Millennials: ಹರೆಯದ ಮನಸ್ಸುಗಳ ಪಿಸುಮಾತುಗಳಿಗೆ ಕನ್ನಡಿ ಹಿಡಿದ ಮೊಬೈಲ್ ಟವರ್ಗಳು: ನಿಮ್ಮ ಮಕ್ಕಳ ಸರ್ಚ್ ಹಿಸ್ಟರಿ ಗಮನಿಸಿದ್ದೀರಾ?
ಮೊಬೈಲ್ನಲ್ಲಿ ಮುಳುಗಿರುವ ಹರೆಯದ ಹುಡುಗ-ಹುಡುಗಿಯರ ಮನಃಸ್ಥಿಗೆ ಮೊಬೈಲ್ ಟವರ್ಗಳಿಂದ ಪೊಲೀಸ್ ಅಧಿಕಾರಿಯೊಬ್ಬರು ಪರಿಶೀಲಿಸಿದ ದತ್ತಾಂಶ ಕನ್ನಡಿ ಹಿಡಿದಿದೆ.
ಕೋಲಾರ: ಮೊಬೈಲ್ನಲ್ಲಿ ಮುಳುಗಿರುವ ಹರೆಯದ ಹುಡುಗ-ಹುಡುಗಿಯರ ಮನಃಸ್ಥಿಗೆ ಮೊಬೈಲ್ ಟವರ್ಗಳಿಂದ ಪೊಲೀಸ್ ಅಧಿಕಾರಿಯೊಬ್ಬರು ಪರಿಶೀಲಿಸಿದ ದತ್ತಾಂಶ ಕನ್ನಡಿ ಹಿಡಿದಿದೆ. ಶಂಕಿತ ಕೊಲೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ತನಿಖೆಗೆಂದು ಜಿಲ್ಲೆಯ ಕೆಲ ಮೊಬೈಲ್ ಟವರ್ಗಳಿಂದ ನಡೆದಿರುವ ಸಂಭಾಷಣೆ ಮತ್ತು ರವಾನೆಯಾಗಿರುವ ಎಸ್ಎಂಎಸ್ಗಳ ದೊಡ್ಡಮಟ್ಟದ ದತ್ತಾಂಶವನ್ನು ವಿಶ್ಲೇಷಿಸಿದರು. ಈ ವೇಳೆ ಕೆಲ ಮೆಸೇಜ್ಗಳನ್ನು ಕಂಡು ಪೊಲೀಸ್ ಅಧಿಕಾರಿಯೇ ಒಂದು ಕ್ಷಣ ತಬ್ಬಿಬ್ಬಾದರಂತೆ. ಪ್ರಕರಣ ಮತ್ತು ಮೊಬೈಲ್ ಟವರ್ಗಳ ಗೌಪ್ಯತೆ ಕಾಪಾಡಬೇಕು ಎನ್ನುವ ಕಾರಣಕ್ಕೆ ಯಾವುದೇ ಹಳ್ಳಿ ಹಾಗೂ ತನಿಖಾಧಿಕಾರಿಯ ಹೆಸರನ್ನು ಈ ವರದಿಯಲ್ಲಿ ಉಲ್ಲೇಖಿಸಿಲ್ಲ. ಟಿವಿ9 ಕನ್ನಡ ಡಿಜಿಟಲ್ ಪ್ರತಿನಿಧಿ ಈ ಮೆಸೇಜುಗಳನ್ನಾಗಲೀ, ಮೊಬೈಲ್ ಸಂಖ್ಯೆಗಳನ್ನಾಗಲೀ ನೋಡಿಲ್ಲ. ತನಿಖಾಧಿಕಾರಿಯೊಂದಿಗೆ ಅನೌಪಚಾರಿಕ ಸಂಭಾಷಣೆಯಲ್ಲಿ ತಿಳಿದ ವಿಷಯವನ್ನು ಪೋಷಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಕಟಿಸಲಾಗಿದೆ.
ಹದಿಹರೆಯದ ವಯಸ್ಸಿನಲ್ಲಿ ಯುವಕ-ಯುವತಿಯರಲ್ಲಿ ಆಕರ್ಷಣೆಗಳು ಪ್ರೀತಿ-ಪ್ರೇಮದ ಹೆಸರಿನಲ್ಲಿ ಹುಚ್ಚು ಕುದುರೆಯಂತೆ ಕುಣಿಸುತ್ತಿದೆ. ಅದರಲ್ಲೂ ಸ್ಮಾರ್ಟ್ಪೋನ್ ಯುಗ ಬಂದು, ಆನ್ಲೈನ್ ಕ್ಲಾಸ್ ಕಾಲ ಶುರುವಾದ ಮೇಲಂತು ಯಾವುದಕ್ಕೂ ಯಾವುದೇ ವಯಸ್ಸಿಲ್ಲ. ಎಲ್ಲರೂ ಎಲ್ಲವನ್ನೂ ನಿರಾತಂಕವಾಗಿ ನೋಡುವ ಸ್ಥಿತಿ ಬಂದಿದೆ. ಇಂಥ ಸ್ಥಿತಿಯಲ್ಲಿ ಮಕ್ಕಳಿಗೆ ಬುದ್ಧಿ ಹೇಳೋರು ಯಾರು..? ಮಕ್ಕಳು ಇಷ್ಟಪಟ್ಟು ನೋಡುವ ಸಿನಿಮಾ, ಸೋಷಿಯಲ್ ಮೀಡಿಯಾ, ಟಿವಿ, ಸೀರಿಯಲ್ಲೂ ಎಲ್ಲಿ ನೋಡಿದ್ರು, ಯಾವ ನಾಟಕದಲ್ಲಿ ನೋಡಿದ್ರೆ ಪ್ರೀತಿ ಪ್ರೇಮದ ಸನ್ನಿವೇಶಗಳೇ ಗಮನ ಸೆಳೆಯುತ್ತಿರುವಾಗ ಮಕ್ಕಳಿಗೂ ಕುತೂಹಲ ಕೆರಳದೆ ಇರಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಇತ್ತೀಚೆಗೆ ಪೊಲೀಸ್ ಅಧಿಕಾರಿಯೊಬ್ಬರು ಪ್ರಕರಣವೊಂದರ ತನಿಖೆ ವೇಳೆಯಲ್ಲಿ ಕೆಲವು ಮೊಬೈಲ್ ಮೆಸೇಜ್ಗಳು ಹಾಗೂ ಕಾಲ್ಡೀಟೇಲ್ಸ್ ಗಳನ್ನು ಪತ್ತೆ ಹೆಚ್ಚುವ ವೇಳೆ ಕೆಲವೊಂದು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ.
ತನಿಖೆ ವೇಳೆ ಪೊಲೀಸ್ ಅಧಿಕಾರಿಗೆ ಶಾಕ್ ಕೊಟ್ಟ ವಿಷಯ ಅದೊಂದು ಸಾಕಷ್ಟು ನಿಗೂಡವಾಗಿ ಅಧಿಕಾರಿಗಳನ್ನು ತಿಂಗಳಾನುಗಟ್ಟಲೆ ಕಾಡಿದ್ದ ಪ್ರಕರಣ ಈ ಪ್ರಕರಣದ ತನಿಖೆ ವೇಳೆ ಪೊಲೀಸರು ಗ್ರಾಮೀಣ ಬಾಗದ ಹಾಗೂ ಕೆಲವು ನಗರ ಭಾಗದ ಟವರ್ಗಳಿಂದ ಕಾಲ್ ಡೀಟೇಲ್ಸ್ ಹಾಗೂ ಮೆಸೇಜ್ ಡೀಟೇಲ್ಸ್ಗಳನ್ನು ಸಂಗ್ರಹ ಮಾಡಿ ಒಂದೊಂದಾಗಿ ಪರಿಶೀಲನೆ ನಡೆಸುತ್ತಿದ್ದರು ಈ ವೇಳೆಯಲ್ಲಿ ಕೆಲವು ಯುವಕ ಯುವತಿಯರು ಕಳಿಸಿದ್ದ ಕೆಲವೊಂದು ಮೆಸೇಜ್ಗಳು ಆಶ್ಚರ್ಯ ಹಾಗೂ ಗಾಬರಿ ಹುಟ್ಟಿಸುವಂತಿದ್ದವು ಎನ್ನಲಾಗಿದೆ. ಯಾಕಂದ್ರೆ ಇನ್ನೂ ಪ್ರಾಯಕ್ಕೆ ಬಾರದ ಮಕ್ಕಳು ತಮ್ಮ ಮೊಬೈಲ್ನಲ್ಲಿ ಅಶ್ಲೀಲ ಪದಗಳನ್ನು ಬಳಕೆ ಮಾಡಿಕೊಂಡು ಕೆಲವು ಮೆಸೇಜ್ಗಳನ್ನು ಮಾಡಿರುವುದು, ಮತ್ತೆ ಕೆಲವು ಯುವತಿಯರು ಇಬ್ಬರು ಮೂರು ಜನ ಹುಡುಗರಿಗೆ ಬೇರೆ ಬೇರೆ ರೀತಿಯಲ್ಲಿ ಪ್ರೀತಿ ಪ್ರೇಮದ ಹೆಸರಲ್ಲಿ ಚಿನ್ನ, ರನ್ನ, ಬಂಗಾರ, ಹನಿ, ಎಂದೆಲ್ಲಾ ಮೆಸೇಜ್ಗಳನ್ನು ಕಳಿಸಿರುವುದು, ಅದೇ ರೀತಿ ಹುಡುಗರೂ ಕೂಡಾ ಇಬ್ಬರು ಮೂರು ಜನ ಹುಡುಗಿಯರಿಗೆ ಅಮ್ಮು, ಬಂಗಾರಿ, ಎಂದೆಲ್ಲಾ ಮೆಸೇಜ್ಗಳನ್ನು ಕಳಿಸಿರುವುದು ಗೊತ್ತಾಗಿದೆ. ಇನ್ನೂ ವಯಸ್ಸಿಗೆ ಬರುವ ಮುನ್ನವೇ ಪ್ರೀತಿ ಪ್ರೇಮದ ಆಕರ್ಶಣೆಗೆ ಬಿದ್ದಿರುವ ಯುವಕ ಯುವತಿಯರು ಹೀಗೆ ಸ್ಮಾರ್ಟ್ಪೋನ್ ಯುಗದಲ್ಲಿ ನೈತಿಕತೆ ಮರೆತು ಕ್ಷಣಿಕ ಸುಖಕ್ಕೆ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರಾ ಅನ್ನೋ ಅತಂಕ ಶುರುವಾಗಿದೆ.
ಗ್ರಾಮೀಣ ಭಾಗದಲ್ಲೂ ಇಂಥದ್ದೇ ವರ್ತನೆ ಮೊದಲೆಲ್ಲಾ ನಗರ ಪ್ರದೇಶದ ಯುವಕ-ಯುವತಿಯರು ಮಾತ್ರ ಹೀಗೆ ಪ್ರೀತಿ ಪ್ರೇಮದ ಆಕರ್ಷಣೆಗೆ ಬಿದ್ದು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶ, ನಗರ ಪ್ರದೇಶ ಯಾವುದಕ್ಕೂ ವ್ಯತ್ಯಾಸವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಈ ಸಂಗತಿಯು ತನಿಖಾಧಿಕಾರಿಗಳು ಗ್ರಾಮೀಣ ಭಾಗದ ಯುವಕ-ಯುವತಿಯರು ಕಳಿಸಿರುವ ಮೆಸೇಜ್ಗಳನ್ನು ನೋಡಿದಾಗ ತಿಳಿದು ಬಂದಿದೆ.
ಆನ್ಲೈನ್ ತರಗತಿಗಳಿಂದ ಹೆಚ್ಚಾದ ಮೊಬೈಲ್ ಹುಚ್ಚಾಟ ಕೊರೊನಾ ಕಾಲದಲ್ಲಿ ಅಂದರೆ ಕಳೆದ ಎರಡು ವರ್ಷಗಳಿಂದ ಮಕ್ಕಳ ಕೈಗೆ ಸರಾಗವಾಗಿ ಮೊಬೈಲ್ ಸಿಕ್ಕಿದ್ದೇ ನೋಡಿ, ಅದರಲ್ಲಿ ಮಕ್ಕಳು ಶಿಕ್ಷಕರು ಹೇಳಿಕೊಟ್ಟು ಕಲಿತ ಪಾಠಕ್ಕಿಂತ, ಗೂಗಲ್ನಲ್ಲಿ ಇಲ್ಲಸಲ್ಲದನ್ನು ಹುಡುಕಿದ್ದೇ ಹೆಚ್ಚು. ಮಕ್ಕಳಿಗೆ ಮೊಬೈಲ್ ಕೊಡಿಸಿ ಇಂಟರ್ನೆಟ್ ಹಾಕಿಸಿ, ಮನೆಯಲ್ಲಿ ಪ್ರತ್ಯೇಕವಾಗಿ ಇರಲು ದಾರಿಮಾಡಿಕೊಟ್ಟ ಈ ಆನ್ಲೈನ್ ತರಗತಿಗಳಿಂದ ಮಕ್ಕಳು ನಿಜಕ್ಕೂ ಪಾಠವನ್ನೇ ಕಲಿತಿದ್ದಾರಾ? ಈ ಮೊಬೈಲ್ಗಳು ಪಾಠವನ್ನೇ ಹೇಳಿಕೊಟ್ಟಿದ್ಯಾ ಇಲ್ಲಾ ಬೇರೆ ಏನನ್ನಾದರೂ ಹೇಳಿಕೊಟ್ಟಿದ್ಯಾ ಅನ್ನೋದನ್ನ ಅವರ ಮೊಬೈಲ್ ನಲ್ಲಿನ ಡಿಲೀಟ್ ಆಗಿರುವ ಮೆಸೇಜ್ಗಳು, ಗೂಗಲ್, ಯೂಟ್ಯೂಬ್ನಲ್ಲಿನ ಸರ್ಚ್ ಹಿಸ್ಟರಿಯನ್ನು ನೋಡಿದಾಗಲೇ ಗೊತ್ತಾಗುವುದು. ಮನೆಗಳಲ್ಲಿ ಎಲ್ಲ ಪೋಷಕರು ತಮ್ಮ ಮಕ್ಕಳನ್ನು ಅನುಮಾನದಿಂದ ನೋಡಬೇಕು ಎಂದಲ್ಲ. ಆದರೆ ಮಕ್ಕಳ ‘ಡಿಜಿಟಲ್ ಹೆಲ್ತ್’ ಜವಾಬ್ದಾರಿಯನ್ನೂ ಪೋಷಕರು ನಿರ್ವಹಿಸಬೇಕಾಗಿದೆ.
ವಯಸ್ಸಿಗೆ ಬಂದ ಮಕ್ಕಳೊಂದಿಗೆ ತಂದೆ ತಾಯಿಗಳು ಸ್ನೇಹಿತರಂತೆ ಇರಬೇಕು ಎಂದು ಆಗಾಗ ಕೆಲವು ಹಿರಿಯರು ಸಲಹೆಗಳನ್ನು ನೀಡುತ್ತಿರುತ್ತಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಆ ರೀತಿ ಇರದೆ ಇದ್ದರೆ ತೀರಾ ಕಷ್ಟವಾಗುತ್ತದೆ. ಮಕ್ಕಳೊಂದಿಗೆ ಸ್ನೇಹಿತರಂತೆ ಇರದೆ ಹೋದರೆ, ಅತಿಯಾಗಿ ನಿರ್ಬಂಧಿಸಿದರೆ ವಯಸ್ಸಿಗೆ ಬರುವ ಮುನ್ನವೇ ಮಕ್ಕಳು ಕೈತಪ್ಪಿ ಹೋಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಕೇವಲ ಒಂದು ಸ್ಮಾರ್ಟ್ ಪೋನ್ ಮಕ್ಕಳಿಗೆ ಒಳ್ಳೆಯದು-ಕೆಟ್ಟದ್ದು ಎಲ್ಲವನ್ನೂ ತೋರಿಸಿಬಿಡುತ್ತದೆ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳು ಒಳ್ಳೆಯದನ್ನೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಮನಸ್ಥಿತಿಗೆ ಬರುವಂತೆ ಮಾಡಬೇಕಾಗಿರುವುದು ನಿಜಕ್ಕೂ ಪೊಷಕರ ಎದುರಿಗೆ ಇರುವ ಸವಾಲು.
ವರದಿ: ರಾಜೇಂದ್ರ ಸಿಂಹ
ಇದನ್ನೂ ಓದಿ: ನಮ್ಮನ್ನು ನಾವು ಪ್ರೀತಿಸಿಕೊಳ್ಳದಿದ್ದರೆ, ಆತ್ಮವಿಶ್ವಾಸ ಕಮ್ಮಿಯಾಗಿ ಒಂಟಿತನ ಕಾಡಲಾರಂಭಿಸುತ್ತದೆ ಇದನ್ನೂ ಓದಿ: ಹಾಕಿದ ನಿಯಮ ಮುರಿಯುವುದು ಹೋಗಲಿ ಅತ್ತಿತ್ತ ದೂಡಾಡುವ ಪ್ರಯತ್ನ ಮಾಡದಿದ್ದರೆ ಅದೆಂಥಾ ಹರೆಯ?
Published On - 9:15 pm, Tue, 28 December 21