ಕೋಲಾರ ಜಿಲ್ಲೆಯಲ್ಲಿ ಆಲೂಗಡ್ಡೆ ದುರಂತ, ಆಲೂಗಡ್ಡೆ ಬೆಳೆದ ರೈತರಿಗೆ ಕೋಟಿ ಕೋಟಿ ನಷ್ಟ!
Kolar Potato Growers: ಇನ್ನೇನು ಕಟಾವು ಮಾಡಬೇಕಿದ್ದ ಆಲೂಗಡ್ಡೆ ಬೆಳೆ ಕಳಪೆ ಗುಣಮಟ್ಟದ ಬಿತ್ತನೆ ಆಲೂಗಡ್ಡೆಯ ಪರಿಣಾಮವೋ ಇಲ್ಲಾ ವಾತಾವರಣದ ಪರಿಣಾಮವೋ ಗೊತ್ತಿಲ್ಲ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಆಲೂಗಡ್ಡೆ ಸಂಪೂರ್ಣವಾಗಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಕೋಲಾರ, ಅಕ್ಟೋಬರ್ 16: ಆ ಜಿಲ್ಲೆಯಲ್ಲಿ ಒಂದೆಡೆ ಮಳೆರಾಯ ಕೈಕೊಟ್ಟಿರುವ ಪರಿಣಾಮ ಸದ್ಯ ಬರಗಾಲದ ಪರಿಸ್ಥಿತಿ ಇದೆ, ಇನ್ನೊಂದೆಡೆ ರೈತರು ಬೆಳೆದ ಟೊಮ್ಯಾಟೋ ಹೂವಿನ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲ, ಇನ್ನೊಂದೆಡೆ ಸರ್ಕಾರದ ಲೋಡ್ ಶೆಡ್ಡಿಂಗ್ನಿಂದ ರೈತರು ಬೆಳೆದ ಬೆಳೆಯನ್ನು ಉಳಿಸಿಕೊಳ್ಳೋದೆ ಕಷ್ಟ ಇಂಥ ಹಲವು ಸಮಸ್ಯೆಗಳ ನಡುವೆ ಕೋಲಾರದಲ್ಲಿ (Kolar) ಆಲೂಗಡ್ಡೆ (Potato) ದುರಂತ ಉಂಟಾಗಿದೆ, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿದ್ದ ಆಲೂಗಡ್ಡೆ ಬೆಳೆ ಫಸಲೇ ಬಾರದೆ ರೈತರಿಗೆ ಆಘಾತ ತಂದೊಡ್ಡಿದೆ.
ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಆಲೂಗಡ್ಡೆ ಬೆಳೆ, ಆಲೂಗಡ್ಡೆ ಗಿಡಗಳಲ್ಲಿ ಗಡ್ಡೆ ಫಸಲೇ ಬಾರದ ಆಲೂಗಡ್ಡೆ ತೋಟವನ್ನು ನಾಶ ಮಾಡುತ್ತಿರುವ ರೈತರು, ತೋಟಗಳಲ್ಲಿ ಪರಿಶೀಲನೆ ನಡೆಸುತ್ತಿರುವ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಹಾಗೂ ವಿಜ್ನಾನಿಗಳು. ಈಎಲ್ಲಾ ದೃಷ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಸೀಗೇಹಳ್ಳಿ ಗ್ರಾಮದಲ್ಲಿ. ಹೌದು ಕೋಲಾರ ಜಿಲ್ಲೆಯ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಆಲೂಗಡ್ಡೆ ಬೆಳೆ ಬೆಳೆದಿದ್ದಾರೆ. ಆದರೆ ರೈತರು ಬೆಳೆದಿರುವ ಆಲೂಗಡ್ಡೆ ಬೆಳೆ ಎರಡು ತಿಂಗಳು ಕಳೆದರೂ ಫಸಲೇ ಬಂದಿಲ್ಲ, ಗಿಡಗಳು ಮೇಲ್ನೋಟಕ್ಕೆ ಚೆನ್ನಾಗಿ ಬೆಳೆದಿದೆ ಆದರೆ, ಗಿಡಗಳಲ್ಲಿ ಗಡ್ಡೆ ಕಟ್ಟಿಲ್ಲ, ಇನ್ನೇನು ಕಟಾವು ಮಾಡಬೇಕಿದ್ದ ಆಲೂಗಡ್ಡೆ ಬೆಳೆ ಕಳಪೆ ಗುಣಮಟ್ಟದ ಬಿತ್ತನೆ ಆಲೂಗಡ್ಡೆಯ ಪರಿಣಾಮವೋ ಇಲ್ಲಾ ವಾತಾವರಣದ ಪರಿಣಾಮವೋ ಗೊತ್ತಿಲ್ಲ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಆಲೂಗಡ್ಡೆ ಸಂಪೂರ್ಣವಾಗಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಈ ಮೂಲಕ ನೂರಾರು ರೈತರು ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಆಲೂಗಡ್ಡೆ ಬೆಳೆ ಫಸಲೇ ಬಾರದೆ ಆಲೂಗಡ್ಡೆ ದುರಂತವೇ ನಡೆದು ಹೋಗಿದೆ.
ಸದ್ಯ ರಾಜ್ಯದಲ್ಲಿರುವ ಪರಿಸ್ಥಿತಿಯನ್ನು ನೋಡಿದರೆ ರೈತರು ಬೆಳೆ ಬೆಳೆಯೋದೆ ಕಷ್ಟ ಒಂದೆಡೆ ಜಿಲ್ಲೆಯಲ್ಲಿ ಬರಪರಿಸ್ಥಿತಿ ಇದೆ, ಇನ್ನೊಂದೆಡೆ ರಾಜ್ಯ ಸರ್ಕಾರದ ಕರೆಂಟ್ ಕಣ್ಣಾಮುಚ್ಚಾಲೆ ಆಟ, ಲೋಡ್ ಶೆಡ್ಡಿಂಗ್ ಇಂಥ ಹತ್ತಾರು ಸವಾಲುಗಳನ್ನು ಮೆಟ್ಟಿನಿಂತು, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ರೈತರು ಆಲೂಗಡ್ಡೆ ಬೆಳೆ ಬೆಳೆದಿದ್ದಾರೆ, ಅದರೆ ಜಿಲ್ಲೆಯಾಧ್ಯಂತ ರೈತರು ಬೆಳೆದಿರುವ ಸಂಪೂರ್ಣ ಆಲೂಗಡ್ಡೆ ಬೆಳೆಯಲ್ಲಿ ಫಸಲೇ ಬಂದಿಲ್ಲ. ಹಾಗಾಗಿ ಮುಳಬಾಗಿಲು ತಾಲ್ಲೂಕು ಸೇರಿದಂತೆ ಜಿಲ್ಲೆಯ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇನ್ನು ಸದ್ಯ ಜಿಲ್ಲೆಯಲ್ಲಿ ಉಂಟಾಗಿರುವ ಆಲೂಗಡ್ಡೆ ದುರಂತ ಕುರಿತು ಮುಳಬಾಗಿಲಿನ ಆಲೂಗಡ್ಡೆ ತೋಟಗಳಿಗೆ ತೋಟಗಾರಿಕಾ ಇಲಾಖೆ ವಿಜ್ನಾನಿಗಳು ಹಾಗೂ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ತೋಟಗಾರಿಕಾ ವಿಜ್ನಾನಿಗಳೊಂದಿಗೆ ರೈತರ ತೋಟಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಲಾರ ಜಿಲ್ಲೆಯೊಂದರಲ್ಲೇ ರೈತರು ಬೆಳೆದಿರುವ ವಿವಿದ ಬೆಳೆಗಳಿಗೆ ರೋಗದ ಹೆಸರಲ್ಲಿ ಮೇಲಿಂದ ಮೇಲೆ ನಷ್ಟವಾಗುತ್ತಿದೆ. ಜಿಲ್ಲೆಯಲ್ಲಿ ರೈತರು ಬೆಳೆದಿರುವ ಯಾವುದೇ ಬೆಳೆಗಳು ರೈತರ ಕೈಹಿಡಿಯುತ್ತಿಲ್ಲ ಈ ಕುರಿತು ಸರ್ಕಾರ ಪರಿಶೀಲನೆ ನಡೆಸಬೇಕು ಜೊತೆಗೆ ಈಗ ಆಲೂಗಡ್ಡೆ ಬೆಳೆದು ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡಬೇಕೆಂದು ಶಾಸಕ ಸಮೃದ್ದಿ ಮಂಜುನಾಥ್ ಮನವಿ ಮಾಡಿದ್ದಾರೆ. ಸದ್ಯ ಪರಿಶೀಲನೆ ನಡೆಸಿರುವ ತೋಟಗಾರಿಕಾ ಇಲಾಖೆಯ ವಿಜ್ನಾನಿಗಳು ಹಾಗೂ ಸಸ್ಯ ಶಾಸ್ತ್ರವಿಭಾಗದ ವಿಜ್ನಾನಿಗಳ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೇಲ್ನೋಟಕ್ಕೆ ಜಿಲ್ಲೆಯಲ್ಲಿ ಉಂಟಾಗಿರುವ ಆಲೂಗಡ್ಡೆ ದುರಂತಕ್ಕೆ ಸದ್ಯ ವಾತಾವರಣದಲ್ಲಾಗಿರುವ ತಾಪಮಾನದ ಏರುಪೇರು ಹಾಗೂ ದುಂಡಾಣು ಕೊಳೆ ರೋಗದ ಪರಿಣಾಮ ಆಲೂಗಡ್ಡೆ ಬೆಳೆದಿರುವ ತೋಟಗಳಲ್ಲಿ ಆಲೂಗಡ್ಡೆ ಫಸಲು ಬಾರದೆ ಹಾನಿಯಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಹಾಗಾಗಿ ಸದ್ಯ ತೋಟಗಳಲ್ಲಿನ ಮಾದರಿ ಸಂಗ್ರಹ ಮಾಡಲಾಗಿದ್ದು ಈಕುರಿತು ಪರಿಶೀಲನೆ ನಡೆಸಿದ ನಂತರ ಇನ್ನೆರಡು ದಿನಗಳಲ್ಲಿ ವರದಿ ನೀಡುವುದಾಗಿ ವಿಜ್ನಾನಿಗಳ ತಂಡ ತಿಳಿಸಿದ್ದಾರೆ.
ಇದನ್ನೂ ಓದಿ: ಕೋಲಾರ: ರಸ್ತೆ ಅಗಲೀಕರಣ ವೇಳೆ ಕೆಜಿಎಫ್ ಶಾಸಕಿ ಮೇಲೆ ಕಲ್ಲು ತೂರಲು ಯತ್ನ
ಒಟ್ಟಾರೆ ಕೋಲಾರದಲ್ಲಿ ಉಂಟಾಗಿರುವ ಆಲೂಗಡ್ಡೆ ದುರಂತಕ್ಕೆ ಸರ್ಕಾರ ಸರಿಯಾದ ಪರಿಹಾರ ನೀಡಬೇಕಿದೆ, ಜಿಲ್ಲೆಯಲ್ಲಿ ಹತ್ತಾರು ನಿರೀಕ್ಷೆ ಹೊತ್ತು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಲೂಗಡ್ಡೆ ಬೆಳೆದು ಆಘಾತಕ್ಕೊಳಗಾಗಿರುವ ರೈತರಿಗೆ ಸರ್ಕಾರ ಕನಿಷ್ಠ ಪರಿಹಾರವಾದರು ನೀಡಿ ರೈತರ ನೆರವಿಗೆ ನಿಲ್ಲಬೇಕು ಅನ್ನೋದು ರೈತರ ಮನವಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ