AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೊಮೆಟೊ ದರದಲ್ಲಿ ಹಾವು ಏಣಿ ಆಟ: ಕೆಂಪು ಸುಂದರಿಗೆ ಈಗ ಎಷ್ಟು ಡಿಮ್ಯಾಂಡ್ ಇದೆ ಗೊತ್ತಾ?

ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಂಪು ಸುಂದರಿಯ ಹಾವು ಏಣಿ ಆಟ ಮತ್ತೆ ಆರಂಭವಾಗಿದೆ. ಕಳೆದೊಂದು ವಾರದಿಂದ ಕಿಚನ್ ಕ್ವೀನ್ ಕೆಂಪು ಸುಂದರಿ ತನ್ನ ದರವನ್ನು ಏರಿಸಿಕೊಂಡು ಸುದ್ದಿಯಾಗಿತ್ತು. ಟೊಮೆಟೊ ಬೆಳೆದ ರೈತರ ಮುಖದಲ್ಲಿ ಸಂತಸ ಅರಳುವುದಕ್ಕೂ ಮುನ್ನವೇ ಟೊಮೆಟೊ ಬೆಲೆ ಇಳಿಕೆ ಕಂಡು ಶಾಕ್ ನೀಡಿದೆ.

ಟೊಮೆಟೊ ದರದಲ್ಲಿ ಹಾವು ಏಣಿ ಆಟ: ಕೆಂಪು ಸುಂದರಿಗೆ ಈಗ ಎಷ್ಟು ಡಿಮ್ಯಾಂಡ್ ಇದೆ ಗೊತ್ತಾ?
ಟೊಮೆಟೊ ಬೆಲೆ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Jul 31, 2024 | 5:24 PM

Share

ಕೋಲಾರ, ಜು.31: ಕೋಲಾರದ ಎಪಿಎಂಸಿ ಮಾರುಕಟ್ಟೆ ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿದೆ. ಕಳೆದ ಒಂದು ವಾರದಿಂದ ಟೊಮೆಟೊ ಬೆಲೆ(Tomato price) ಏರಿಳಿತ ಕಾಣುತ್ತಾ ರೈತರ ಎದೆಬಡಿತ ಏರುವಂತೆ ಮಾಡುತ್ತಿದೆ. ಇಷ್ಟು ದಿನ ಬಾಕ್ಸ್ ಟೊಮ್ಯಾಟೊ 1000-1200 ರೂ.ವರೆಗೂ ಮಾರಾಟವಾಗುತ್ತಿತ್ತು. ಆದರೆ, ಈಗ ಬೆಲೆ ದಿಢೀರ್ ಕುಸಿತ ಕಂಡಿದ್ದು, 15 ಕೆಜಿ ಟೊಮೆಟೊ ಬಾಕ್ಸ್ ಕೇವಲ 200 ರೂಪಾಯಿಗೆ ಹರಾಜಾಗಿದೆ. ಎಪಿಎಂಸಿ ಮಾರುಕಟ್ಟೆಯ ಟೊಮೆಟೊ ಮಂಡಿಗಳಲ್ಲಿ ಇವತ್ತು ಕೇವಲ ಸರಾಸರಿ 200 ರೂ. ಬೆಲೆಗೆ ಮಾರಾಟವಾಗಿದೆ.

ಕಳೆದ ಒಂದು ತಿಂಗಳಿಂದ ಕೆಂಪು ಸುಂದರಿ ಬೆಲೆ ಏರಿಕೆಯಾಗಿತ್ತು. ಇದು ಸಹಜವಾಗಿ ಇಲ್ಲಿಯ ರೈತರಲ್ಲಿ ಮತ್ತು ವರ್ತಕರಲ್ಲಿ ಸಂತಸಕ್ಕೆ ಕಾರಣವಾಗಿತ್ತು. ಮತ್ತೊಂದೆಡೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿತ್ತು. ಆದರೆ, ಜೂನ್ ತಿಂಗಳಲ್ಲಿ ಮಳೆ ಮತ್ತು ವಾತಾವರಣ ವೈಪರೀತ್ಯಗಳಿಂದ ಟೊಮೆಟೊ ಆವಕ ಕಡಿಮೆಯಾಗಿತ್ತು. ಉತ್ತರ ಭಾರತದಲ್ಲಿ ಮಳೆ ಹೆಚ್ಚಾದ ಪರಿಣಾಮ ಸಹಜವಾಗಿ ಕೋಲಾರದ ಟೊಮೆಟೊ ಬೆಲೆ ಏರಿಕೆಯಾಗಿತ್ತು. ಇದೀಗ ಜುಲೈ ತಿಂಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಮಳೆಯೂ ಕಡಿಮೆ, ಮತ್ತೊಂದೆಡೆ ಪಕ್ಕದ ರಾಜ್ಯವಾದ ಆಂಧ್ರದ ಹಲವು ಜಿಲ್ಲೆಗಳ ಟೊಮೆಟೊ ಬೆಳೆ ಕೋಲಾರದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ, ಹೊರ ರಾಜ್ಯಗಳಲ್ಲಿ‌ ಟೊಮೆಟೊಗೆ ಇದ್ದ ಬೇಡಿಕೆಯೂ ಸಹಜವಾಗಿಯೇ ಕಡಿಮೆಯಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ನೂರರ ಗಡಿ ದಾಟಿದ ಟೊಮೆಟೊ ಬೆಲೆ, ಇನ್ನು ಮೂರು ತಿಂಗಳಲ್ಲಿ ಈರುಳ್ಳಿ ಬೆಲೆಯೂ ಏರಿಕೆ

ಇನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಈ ಸೀಸನ್​ನಲ್ಲಿ ಅತಿ ಹೆಚ್ಚು ಟೊಮೆಟೊವನ್ನು ಬೆಳೆಯುತ್ತಿದ್ದರು. ಆದ್ರೆ, ಇತ್ತೀಚೆಗೆ ತಾಪಮಾನ ಮತ್ತು ವೈರಸ್ ಹಾವಳಿಯಿಂದ ಟೊಮೆಟೊ ಬೆಳೆಯಿಲ್ಲದೆ ಅವಕ ಕಡಿಮೆಯಾಗುತ್ತಿದೆ. ಜೊತೆಗೆ ಟೊಮೆಟೊ ಬೆಳೆ ಬೆಳೆಯವುದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ, ಕಷ್ಟುಪಟ್ಟು ಬೆಳೆದರೂ ಸಹ ಟೊಮೆಟೊಗೆ ಬೆಲೆ ಸಿಗುತ್ತೆ ಎಂಬ ವಿಶ್ವಾಸವಿಲ್ಲದ ಕಾರಣ ರೈತ ಇತ್ತೀಚಿಗೆ ಟೊಮೆಟೊ ಬಿಟ್ಟು ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ. ಇದರಿಂದ ಅವಕ ಕಡಿಮೆ ಬರುತ್ತಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆಯಾಗಿ ವ್ಯಾಪಾರಸ್ಥರು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹಿನ್ನೆಲೆ ಟೊಮೆಟೊಗೆ ಬೇಡಿಕೆ ಇರಬೇಕಿತ್ತು. ಮೂರು ತಿಂಗಳ ಈ ಸೀಜನ್​ನಲ್ಲಿ ಸರಾಸರಿ ಸುಮಾರು ಒಂದು ಲಕ್ಷ ಬಾಕ್ಸ್ ಟೊಮೆಟೊ ಮಾರುಕಟ್ಟೆಗೆ ಬರುತ್ತದೆ. ಆದ್ರೆ, ಈಗ ಅರ್ಧದಷ್ಟು ಬಾಕ್ಸ್ ಮಾತ್ರ ಬರುತ್ತಿದೆ. ಆಂಧ್ರ, ತಮಿಳುನಾಡು, ಮಂಡ್ಯ, ಚಾಮರಾಜನಗರ, ಮೈಸೂರು, ನೆಲಮಂಗಲ ಕಡೆಯಿಂದ ಟೊಮೆಟೊ ಬರುತ್ತದೆ. ಅಲ್ಲದೆ ಹೊರ ರಾಜ್ಯಗಳಲ್ಲೂ ಕೂಡ ಸ್ಥಳೀಯವಾಗಿ ಟೊಮೆಟೊ ಲಭ್ಯವಾಗುತ್ತಿದೆ. ಹಾಗಾಗಿ ಟೊಮೆಟೊ ಬೇಡಿಕೆ ಕೂಡ ಸಹಜವಾಗಿ ಕಡಿಮೆಯಾಗಿ, ಬೆಲೆಯೂ ಕಡಿಮೆಯಾಗುತ್ತಿದೆ.

ಒಟ್ಟಾರೆ ಕೆಂಪು ಸುಂದರಿ, ಕಿಚನ್ ಕ್ವೀನ್ ಎಂದೆಲ್ಲ ಹೆಸರು ಪಡೆದಿರುವ ಟೊಮೆಟೊ ತನ್ನ ಬೆಲೆಯ ಏರಿಳಿತದಿಂದ ರೈತರ ಉಸಿರು ಕೂಡ ಏರಿಳಿಯುವಂತೆ ಮಾಡುತ್ತಿದೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಾರ ಬೆಲೆ ನಿಗದಿ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ