ಕೋಲಾರ: ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಹಾಗೂ ಕುರಾನ್ (Quran) ಒಂದು ಕ್ರಿಮಿನಲ್ ಬುಕ್ ಎಂದು ಹೀಗಳೆದಿದ್ದಕ್ಕೆ ಕೋಲಾರದಲ್ಲಿ ಹಿಂದೂ ಜಾಗರಣ ವೇದಿಕೆಯ (Hindu Jagarana Vedike) ರಾಜ್ಯ ಸಂಚಾಲಕ ಕೇಶವ ಮೂರ್ತಿ ಮುಂತಾದವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕೋಲಾರದ ಅಂಜುಮನ್-ಎ-ಇಸ್ಲಾಮಿಯಾ ಸಂಘಟನೆಯ ಅಧ್ಯಕ್ಷ ಜಮೀರ್ ಆಮದ್ ಎಂಬುವವರು ಹಿಂದೂ ಜಾಗರಣ ವೇದಿಕೆಯ ನಾಯಕನ ವಿರುದ್ಧ ದೂರು ನೀಡಿದ್ದರು.
ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದ ನೂಪುರ್ ಶರ್ಮಾಗೆ ಬೆಂಬಲಿಸಿ, ಪೋಸ್ಟ್ ಹಾಕಿಕೊಂಡಿದ್ದ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯನ್ನು ವಿರೋಧಿಸಿ ಜುಲೈ 1ರಂದು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಕೇಶವ ಮೂರ್ತಿ, ಕುರಾನ್ ಜನರನ್ನು ಕೊಲ್ಲಲು ಉತ್ತೇಜಿಸುತ್ತದೆ. ಕುರಾನ್ ಒಂದು ಕ್ರಿಮಿನಲ್ ಬುಕ್. ಆ ಕುರಾನ್ ಅನ್ನು ಓದುವವರು ಅದನ್ನು ಅನುಸರಿಸುತ್ತಾರೆ ಎಂದು ಪ್ರತ್ಯೇಕವಾಗೇನೂ ಹೇಳಬೇಕಾಗಿಲ್ಲ. ಅಂತಹ ಕುರಾನ್ ಓದುವವರು ಭಯೋತ್ಪಾದಕರು ಎಂದು ಭಾಷಣ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಕೇಶವ ಮೂರ್ತಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ(ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 153 ಬಿ (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಮತ್ತು 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಈ ಹಿಂದೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ಟಿವಿ ಚರ್ಚೆಯೊಂದರಲ್ಲಿ ಮುಸ್ಲಿಂ ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದು ವಿಶ್ವಾದ್ಯಂತ ಚರ್ಚೆಯಾಗಿ, ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ, ಬಿಜೆಪಿಯಿಂದ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿತ್ತು. ಆಕೆಗೆ ಬೆಂಬಲ ನೀಡಿ ಪೋಸ್ಟ್ ಮಾಡಿದ್ದ ಕನ್ನಯ್ಯ ಲಾಲ್ ಎಂಬ ಟೈಲರ್ನ ಅಂಗಡಿಗೆ ಬಟ್ಟೆ ಹೊಲಿಯಲು ಕೊಡುವ ನೆಪದಲ್ಲಿ ಬಂದಿದ್ದ ಇಬ್ಬರು ಆತನ ತಲೆ ಕತ್ತರಿಸಿ ಕೊಲೆ ಮಾಡಿದ್ದರು. ಅದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲೂ ಹಾಕಿದ್ದರು. ಇದಾದ ಬಳಿಕ ಆ ಘಟನೆ ಕೋಮು ಗಲಭೆಗೂ ಕಾರಣವಾಗಿತ್ತು.
Published On - 8:36 am, Fri, 8 July 22