Viral News: ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ಮಾಡಿ ಮಾದರಿಯಾದ ಮುಸ್ಲಿಂ ಕುಟುಂಬ
ರಾಮ್‌ದೇವ್ ಸಾಹ್ ಪಾಟ್ನಾದ ರಿಜ್ವಾನ್ ಅವರ ಹೋಸೈರಿ ಔಟ್ಲೆಟ್ನಲ್ಲಿ ಕೆಲಸ ಮಾಡುತ್ತಿದ್ದರು. 25 ವರ್ಷಗಳ ಕಾಲ ಅದೇ ಅಂಗಡಿಯಲ್ಲಿ ಕೆಲಸ ಮಾಡಿದ ಅವರನ್ನು ರಿಜ್ವಾನ್ ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದರು.
ಧಾರ್ಮಿಕ ಸಾಮರಸ್ಯ ಸಾರುವ ನಿಟ್ಟಿನಲ್ಲಿ ಬಿಹಾರದಲ್ಲಿ ಒಂದು ಘಟನೆ ನಡೆದಿದೆ. ಬಿಹಾರದಲ್ಲಿ (Bihar) ಮುಸ್ಲಿಂ ಕುಟುಂಬವೊಂದು ಹಿಂದೂ ವ್ಯಕ್ತಿಯ ಅಂತಿಮ ಸಂಸ್ಕಾರ ನೆರವೇರಿಸಿ, ಕೋಮು ಸೌಹಾರ್ದತೆ ಮೆರೆದಿದ್ದಾರೆ. ಮೊಹಮ್ಮದ್ ರಿಜ್ವಾನ್ ಖಾನ್ ಹಿಂದೂ ವ್ಯಕ್ತಿಯಾದ ರಾಮ್‌ದೇವ್ ಸಾಹ್ ಅವರ ಮೃತದೇಹವನ್ನು ಹೊತ್ತೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದೆ.
ರಾಮ್‌ದೇವ್ ಸಾಹ್ ಪಾಟ್ನಾದ ರಿಜ್ವಾನ್ ಅವರ ಹೋಸೈರಿ ಔಟ್ಲೆಟ್ನಲ್ಲಿ ಕೆಲಸ ಮಾಡುತ್ತಿದ್ದರು. 25 ವರ್ಷಗಳ ಕಾಲ ಅದೇ ಅಂಗಡಿಯಲ್ಲಿ ಕೆಲಸ ಮಾಡಿದ ಅವರನ್ನು ರಿಜ್ವಾನ್ ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದರು. 75 ವರ್ಷದ ರಾಮ್‌ದೇವ್ ಸಾಹ್ ಕಳೆದ ವಾರ ಮೃತಪಟ್ಟರು. ರಿಜ್ವಾನ್ ಮತ್ತು ಅವರ ಕುಟುಂಬದವರು ಸೇರಿ ಹಿಂದೂ ಸಂಪ್ರದಾಯಗಳ ಪ್ರಕಾರ ರಾಮ್‌ದೇವ್ ಸಾಹ್ ಅವರ ಅಂತ್ಯಕ್ರಿಯೆ ಮಾಡಿದ್ದಾರೆ.
ರಾಮ್‌ದೇವ್ ಸಾಹ್ ಅವರ ಅಂತ್ಯ ಸಂಸ್ಕಾರದ ವೇಳೆ ಆ ಪ್ರದೇಶದ ಸುತ್ತಮುತ್ತಲಿನ ಅನೇಕ ಮುಸ್ಲಿಂ ಜನರು ಕೂಡ ಭಾಗವಹಿಸಿದ್ದರು. ಎರಡು ದಶಕಗಳ ಹಿಂದೆ ರಾಮ್‌ದೇವ್ ಸಾಹ್ ಅವರು ರಿಜ್ವಾನ್ ಅವರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಬಹಳ ಸರಳ ಸ್ವಭಾವದವರಾಗಿದ್ದ ಅವರು ತಮ್ಮ ಸರಳತೆಯಿಂದಲೇ ರಿಜ್ವಾನ್ ಮತ್ತು ಅವರ ಕುಟುಂಬದವರ ಮನಸು ಗೆದ್ದಿದ್ದರು. ಆ ಅಂಗಡಿಯ ಗ್ರಾಹಕರಿಗೂ ಅವರು ಅಚ್ಚುಮೆಚ್ಚಿನವರಾಗಿದ್ದರು.
ಇದನ್ನೂ ಓದಿ: 16 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಮುಸ್ಲಿಂ ಯುವತಿ ಆಕೆಯ ಆಯ್ಕೆಯ ಪುರುಷನನ್ನು ಮದುವೆಯಾಗಬಹುದು: ಹರ್ಯಾಣ ಹೈಕೋರ್ಟ್
“ರಾಮ್‌ದೇವ್ ಅವರು ನನ್ನ ತಂದೆಯಂತೆಯೇ ಇದ್ದರು. ಅವರು ಕೆಲಸ ಹುಡುಕುತ್ತಾ ನನ್ನ ಅಂಗಡಿಗೆ ಬಂದಾಗ ಅವರಗೆ ಸುಮಾರು 50 ವರ್ಷವಾಗಿತ್ತು. ನಿಮಗೆ ಭಾರವಾದ ವಸ್ತುಗಳನ್ನು ಎತ್ತುವ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಿದ್ದೆ. ಹೀಗಾಗಿ, ಅವರಿಗೆ ಲೆಕ್ಕ ನೋಡಿಕೊಳ್ಳುವ, ಬಿಲ್ಲಿಂಗ್ ಮಾಡುವ ಕೆಲಸ ಕೊಟ್ಟೆವು” ಎಂದು ರಿಜ್ವಾನ್ ಹೇಳಿದ್ದಾರೆ.
“ವರ್ಷಗಳು ಕಳೆದಂತೆ ಸಾಹ್ ಅವರಿಗೆ ಕೆಲಸ ಮಾಡಲು ಆಗುತ್ತಿರಲಿಲ್ಲ. ಅವರ ಮೈಯಲ್ಲಿ ಶಕ್ತಿಯೇ ಇರಲಿಲ್ಲ. ಆಗ ನಾನೇ ಹಲವು ಬಾರಿ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದೆ. ನೀವು ಇನ್ನು ಕೆಲಸ ಮಾಡುವುದು ಬೇಡ. ನಿಮಗೆ ಪ್ರತಿ ತಿಂಗಳು ನೀಡುತ್ತಿದ್ದ ಸಂಬಳವನ್ನು ನಾನು ನಿಮ್ಮ ಮನೆಗೆ ತಲುಪಿಸುತ್ತೇನೆ. ನೀವು ಮನೆಯಲ್ಲಿ ವಿಶ್ರಾಂತಿ ಪಡೆಯಿರಿ ಎಂದು ನಾನು ಹೇಳಿದ್ದೆ. ಆದರೆ, ಅವರು ಅದನ್ನು ಒಪ್ಪದೆ ಕೆಲಸ ಮಾಡುತ್ತಲೇ ಇದ್ದರು” ಎಂದು ರಿಜ್ವಾನ್ ಹೇಳಿದ್ದಾರೆ.