ಕೇರಳದಲ್ಲಿ ಬಸ್ ಅಪಘಾತ, ಕರ್ನಾಟಕದ 17 ಶಬರಿಮಲೆ ಭಕ್ತರಿಗೆ ಗಂಭೀರ ಗಾಯ
ಕೇರಳದ ಕೊಟ್ಟಾಯಂ ಜಿಲ್ಲೆ ಎರುಮೇಲಿಯ ಕಣಮಲ ಬಳಿ ಬಸ್ ಅಪಘಾತಕ್ಕೀಡಾಗಿದ್ದು, ಕರ್ನಾಟಕದ 17 ಶಬರಿಮಲೆ ಭಕ್ತರಿಗೆ ಗಂಭೀರ ಗಾಯಗಳಾಗಿವೆ.
ಎರುಮೇಲಿ(ಕೇರಳ), (ಅಕ್ಟೋಬರ್ 18): ಕೇರಳದ (Kerala) ಕೊಟ್ಟಾಯಂ ಜಿಲ್ಲೆ ಎರುಮೇಲಿಯ ಕಣಮಲ ಬಳಿ ಬಸ್ ಅಪಘಾತಕ್ಕೀಡಾಗಿದ್ದು, ಕರ್ನಾಟಕದ 17 ಶಬರಿಮಲೆ ಭಕ್ತರಿಗೆ(shabarimale ayyappa Swamy devotees) ಗಂಭೀರ ಗಾಯಗಳಾಗಿವೆ. ಖಾಸಗಿ ಬಸ್, ಟೆಂಪೋ ಟ್ರಾವೆಲರ್ಸ್ನಲ್ಲಿ ಕೋಲಾರ ಜಿಲ್ಲೆ ಮುಳಬಾಗಿಲಿನಿಂದ ಶಬರಿಮಲೆಗೆ ತೆರಳಿದ್ದಾಗ ಎರುಮೇಲಿಯ ಕಣಮಲ ಬಳಿ ಬಸ್ ಅಪಘಾತಕ್ಕೀಡಾಗಿದೆ. ಪರಿಣಾಮ ಬಸ್ನಲ್ಲಿದ್ದ 50 ಜನರ ಪೈಕಿ 17 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳು ಮುಳಬಾಗಿಲು ತಾಲೂಕಿನ ತಮ್ಮರೆಡ್ಡಿಹಳ್ಳಿ, ಬಂಗವಾದಿ, ಮಜರಾ ಕಿತ್ತೂರು ಗ್ರಾಮದ ನಿವಾಸಿಗಳಾಗಿದ್ದಾರೆ. ಸದ್ಯ ಗಾಯಾಳುಗಳನ್ನು ವಿವಿಧ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ವಿಜಯಪುರದಲ್ಲಿ ಭೀಕರ ಅಪಘಾತ: ರಸ್ತೆ ಬದಿ ಕುಳಿತಿದ್ದವರ ಮೇಲೆ ಹರಿದ ಅಪರಿಚಿತ ವಾಹನ, ನಾಲ್ವರು ದುರ್ಮರಣ
ಬೈಕ್ ಸವಾರ ಸ್ಥಳದಲ್ಲಿಯೇ ಸಾವು
ಉಡುಪಿ: ಮಣಿಪಾಲ ಸಮೀಪದ ಪರ್ಕಳದಲ್ಲಿ ಡಿವೈಡರ್ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಅಡುಗೆ ಕೆಲಸ ಮಾಡಿಕೊಂಡಿದ್ದ ಹಿರಿಯಡ್ಕ ನಿವಾಸಿ ಅಕ್ಷಯ್ ಭಟ್(26) ಮೃತ ಬೈಕ್ ಸವಾರ. ದೇವಸ್ಥಾನವೊಂದರಲ್ಲಿ ನವರಾತ್ರಿಯ ಪ್ರಯುಕ್ತ ಅಡುಗೆ ಕೆಲಸಕ್ಕೆ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿಗೆ ಬಂದು ಗುದ್ದಿದ ಬಸ್
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹೊರವಲಯದ ಟೋಲ್ ಪ್ಲಾಜಾ ಬಳಿ ಕಾರಿಗೆ ಬಸ್ ಡಿಕ್ಕೆ ಹೊಡೆದಿದೆ. ಹೈದರಾಬಾದ್ ಬೆಂಗಳೂರು ಹೆದ್ದಾರಿಯ ದೇವನಹಳ್ಳಿ ಟೋಲ್ನಲ್ಲಿ ಕಾರಿನ ಹಿಂಬದಿಗೆ ಬಸ್ ಡಿಕ್ಕಿ ಹೊಡೆದಿದೆ. ನೋಡ ನೋಡುತ್ತಿದ್ದಂತೆಯೇ ಟೋಲ್ ನಲ್ಲಿ ನಿಂತಿದ್ದ ಕಾರಿಗೆ ಗುದ್ದಿದ್ದು, ಅಪಘಾತದ ದೃಶ್ಯ ಸಿಟಿ ಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್, ಕಾರು ಹಾಗೂ ಬಸ್ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಓಡಿಸಲು ಕ್ಲೀನರ್ಗೆ ಕೊಟ್ಟಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಏರ್ಪೋರ್ಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:21 am, Wed, 18 October 23