ಕೋಲಾರ, ನವೆಂಬರ್ 23: ಸ್ವತಂತ್ರ್ಯ ಹೋರಾಟಗಾರ ಹಾಗೂ ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ (KC Reddy) ಮನೆ ಈಗಲೂ ಹೊಚ್ಚ ಹೊಸದಾಗಿರುವ ರೀತಿಯಲ್ಲಿಯೇ ಗಮನ ಸೆಳೆಯುತ್ತಿದೆ. ದೇಶದ ಪ್ರಥಮ ಪ್ರಧಾನಿ ಈ ಮನೆಗೆ ಬಂದು ವಾಸ್ತವ್ಯ ಹೂಡಿದ್ದರು ಅನ್ನೋ ನೆನಪು ಈಗಲೂ ಆ ಮನೆಯಲ್ಲಿದೆ. ಆದರೆ ಆ ಭವ್ಯವಾದ ಮನೆಯನ್ನು ಸ್ಮಾರಕ ಮಾಡುವ ಕೆಲಸ ಮಾತ್ರ ಈಗಲೂ ಈಡೇರಿಲ್ಲ.
ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದಲ್ಲಿ ಕೆ.ಸಿ.ರೆಡ್ಡಿ ಅವರು ಮನೆ ಇದೆ. ಈ ಮನೆಯಲ್ಲಿ ಒಂದಲ್ಲ ಎರಡಲ್ಲಾ ನೂರಾರು ಐತಿಹಾಸಿಕ ನೆನಪುಗಳಿವೆ. ದೇಶ ಕಂಡ ಅಪ್ರತಿಮ ನಾಯಕರು ಈ ಮನೆಯಲ್ಲಿ ನೆಲೆಸಿದ ಈ ಮನೆಗೆ ಬಂದು ಹೋದ ನೆನಪಿದೆ.
ಕೆ.ಸಿ.ರೆಡ್ಡಿ ಅವರು ಹುಟ್ಟಿ ಬೆಳೆದು ನೆಲೆಸಿ ವಾಸವಿದ್ದ ಮನೆ. ಸ್ವಾತಂತ್ರ್ಯ ಹೋರಾಟಗಾರ ಹಾಗೂ ರಾಜ್ಯ ಕಂಡ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರು, ಅವರ ತಾತ 1883 ರಲ್ಲಿ ಈ ಬೃಹತ್ ಮನೆಯನ್ನು ಆ ಕಾಲದಲ್ಲಿಯೇ ಕಟ್ಟಿಸಿದ್ದಾರೆ. ಸುಮಾರು 140 ವರ್ಷಗಳಿಂದ ಈ ಮನೆ ತನ್ನ ಯಥಾಸ್ಥಿತಿಯನ್ನು ಉಳಿಸಿಕೊಂಡಿದ್ದು, ಈಗಲು ಉತ್ತಮ ಸ್ಥಿತಿಯನ್ನು ಕಾಯ್ದುಕೊಂಡಿದೆ.
ಇದನ್ನೂ ಓದಿ: ಕೋಲಾರ: ಅಂತರಗಂಗೆಗೆ ಜಿಪ್ ಲೈನ್, ಪ್ರವಾಸಿ ತಾಣಕ್ಕೆ ಮೆರುಗು ನೀಡಲಿದೆ ಹೊಸ ಯೋಜನೆ
ಕೆ.ಸಿ.ರೆಡ್ಡಿಯವರ ತಂದೆ ವೆಂಕಟರೆಡ್ಡಿಗೆ ಇಬ್ಬರು ಪುತ್ರರ ಪೈಕಿ 2ನೇ ಯವರೇ ಕೆಸಿ ರೆಡ್ಡಿ, ಕೆ.ಜಿ.ಎಫ್ನಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣವನ್ನು ಬೆಂಗಳೂರಿನ ಲಂಡನ್ ಮಿಷನ್ ಹೈಸ್ಕೂಲ್‌ನಲ್ಲಿ ಮುಗಿಸಿದರು. ಸಾವಿರಾರು ಎಕರೆ ಜಮೀನು ಹೊಂದಿದ್ದ ರೆಡ್ಡಿ ಯವರ ತಾತ ಬಶೀರೆಡ್ಡಿ ಅಂದಿನ ಕಾಲದಲ್ಲಿ ಈ ಭಾಗದ ಜೋಡಿದಾರರು. ಎರಡು ಅಂತಸ್ತಿನ ಈ ಮನೆಯಲ್ಲಿ ಹತ್ತು ಕೊಠಡಿಗಳು, ಹಜಾರ, ಮನೆಯ ಮುಂದೆ ಬೃಂದಾವನ, ದೇವರ ಮನೆ, ಅಡುಗೆ ಮನೆ ಹೀಗೆ ಎಲ್ಲವನ್ನು ಸುಸಜ್ಜಿತವಾಗಿ ತೊಟ್ಟಿ ಮನೆ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಬೆಂಗಳೂರಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಮದ್ರಾಸ್ ತೆರಳಿ, ಕಾಲೇಜು, ನಂತರ ಪದವಿ ಮತ್ತು ಕಾನೂನು ಪದವಿ ಮುಗಿಸಿ ತಮ್ಮ ಗ್ರಾಮಕ್ಕೆ ವಾಪಾಸಾಗಿದ್ರು. ನಂತರ ಕೋಲಾರದಲ್ಲಿ ವಕೀಲ ವೃತ್ತಿ ಆರಂಭಿಸಿದ ಕೆ.ಸಿ.ರೆಡ್ಡಿ ಅದಾಗಲೆ ಸಮಾಜಪರ ಹೋರಾಟಗಳಲ್ಲಿ ಭಾಗವಹಿಸಿದ್ದರು. ಇವರನ್ನು ನೋಡಿದ ಗಾಂಧಿಜಿ ಒಮ್ಮೆ ಅವರನ್ನು ಕರೆದು ಸ್ವತಂತ್ರ್ಯ ಹೋರಾಟದಲ್ಲಿ ದುಮುಕುವಂತೆ ಸಲಹೆ ನೀಡಿದ್ರಂತೆ. ನಂತರ ಹಲವು ವರ್ಷ ಹೋರಾಟಗಳು, ಪಾದಯಾತ್ರೆಗಳು, ಜೈಲುವಾಸ ಎಲ್ಲವೂ ಮುಗಿಸಿ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಹೋರಾಟದಲ್ಲಿ ಸಾಕಷ್ಟು ಮುಂಚೂಣಿಗೆ ಬಂದಿದ್ದರು.
ಇನ್ನು ಸ್ವತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿದ್ದ ಕಾರಣಕ್ಕೆ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಇವರನ್ನೇ ಮಾಡಲಾಗಿತ್ತು. 5 ವರ್ಷಗಳ ನಂತರ ನೆಹರೂ ಸಂಪುಟದಲ್ಲಿ ಇವರಿಗೆ ಕೇಂದ್ರ ಮಂತ್ರಿಯಾಗುವ ಅವಕಾಶ ಸಿಕ್ಕಿತ್ತು ಆಗ ಕೇಂದ್ರ ಕೈಗಾರಿಕಾ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಮಧ್ಯ ಪ್ರದೇಶದ ರಾಜ್ಯಪಾಲರಾಗಿ ಕೆಲಸ ನಿರ್ವಹಿಸಿದ ರಾಜ್ಯದ ಮೊದಲಿಗರಾಗಿ ದಾಖಲೆ ಬರೆದಿದ್ದರು.
ಕೆ.ಜಿ.ಎಫ್ ಚಿನ್ನದ ಗಣಿಯ ಕಾರ್ಮಿಕರ ಪರವಾದ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದ ಕೆ.ಸಿ.ರೆಡ್ಡಿ ಕೆಜಿಎಫ್ ಯೂನಿಯನ್ ನಾಯಕರೂ ಆಗಿದ್ದರು. ಬ್ರಿಟಿಷರ ವಿರುದ್ದ ಪ್ರತಿಭಟನೆ ನಡೆದಾಗ ತಿಂಗಳುಗಟ್ಟಲೆ ಈ ಮನೆಯಿಂದಲೇ ಹೋರಾಟಗಾರರಿಗೆ ಗಂಜಿಯನ್ನು ಪೂರೈಸಲಾಗಿತ್ತಂತೆ. ಸಾಕಷ್ಟು ಪ್ರಸಿದ್ದಿ ಪಡೆದಿದ್ದ ಕೆ.ಸಿ.ರೆಡ್ಡಿ ವಾಸದ ಮನೆಗೆ ಅಂದಿನ ಸ್ವಾತಂತ್ರ್ಯ ಚಳುವಳಿ ನಾಯಕ ಹಾಗೂ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಈ ಮನೆಗೆ ಬಂದು ವಾಸ್ತವ್ಯ ಹೂಡಿದ್ದ ನೆನಪು ಇದೆ.
ಇದನ್ನೂ ಓದಿ: ಅಯೋಧ್ಯೆ ಬಾಲರಾಮನ ದರ್ಶನಕ್ಕೆ ಸೈಕಲ್ ಏರಿ ಹೊರಟ ಕೋಲಾರ ಯುವಕರು
ಅವರು ಉಳಿದುಕೊಂಡಿದ್ದ ಕೊಠಡಿ, ಹಾಲ್, ಅವರು ಮಲಗಿದ್ದ ಮಂಚ, ಕುಳಿತ ಚೇರ್‌ಗಳು ಸೇರಿದಂತೆ ಹಲವಾರು ವಸ್ತುಗಳನ್ನು ಈಗಲೂ ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಮುಂಚೂಣಿ ಸ್ವಾತಂತ್ರ್ಯ ಹೋರಾಟಗಾರನಾಗಿದ್ದ, ರಾಜ್ಯದ ಪ್ರಥಮ ಮುಖ್ಯಮಂತ್ರಿ, ಕೇಂದ್ರದ ಸಂಪುಟದಲ್ಲಿ ಸಚಿವನಾಗಿದ್ದ ರಾಜ್ಯದ ಪ್ರಥಮ ವ್ಯಕ್ತಿ. ರಾಜ್ಯಪಾಲರಾಗಿ ಕೆಲಸ ಮಾಡಿದ ರಾಜ್ಯದ ಪ್ರಥಮ ವ್ಯಕ್ತಿ ಹೀಗೆ ಹಲವು ವಿಶೇಷತೆಯ ದಿವಂಗತ ನಾಯಕನಿಗೆ ಸರ್ಕಾರ ಸರಿಯಾದ ಗೌರವ ನೀಡಿಲ್ಲ. ಅವರ ಹೆಸರಿನಲ್ಲಿ ಸ್ಮಾರಕ, ಪಾರ್ಕ್ ನಿರ್ಮಾಣ, ಮ್ಯೂಸಿಯಂ ಸೇರಿದಂತೆ ಎಲ್ಲಾ ಭರವಸೆಗಳೂ ಇನ್ನೂ ಮಾತಿನಲ್ಲೇ ಉಳಿದಿದೆ.
ರಾಜ್ಯಕ್ಕೆ ಪ್ರಥಮ ಮುಖ್ಯಮಂತ್ರಿ ನೀಡಿದ ಜಿಲ್ಲೆಯ ಕೋಲಾರಕ್ಕೆ ಈಗಲೂ ಕೆ.ಸಿ.ರೆಡ್ಡಿ ಅಂದ್ರೆ ವಿಶೇಷ ಗೌರವ, ಅದರಿಂದ ಜಿಲ್ಲೆಗೂ ಒಂದು ಪ್ರತಿಷ್ಠೆ, ಆದ್ರೆ ಸರ್ಕಾರ ಇವರ ಹೆಸರಿನಲ್ಲಿ ಆಗಬೇಕಾದ ಕೆಲಸಗಳನ್ನು ಈಗಲಾದರು ಆರಂಭಿಸಿ ಅವರಿಗೊಂದು ಗೌರವ ಸಲ್ಲಿಸಬೇಕು ಎನ್ನುವುದು ಜಿಲ್ಲೆಯ ಜನರ ಕೂಗು ಕೂಡ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.