AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮಗಳ ಹೆಬ್ಬಾಗಿಲಾದ ನಂಗಲಿ ಚೆಕ್​ ಪೋಸ್ಟ್​; ಕರ್ತವ್ಯ ಮರೆತು ಜೇಬು ತುಂಬಿಸುತ್ತಿರುವ ಆರ್​ಟಿಒ ಅಧಿಕಾರಿಗಳು

ಕೋಲಾರದ ನಂಗಲಿ​ ಆರ್​ಟಿಒ ಚೆಕ್​ ಪೋಸ್ಟ್​ ಹಾಗೂ ಅಲ್ಲಿನ ಅಧಿಕಾರಿಗಳು ತಮ್ಮ ಜವಾಬ್ದಾರಿಯೇ ಮರೆತಂತಿದೆ. ಅಲ್ಲಿ ಏನಿದ್ದರೂ ಸಿಕ್ಕ ಸಮಯದಲ್ಲಿ ಹೆಚ್ಚು ಹಣ ಲೂಟಿ ಮಾಡುವುದು ಹೇಗೆ, ಬಂದ ಹಣವನ್ನು ಮರೆ ಮಾಚುವುದು ಹೇಗೆ ಅನ್ನೋದೊಂದೇ ಚಿಂತೆಯಾಗಿಬಿಟ್ಟಿದೆ.

ಅಕ್ರಮಗಳ ಹೆಬ್ಬಾಗಿಲಾದ ನಂಗಲಿ ಚೆಕ್​ ಪೋಸ್ಟ್​; ಕರ್ತವ್ಯ ಮರೆತು ಜೇಬು ತುಂಬಿಸುತ್ತಿರುವ ಆರ್​ಟಿಒ ಅಧಿಕಾರಿಗಳು
ಲಂಚ ಪಡೆದಿರುವ ಬಗ್ಗೆ ಆರ್​ಟಿಒ ಅಧಿಕಾರಿಗಳನ್ನು ಪ್ರಶ್ನಿಸುತ್ತಿರುವ ಸಾರ್ವಜನಿಕರು
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Jul 30, 2023 | 6:19 PM

Share

ಕೋಲಾರ, ಜುಲೈ 30: ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮವು ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ನೆರೆಯ ರಾಜ್ಯಗಳಿಗೆ ಹೆಬ್ಬಾಗಿಲಾಗಿದೆ. ಇದನ್ನು ಕಾಯುವ ಪೊಲೀಸರು ಮತ್ತು ಆರ್​ಟಿಒ (RTO) ಅಧಿಕಾರಿಗಳು ರಾಜ್ಯಕ್ಕೆ ಪ್ರವೇಶಿಸುವ ವಾಹನಗಳನ್ನು ತಪಾಸಣೆ ನಡೆಸಬೇಕು. ಆದರೆ ಇದನ್ನೆಲ್ಲಾ ಮರೆತ ಅಧಿಕಾರಿಗಳು, ಅಧಿಕ ಹಣ ವಸೂಲಿ ಹೇಗೆ ಮಾಡುವುದು, ಬಂದ ಹಣವನ್ನು ಮರೆಮಾಚುವುದು ಹೇಗೆ ಎಂಬ ಚಿಂತೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೆಲವು ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳಿಗೆ ಇಂತಿಷ್ಟು ಹಣವನ್ನು ಮೊದಲು ಕೊಟ್ಟು ಡ್ಯೂಟಿ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮುಳಬಾಗಲು ತಾಲೂಕಿನ‌ ಗಡಿ ನಂಗಲಿ‌ ಚೆಕ್ ಪೋಸ್ಟ್​ ಕಡೆ ಬರುವ ದೊಡ್ಡ ದೊಡ್ಡ ವಾಹನಗಳನ್ನು ಏಕಾಏಕಿ ತಡೆದು ನಿಲ್ಲಿಸುವ ಇಲ್ಲಿನ ಸಿಬ್ಬಂದಿಗಳು ವಾಹನಗಳ ಹಿಂದೆ ಬರುವ ವಾಹನಗಳ ಕಥೆ ಏನು ಎಂಬುದರ ಬಗ್ಗೆ ಚಿಂತಿಸುತ್ತಿಲ್ಲ. ಇಂತಹ ತಡೆಯಿಂದಾಗಿ ವಾಹನಗಳ ಹಿಂದೆ ವಾಹನ ಡಿಕ್ಕಿ ಹೊಡೆದುಕೊಂಡು ಜನ ಬಿದ್ದು ಸಾಯುತ್ತಿದ್ದರೂ ಇವರು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

ಭಾನುವಾರ ಬೆಳಿಗ್ಗೆ ಚೆಕ್ ಪೋಸ್ಟ್ ಬಳಿ ಲಾರಿಯೊಂದನ್ನು ಯಾವುದೇ ಸಿಗ್ನಲ್ ಕೊಡದೆ ಏಕಾಏಕಿಯಾಗಿ ಲಾರಿಯೊಂದನ್ನು ತಡೆದಿದ್ದಾರೆ. ಈ ವೇಳೆ ಲಾರಿ ಹಿಂದೆ ಬೈಕ್​ನಲ್ಲಿ ಬರುತ್ತಿದ್ದ ಕೊಗಿಲೇರು ಗ್ರಾಮದ ಮಧು ಎಂಬಾತ ಹಿಂಬದಿಯಿಂದ ಡಿಕ್ಕಿ ಹೊಡೆದು ತನ್ನ ಕಾಲು ಕಳೆದುಕೊಂಡಿದ್ದಾನೆ. ಪರಿಸ್ಥಿತಿ ಹೀಗಾಗಿದ್ದರೂ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವ ಕನಿಷ್ಠ ಮಾನವೀಯತೆಯನ್ನು ಕೂಡ ಅಧಿಕಾರಿಗಳು ತೋರಿಲ್ಲ.

ಆರ್​ಟಿಒ ಚೆಕ್​ ಪೋಸ್ಟ್​ ಕಚೇರಿಯಲ್ಲಿ ಎಣ್ಣೆ ಪಾರ್ಟಿ

ಹೆದ್ದಾರಿಯಲ್ಲಿ ಅಪಘಾತವಾಗುತ್ತಿದ್ದಂತೆ ಆಕ್ರೋಶಗೊಂಡ ಒಂದಷ್ಟು ಜನ ಸ್ಥಳೀಯರು ಬೆಳ್ಳಂಬೆಳಗ್ಗೆ ಚೆಕ್​ ಪೋಸ್ಟ್​ಗೆ ನುಗ್ಗಿ ಗಲಾಟೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಅಧಿಕಾರಿಯೊಬ್ಬರು ಎಣ್ಣೆ ಪಾರ್ಟಿ ಮಾಡಲು ಕುಳಿತ್ತಿದ್ದರು. ಜನರನ್ನು ಕಂಡು ಎಣ್ಣೆ ಬಾಟಲ್ ಸಮೇತ ಅಲ್ಲಿಂದ ಕಾಲು ಕಿತ್ತಿದ್ದಾರೆ. ಆದರೆ ಬೆನ್ನುಬಿಡದ ಜನರು ಅಧಿಕಾರಿಯನ್ನು ಹಿಡಿದು ನಿಲ್ಲಿಸಿ ಕೇಳಿದಾಗ ಅಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದ ವಿಷಯ ಬಯಲಿಗೆ ಬಂದಿತ್ತು.

ಇದನ್ನೂ ಓದಿ: Tomato: ಟೊಮೆಟೊ ತುಂಬಿಕೊಂಡು ಕೋಲಾರದಿಂದ ಹೊರಟಿದ್ದ ಲಾರಿ ನಾಪತ್ತೆ, ದೂರು ದಾಖಲು

800-1000 ಕೊಟ್ಟರೆ ವಾಹನ ಸತಾಸಣೆ ಇಲ್ಲ

ರಾಷ್ಟೀಯ ಹೆದ್ದಾರಿ 75 ಆಂಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಹೋಗುವಂತಹ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಪ್ರತಿದಿನ ಸಂಚಾರ ಮಾಡುತ್ತವೆ. ‌ಆದರೆ ಅಧಿಕಾರಿಗಳು ಪರಿಶೀಲನೆ ನೆಪವೊಡ್ಡಿ ಒಂದೊಂದು ಲಾರಿಯಿಂದ 800-1000 ರೂಪಾಯಿ ಪೀಕುತ್ತಾರೆ. ಯಾವುದೇ ದಾಖಲೆಗಳನ್ನು ಪರಿಶೀಲನೆ ಮಾಡುವುದಿಲ್ಲ. ಕೇವಲ ಒಂದು ಸೀಲ್​ ಹಾಕಿ ಕಳಿಸಲು ಇಷ್ಟೊಂದು ಹಣ ಪೀಕುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ಬರುವ ಲಾರಿಗಳಿಂದ ಹಣ ಕಲೆಕ್ಷನ್​ ಮಾಡುವುದೇ ಇವರ ಕಾಯಕವಾಗಿದೆ. ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಾಹನಗಳನ್ನು ಚೆಕ್​ ಮಾಡುವುದಕ್ಕಿಂತ ಹೆಚ್ಚಾಗಿ ನಮ್ಮ ಜೇಬು ಪರಿಶೀಲಿಸುವುದೇ ಹೆಚ್ಚು ಎಂದು ಲಾರಿ ಚಾಲಕರು ಹಾಗೂ ಕ್ಲೀನರ್​ಗಳು ಲೇವಡಿ ಮಾಡಿದ್ದಾರೆ.

ಚೆನ್ನೈ ಬಂದರಿನವರೆಗೂ ನೇರ ಸಂಪರ್ಕ ಕಲ್ಪಿಸುವ ಮಾರ್ಗವೂ ಇದಾಗಿದೆ. ಈ ಹೆದ್ದಾರಿಯಿಂದ ನಮ್ಮ ರಾಜ್ಯಕ್ಕೆ ಪ್ರವೇಶ ಮಾಡುವ ವಾಹನಗಳನ್ನು ತಪಾಸಣೆ ಮಾಡಲೆಂದು ಆರ್​ಟಿಓ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ. ಆದರೆ ಈ ಕೇಂದ್ರವನ್ನು ಅಧಿಕಾರಿಗಳು ವಸೂಲಿ ಕೇಂದ್ರವನ್ನಾಗಿಸಿದ್ದಾರೆ. ಪರಿಣಾಮ ಇಲ್ಲಿ ಯಾರೂ ಹೇಳುವವರಿಲ್ಲ, ಕೇಳುವವರೂ ಇಲ್ಲ ಎಂಬಂತಾಗಿದೆ. ಹಾಗಾಗಿ ಈ ಚೆಕ್​ ಪೋಸ್ಟ್​ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಮುಖಂಡ ಕಿಶೋರ್​ ಆಗ್ರಹಿಸಿದ್ದಾರೆ.

ಕರ್ತವ್ಯಕ್ಕೆ ಬರುವ ಅಧಿಕಾರಿಗಳಿಂದ ಲಕ್ಷ ಲಕ್ಷ ಟೆಂಡರ್​!

ನಂಗಲಿ ಆರ್​ಟಿಒ ಚೆಕ್​ ಪೋಸ್ಟ್​ನ ಅಕ್ರಮ ಎಷ್ಟರ ಮಟ್ಟಿಗಿದೆ ಎಂದರೆ ಇಲ್ಲಿಗೆ ವಾರಕ್ಕೊಮ್ಮೆ ಇನ್ಸ್​ಪೆಕ್ಟರ್​ ಮಟ್ಟದ ಅಧಿಕಾರಿಗಳನ್ನು ಕೆಲಸಕ್ಕೆ ನೇಮಕ ಮಾಡಲಾಗುತ್ತದೆ. ಇಲ್ಲಿ ಕರ್ತವ್ಯಕ್ಕೆ ಬರುವ ಅಧಿಕಾರಿಗಳು ಡ್ಯೂಟಿಗೆ ಬರುವ ಮೊದಲೇ ಮೇಲಧಿಕಾರಿಗಳಿಗೆ ಇಂತಿಷ್ಟು ಹಣ ಎಂದು ಕೊಟ್ಟು ಬರಬೇಕಂತೆ. ಅದರಲ್ಲೂ ಯಾರು ಹೆಚ್ಚು ಹಣ ಕೊಡುತ್ತಾರೋ ಅಂತಹ ಅಧಿಕಾರಿಯನ್ನು ಈ ಚೆಕ್​ ಪೋಸ್ಟ್​ಗೆ ಕಳುಹಿಸಲಾಗುತ್ತದೆ. ಒಂದು ವಾರಕ್ಕೆ 15 ರಿಂದ 20 ಲಕ್ಷ ರೂಪಾಯಿ ಕೊಟ್ಟು ಅಧಿಕಾರಿಗಳು ಡ್ಯೂಟಿ ಹಾಕಿಸಿಕೊಂಡು ಬರುತ್ತಾರೆ ಅನ್ನೋದು ಇಲಾಖೆಯ ಕೆಲವರು ಮಾಹಿತಿ ನೀಡಿದ್ದಾರೆ.

ಒಟ್ಟಾರೆ, ಅಕ್ರಮ‌‌ವಾಗಿ ರಾಜ್ಯವನ್ನು ಪ್ರವೇಶ ಮಾಡುವ ವಾಹನಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳೇ ಇಲ್ಲಿ ಅಕ್ರಮಕ್ಕೆ ಹೆದ್ದಾರಿ ಮಾಡಿಕೊಟ್ಟಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಪ್ರತಿದಿನ ವಾಹನ ಸವಾರರು ಇಲ್ಲಿನ‌ ಸಿಬ್ಬಂದಿಯಿಂದ ಅನುಭವಿಸುತ್ತಿರುವ ಕಿರಿಕಿರಿಯನ್ನು ತಪ್ಪಿಸಬೇಕಿದೆ. ಅದಕ್ಕಿಂತ ಮುಖ್ಯವಾಗಿ ಗಡಿಯಿಂದ ರಾಜ್ಯಕ್ಕೆ ಏನಾದರೂ ಆತಂಕ ಬರುವ ಮೊದಲು ಎಚ್ಚೆತ್ತುಕೊಳ್ಳಬೇಕು ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Sun, 30 July 23