ಕೋಲಾರ ಹಾಲು ಒಕ್ಕೂಟ ಚುನಾವಣೆ: ಜಿದ್ದಾಜಿದ್ದಿಯಲ್ಲಿ ಕಾಂಗ್ರೆಸ್, ಎನ್‌ಡಿಎ ಮೈತ್ರಿಗೆ ಎಷ್ಟು ಸ್ಥಾನ? ಇಲ್ಲಿದೆ ರಿಸಲ್ಟ್
ಕೋಲಾರ ಹಾಲು ಒಕ್ಕೂಟದ (KOMUL) ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಮತ್ತು ಬಿಜೆಪಿ ಬೆಂಬಲಿತ 4 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಂಗಾರಪೇಟೆ ಮತ್ತು ಮಾಲೂರು ಶಾಸಕರು ಸಹ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ವಿವಿಧ ಕ್ಷೇತ್ರಗಳ ಫಲಿತಾಂಶಗಳು ಹಾಗೂ ಗೆಲುವು ಸಾಧಿಸಿದ ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ.

ಕೋಲಾರ, ಜೂನ್ 25: ಕೋಲಾರ ಹಾಲು ಒಕ್ಕೂಟದ (KOMUL) ಆಡಳಿತ ಮಂಡಳಿ ನಿರ್ದೇಶರಕ ಚುನಾವಣೆ ಮುಗಿದಿದ್ದು, 13 ನಿರ್ದೇಶಕರ ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತ 9 ಮಂದಿ ಅಭ್ಯರ್ಥಿಗಳ ಗೆಲುವು ಸಾಧಿಸಿದರೇ, ಎನ್‌ಡಿಎ ಬೆಂಬಲಿತ 4 ಮಂದಿ ಅಭ್ಯರ್ಥಿಗಳ ಗೆಲುವಾಗಿದೆ. ಈ ಪೈಕಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ (SN Narayanaswamy) ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಆಯ್ಕೆಯಾಗಿದ್ದಾರೆ. ಈ ಮಧ್ಯೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಶಾಸಕರ ಮಧ್ಯೆಯೆ ಪೈಪೋಟಿ ಏರ್ಪಟ್ಟಿದೆ.
ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ನಲ್ಲೇ ತೀವ್ರ ಪೈಪೋಟಿ ಶುರುವಾಗಿದೆ. ಕೋಲಾರ ಈಶಾನ್ಯ ಕ್ಷೇತ್ರದಲ್ಲಿ 73 ಮಂದಿ ಮತದಾರರಿದ್ದು, ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಡಿ.ವಿ.ಹರೀಶ್-43 ಮತಗಳನ್ನು ಪಡೆಯುವ ಮೂಲಕ ವಿಜಯಶಾಲಿಯಾಗಿದ್ದಾರೆ. ಇನ್ನು, ಎಂ.ಗೋಪಾಲಗೌಡ-30 ಮತ, ಬಿ.ಎಂ.ಶಂಕರೇಗೌಡ-0 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಕೋಲಾರ ನೈರುತ್ಯ ಕ್ಷೇತ್ರದಲ್ಲಿ 76 ಮಂದಿ ಮತದಾರರಿದ್ದು ಡಿ.ನಾಗರಾಜ್-45 ಮತ ಹಾಗೂ ಎನ್.ಸೋಮಶೇಖರ್-29 ಮತಗಳನ್ನ ಪಡೆದಿದ್ದಾರೆ. ಹೆಚ್ಚಿನ ಮತ ಪಡೆದ ಎನ್‌ಡಿಎ ಅಭ್ಯರ್ಥಿ ಡಿ.ನಾಗರಾಜ್ ಅವರು ಜಯಶೀಲರಾಗಿದ್ದಾರೆ. ಕೋಲಾರ ವೇಮಗಲ್ ಕ್ಷೇತ್ರದಲ್ಲಿ 82 ಮಂದಿ ಮತದಾರರಿದ್ದು, ಟಿ.ವಿ. ಕೃಷ್ಣಪ್ಪ 13 ಮತ, ಬಿ.ರಮೇಶ್ 69 ಮತಗಳನ್ನು ಪಡೆದಿದ್ದಾರೆ. ಹೆಚ್ಚಿನ ಮತ ಪಡೆದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಿ.ರಮೇಶ್ ವಿಜಯಪತಾಕೆ ಹಾರಿಸಿದ್ದಾರೆ.
ಮುಳಬಾಗಿಲು ಪೂರ್ವ ಕ್ಷೇತ್ರ 87 ಮಂದಿ ಮತದಾರರಿದ್ದು, ಕಲ್ಲಪಲ್ಲಿ ಪ್ರಕಾಶ್ -29 ಮತ, ಕೆ.ಎಸ್.ನಾಗರಾಜ್-35 ಮತ, ಪ್ರತಾಪ್.ವಿ.ಎಸ್-0 ಮತ, ಆರ್.ಆರ್.ರಾಜೇಂದ್ರಗೌಡ-22 ಮತಗಳನ್ನು ಪಡೆದಿದ್ದಾರೆ. ಹೆಚ್ಚಿನ ಮತ ಪಡೆದ ಎನ್‌ಡಿಎ ಅಭ್ಯರ್ಥಿ ಕೆ.ಎಸ್.ನಾಗರಾಜ್ ವಿಜಯಶಾಲಿಯಾಗಿದ್ದಾರೆ. ಮುಳಬಾಗಿಲು ಪಶ್ಚಿಮ ಕ್ಷೇತ್ರದಲ್ಲಿ 73 ಮಂದಿ ಮತದಾರರಿದ್ದು ಎಂ.ಸಿ.ಸರ್ವಜ್ಞಗೌಡ-28 ಮತ, ಬಿ.ವಿ.ಶಾಮೇಗೌಡ-44 ಮತಗಳನ್ನ ಪಡೆದಿದ್ದಾರೆ. ಹೆಚ್ಚಿನ ಮತ ಪಡೆದ ಎನ್‌ಡಿಎ ಅಭ್ಯರ್ಥಿ ಬಿ.ವಿ.ಶಾಮೇಗೌಡರವರು ಗೆಲುವು ಸಾಧಿಸಿದ್ದಾರೆ.
ಮಾಲೂರು ಕಸಬಾ ಕ್ಷೇತ್ರದಲ್ಲಿ 62 ಮಂದಿ ಮತದಾರರಿದ್ದು, ಎಸ್.ಕೃಷ್ಣಾರೆಡ್ಡಿ-10 ಮತ, ಎಂ.ಎನ್.ಶ್ರೀನಿವಾಸ್-52 ಮತ ಪಡೆದಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಎನ್.ಶ್ರೀನಿವಾಸ್ ಜಯಗಳಿಸಿರುತ್ತಾರೆ. ಶ್ರೀನಿವಾಸಪುರ ಅಡ್ಡಗಲ್ ಕ್ಷೇತ್ರದಲ್ಲಿ 84 ಮಂದಿ ಮತದಾರರಿದ್ದು, ಎಂ.ಬೈರಾರೆಡ್ಡಿ-33 ಮತ, ಕೆ.ಕೆ.ಮಂಜುನಾಥ್-51 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಜಯಶೀಲರಾಗಿದ್ದಾರೆ.
ಶ್ರೀನಿವಾಸಪುರ ಯಲ್ದೂರು ಕ್ಷೇತ್ರದಲ್ಲಿ 84 ಮಂದಿ ಮತದಾರರಿದ್ದು, ಎಲ್.ಶಶಿಕಲಾ-25 ಮತ, ಹನುಮೇಶ್.ಎನ್ -59 ಮತ ಪಡೆದಿದ್ದಾರೆ. ಹೆಚ್ಚಿನ ಮತ ಪಡೆದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹನುಮೇಶ್ ಜಯಶೀಲರಾಗಿದ್ದಾರೆ. ಬಂಗಾರಪೇಟೆ ಕ್ಷೇತ್ರದಲ್ಲಿ 54 ಮತಗಳಿಸಿದ್ದು, ಎಸ್.ಎನ್.ನಾರಾಯಣಸ್ವಾಮಿ-42 ಮತ, ಬಿ.ಎಂ.ವೆಂಕಟೇಶ್-12 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಸ್.ಎನ್.ನಾರಾಯಣಸ್ವಾಮಿ ಗೆದ್ದಿದ್ದಾರೆ.
ಕೆಜಿಎಫ್ ಕ್ಷೇತ್ರದಲ್ಲಿ 60 ಮಂದಿ ಮತದಾರರಿದ್ದು, ಜಯಸಿಂಹ ಕೃಷ್ಣಪ್ಪ-56 ಮತ, ಲಕ್ಷ್ಮಪ್ಪ -2 ಮತ ಪಡೆದಿದ್ದಾರೆ. ಹೆಚ್ಚಿನ ಮತ ಪಡೆದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಸಿಂಹಕೃಷ್ಣಪ್ಪ ರವರು ಜಯಶೀಲರಾಗಿದ್ದಾರೆ. ಕೋಲಾರ ಜಿಲ್ಲಾ ಮಹಿಳಾ ಉತ್ತರ ಕ್ಷೇತ್ರದಲ್ಲಿ 64 ಮಂದಿ ಮತದಾರರಿದ್ದು ಮಹಾಲಕ್ಷ್ಮಿ-25 ಮತ, ಕೆ.ಆರ್.ರೇಣುಕಾ-21 ಮತ, ಲಕ್ಷ್ಮಿಪ್ರಿಯ-17 ಮತ ಪಡೆದಿದ್ದಾರೆ. ಹೆಚ್ಚಿನ ಮತ ಪಡೆದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮಹಾಲಕ್ಷ್ಮಿ ಜಯಗಳಿಸಿದ್ದಾರೆ.
ಕೋಲಾರ ಜಿಲ್ಲಾ ಮಹಿಳಾ ದಕ್ಷಿಣ ಕ್ಷೇತ್ರದಲ್ಲಿ 56 ಮಂದಿ ಮತದಾರರಿದ್ದು, ಕಾಂತಮ್ಮ.ಆರ್ -39 ಮತ, ಎಂ.ಪ್ರತಿಭಾ-17 ಮತ ಪಡೆದಿದ್ದಾರೆ. ಹೆಚ್ಚಿನ ಮತ ಪಡೆದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕಾಂತಮ್ಮ ವಿಜಯಶಾಲಿಯಾಗಿದ್ದಾರೆ.
ಇದನ್ನೂ ನೋಡಿ: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಮನಬಂದಂತೆ ರೇಗಾಡಿದ ಕಾಂಗ್ರೆಸ್ ಶಾಸಕ ನಂಜೇಗೌಡ
ಕಾಂಗ್ರೆಸ್ ಬೆಂಬಲಿತ 9 ಅಭ್ಯರ್ಥಿಗಳು ಹಾಗೂ ಎನ್‌ಡಿಎ ಬೆಂಬಲಿತ 4 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಮತ ಕೇಂದ್ರದ ಬಳಿಯೇ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ನಂಜೇಗೌಡ, ಹೈಕಮಾಂಡ್ ತೀರ್ಮಾನ ಮಾಡುವ ಅಭ್ಯರ್ಥಿ ಅಧ್ಯಕ್ಷರಾಗುತ್ತಾರೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








