20 ವರ್ಷದ ಹಿಂದೆ ಕೃಷಿಯಲ್ಲಿ ತೊಡಗಿಸಿಕೊಂಡ ಕೋಲಾರದ ಈ ರೈತ ಮಹಿಳೆ ಈಗ ಗಳಿಸುತ್ತಿದ್ದಾರೆ ಲಕ್ಷ ಲಕ್ಷ ಆದಾಯ!
ಆಕೆಗೆ ಕೃಷಿಯ ಮೇಲೆ ಎಲ್ಲಿಲ್ಲದ ಪ್ರೀತಿ, ಬಹು ಆಸಕ್ತಿ. 20 ವರ್ಷಗಳಿಂದ ಕೃಷಿಯಲ್ಲಿ ತೊಡಗಿರುವ ಆ ಮಹಿಳೆಗೆ ಇಂದು ಕೃಷಿಯೇ ದೊಡ್ಡ ಕಾಯಕ. ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿರುವ ಈ ರೈತ ಮಹಿಳೆಗೆ ಸರ್ಕಾರವೂ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಆಕೆಗೆ ಕೃಷಿಯ ಮೇಲೆ ಎಲ್ಲಿಲ್ಲದ ಪ್ರೀತಿ, ಬಹುವಾದ ಆಸಕ್ತಿ. ಹಾಗಾಗಿ ಕಳೆದ 20 ವರ್ಷಗಳಿಂದ ನಿರಂತವಾಗಿ ಕೃಷಿಯಲ್ಲಿ ತೊಡಗಿರುವ ಆ ಮಹಿಳೆಗೆ ಇಂದು ಕೃಷಿಯೇ ದೊಡ್ಡ ಕಾಯಕ. ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿರುವ ಈ ರೈತ ಮಹಿಳೆಗೆ ಸರ್ಕಾರವೂ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹೇಗಿದೆ ಆಕೆಯ ಕೃಷಿಯ ಕಾಯಕ ಇಲ್ಲಿದೆ ಒಂದು ವರದಿ.
ಹತ್ತಾರು ಎಕರೆಯಲ್ಲಿ ಸಮೃದ್ದವಾಗಿ ಬೆಳೆದಿರುವ ವಿವಿಧ ರೀತಿಯ ಬೆಳೆಗಳು, ಹೊಲದಲ್ಲಿ ವಿವಿಧ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಮಹಿಳೆ, ಇನ್ನೊಂದೆಡೆ ಜಾನುವಾರುಗಳ ಲಾಲನೆ ಪಾಲನೆಯಲ್ಲಿ ತೊಡಗಿರುವ ರೈತ ಮಹಿಳೆ (woman farmer)… ಈ ಎಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ತಾಲ್ಲೂಕು (Kolar Taluk) ಗುಲಗಂಜಿಗುರ್ಕಿ (Gulaganjigurki) ಗ್ರಾಮದಲ್ಲಿ.
ಅಷ್ಟಕ್ಕೂ ಈ ದೃಶ್ಯದಲ್ಲಿ ಕಂಡು ಬರುವ ಮಹಿಳೆಯ ಹೆಸರು ಸರೋಜಮ್ಮ.ಇವರಿಗೆ ಕೃಷಿ ಚಟುವಟಿಕೆ ಮಾಡೋದು, ಹೊಲದಲ್ಲಿ ಕೆಲಸ ಮಾಡೋದು, ಬೆಳೆ ಬೆಳೆಯೋದು ಅಂದರೆ ಎಲ್ಲಿಲ್ಲದ ಆಸಕ್ತಿ. ಅದಕ್ಕಾಗಿಯೇ ಸರೋಜಮ್ಮ ಕಳೆದ 20 ವರ್ಷಗಳಿಂದ ತಮಗಿದ್ದ ಸುಮಾರು 20 ಎಕರೆ ಪ್ರದೇಶದಲ್ಲಿ ತಮ್ಮದೇ ಆದ ರೀತಿಯಲ್ಲಿ ಕೃಷಿಯನ್ನು ಮಾಡುತ್ತಾ ಬಂದಿದ್ದಾರೆ. ತಮ್ಮ ಭೂಮಿಯಲ್ಲಿ ನಷ್ಟವಾಗದ ರೀತಿಯಲ್ಲಿ ಹಲವು ಬೆಳೆಗಳನ್ನು, ಹಲವು ಕೃಷಿ ಚಟುವಟಿಕೆಗಳನ್ನು ಮಾಡುವ ಮೂಲಕ ಲಾಭದಾಯಕ ಕೃಷಿಯನ್ನು ಮೈಗೂಡಿಸಿಕೊಂಡಿದ್ದಾರೆ.
ತಮ್ಮ ಇಪ್ಪತ್ತು ಎಕರೆ ಪ್ರದೇಶದಲ್ಲಿ ಆಲೂಗಡ್ಡೆ, ಎಲೆಕೂಸು, ಟೊಮ್ಯಾಟೋ, ಹೂವು ಸೇರಿದಂತೆ ಹಲವು ಬಗೆಯ ಬೆಳೆಗಳನ್ನು ಒಂದೆಡೆ ಬೆಳೆದರೆ ಇನ್ನೊಂದೆಡೆ ಅಪರೂಪದ ಬೆಳೆಗಳಾದ ಶುಂಠಿ, ಹರಿಶಿನ, ರೇಷ್ಮೆ, ಸೇರಿದಂತೆ ಹಲವು ಬೆಗೆಯ ಹಣ್ಣುಗಳಾದ, ಸೀಬೆ, ರಾಂಫಲ, ಸೀತಾಫಲ, ಅಮೃತನೋನಿ, ಸ್ಟಾರ್ ಪ್ರೂಟ್, ಬಾಳೆ ಸೇರಿದಂತೆ ಹಲವು ರೀತಿಯ ಬೆಳೆ ಬೆಳೆಯುತ್ತಾರೆ.
ಇಷ್ಟೇ ಅಲ್ಲದೆ ತಮ್ಮ ತೋಟದಲ್ಲಿರುವ ನೀರಿನ ತೊಟ್ಟಿಯಲ್ಲಿ ಮೀನು ಸಾಕಾಣಿಕೆ, ಹಾಗೂ ರೇಷ್ಮೆ ಸಾಕಾಣಿಕೆ ಹೀಗೆ ಹಲವು ಕೃಷಿ ಚಟುವಟಿಕೆಗಳನ್ನು ಮಾಡುವ ಮೂಲಕ ಸರೋಜಮ್ಮ ಅವರು ಪ್ರತಿ ತಿಂಗಳಿಗೆ ಸರಾಸರಿ ಐದಾರು ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ನಷ್ಟ ಅನ್ನೋದು ಸಹಜ ಆದರೆ ಸಮಗ್ರ ಕೃಷಿಯ ಮೂಲಕ ನಷ್ಟವನ್ನು ಸರಿದೂಗಿಸುವ ಲಾಭದಾಯಕವಾದ ಕೃಷಿ ವಿಧಾನವನ್ನು ಅನುಸರಿಸುವ ಮೂಲಕ ಸರೋಜಮ್ಮ ಕೃಷಿಯಿಂದ ಯಾವ ಪುರುಷನಿಗೂ ಕಡಿಮೆ ಇಲ್ಲದಂತೆ ಸಾಧನೆ ಮಾಡಿದ್ದಾರೆ.
ಇನ್ನು ಸರೋಜಮ್ಮ ಅವರದ್ದು ಅವಿಭಕ್ತ ಕುಟುಂಬ. ಆದರೆ ಎಲ್ಲರೂ ತಮ್ಮದೇ ಆದ ಕೆಲಸಗಳಲ್ಲಿ ತೊಡಗಿರುತ್ತಾರೆ. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಇದ್ದರೂ ಕೂಡಾ ಮನೆಯ ಪುರುಷರು, ಮಹಿಳೆಯರು, ಎಲ್ಲರೂ ಬೇರೆ ಬೇರೆ ಕೆಲಸಗಳಿಗೆ ಹೋಗುತ್ತಾರೆ. ಹಾಗಾಗಿ ಸರೋಜಮ್ಮ ತಾವು ಯಾರಿಗೂ ಕಡಿಮೆ ಇಲ್ಲದಂತೆ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಕಾರಣದಿಂದಾಗಿ ಕೃಷಿಯನ್ನೇ ಪೂರ್ಣ ಪ್ರಮಾಣದ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ.
ಹಾಗಾಗಿಯೇ ತಾನು ಯಾರಿಗೂ ಕಡಿಮೆ ಇಲ್ಲದಂತೆ ಸಂಪಾದನೆ ಮಾಡುತ್ತಿದ್ದಾರೆ ಸರೋಜಮ್ಮ. ಇನ್ನು ಸರೋಜಮ್ಮನವರ ಈ ಕೃಷಿ ಕಾಯಕ ಕೇವಲ ಕುಟುಂಬಸ್ಥರಿಗಷ್ಟೇ ಅಲ್ಲಾ, ಅಕ್ಕ ಪಕ್ಕದ ಗ್ರಾಮದ ಮಹಿಳೆಯರು ಹಾಗೂ ಪುರುಷರಿಗೂ ಕೂಡಾ ಮಾದರಿಯಾಗಿದೆ. ಹಾಗಾಗಿ ಸರೋಜಮ್ಮನವರ ಕೃಷಿ ಆಸಕ್ತಿ, ಕೃಷಿಯಲ್ಲಿ ಅವರ ಸಾಧನೆಯನ್ನು ಗುರುತಿಸಿರುವ ಕೃಷಿ ಇಲಾಖೆ ಸರೋಜಮ್ಮರಿಗೆ ಜಿಲ್ಲೆಯ ಉತ್ತಮ ರೈತ ಮಹಿಳೆ ಅನ್ನೋ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದು ಸರೋಜಮ್ಮ ಅವರ ಕುಟುಂಬಸ್ಥರಿಗೂ ಒಂದು ಹೆಮ್ಮ ಗ್ರಾಮಸ್ಥರಿಗೂ ಹೆಮ್ಮೆಯ ವಿಚಾರ.
ಒಟ್ಟಾರೆ ಸಾಲ ಸೋಲ ಮಾಡಿ ವ್ಯವಸಾಯ ಮಾಡಿದರೂ ಏನೂ ಸಂಪಾದನೆ ಮಾಡೋಕಾಗ್ತಿಲ್ಲ ಅಂತ ಕೃಷಿಯಲ್ಲಿ ಕೈಸುಟ್ಟುಕೊಂಡು ಪುರುಷರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಕಾಲದಲ್ಲಿ, ಧೈರ್ಯವಾಗಿ… ನಾನು ಕೃಷಿಯಲ್ಲಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದೇನೆ ಎಂದು ಹೇಳುವ ಸರೋಜಮ್ಮ ಯಾವ ಪುರುಷನಿಗೂ ಕಡಿಮೆ ಇಲ್ಲ ಬಿಡಿ. (ವರದಿ: ರಾಜೇಂದ್ರ ಸಿಂಹ, ಟಿವಿ 9, ಕೋಲಾರ)