ಇಸ್ಟೀಟ್​ ಅಡ್ಡೆ ಮೇಲೆ ಪೊಲೀಸರ ದಾಳಿ: ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 12, 2024 | 8:22 PM

ಅವರೆಲ್ಲ ಕೆರೆಯ ದಡದಲ್ಲಿ ಕುಳಿತು ಇಸ್ಪೀಟ್​ ಆಟ ಆಡುತ್ತಿದ್ದವರು, ಈ ವೇಳೆ​ ಅಡ್ಡೆ ಮೇಲೆ ದಾಳಿ ಮಾಡಲು ಪೊಲೀಸರು ಬರುತ್ತಿದ್ದಾರೆ ಎನ್ನುವ ಮಾಹಿತಿ ಹೇಳಿದ್ದೇ ತಡ ಪೊಲೀಸರಿಂದ ತಪ್ಪಿಸಿಕೊಳ್ಳಲು ನೀರಿಗೆ ಹಾರಿದ್ದಾರೆ. ಆ ಪೈಕಿ ಮೂರು ಜನ ನೀರಿನಲ್ಲಿ ಈಜಿಕೊಂಡು ಬಚಾವ್​ ಆಗಿದ್ದರೆ, ಓರ್ವ ಈಜಲು ಬಾರದೆ ನೀರಿನಲ್ಲೇ ಮುಳುಗಿ ಸಾವನ್ನಪ್ಪಿದ್ದಾನೆ.

ಇಸ್ಟೀಟ್​ ಅಡ್ಡೆ ಮೇಲೆ ಪೊಲೀಸರ ದಾಳಿ: ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು
ಮೃತ ವ್ಯಕ್ತಿ
Follow us on
ಕೋಲಾರ, ಜೂ.12: ಜಿಲ್ಲೆಯ ಶ್ರೀನಿವಾಸಪುರ(Srinivaspur) ತಾಲೂಕಿನ ಗುಡಸವಾರಪಲ್ಲಿ ಗ್ರಾಮದ ಬಳಿ ಇಸ್ಪೀಟ್​(Gambling) ಆಡುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕೆರೆಗೆ ಹಾರಿ ತನ್ನ ಜೀವವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ. ನರಸಿಂಹ (45) ಮೃತ ರ್ದುದೈವಿ. ಗುಡಸವಾರ ಪಲ್ಲಿ ಗ್ರಾಮದ ಕೊಂಡರೆಡ್ಡಿಚೆರವು ಎನ್ನುವ ಕೆರೆಯ ದಡದಲ್ಲಿ ಇಸ್ಪೀಟ್​ ಅಡ್ಡೆ ನಡೆಯುತ್ತಿದ್ದು, ಅಲ್ಲಿ ಹತ್ತು ಹನ್ನೆರಡು ಜನ ಇಸ್ಪೀಟ್​ ಆಡುತ್ತಿದ್ದರು. ಈ ವೇಳೆ ಪೊಲೀಸರು ಬರ್ತಿದ್ದಾರೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಅಲ್ಲಿದ್ದವರೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಅದರಲ್ಲಿ ನರಸಿಂಹ, ಸೀಗಲಬೈಲು ಶಂಕರ, ಎನ್ರಕಾಯಲು ಶಿವ ಎಂಬ ಮೂವರು ಮಾತ್ರ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ್ದಾರೆ ಆ ಪೈಕಿ ಶಂಕರ, ಮತ್ತು ಶಿವ ಕೆರೆಯಲ್ಲಿ ಈಜಿ ಮತ್ತೊಂದು ದಡ ಸೇರಿದ್ದಾರೆ.
ಈ ವೇಳೆ ದಾಳಿಗೆಂದು ಹೋಗಿದ್ದ ಪೊಲೀಸರು ಎಲ್ಲರೂ ತಪ್ಪಿಸಿಕೊಂಡರೆಂದು ತಿಳಿದು ವಾಪಸ್ಸಾಗಿದ್ದಾರೆ. ಆದರೆ, ಸಂಜೆ ವೇಳೆಗೆ ಗುರವಲೋಳ್ಳಗಡ್ಡ ಗ್ರಾಮದ ನಿವಾಸಿ ನರಸಿಂಹ ಎಂಬಾತ ನಾಪತ್ತೆಯಾಗಿದ್ದ. ಆತನ ಮೊಬೈಲ್​ ಸಹ ಸ್ವಿಚ್​ ಆಫ್​ ಆಗಿತ್ತು. ಈ ವೇಳೆ ಆತನ ಕುಟುಂಬಸ್ಥರು ರಾಯಲ್ಪಾಡು ಪೊಲೀಸರಿಗೆ ದೂರು ನೀಡಿದ್ದಾರೆ. ಆತ ಕೂಡ ಇಸ್ಪೀಟ್​ ಗ್ಯಾಂಗ್​​ನಲ್ಲಿದ್ದ, ಪೊಲೀಸರಿಂದ ತಪ್ಪಿಸಿಕೊಳ್ಳಲು ನೀರಿಗೆ ಹಾರಿರುವ ನರಸಿಂಹ ಮೇಲೆ ಬಂದಿಲ್ಲ ಎನ್ನುವ ವಿಷಯ ತಿಳಿದಿದೆ. ಕೂಡಲೇ ಪೊಲಿಸರು ಅಗ್ನಿಶಾಮಕ ದಳದ ಸಿಬ್ಬಂದಿ ಜೊತೆ ಶವಕ್ಕಾಗಿ ಹುಡುಕಾಡಿದ್ದಾರೆ. ಈ ವೇಳೆ ನರಸಿಂಹನ ಶವ ಕೆರೆಯಲ್ಲಿ ಪತ್ತೆಯಾಗಿದೆ ಎಂದು ಕೋಲಾರ ಎಸ್ಪಿ ಎಂ.ನಾರಾಯಣ್​ ತಿಳಿಸಿದ್ದಾರೆ. ಅಲ್ಲದೆ ಘಟನೆ ಕುರಿತು ತನಿಖೆಗೆ ಆದೇಶಿಸಿರುವುದಾಗಿಯೂ ಹೇಳಿದ್ದಾರೆ.
ಇದನ್ನೂ ಓದಿ:Reels Craze: ಇನ್ಸ್ಟಾಗ್ರಾಮ್​​ ರೀಲ್‌ಗಾಗಿ 100 ಅಡಿ ಎತ್ತರದಿಂದ ನೀರಿಗೆ ಜಿಗಿದ ಯುವಕ ಸಾವು
ಇನ್ನು ನರಸಿಂಹ ಎಂಬಾತ ನೀರಿನಲ್ಲಿ ಬಿದ್ದು ಸತ್ತಿರುವ ಬಗ್ಗೆ ಅನುಮಾನದ ಹಿನ್ನೆಲೆಯಲ್ಲಿ ಬುಧವಾರ ಇಡೀ ದಿನ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೊಂಡರೆಡ್ಡಿಚೆರವು ಕೆರೆಯಲ್ಲಿ ಹುಡುಕಾಡಿದ ವೇಳೆ ಮಧ್ಯಾಹ್ನ ಸುಮಾರಿಗೆ ನರಸಿಂಹನ ಶವ ಪತ್ತೆಯಾಗಿದೆ. ನಿನ್ನೆ(ಜೂ.12) ಜಮೀನು ಉಳುಮೆ ಮಾಡಿಸಲು ಹೋಗುತ್ತಿರುವುದಾಗಿ ಮನೆಯಲ್ಲಿ ಹೇಳಿ ಹಣ ತೆಗೆದುಕೊಂಡು ಹೋಗಿದ್ದ ನರಸಿಂಹ, ಇಸ್ಪೀಟ್​ ಆಡಲು ಹೋಗಿದ್ದಾನೆ. ಈ ವೇಳೆ ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳಲು ಮುಂದಾಗಿರುವ ನರಸಿಂಹ, ಸ್ನೇಹಿತರ ಜೊತೆಗೆ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ.
ಒಂದು ವೇಳೆ ಪೊಲೀಸರ ಕೈಗೆ ಸಿಕ್ಕಿದ್ದಿದ್ದರೆ ಒಂದು ಪ್ರಕರಣ ದಾಖಲಾಗುತ್ತಿತ್ತು, ಅಥವಾ ಒಂದಷ್ಟು ದಂಡ ವಿಧಿಸುತ್ತಿದ್ದರು. ಆದರೆ, ಇಲ್ಲಿ ನೋಡಿದ್ರೆ ಪೊಲೀಸರಿಗೆ ಹೆದರಿ ಜೀವವನ್ನೇ ಕಳೆದುಕೊಂಡಿದ್ದಾನೆ. ಸದ್ಯ ನರಸಿಂಹ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ನಮಗೆ ನ್ಯಾಯ ಬೇಕು ಎಂದು ಪತ್ನಿ ಸುಶೀಲಮ್ಮ ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಸದ್ಯ ಘಟನೆ ಸಂಬಂಧ ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಘಟನೆ ಕುರಿತು ಇಲಾಖಾ ತನಿಖೆ ನಡೆಸುವುದಾಗಿ ಎಸ್ಪಿ ನಾರಾಯಣ್​ ಹೇಳಿದ್ದಾರೆ. ಒಟ್ಟಾರೆ ಹೊಲ ಉಳುಮೆ ಮಾಡಿಸ್ತೀನಿ ಎಂದು ಹಣ ತೆಗೆದುಕೊಂಡು ಹೋಗಿ ಇಸ್ಪೀಟ್​ ಆಟಕ್ಕೆ ಕೂತ ನರಸಿಂಹ ಪೊಲೀಸರಿಗೆ ಹೆದುರಿ ಈಜು ಬಾರದಿದ್ದರೂ ಕೆರೆಗೆ ಹಾರಿ ಜೀವ ಬಿಟ್ಟಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 pm, Wed, 12 June 24