ಕಾರ್ಪೊರೇಟರ್ ಕೊಲೆ ಪ್ರಕರಣ ಬೆನ್ನತ್ತಿದ ಮುಳಬಾಗಿಲು ಪೊಲೀಸರು ಕೆರೆ ನೀರನ್ನು ಖಾಲಿ ಮಾಡಿಸಿದರು ಯಾಕೆ? ಸಂಪೂರ್ಣ ವೃತ್ತಾಂತ ಇಲ್ಲಿದೆ
ಅದು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದ ಕೊಲೆ ಪ್ರಕರಣ. ಆದರೆ ಕೊಲೆ ಮಾಡಿಸಿದವನೇ ಕೊಲೆಯಾಗಿ ಹೋದಾಗ ಮಾಡಿದ ಪಾಪ ಬಿಡೋದಿಲ್ಲ ಎನ್ನುವಂತೆ ಅಲ್ಲಿ ಕೊಲೆಯಾದವನೇ ತಾನು ಸುಪಾರಿ ಕೊಟ್ಟು ಮಾಡಿಸಿದ್ದ ಕೊಲೆ ಪ್ರಕರಣವೊಂದು ಬಯಲಾಗಿದೆ. ಏಳು ವರ್ಷಗಳ ಹಿಂದೆ ಮಾಡಲಾಗಿದ್ದ ಸುಪಾರಿ ಕೊಲೆ ಪ್ರಕರಣದ ರಹಸ್ಯ ಕೆರೆಯ ಅಡಿಯಲ್ಲಿ ಸೇರಿದ್ದು, ಕೊಲೆ ರಹಸ್ಯ ಭೇದಿಸಲು ಪೊಲೀಸರು ಕೆರೆಯ ನೀರನ್ನು ಖಾಲಿ ಮಾಡುತ್ತಿದ್ದಾರೆ.
ಅದು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದ ಕೊಲೆ ಪ್ರಕರಣ. ಆದರೆ ಕೊಲೆ ಮಾಡಿಸಿದವನೇ ಕೊಲೆಯಾಗಿ ಹೋದಾಗ ಮಾಡಿದ ಪಾಪ ಬಿಡೋದಿಲ್ಲ ಎನ್ನುವಂತೆ ಅಲ್ಲಿ ಕೊಲೆಯಾದವನೇ ತಾನು ಸುಪಾರಿ ಕೊಟ್ಟು ಮಾಡಿಸಿದ್ದ ಕೊಲೆ ಪ್ರಕರಣವೊಂದು ಬಯಲಾಗಿದೆ. ಏಳು ವರ್ಷಗಳ ಹಿಂದೆ ಮಾಡಲಾಗಿದ್ದ ಸುಪಾರಿ ಕೊಲೆ ಪ್ರಕರಣದ ರಹಸ್ಯ ಕೆರೆಯ ಅಡಿಯಲ್ಲಿ ಸೇರಿದ್ದು, ಕೊಲೆ ರಹಸ್ಯ ಭೇದಿಸಲು ಪೊಲೀಸರು ಕೆರೆಯ ನೀರನ್ನು ಖಾಲಿ ಮಾಡುತ್ತಿದ್ದಾರೆ.
ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದ ತನಿಖೆ ವೇಳೆ ಮತ್ತೊಂದು ಕೊಲೆ ಬಯಲು..!
ಜೂನ್-7 ರಂದು ಕೊಲೆಯಾದ ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದ ಒಟ್ಟು 14 ಜನ ಆರೋಪಿಗಳನ್ನು ಮುಳಬಾಗಿಲು ಪೊಲೀಸರು ಬಂಧಿಸಿದ್ದು, ಬಂದಿತ ಆರೋಪಿಗಳನ್ನು ವಿಚಾರಣೆ ವೇಳೆ ಮತ್ತೊಂದು ಸುಪಾರಿ ಕೊಲೆಯ ಸುಳಿವು ಹೊರಬಿದ್ದಿದೆ. ಅಪರಿಚಿತ ಶವ, ಅಸಹಜ ಸಾವು ಎಂದು ಮುಚ್ಚಿಹಾಕಲಾಗಿದ್ದ ಕೊಲೆ ಪ್ರಕರಣವನ್ನು ಬೇದಿಸಲಾಗುತ್ತಿದೆ. ಕಳೆದ ಏಳು ವರ್ಷಗಳ ಹಿಂದೆ ಕೊಲೆಯಾದ ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಸುಪಾರಿ ಕೊಟ್ಟು ಕೊಲೆ ಮಾಡಿಸಲಾಗಿದ್ದ ಕೊಲೆ ಪ್ರಕರಣ ಈಗ ಹಲವು ತಿರುವುಗಳನ್ನು ಪಡೆದುಕೊಂಡು ತನಿಖೆಯ ಚಕ್ರಕ್ಕೆ ಬಂದು ಬಿದ್ದಿದೆ.
ಕೊಲೆಯಾದವನ ಕೊಲೆ ಪ್ರಕರಣದ ತನಿಖೆ ಕೊಲೆಯಾದವನು ಮಾಡಿಸಿದ್ದ ಕೊಲೆ ಬಯಲು..!
ಅಷ್ಟಕ್ಕೂ ಏನಿದು ಪ್ರಕರಣ ಎಂದು ನೋಡುವುದಾದರೆ, ಇದೇ ಜೂನ್-7 ರಂದು ಮುಳಬಾಗಿಲು ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಮಾಡಲಾಗಿತ್ತು ಈ ಪ್ರಕರಣದ ಪ್ರಮುಖ ಆರೋಪಿ ಜಗನ್ ಆಲಿಯಾಸ್ ಜಗನ್ನಾಥ್ ಸೇರಿ 14 ಜನರನ್ನು ಬಂಧಿಸಿದ್ದ ಪೊಲೀಸರು ಕೊಲೆ ಆರೋಪಿಗಳನ್ನು, ಪೊಲೀಸರು ತಮ್ಮದೇ ಸ್ಟೈಲ್ ನಲ್ಲಿ ವಿಚಾರಣೆ ಮಾಡಲು ಶುರುಮಾಡಿದ್ದರು,ಈ ವೇಳೆ ಆಘಾತಕಾರಿ ಹಾಗೂ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದ ಏಳು ವರ್ಷಗಳ ಹಳೆಯ ಕೊಲೆ ಪ್ರಕರಣ ಬಯಲಾಗಿದೆ. ಮುಳಬಾಗಿಲು ಪಟ್ಟಣದ ಪೇಂಟಿಂಗ್ ಕೆಲಸ ಮಾಡುತ್ತಿದ್ದ ರಮೇಶ್ ಎಂಬುವನ ಕೊಲೆ ಪ್ರಕರಣ ಬಯಲಾಗಿದೆ.
ಯಾರಿವನು ಪೇಂಟರ್ ರಮೇಶ್-ಕೊಲೆಯಾಗಿದ್ದೇಕೆ..!
ಅವತ್ತು 2015 ಏಪ್ರಿಲ್ 28 ರಂದು ಮುತ್ಯಾಲಪೇಟೆಯಲ್ಲಿ ಗಂಗಮ್ಮನ ಜಾತ್ರೆ ಪ್ರಯುಕ್ತ ಅದ್ದೂರಿಯಾಗಿ ಆರ್ಕೆಸ್ಟ್ರಾ ಆಯೋಜನೆ ಮಾಡಲಾಗಿತ್ತು, ಈವೇಳೆ ಸಕತ್ತಾಗಿಯೇ ಕುಡಿದಿದ್ದ ಪೇಂಟರ್ ರಮೇಶ ಡ್ಯಾನ್ಸ್ ಮಾಡುತ್ತಾ ನಗರಸಬೆ ಸದಸ್ಯ ಜಗನ್ ಮೋಹನ್ ರೆಡ್ಡಿ ಭುಜಕ್ಕೆ ಕೈ ತಾಕಿಸಿದ್ದಾನೆ ಅಷ್ಟೇ ಅಲ್ಲದೆ ಜಗನ್ ಮೋಹನ್ ರೆಡ್ಡಿಗೆ ಎಂದೆರಡು ಅವಾಜ್ ಕೂಡಾ ಬಿಟ್ಟಿದ್ದಾನೆ, ಈ ವೇಳೆ ಕೋಪಗೊಂಡಿದ್ದ ಜಗನ್ಮೋಹನ್ ರೆಡ್ಡಿ ಅಲ್ಲೇ ರಮೇಶನ ಕಪಾಳಕ್ಕೆ ಬಾರಿಸಿದ್ದನಂತೆ. ಅದಾದ ನಂತರ ರಮೇಶ ಪದೇ ಪದೇ ಹೋಗಿ ಜಗನ್ ಮೋಹನ್ ರೆಡ್ಡಿ ಜೊತೆಗೆ ಜಗಳ ಮಾಡಿಕೊಂಡಿದ್ದ ಇದರಿಂದ ಆಕ್ರೋಶಗೊಂಡಿದ್ದ ಜಗನ್ ಮೋಹನ್ ರೆಡ್ಡಿ ನಿನ್ನ ಕಥೆ ಮುಗಿಸ್ತೀನಿ ಎಂದು ವಾರ್ನ್ ಕೂಡಾ ಮಾಡಿದ್ದನಂತೆ ಅದರಂತೆ ಜಗನ್ ಮೋಹನ್ ರೆಡ್ಡಿ ತನ್ನ ಬಲಗೈ ಬಂಟನಾಗಿದ್ದ ಸೂರಿ ಆಲಿಯಾಸ್ ಸುರೇಶ್ ಹಾಗೂ ಅಪ್ಪಿ ಆಲಿಯಾಸ್ ಅಪ್ಪಯ್ಯ ಎಂಬುವರಿಗೆ ಪೇಂಟರ್ ರಮೇಶ್ ನನ್ನ ಮುಗಿಸುವಂತೆ ಸುಪಾರಿ ಕೊಟ್ಟಿದ್ದ. ಇಬ್ಬರಿಗೂ ತಲಾ ತಲಾ 1 ಲಕ್ಷ ಹಣ ನೀಡಿ ಅವನ ಕಥೆ ಮುಗಿಸುವಂತೆ ಹೇಳಿದ್ದನಂತೆ.
ಕೊಲೆಯಾದ ಮೇಲೆ ಆಗಿದ್ದೇನು ಪ್ರಕರಣ ಮುಚ್ಚಿ ಹೋಗಿದ್ದೇಕೆ..!
ಅವತ್ತು 2015 ರ ಏಪ್ರಿಲ್-28 ರಂದು ಜಗನ್ ಮೋಹನ್ ರೆಡ್ಡಿ ಹಾಗೂ ರಮೇಶ್ ನಡುವಿನ ಜಗಳದ ನಂತರ, ರಮೇಶ್ ಮೇ-8 ರಂದು ಮುಳಬಾಗಿಲು ತಾಲೂಕಿನ ಲಿಂಗಾಪುರ ಗ್ರಾಮದ ಹೊರವಲಯದ ನಿರ್ಜನ ಪ್ರದೇಶದ ಪೊದೆಯಲ್ಲಿ ಅಪರಿಚಿತ ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆಗ ಶವದ ಗುರುತು ಸಿಕ್ಕಿರಲಿಲ್ಲ ಹಾಗಾಗಿ ಅದು ಗುರುತು ಸಿಗದ ಹಾಗೂ ಅಸಹಜ ಸಾವು ಎಂದು ಪೊಲೀಸರೇ ಕದರೀಪುರ ಗ್ರಾಮದ ಕರೆಯಲ್ಲಿ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದರು. ಆದರೆ ಸ್ವಲ್ಪ ದಿನದ ನಂತರ ಆತನ ಶರ್ಟ್ ಮೇಲಿನ ಧರ್ಮಸಿಂಗ್ ಟೈಲರ್ ಎಂಬ ಮಳಿಗೆಯ ಹೆಸರಿನ ಮೂಲಕ, ಅದು ಮುಳಬಾಗಿಲು ನಗರದ ಗಣೇಶಪಾಳ್ಯದ 31 ವರ್ಷದ ರಮೇಶ್ ಅಲಿಯಾಸ್ ಪೇಂಟರ್ ರಮೇಶ್ ಎಂದು ಗುರುತು ಪತ್ತೆ ಮಾಡಿ ಪ್ರಕರಣವನ್ನು ಅಲ್ಲಿಗೆ ಮುಗಿಸಿಬಿಟ್ಟಿದ್ದರು.
ಜಗನ್ ಮೋಹನ್ ರೆಡ್ಡಿ ಕೊಲೆ ಆರೋಪಿ ಜಗನ್ ಬಾಯಿಬಿಟ್ಟಿದ್ದ ಕೊಲೆ ರಹಸ್ಯ..!
ನಗರಸಭೆ ಸದಸ್ಯ ಜಗನ್ ಮೋಹನ್ರೆಡ್ಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಜಗನ್ ಆಲಿಯಾಸ್ ಜಗನ್ನಾಥ್ ನನ್ನು ಮುಳಬಾಗಿಲು ಪೊಲೀಸರು ವಿಚಾರಣೆ ವೇಳೆ ಜಗನ್ನಾಥ್ 2015 ರಲ್ಲಿ ಕೊಲೆಯಾದ ಜಗನ್ ಮೋಹನ್ ರೆಡ್ಡಿ ಮಾಡಿಸಿದ್ದ ಕೊಲೆ ಪ್ರಕರಣದ ರಹಸ್ಯ ಬಾಯಿಬಿಟ್ಟಿದ್ದ. ಜಗನ್ ಮೋಹನ್ ರೆಡ್ಡಿ ತನ್ನ ಪ್ರಭಾವ ಬಳಸಿಕೊಂಡು ತನ್ನ ಬಲಗೈ ಬಂಟರಾಗಿದ್ದ ಸುರೇಶ್ ಮತ್ತು ಅಪ್ಪಯ್ಯ ಎಂಬುವರಿಗೆ ತಲಾ ಒಂದು ಲಕ್ಷ ಕೊಟ್ಟು ಕೊಲೆ ಮಾಡಿಸಿದ್ದ ಈ ವೇಳೆ ಜಗನ್ ಕೂಡಾ ಕೊಲೆ ರಮೇಶ್ನನ್ನು ಕೊಲೆ ಮಾಡಲು ಹೋದಾಗ ತಾನೇ ಕಾರ್ ಚಲಾವಣೆ ಮಾಡಿಕೊಂಡು ಹೋಗಿದ್ದಾಗಿ ಹೇಳಿದ್ದಾನೆ.ಈ ವೇಳೆ ಶಾಕ್ ಆಗಿದ್ದ ಪೊಲೀಸರು ತಡಮಾಡದೆ ಜಗನ್ನಾಥ್ ಹೇಳಿದ್ದ ಮಾಹಿತಿ ಮೇರೆಗೆ ಸೂರಿ ಆಲಿಯಾಸ್ ಸುರೇಶ್ ಹಾಗೂ ಅಪ್ಪಿ ಆಲಿಯಾಸ್ ಅಪ್ಪಯ್ಯ ಎಂಬುವನನ್ನು ವಶಕ್ಕೆ ಪಡೆದಿದ್ದಾರೆ.
ಕೊಲೆ ಮಾಡಿದ ಆರೋಪಿಗಳು ಬಾಯಿಬಿಟ್ಟ ಸತ್ಯಾಂಶವೇನು..!
ಅಷ್ಟಕ್ಕೂ ಆರೋಪಿಗಳು ಹೇಳಿದ ಏಳು ವರ್ಷಗಳ ಹಿಂದಿನ ಕೊಲೆಯ ಕಥೆಯಾದರೂ ಏನು ಅಂತ ನೋಡೋದಾದ್ರೆ. ಅವತ್ತು ಏಪ್ರಿಲ್-28 ರಂದು ಗಂಗಮ್ಮನ ಜಾತ್ರೆಯಲ್ಲಿ ಜಗನ್ ಮೋಹನ್ ರೆಡ್ಡಿ ಹಾಗೂ ಪೇಂಟರ್ ರಮೇಶ್ ನಡುವೆ ಜಗಳವಾಗುತ್ತದೆ ಆಗ ರಮೇಶ ಕುಡಿದು ಟೈಟಾಗಿ ಜಗನ್ ಮೋಹನ್ ರೆಡ್ಡಿಗೆ ಎಲ್ಲರ ಎದುರೇ ಅವಾಜ್ ಹಾಕಿದ್ದ ಇದರಿಂದ ಕೋಪಗೊಂಡಿದ್ದ ಜಗನ್ ಮೋಹನ್ರೆಡ್ಡಿ ನಿನ್ನ ಕಥೆ ಮುಗಿಸ್ತೀನಿ ಎಂದು ಹೇಳಿದ್ದ ಅದರಂತೆ ಜಗನ್ ಮೊಹನ್ ಏಪ್ರಿಲ್-30 ರಂದು ತನ್ನ ಬಲಗೈ ಬಂಟರಾದ ಸೂರಿ ಹಾಗೂ ಅಪ್ಪಿ ಎಂಬುವರಿಗೆ ತಲಾ ಒಂದು ಲಕ್ಷ ಹಣ ಕೊಡುವುದಾಗಿ ಹೇಳಿ ಪೇಂಟರ್ ರಮೇಶ್ನನ್ನು ಮುಗಿಸಲು ಹೇಳಿದ್ದ ಅದರಂತೆ ಪ್ಲಾನ್ ಮಾಡಿದ್ದ ಸೂರಿ ಮತ್ತು ಅಪ್ಪಿ ಪೇಂಟರ್ ರಮೇಶ್ನನ್ನು ಏಪ್ರಿಲ್-30 ರ ರಾತ್ರಿ ಮುಳಬಾಗಿಲು ಬಸ್ ನಿಲ್ದಾಣದ ಬಳಿ ಬರೋದಕ್ಕೆ ಹೇಳಿದ್ದರು. ಬಸ್ ನಿಲ್ದಾಣದ ಬಳಿಗೆ ಇದೇ ಜಗನ್ ಆಲಿಯಾಸ್ ಜನನ್ನಾಥ್ಗೆ ಕಾರ್ ತೆಗೆದುಕೊಂಡು ಬರಲು ಹೇಳಿದ್ದರು ಅದರಂತೆ ಕಾರ್ನಲ್ಲಿ ಪೇಂಟರ್ ರಮೇಶ್ನನ್ನು ಎತ್ತಾಕಿಕೊಂಡು, ಸಿದಾ ಲಿಂಗಾಪುರ ಗ್ರಾಮದ ಹೊರಗಿನ ನಿರ್ಜನ ಪ್ರದೇಶದ ಬಳಿ ಸೂರಿ ಮತ್ತು ಅಪ್ಪಿ ರಮೇಶ್ನನ್ನು ಕೆರೆದುಕೊಂಡು ಹೋಗಿದ್ರು, ಆದರೆ ಜಗನ್ನಾಥ್ ಕಾರ್ನಲ್ಲೇ ಮಲಗಿದ್ದ, ಸ್ವಲ್ಪ ಹೊತ್ತಿನ ನಂತರ ಸೂರಿ ಮತ್ತು ಅಪ್ಪಿ ಇಬ್ಬರೇ ವಾಪಸ್ ಬಂದಿರ್ತಾರೆ,ಈ ವೇಳೆ ಜಗನ್ನಾಥ್ ರಮೇಶ್ ಎಲ್ಲಿ ಎಂದು ಕೇಳಿದಾಗ ಅವನು ಅವರ ಸಂಬಂಧಿಕರ ಮನೆಗೆ ಹೋದ ಎಂದು ಹೇಳಿ ಸುಮ್ಮನಾಗಿದ್ರು. ಇದಾದ ನಂತರ ಮೇ-8-2015 ರಂದು ಅದೇ ಲಿಂಗಾಪುರ ಗ್ರಾಮದ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ರಮೇಶನ ಶವ ಪತ್ತೆಯಾಗಿತ್ತು. ಆಗ ಪೊಲೀಸರು ಅದನ್ನು ಗುರುತು ಸಿಗದ ಶವ ಎಂದು ಪ್ರಕರಣವನ್ನು ಮುಗಿಸಿದ್ದರು, ಆಗಲೇ ಜಗನ್ ಸೂರಿ ಮತ್ತು ಅಪ್ಪಿಯನ್ನು ಕೇಳಿರ್ತಾನೆ ಏನಿದು ರಮೇಶ್ನನ್ನು ಕೊಲೆ ಮಾಡಿದ್ದೀರಾ ಎಂದು ಆಗ ಸೂರಿ ಮತ್ತು ಅಪ್ಪಿ ಹೆದರಿಸಿ ಇದರಲ್ಲಿ ದೊಡ್ಡ ದೊಡ್ಡವರ ಕೈವಾಡ ಇದೆ, ಇದರಲ್ಲಿ ಜಗನ್ ಮೋಹನ್ ರೆಡ್ಡಿ ಕೈವಾಡ ಇದೆ ಸುಮ್ಮನಿದ್ದುಬಿಡು ಎಂದು ಹೇಳಿ ಬಾಯಿ ಮುಚ್ಚಿಸಿರುತ್ತಾರೆ.
2018 ರಲ್ಲೇ ಪ್ರಕರಣದ ಮರು ತನಿಖೆ ನಡೆದಿತ್ತು ಆಗಲೂ ಏನಾಗಿಲ್ಲ..!
ಕೊಲೆ ನಡೆದು ಸ್ವಲ್ಪ ದಿನ ಜಗನ್ ಆಲಿಯಾಸ್ ಜಗನ್ನಾಥ್- ಜಗನ್ ಮೋಹನ್ ರೆಡ್ಡಿ ಜೊತೆಗೆ ಇದ್ದ ಆದರೆ ಅದಾದ ಒಂದೆರಡು ವರ್ಷಗಳ ನಂತರ ಜಗನ್ನಾಥ್ ಹಾಗೂ ಜಗನ್ ಮೋಹನ್ ರೆಡ್ಡಿ ನಡುವೆ ವೈಮನಸ್ಯ ಶುರುವಾಗಿತ್ತು. ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು ಆಗ ಜಗನ್ 2018 ರಲ್ಲಿ ಇದೇ ಪೇಂಟರ್ ರಮೇಶ್ನ ಕೊಲೆ ಪ್ರಕರಣವನ್ನು ಕೆದಕಿದ್ದ, ಬೆಂಗಳೂರಿನ ಕ್ರೈಂ ನ್ಯೂಸ್ ಪೇಪರ್ನಲ್ಲಿ ಸುದ್ದಿ ಮಾಡಿಸಿದ್ದ ಆಗ ಅದನ್ನು, ಡಿವೈಎಸ್ಪಿ ಉಮೇಶ್ ಎನ್ನುವರಿಗೆ ಕೊಟ್ಟು ಪ್ರಕರಣದ ತನಿಖೆಗೆ ಆದೇಶ ಮಾಡಲಾಗುತ್ತದೆ ಆದರೆ ಆಗ ಅವನ ಬಟ್ಟೆಯಲ್ಲಿದ್ದ ಧರ್ಮಸಿಂಗ್ ಟೈಲರ್ ಎಂಬ ಹೆಸರಿನ ಗುರುತು ಹಿಡಿದು ಪತ್ತೆ ಮಾಡಿದಾಗ ಅದು ಮುಳಬಾಗಿಲಿನ ಪೇಂಟರ್ ರಮೇಶ್ ಅನ್ನೋದು ತಿಳಿದು ಬಂದಿರುತ್ತದೆ ಆದರೆ ಆ ಕೊಲೆಗೆ ಅಗತ್ಯವಾದ ಸಾಕ್ಷಿಗಳು ಸಿಗದ ಹಿನ್ನೆಲೆ ಆ ತನಿಖೆ ಕೂಡಾ ಹಳ್ಳ ಹಿಡಿದಿರುತ್ತದೆ. ಇದಾದ ನಂತರ ಮತ್ತೆ ಜಗನ್ ಮೋಹನ್ ರೆಡ್ಡಿ ಬದುಕಿದ್ದಾಗ ಏನು ಮಾಡಲಾಗದ ಸ್ಥಿತಿಯಲ್ಲಿದ್ದ ಇದೇ ಜಗನ್ ಆಲಿಯಾಸ್ ಜಗನ್ನಾಥ್ ಈಗ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣದ ತನಿಖೆ ವೇಳೆ ಏಳು ವರ್ಷಗಳ ಹಿಂದಿನ ಕೊಲೆ ಪ್ರಕರಣವನ್ನು ಬಾಯಿ ಬಿಟ್ಟಿದ್ದಾನೆ.
ರಮೇಶ್ ಶವದ ಅವಶೇಷಗಳಿಗಾಗಿ ಕೆರೆಯ ನೀರನ್ನೇ ಖಾಲಿ ಮಾಡಿಸುತ್ತಿರುವ ಪೊಲೀಸರು..!
ಇನ್ನು ಜಗನ್ನಾಥ್ ನೀಡಿದ ಮಾಹಿತಿ ಮೇರೆಗೆ ಕೋಲಾರ ಎಸ್ಪಿ ಡಿ.ದೇವರಾಜ್ ಅವರ ಮಾರ್ಗದರ್ಶನದಲ್ಲಿ, ಕೊಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ಕೊಲೆಯಾದ ಪೇಂಟರ್ ರಮೇಶ್ನ ಶವವನ್ನು ಅವತ್ತು ಪೊಲೀಸರೇ ಅಂತ್ಯಸಂಸ್ಕಾರ ಮಾಡಲಾಗಿದ್ದ ಮುಳಬಾಗಿಲು ತಾಲ್ಲೂಕು ಕದರೀಪುರ ಗ್ರಾಮದ ಕೆರೆಯಲ್ಲಿ ಸದ್ಯ ನೀರು ತುಂಬಿಕೊಂಡಿದೆ ಹಾಗಾಗಿ ಶವದ ಅವಶೇಷಗಳ ಹುಡುಕಾಟಕ್ಕಾಗಿ ಕದರೀಪುರ ಕೆರೆಯ ನೀರನ್ನು ಹೊರ ಬಿಡಲಾಗುತ್ತಿದೆ. ಎರಡು ದಿನಗಳಿಂದ ತೂಬ್ ಮೂಲಕ ಕೆರೆಯ ನೀರನ್ನು ಹೊರ ಬಿಡಲಾಗುತ್ತಿದೆ, ಕೆರೆ ಖಾಲಿಯಾದ ನಂತರ ರಮೇಶ್ ಶವದ ಅವಶೇಷಗಳನ್ನು ತೆಗೆದುಕೊಂಡು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.
ಕೊಲೆ ಪ್ರಕರಣ ಮುಚ್ಚಿಹಾಕುವಲ್ಲಿ ಪೊಲೀಸರದ್ದು ಪಾಲಿತ್ತು..!
ಇನ್ನು ಅವತ್ತೇ ಮುಖವನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು, ಆದರೆ ಕೊಲೆ ಪ್ರಕರಣವನ್ನು ಅಸಹಜ ಸಾವು ಎಂದು ಇಡೀ ಪ್ರಕರಣವನ್ನು ಮುಗಿಸಿ, ಪ್ರಕರಣವನ್ನೇ ಕ್ಲೋಸ್ ಮಾಡಿದ್ದ ಪ್ರಕರಣದಲ್ಲಿ 2015 ರಲ್ಲಿ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದ್ದ ಅಧಿಕಾರಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು ಮುಂದಿನ ತನಿಖೆ ಹಂತದಲ್ಲಿ ಆ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಎಲ್ಲದಕ್ಕಿಂತ ಪ್ರಮುಖವಾಗಿ ರಮೇಶ್ ಪ್ರಕರಣದ ಕೇಸ್ ಪೈಲ್ ಪೊಲೀಸ್ ಠಾಣೆಯಿಂದ ಕಾಣಿಯಾಗಿದೆ ಹಾಗಾಗಿ ಇದರಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪಾತ್ರವಿದೆ ಅನ್ನೋದು ಎಸ್ಪಿ ದೇವರಾಜ್ ಅವರು ಅನುಮಾನ ವ್ಯಕ್ತಪಡಿಸಿದ್ದು ಮುಂದಿನ ಹಂತದಲ್ಲಿ ಪ್ರಕರಣದ ತನಿಖೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ ಉಪ್ಪು ತಿಂದವನ್ನು ನೀರು ಕುಡಿಯಲೇಬೇಕು ಎನ್ನುವಂತೆ ಕೊಲೆ ಮಾಡಿಸಿದ್ದ ಜಗನ್ ಮೋಹನ್ರೆಡ್ಡಿ ಕೊಲೆಯಾಗಿ ಹೋಗಿದ್ದಾನೆ, ಅಷ್ಟೇ ಅಲ್ಲದೆ ಕೊಲೆ ಮಾಡಿ ಯಾರಿಗೂ ಗೊತ್ತಾಗೋದಿಲ್ಲ ಎಂದು ಸೇಫ್ ಆಗಿದ್ದ ಆರೋಪಿಗಳು ಕೂಡಾ ಈಗ ಸಿಕ್ಕಿಬಿದ್ದಿದ್ದಾರೆ. ಈ ಮೂಲಕ ತಪ್ಪು ಮಾಡಿದವರು ಕಾನೂನಿನ ಕಣ್ಣಿನಿಂದ ಎಂದಿಗೂ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ ಅನ್ನೋ ಮಾತು ಸತ್ಯವಾಗಿದೆ
-ರಾಜೇಂದ್ರ ಸಿಂಹ