ಕೋಲಾರ: ಅಂತರಗಂಗೆಗೆ ಜಿಪ್ ಲೈನ್, ಪ್ರವಾಸಿ ತಾಣಕ್ಕೆ ಮೆರುಗು ನೀಡಲಿದೆ ಹೊಸ ಯೋಜನೆ
ಅದು ಬೆಂಗಳೂರಿಗೆ ಅತೀ ಹತ್ತಿರುವಿರುವ, ಸುಂದರ ಬೆಟ್ಟಗುಡ್ಡಗಳ ನಡುವೆ, ಸಮೃದ್ಧ ಪ್ರಕೃತಿ ಸೌಂದರ್ಯದಿಂದ ಕೂಡಿರುವ ಒಂದು ಧಾರ್ಮಿಕ ಸ್ಥಳ. ಸೌಲಭ್ಯಗಳಿಲ್ಲದೆ ಸೊರಗಿ ಹೋಗಿದ್ದ ಇಂಥ ಪ್ರದೇಶದಲ್ಲಿ ಸದ್ಯ ಕೋಲಾರ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಕೈಗೊಂಡಿರುವ ಯೋಜನೆ ಪ್ರವಾಸಿ ತಾಣಕ್ಕೆ ಹೊಸ ಮೆರುಗು ನೀಡಲಿದೆ. ಏನದು ಯೋಜನೆ? ಇದರಿಂದ ಏನೆಲ್ಲ ಪ್ರಯೋಜನ ಎಂಬ ವಿವರ ಇಲ್ಲಿದೆ.

ಕೋಲಾರ, ಅಕ್ಟೋಬರ್ 15: ಸುಂದರವಾದ ಬೆಟ್ಟಗಳ ನಡುವೆ ಇರುವ ಸಮೃದ್ಧ ಪ್ರಕೃತಿ ಸೌಂದರ್ಯ, ಸಾಲು ಸಾಲು ಬೆಟ್ಟಗಳ ಸಾಲಿನಲ್ಲಿ ಮನಸೂರೆಗೊಂಡಿರುವ ಪ್ರವಾಸಿಗರು. ಮತ್ತೊಂದೆಡೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಾಶಿ ವಿಶ್ವನಾಥ ಸ್ವಾಮಿ ಸನ್ನಿಧಿ ಹಾಗೂ ಕಾಶಿಯಿಂದ ಬಸವಣ್ಣನ ಬಾಯಲ್ಲಿ ಬರುವ ಚಮತ್ಕಾರಿ ತೀರ್ಥ. ಇದೆಲ್ಲ ದೃಶ್ಯಗಳು ಕಾಣಸಿಗುವುದು ಕೋಲಾರದಲ್ಲಿ. ಕೋಲಾರದ ಹೊರವಲಯದಲ್ಲಿರುವ ಶತಶೃಂಗ ಪರ್ವತ ಎಂದು ಕರೆಯಲಾಗುವ ಅಂತರಗಂಗೆಯಲ್ಲಿ. ಇದು ರಾಜ್ಯ ರಾಜಧಾನಿ ಬೆಂಗಳೂರಿಗೆ ಕೇವಲ 60 ಕಿಮೀ ದೂರದಲ್ಲಿದೆ. ಇಂಥ ಅಂತರಗಂಗೆ ಬೆಟ್ಟಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಬೆಟ್ಟಕ್ಕೆ ಜಿಲ್ಲಾಡಳಿತ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಒಂದು ವಿಶೇಷವಾದ ಯೋಜನೆ ಕೈಗೆತ್ತಿಕೊಂಡಿವೆ. ಸುಮಾರು 500 ಮೀಟರ್ ಉದ್ದದ ಜಿಪ್ ಲೈನ್ ಅಳವಡಿಸುವ ಮೂಲಕ ರಾಜ್ಯದ ಆಕರ್ಷಣೀಯ ಸ್ಥಳವನ್ನಾಗಿಸಲು ಮುಂದಾಗಿವೆ.
ಈಗಾಗಲೇ ಚಾರಣಿಗರ ಸಂಖ್ಯೆ ದಿನದಿಂದ ಏರಿಕೆಯಾಗುತ್ತಿರುವುದರಿಂದ ಜಿಪ್ ಲೈನ್ ಮುಖಾಂತರ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಕ್ರಿಯಾಯೋಜನೆ ಮಾಡಲಾಗಿದೆ. ಇನ್ನು ಬೆಟ್ಟದ ಮೇಲೆ ಮಾಹಿತಿ ಕೇಂದ್ರ ತೆರೆಯಲು ಈಗಾಗಲೇ ಪೂರ್ವ ತಯಾರಿ ಮಾಡಲಾಗಿದೆ. ಇದಿಷ್ಟು ಯೋಜನೆಗೆ ಬೇಕಾದ ಅನುದಾನ ಸಹ ಬಿಡುಗಡೆಯಾಗಿದ್ದು ಸದ್ಯದಲ್ಲೇ ಕೆಲಸವನ್ನು ಆರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೋಲಾರ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲು ತಿಳಿಸಿದ್ದಾರೆ.
ಪ್ರವಾಸಿಗರ ಕೈಬೀಸಿ ಕರೆಯುವ ಅಂತರಗಂಗೆ

ಇನ್ನು ಶತಶೃಂಗ ಪರ್ವತದಲ್ಲಿ ಸಾಕಷ್ಟು ಔಷಧೀಯ ಗುಣಗಳುಳ್ಳ ಸಸ್ಯರಾಶಿ ಇದೆ. ಅಲ್ಲಲ್ಲೇ ಸಣ್ಣದಾಗಿ ಜುಳು ಜುಳು ಹರಿಯುತ್ತಿರುವ ನೀರಿನ ಝರಿಗಳಿವೆ. ಪ್ರಕೃತಿ ಸೌಂದರ್ಯ ಪ್ರಕೃತಿ ಪ್ರಿಯರನ್ನು ಹಾಗೂ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಅದಕ್ಕೆಂದೇ ಪ್ರಕೃತಿ ಪ್ರಿಯರು ಹಾಗೂ ಚಾರಣಿಗರು ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಬೆಂಗಳೂರು ಸೇರಿದಂತೆ ಪಕ್ಕದ ಜಿಲ್ಲೆಗಳಿಂದ ನೂರಾರು ಜನರು ಅಂತರಗಂಗೆಬೆಟ್ಟಕ್ಕೆ ಆಗಮಿಸುತ್ತಾರೆ.
ವೀಕೆಂಡ್ ಸಾವಿರಾರು ಸಂಖ್ಯೆಯಲ್ಲಿ ಬರುವ ಚಾರಣಿಗರು
ಶನಿವಾರ ಮತ್ತು ಭಾನುವಾರ ರಜಾದಿಗಳ ಸಂದರ್ಭದಲ್ಲಂತೂ ಸಾವಿರಾರು ಜನರು ಈ ಬೆಟ್ಟದಲ್ಲಿ ಚಾರಣ ಮಾಡಲು ಬರುತ್ತಾರೆ. ಅರಣ್ಯ ಇಲಾಖೆ ಈಗಾಗಲೇ ಆನ್ ಲೈನ್ ಬುಕ್ಕಿಂಗ್ ಕೂಡ ಆರಂಭಿಸಿದೆ. ಪ್ರವಾಸಿ ತಾಣಕ್ಕೆ ಮತ್ತಷ್ಟು ಪುಷ್ಠಿ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಶೇಷ ಅನುದಾನದ ಮೂಲಕ ಜಿಪ್ ಲೈನ್ ಅಳವಡಿಸುವ ಕೆಲಸಕ್ಕೆ ಮುಂದಾಗಿದೆ. ಜಿಪ್ ಲೈನ್ ಅಳವಡಿಸಿದಲ್ಲಿ ಅರಣ್ಯಕ್ಕಾಗಲೀ, ಇಲ್ಲಿರುವ ಪ್ರಕೃತಿಗೆ ಏನಾದರೂ ತೊಂದರೆಯಾಗುತ್ತದೆಯೇ ಎಂಬ ಕುರಿತು ಅರಣ್ಯ ಇಲಾಖೆ ವರದಿ ಕೇಳಲಾಗಿದ್ದು, ವರದಿ ಸಲ್ಲಿಕೆಯಾದ ಕೂಡಲೇ ಯೋಜನೆ ಕೆಲಸ ಆರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಪ್ ಲೈನ್ (ಪ್ರಾತಿನಿಧಿಕ ಚಿತ್ರ)
ಕೋಲಾರದ ಮಟ್ಟಿಗೆ ಇದೊಂದು ಅತ್ಯುತ್ತಮ ಯೋಜನೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದೂ ಜಿಲ್ಲಾಧಿಕಾರಿ ಅಕ್ರಂ ಪಾಷಾ ಹೇಳಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ಬಾಲರಾಮನ ದರ್ಶನಕ್ಕೆ ಸೈಕಲ್ ಏರಿ ಹೊರಟ ಕೋಲಾರ ಯುವಕರು
ಒಟ್ಟಾರೆಯಾಗಿ, ಅಂತರಗಂಗೆಗೆ ಜಿಪ್ ಲೈನ್ ಅಳವಡಿಕೆ ಯೋಜನೆ ಮಹತ್ವದ ಪಾತ್ರ ವಹಿಸಲಿದ್ದು, ಈ ಯೋಜನೆಯಿಂದ ಅಂತರಗಂಗೆ ಪ್ರವಾಸಿ ತಾಣ ಅಭಿವೃದ್ದಿಗೆ ಮತ್ತಷ್ಟು ಬಲ ದೊರೆಯಲಿದೆ. ಮತ್ತಷ್ಟು ಪ್ರವಾಸಿಗರನ್ನು ಅಂತರಗಂಗೆ ಆಕರ್ಷಿಸಲಿದೆ. ಆದಷ್ಟು ಬೇಗ ಯೋಜನೆ ಜಾರಿಗೊಳಿಸಲು ಎಂಬುದು ಕೋಲಾರದ ಜನರ ಆಗ್ರಹವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




