೆಸ್​ನ ಎರಡು ಬಣಗಳ ಮಧ್ಯೆ ಗದ್ದುಗೆಗೆ ಪೈಪೋಟಿ​

ಕೋಲಾರ ಹಾಲು ಒಕ್ಕೂಟ ಆಡಳಿತ ಮಂಡಳಿ ನಿರ್ದೇಶಕ ಚುನಾವಣೆ ಮುಗಿದಿದ್ದು, ಸದ್ಯ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ಬಂಗಾರಪೇಟೆ ಕಾಂಗ್ರೆಸ್​ ಶಾಸಕ ಎಸ್​​.ಎನ್​. ನಾರಾಯಣಸ್ವಾಮಿ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ನಡುವೆ ತೀವ್ರ ಜಿದಿಜಿದ್ದಿಗೆ ಕಾರಣವಾಗಿದ್ದು, ಇದು ಕೋಲಾರ ಜಿಲ್ಲಾ ಕಾಂಗ್ರೆಸ್​ನ ಎರಡು ಬಣಗಳ ನಡುವೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ಇದನ್ನೂ ಓದಿ: ಕೋಲಾರ ಹಾಲು ಒಕ್ಕೂಟ ಚುನಾವಣೆ: ಜಿದ್ದಾಜಿದ್ದಿಯಲ್ಲಿ ಕಾಂಗ್ರೆಸ್, ಎನ್​ಡಿಎ ಮೈತ್ರಿಗೆ ಎಷ್ಟು ಸ್ಥಾನ? ಇಲ್ಲಿದೆ ರಿಸಲ್ಟ್

ಇದನ್ನೂ ಓದಿ
ಬೆಳಗಾವಿ: ಗೋ ರಕ್ಷಕರ ಮರಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಾಂಬ್​ ಬೆದರಿಕೆ: ಭದ್ರತೆ ಹೆಚ್ಚಳ
ರಾಯರ ಭಕ್ತರಿಗೂ ತಪ್ಪಲಿಲ್ಲ ವಂಚಕರ ಕಾಟ: ಬುಕ್ಕಿಂಗ್​ ಹೆಸರಲ್ಲಿ ವಂಚನೆ
ಕೋಲಾರ ಹಾಲು ಒಕ್ಕೂಟ ಚುನಾವಣೆ: ಕೈ, ಎನ್​ಡಿಎ ಮೈತ್ರಿಗೆ ಎಷ್ಟು ಸ್ಥಾನ?

ಈ ಪೈಕಿ ಶಾಸಕ ನಾರಾಯಣಸ್ವಾಮಿ ಕೆ.ಹೆಚ್​.ಮುನಿಯಪ್ಪ ಗುಂಪಿನಿಂದ ಅಧ್ಯಕ್ಷಸ್ಥಾನದ ಸ್ಪರ್ಧಿಯಾದರೆ ಅತ್ತ ಮಾಜಿ ಸ್ಪೀಕರ್​ ರಮೇಶ್ ಬಣದಿಂದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಆಕಾಂಕ್ಷಿಯಾಗಿದ್ದಾರೆ. ಇದೆಲ್ಲದರ ನಡುವೆ ಕೋಲಾರ ಹಾಲು ಒಕ್ಕೂಟದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿಯವರೊಬ್ಬರು ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾಗಿರುವ ಶಾಸಕ ಎಸ್​.ಎನ್​. ನಾರಾಯಣಸ್ವಾಮಿ ಅವರೇ ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡಿ ಎನ್ನುವುದು ದಲಿತ ಸಮುದಾಯದಲ್ಲಿ ದೊಡ್ಡಮಟ್ಟದ ಕೂಗು ಕೇಳಿ ಬಂದಿದೆ.

ಎಸ್​.ಎನ್​.ನಾರಾಯಣಸ್ವಾಮಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವಂತೆ ಒತ್ತಾಯ

ಇಂದಿಗೂ ಕೂಡ ಕೋಲಾರ ಹಾಲು ಒಕ್ಕೂಟದಲ್ಲಿ ಮೀಸಲಾತಿ ಇಲ್ಲ. ಹಾಗಾಗಿ ಯಾವೊಬ್ಬ ಪರಿಶಿಷ್ಟ ಜಾತಿಯವರು ಒಕ್ಕೂಟದಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಆದರೆ ಈ ಬಾರಿ ಬಲಗೈ ಸಮುದಾಯದ ಪರಿಶಿಷ್ಟ ಜಾತಿಯ ಪ್ರತಿನಿಧಿಯಾಗಿ ಬಂಗಾರಪೇಟೆ ಶಾಸಕರು ಆಯ್ಕೆಯಾಗಿದ್ದಾರೆ. ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಸ್​.ಎನ್​.ನಾರಾಯಣಸ್ವಾಮಿ ಅವರನ್ನೇ ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡಿ ಎಂದು ದಲಿತ ಸಮುದಾಯಗಳ ಮುಖಂಡರು ಪತ್ರಿಕಾಗೋಷ್ಠಿ ಮಾಡಿ ಸರ್ಕಾರಕ್ಕೆ ಒತ್ತಾಯಿಸಿದರು.

ಇನ್ನು ಅದಕ್ಕೆ ಪೂರಕ ಎಂಬಂತೆ 13 ನಿರ್ದೇಶಕರ ಸ್ಥಾನಗಳಲ್ಲಿ ಕಾಂಗ್ರೆಸ್​ ಬೆಂಬಲಿತ 9 ನಿರ್ದೇಶಕರು ಆಯ್ಕೆಯಾಗಿದ್ದಾರೆ. ಇದರ ಜೊತೆಗೆ 2 ಜನ ನಾಮ ನಿರ್ದೇಶಿತ ಸದಸ್ಯರು ಹಾಗೂ ಮೂರು ಜನ ಸರ್ಕಾರದ ಅಧಿಕಾರಿಗಳಿಗೆ ಅಧ್ಯಕ್ಷ ಚುನಾವಣೆಯಲ್ಲಿ ಮತದಾನ ಮಾಡುವ ಅರ್ಹತೆ ಇರುವ ಕಾರಣ ಕಾಂಗ್ರೆಸ್​ ಪಕ್ಷವೇ ಅಧ್ಯಕ್ಷ ಸ್ಥಾನಕ್ಕೇರುವುದು ಖಚಿತವಾಗಿದ್ದು, ಹಾಗಾಗಿ ಸರ್ಕಾರ ಪರಿಶಿಷ್ಟ ಜಾತಿಯ ಹಿರಿಯ ಶಾಸಕ ನಾರಾಯಣಸ್ವಾಮಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಎನ್ನಲಾಗುತ್ತಿದೆ.

ಇನ್ನು ಇದೇ ವಿಚಾರವಾಗಿ ಕೋಲಾರ ಜಿಲ್ಲಾ ಕಾಂಗ್ರೆಸ್​​ ಎರಡು ಗುಂಪುಗಳ ನಡುವೆ ಪ್ರತಿಷ್ಠೆಯಾಗಿ ಪರಿಣಮಿಸಿದ್ದು, ಕೆಹೆಚ್​ ಮುನಿಯಪ್ಪ ಬಣದ ಶಾಸಕ ನಾರಾಯಣಸ್ವಾಮಿ ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಹೆಚ್​ ಮುನಿಯಪ್ಪ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಅತ್ತ ರಮೇಶ್​ ಕುಮಾರ್ ಬಣದ ನಂಜೇಗೌಡ ರಮೇಶ್​ ಕುಮಾರ್ ಅವರನ್ನೇ ಮುಂದಿಟ್ಟುಕೊಂಡು ಅಧ್ಯಕ್ಷ ಸ್ಥಾನಕ್ಕಾಗಿ ಗಾಳ ಹಾಕುತ್ತಿದ್ದಾರೆ. ಆದರೆ ಕಳೆದ ಎರಡು ಅವಧಿಗೆ ಶಾಸಕ ನಂಜೇಗೌಡ ಅವರೇ ಅಧ್ಯಕ್ಷರಾಗಿದ್ದ ಕಾರಣದಿಂದಾಗಿ ಈ ಬಾರಿ ಜಿಲ್ಲೆಯ ಶಾಸಕರುಗಳ ಪೈಕಿ ಅತ್ಯಂತ ಹಿರಿಯ ಶಾಸಕ ಹಾಗೂ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನಾರಾಯಣಸ್ವಾಮಿ ಅವರಿಗೆ ಒಕ್ಕೂಟದ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಕಾಂಗ್ರೆಸ್​​ನ ಗುಂಪು ಬಹಿರಂಗವಾಗಿಯೇ ಲಾಭಿ ಶುರುಮಾಡಿದ್ದಾರೆ.

ಇದನ್ನೂ ಓದಿ: ಮುಳುಬಾಗಿಲುನಲ್ಲಿ ಮಹಿಳೆಯೊಬ್ಬರನ್ನು ಅಟ್ಟಾಡಿಸಿ ನಕಲಿ ಚಿನ್ನದ ಸರ ದೋಚಿದ ಸರಗಳ್ಳರ ಜೋಡಿ

ಸದ್ಯ ಕೋಲಾರ ಜಿಲ್ಲೆಯಲ್ಲಿ ಇಷ್ಟು ದಿನ ಡಿಸಿಸಿ ಬ್ಯಾಂಕ್​ ಹಾಗೂ ಕೋಲಾರ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯ ಅಬ್ಬರ ಇತ್ತು, ಆದರೆ ಈಗ ಕೋಮುಲ್​ ಅಧ್ಯಕ್ಷರಾಗಿ ಯಾರು ಆಯ್ಕೆಯಾಗುತ್ತಾರೆ ಅನ್ನೋ ಕುತೂಹಲ ಕೋಲಾರ ಜಿಲ್ಲಾ ರಾಜಕೀಯ ವಲಯದಲ್ಲಿ ಐಪಿಎಲ್​ ಮ್ಯಾಚ್​ನ ಫೈನಲ್ ಪಂದ್ಯದಂತಾಗಿದ್ದು ಯಾರಿಗೆ ಅಧ್ಯಕ್ಷ ಗಾದಿ ಒಲಿಯುತ್ತದೆ ಅನ್ನೋದೆ ಕುತೂಹಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.