ಕೈಗಾರಿಕಾ ಪ್ರದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಆತಂಕ; ರಾಬರಿ ಗ್ಯಾಂಗ್ಗೆ ಭಯಭೀತರಾದ ಕಾರ್ಮಿಕರು
ಎರಡು ಕೈಗಾರಿಕಾ ಪ್ರದೇಶಗಳಲ್ಲಿ ಬಹುತೇಕ 50 ರಷ್ಟು ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಾಗಿದ್ದು, ಕೆಲಸ ಕಳೆದುಕೊಂಡವರು, ಹೊಸಬರು, ಹಣಕ್ಕಾಗಿ ಇಂಥ ಕೃತ್ಯ ಎಸಗುತ್ತಿದ್ದಾರೆ ಎನ್ನುವ ಅನುಮಾನ ಶುರುವಾಗಿದೆ.
ಕೋಲಾರ: ಕೈಗಾರಿಕಾ ಪ್ರದೇಶಗಳು ಬರದ ನಾಡಿನ ಜನರಿಗೆ ಉದ್ಯೋಗ ಕೊಟ್ಟಂತ ಉದ್ಯೋಗದಾತ. ಈ ಪ್ರದೇಶ ಸಾವಿರಾರು ಜನರ ಜೀವನಕ್ಕೆ ದಾರಿದೀಪ ಮಾಡಿಕೊಟ್ಟಿವೆ. ಆದರೆ ಇತ್ತೀಚೆಗೆ ಅದೇ ಕೈಗಾರಿಕಾ ಪ್ರದೇಶಗಳು ಆತಂಕದ ಕೇಂದ್ರವಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ ಕಾರ್ಮಿಕರನ್ನೇ ರಾಬರಿ ಮಾಡುವ ಗುಂಪೊಂದು ಇಲ್ಲಿ ವಾಸ್ತವ್ಯ ಹೂಡಿದ್ದು, ಕೈಗಾರಿಕಾ ಪ್ರದೇಶ ಭಯ ಹುಟ್ಟಿಸುವಂತಾಗಿದೆ. ಕೋಲಾರ ತಾಲೂಕು ನರಸಾಪುರ ಹಾಗೂ ವೇಮಗಲ್ ಕೈಗಾರಿಕಾ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ರಾತ್ರಿ ವೇಳೆಯಲ್ಲಿ ಒಬ್ಬಂಟಿಯಾಗಿ ಓಡಾಡುವ ಕಾರ್ಮಿಕರನ್ನು ಅಡ್ಡಗಟ್ಟಿ ಮೊಬೈಲ್, ಒಡವೆಗಳು ಹಾಗೂ ಹಣ ದೋಚುವ ಗುಂಪು ಕಾಣಿಸಿಕೊಳ್ಳುತ್ತಿದೆ. ಸದ್ಯ ಹಣ ಕಳೆದುಕೊಂಡ ಹತ್ತಾರು ಜನರು ಭಯದಲ್ಲಿ ಪೊಲೀಸ್ ಠಾಣೆಗೆ ದೂರು ನೀಡದೆ ತಮ್ಮ ತಮ್ಮ ಕಂಪನಿಗಳ ಮುಖ್ಯಸ್ಥರ ಗಮನಕ್ಕೆ ತಂದಿದ್ದಾರೆ.
ಹೊರ ರಾಜ್ಯದ ಕಾರ್ಮಿಕರು ಹಾಗೂ ನಿರುದ್ಯೋಗಿ ಕಾರ್ಮಿಕರು ಕೃತ್ಯ ಎಸಗಿರುವ ಶಂಕೆ! ಎರಡೂ ಕೈಗಾರಿಕಾ ಪ್ರದೇಶಗಳಲ್ಲಿ ಬಹುತೇಕ 50 ರಷ್ಟು ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಾಗಿದ್ದು, ಕೆಲಸ ಕಳೆದುಕೊಂಡವರು, ಹೊಸಬರು, ಹಣಕ್ಕಾಗಿ ಇಂತಹ ಕೃತ್ಯ ಎಸಗುತ್ತಿದ್ದಾರೆ ಎನ್ನುವ ಅನುಮಾನ ಶುರುವಾಗಿದೆ. ಅಲ್ಲದೆ ಮಹಿಳೆಯರು ಮತ್ತು ಯುವತಿಯರು ಕೂಡಾ ಕೆಲಸಕ್ಕೆ ಬಂದು ವಾಪಸ್ ಮನೆಗೆ ತೆರಳುವ ವೇಳೆ ಬೇರೆ ಅನಾಹುತಗಳಾದರೆ ಹೇಗೆ ಎನ್ನುವ ಆತಂಕ ಶುರುವಾಗಿದೆ. ಹಾಗಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿಕೊಂಡು ಹೋಗುವ ಕಾರ್ಮಿಕರು ಕೈಗಾರಿಕಾ ಪ್ರದೇಶದಲ್ಲಿ ಭಯದಲ್ಲೇ ಓಡಾಡುವಂತಾಗಿದೆ.
ಕೈಗಾರಿಕಾ ಪ್ರದೇಶದಲ್ಲಿ ದೇಶದ ಪ್ರತಿಷ್ಠಿತ ಕಂಪನಿಗಳಿವೆ ಆದರೂ ಆತಂಕ ಮಾತ್ರ ತಪ್ಪಿಲ್ಲ ನರಸಾಪುರ ಹಾಗೂ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಹೋಂಡಾ, ಸ್ಕ್ಯಾನಿಯಾ, ಮಹಿಂದ್ರಾ, ವಿಸ್ಟ್ರಾನ್, ಮಿಸ್ಟ್ರುಬ್ಯುಷಿ ಎಕ್ಸಿಡ್, ಬಡವೆ, ಟ್ರಾಕ್ ಕಾಂಪೊನೆಂಟ್ಸ್, ಲೂಮೆಕ್ಸ್, ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳಿವೆ. ದೇಶದಲ್ಲೇ ದೊಡ್ಡ ಆಟೋಮೊಬೈಲ್ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆ ಕೂಡ ಇದೆ. ಇಂತಹ ಪ್ರದೇಶದಲ್ಲಿ ಕಳೆದ ಐದಾರು ತಿಂಗಳಿಂದ ಕಾರ್ಮಿಕರ ರಾಬರಿ ಪ್ರಕರಣಗಳು ಹೆಚ್ಚಾಗಿದೆ.
ಪೊಲೀಸ್ ಇಲಾಖೆಗೆ ತಲೆನೋವಾದ ರಾಬರಿ ಗ್ಯಾಂಗ್ ಕಳೆದ ಕೆಲವು ತಿಂಗಳಿಂದ ನಡೆಯುತ್ತಿರುವ ರಾಬರಿ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ಮಾಲೂರು ಪೊಲೀಸ್ ಠಾಣೆ ಹಾಗೂ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಈ ಕೈಗಾರಿಕಾ ಪ್ರದೇಶಗಳಲ್ಲಿ ರಾತ್ರಿ ಗಸ್ತು ಜೊತೆಗೆ ಮೊದಲ ಪಾಳಿ, ಎರಡನೇ ಪಾಳಿ ಹಾಗೂ ರಾತ್ರಿ ಪಾಳಿಯ ಕೆಲಸ ಮುಗಿಯುವ ವೇಳೆಯಲ್ಲಿ ಪೊಲೀಸ್ ಬೀಟ್ ಹೆಚ್ಚಿಸುವ ಕೆಲಸ ಮಾಡಲಾಗಿದೆ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದಲೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಕೈಗಾರಿಕೆಯ ಮುಖ್ಯಸ್ಥರುಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಡಿ.ಕಿಶೋರ್ ಬಾಬು ಹೇಳಿದ್ದಾರೆ.
ಒಟ್ಟಾರೆ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರನ್ನು ಕಿತ್ತು ತಿನ್ನುವ ರಾಬರಿ ಗುಂಪೊಂದು ಕೆಲಸ ಮಾಡುತ್ತಿದ್ದು, ಈ ಗುಂಪನ್ನು ಹಿಡಿಯಲು ಪೊಲೀಸ್ ಇಲಾಖೆ ಯೋಜನೆ ರೂಪಿಸಿದೆ. ಆದರೆ ರಾಬರಿ ಗ್ಯಾಂಗ್ ಮಾತ್ರ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಆದಷ್ಟು ಬೇಗ ರಾಬರಿ ಗುಂಪನ್ನು ಹಿಡಿಯುವ ಜೊತೆಗೆ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎನ್ನುವುದು ಈ ಭಾಗದ ಜನರ ಆಗ್ರಹವಾಗಿದೆ.
ವರದಿ : ರಾಜೇಂದ್ರ ಸಿಂಹ
ಬೆಂಗಳೂರಲ್ಲಿ ಹಾಡಹಗಲೇ ಖದೀಮರ ರಾಬರಿ, ಡ್ಯಾಗರ್ ಹಿಡಿದು ಹಣ, ಮೊಬೈಲ್ ಲೂಟಿ ಮಾಡ್ತಾರೆ..
ಮೀಸೆ ಚಿಗುರದ ವಯಸ್ಸಲ್ಲೇ ಗಾಂಜಾ ಸೇವನೆ; ಮತ್ತಿನಲ್ಲಿ ಗೂಂಡಾಗಿರಿ, ಮೂವರು ಅಪ್ರಾಪ್ತರು ಅರೆಸ್ಟ್
Published On - 11:43 am, Wed, 15 December 21