ಕೋಲಾರ ಟೊಮ್ಯಾಟೋ ಸಸಿಗೂ ಬಂತು ಡಿಮ್ಯಾಂಡ್! ಟೊಮ್ಯಾಟೋ ಬೆಳೆದ ರೈತರಷ್ಟೇ ಅಲ್ಲ; ನರ್ಸರಿ ಬೆಳೆಸಿದವರ ಬದುಕೂ ಬಂಗಾರವಾಗುತ್ತಿದೆ!
Tomato seedlings: ರಾಜಧಾನಿ ದಿಲ್ಲಿಯಲ್ಲಿ ಕೆಜಿ ಟೊಮ್ಯಾಟೋ ಬೆಲೆ ತ್ರಿಬಲ್ ಸೆಂಚುರಿ ಬಾರಿಸಲು ಸಜ್ಜಾಗಿದೆ. ಡಿಮ್ಯಾಂಡ್ ಹೆಚ್ಚಾಗಿರುವುದನ್ನು ಮನಗಂಡು ಕೋಲಾರದಲ್ಲಿ ಕ್ರೇಟ್ಗಳಲ್ಲಿ ಟೊಮ್ಯಾಟೋ ಸಸಿಗಳನ್ನು ಬಿತ್ತನೆ ಮಾಡುತ್ತಿದ್ದಾರೆ. ಲಕ್ಷಾಂತರ ಟೊಮ್ಯಾಟೋ ಸಸಿಗಳನ್ನು ನರ್ಸರಿಗಳಲ್ಲಿ ರೈತರು ಖರೀದಿ ಮಾಡುತ್ತಿದ್ದಾರೆ.
Kolar Tomato: ಇತ್ತೀಚಿನ ದಿನಗಳಲ್ಲಂತೂ ಟೊಮ್ಯಾಟೋ ಅನ್ನೋ ಹೆಸರಲ್ಲೇ ಚಿನ್ನ ಸಿಗ್ತಾ ಇದೆ. ಹಾಗಾಗಿ ಟೊಮ್ಯಾಟೋ ಹಣ್ಣು, ಕಾಯಿ ಜೊತೆಗೆ ಇದೀಗ ಟೊಮ್ಯಾಟೋ ಮೊಳಕೆಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಆಗಿ ಹೋಗಿದೆ. ಯಾವಾಗ ಟೊಮ್ಯಾಟೋ ಕೆಜಿಗೆ 150-180 ರೂಪಾಯಿ ಬೆಲೆ ಬಂತೋ ಈಗ ಟೊಮ್ಯಾಟೋ ಸಸಿಗಳಿಗೂ ( Tomato seedlings) ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಲೇಟೆಸ್ಟ್ ಆಗಿ ದೂರದ ರಾಜಧಾನಿ ದಿಲ್ಲಿಯಲ್ಲಿ ಕೆಜಿ ಟೊಮ್ಯಾಟೋ ತ್ರಿಬಲ್ ಸೆಂಚುರಿ ಬಾರಿಸಲೂ (Tomato rate) ಸಹ ಸಜ್ಜಾಗಿದೆ. ಕ್ರೇಟ್ಗಳಲ್ಲಿ ಟೊಮ್ಯಾಟೋ ಸಸಿಗಳನ್ನು ಬಿತ್ತನೆ ಮಾಡುತ್ತಿರುವ ಕಾರ್ಮಿಕರು, ನರ್ಸರಿಗಳಲ್ಲಿ ಬೆಳೆದು ನಿಂತಿರುವ ಲಕ್ಷಾಂತರ ಟೊಮ್ಯಾಟೋ ಸಸಿಗಳು, ನರ್ಸರಿಗಳಲ್ಲಿ ಸಸಿಗಳನ್ನು ಖರೀದಿ ಮಾಡುತ್ತಿರುವ ರೈತರು, ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದಲ್ಲಿ.
ಹೌದು, ಕಳೆದ ಎರಡು ತಿಂಗಳಿಂದಲೂ ಟೊಮ್ಯಾಟೋ ಬೆಳೆದಿರುವ ರೈತರು ಕೋಟ್ಯಾಧೀಶ್ವರರಾಗುತ್ತಿದ್ದಾರೆ. ಹಾಗಾಗಿ ಈಗ ಎಲ್ಲರ ಕಣ್ಣು ಟೊಮ್ಯಾಟೋ ಮೇಲೆ ಬಿದ್ದಿದೆ. ಲಾಟರಿ ಬೆಳೆ ಎಂದು ಹೇಳುವ ಟೊಮ್ಯಾಟೋಗೆ ಈಗ ದೇಶದಲ್ಲೆಡೆಯಿಂದ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದ್ದೇ ನೋಡಿ ಎಲ್ಲಾ ರೈತರು ನೋಡೇ ಬಿಡೋಣ ಅಂತ ಟೊಮ್ಯಾಟೋ ಬೆಳೆಯೋದಕ್ಕೆ ಮುಂದಾಗುತ್ತಿದ್ದಾರೆ.
ಹಾಗಾಗಿ ಟೊಮ್ಯಾಟೋ ಹಣ್ಣಿಗೆ ಮಾರುಟಕ್ಟೆಗಳಲ್ಲಿ ಎಷ್ಟು ಡಿಮ್ಯಾಂಡ್ ಇದೆಯೋ ಅದೇ ರೀತಿ ಟೊಮ್ಯಾಟೋ ಸಸಿಗಳಿಗೆ ನರ್ಸರಿಗಳಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದೆ. ಕೋಲಾರ ಜಿಲ್ಲೆಯಲ್ಲಿ ನೂರಾರು ನರ್ಸರಿಗಳಿವೆ. ಇಲ್ಲಿ ಟೊಮ್ಯಾಟೋ ಸಸಿಗಳನ್ನು ಬೆಳೆಸಲಾಗುತ್ತದೆ. ಯಾವಾಗ ಟೊಮ್ಯಾಟೋ ಹಣ್ಣಿನ ಬೆಲೆ ಸಾವಿರಾರು ರೂಪಾಯಿ ಲೆಕ್ಕದಲ್ಲಿ ಬೆಲೆ ಏರಿಕೆಯಾಯ್ತೋ ನೋಡಿ ಈಗ ಎಲ್ಲರೂ ನಾವು ಟೊಮ್ಯಾಟೋ ಬೆಳೆ ಬೆಳೆಯೋಣ ಎಂದು ಎಲ್ಲೆಡೆ ಟೊಮ್ಯಾಟೋ ಬೆಳೆ ಬೆಳೆಯೋದಕ್ಕೆ ಮನಸ್ಸು ಮಾಡಿದ್ದಾರೆ!
ಹಾಗಾಗಿ ನರ್ಸರಿಗಳಲ್ಲಿ ಟೊಮ್ಯಾಟೋ ಸಸಿಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಶುರುವಾಗಿದ್ದು ನರ್ಸರಿ ಗಳಲ್ಲಿ ಟೊಮ್ಯಾಟೋ ಸಸಿಗಳು ಸಿಗುತ್ತಿಲ್ಲ. ಟೊಮ್ಯಾಟೋ ಸಸಿ ಬೇಕಂದ್ರೆ ಕನಿಷ್ಠ ಹತ್ತು ದಿನ ಕಾಯಬೇಕಾದ ಸ್ಥಿತಿ ಇದೆ. ಅಲ್ಲದೆ ದುಪ್ಪಟ್ಟು ಬೆಲೆ ಕೊಟ್ಟು ಸಸಿಗಳನ್ನು ಖರೀದಿ ಮಾಡೋದಕ್ಕು ಜನರು ಮುಂದಾಗುತ್ತಿದ್ದಾರೆ.
ಇನ್ನು ನರ್ಸರಿಗಳಲ್ಲಿ ಒಂದು ಸಸಿಯನ್ನು ಬೆಳೆಸೋದಕ್ಕೆ ನರ್ಸರಿಗಳವರಿಗೆ ಒಂದು ತಿಂಗಳು ಸಮಯ ಬೇಕು, ವಿವಿಧ ತಳಿಯ ಟೊಮ್ಯಾಟೋ ಬೀಜಗಳನ್ನು ತಂದು, ಅದನ್ನು ಸಣ್ಣ ಸಣ್ಣ ಕ್ರೇಟ್ಗಳಲ್ಲಿ ಹಾಕಿ ಕೋಕೋ ಪಿಟ್ (ತೆಂಗಿನ ಗೊಬ್ಬರ) ಹಾಕಿ ಅದನ್ನು ಬೆಳೆಸಲಾಗುತ್ತದೆ, ಸಸಿಗಳು ಮೊಳಕೆ ಬಂದ ನಂತರ ಅದನ್ನು ಗ್ರೀನ್ ಹೌಸ್ ಶೆಡ್ಗಳಲ್ಲಿ ಬೆಳೆಸಬೇಕಾಗುತ್ತದೆ. ಒಂದು ತಿಂಗಳ ಕಾಲ ಗ್ರೀನ್ಗೌಸ್ನಲ್ಲಿ ಬೆಳೆಸಿದ ನಂತರ ಅದನ್ನು ರೈತರಿಗೆ ಒಂದು ರೂಪಾಯಿಗೆ ಒಂದು ಸಸಿಯನ್ನು ಮಾರಾಟ ಮಾಡುತ್ತಾರೆ.
ಸಾಮಾನ್ಯವಾಗಿ ಒಂದು ಸಸಿಗೆ ಒಂದು ರೂಪಾಯಿ ಬೆಲೆ ಇದೆ ಆದರೆ ಈಗ ಒಂದೂವರೆ- ಎರಡು ರೂಪಾಯಿ ಕೊಡ್ತೀವಿ ಅಂದರೂ ಟೊಮ್ಯಾಟೋ ಸಸಿಗಳು ಸಿಗುತ್ತಿಲ್ಲ. ಮೊದಲೆಲ್ಲಾ ಕೋಲಾರ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಯ ರೈತರಿಂದ ಮಾತ್ರವೇ ಇಲ್ಲಿನ ಟೊಮ್ಯಾಟೋ ಸಸಿಗಳಿಗೆ ಡಿಮ್ಯಾಂಡ್ ಇತ್ತು. ಈಗಂತೂ ಕೋಲಾರವಷ್ಟೇ ಅಲ್ಲ ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಹಾಗೂ ಪಕ್ಕದ ಆಂಧ್ರ ಪ್ರದೇಶ, ತಮಿಳುನಾಡಿನಿಂದಲೂ ರೈತರು ಟೊಮ್ಯಾಟೋ ಸಸಿಗಳಿಗಾಗಿ ಹುಡುಕಿಕೊಂಡು ಬರುತ್ತಿದ್ದಾರೆ.
ಹಾಗಾಗಿ ಟೊಮ್ಯಾಟೋ ಸಸಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇನ್ನು ರೈತರು ಕೂಡಾ ಈ ಲಾಟರಿ ಬೆಳೆ ಟೊಮ್ಯಾಟೋವನ್ನು ಬೆಳೆಯೋದಕ್ಕೆ ಉತ್ಸುಕ ರಾಗಿದ್ದು ಉತ್ತರ ಭಾರತದಲ್ಲಿ ಮಳೆ ಹೆಚ್ಚಾಗಿರುವ ಕಾರಣ ಈ ಬಾರಿ ಟೊಮ್ಯಾಟೋ ಬೆಳೆದರೂ ನಮಗೆ ಒಳ್ಳೆಯ ಬೆಲೆ ಸಿಗುತ್ತದೆ ಅನ್ನೋ ನಂಬಿಕೆ ಇದೆ ಅನ್ನೋದು ಸದ್ಯ ರೈತರ ಮಾತು.
ಒಟ್ಟಾರೆ ಟೊಮ್ಯಾಟೋ ಬೆಲೆಯನ್ನು ಕಂಡು ಈಗಂತು ಎಲ್ಲಾ ರೈತರಿಗೆ ನಾವು ಯಾಕೆ ಟೊಮ್ಯಾಟೋ ಬೆಳೆಯಬಾರದು ಎನ್ನುವಂತಾಗಿದ್ದು, ಎಲ್ಲಾ ರೈತರು ಟೊಮ್ಯಾಟೋ ಬೆಳೆಯಲು ಮುಂದಾಗಿದ್ದಾರೆ. ಮೊದಲೇ ಲಾಟರಿ ಬೆಳೆ ಎಂದು ಹೇಳುವ ಟೊಮ್ಯಾಟೋ ಯಾವ ರೈತರ ಕೈ ಹಿಡಿಯುತ್ತೆ ಯಾವ ರೈತರ ಕೈ ಬಿಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ಕೋಲಾರ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ