ಅಂತಿಮ ಹಂತ ತಲುಪಿದ ರಮೇಶ್ ಕುಮಾರ್ ಅರಣ್ಯ ಭೂಮಿ ವಿವಾದ: ಭೂಮಿ ಉಳಿಯುತ್ತಾ, ಉರುಳುತ್ತಾ?
ರಮೇಶ್ ಕುಮಾರ್ ಅವರ ಅರಣ್ಯ ಭೂಮಿ ಒತ್ತುವರಿ ವಿವಾದಕ್ಕೆ ಸಂಬಂಧಿಸಿದ ಜಂಟಿ ಸರ್ವೆ ವರದಿಯನ್ನು ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದೆ. ಎರಡು ದಶಕಗಳ ಕಾನೂನು ಹೋರಾಟದ ನಂತರ ಈ ವರದಿ ಸಲ್ಲಿಕೆಯಾಗಿದೆ. ವರದಿ ಪ್ರಕಾರ, ರಮೇಶ್ ಕುಮಾರ್ ಅವರು ಸುಮಾರು 60 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೈಕೋರ್ಟ್ ಈ ವರದಿಯ ಆಧಾರದ ಮೇಲೆ ತೀರ್ಪು ನೀಡಲಿದೆ.

ಕೋಲಾರ, ಜನವರಿ 30: ಮಾಜಿ ಸ್ಪೀಕರ್ ರಮೇಶ್ ಕುಮಾರ್ (speaker ramesh kumar) ಅವರ ಅರಣ್ಯ ಭೂಮಿ ಒತ್ತುವರಿ ವಿವಾದಕ್ಕೆ ಸಂಬಂಧಸಿದಂತೆ ಕೊನೆಗೂ ಜಂಟಿ ಸರ್ವೆಯ ವರದಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು, ಸರ್ಕಾರ ಇಂದು ವರದಿಯಲ್ಲಿ ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದೆ. ಆ ಮೂಲಕ ರಮೇಶ್ ಕುಮಾರ್ ಅವರ ಎರಡು ದಶಕಗಳ ಕಾನೂನು ಹೋರಾಟ ಇನ್ನೇನು ಅಂತಿಮ ಹಂತದಲ್ಲಿದ್ದು ಅವರ ಭೂ ಉಳಿಯುತ್ತಾ, ಇಲ್ಲಾ ಉರುಳುತ್ತಾ ಅನ್ನೋ ಕುತೂಹಲ ಹೆಚ್ಚಾಗಿದೆ.
61.39 ಎರಕೆ ಅರಣ್ಯ ಭೂಮಿ ಒತ್ತುವರಿ
ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ, ಮಾಜಿ ಸ್ಪೀಕರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಆತ್ಯಾಪ್ತ ರಮೇಶ್ ಕುಮಾರ್ ಅವರು ಅರಣ್ಯ ಭೂಮಿ ಸುಳಿಯಲ್ಲಿ ಸಿಲುಕಿ ಎರಡು ದಶಕಗಳೇ ಕಳೆದಿವೆ. ಕಳೆದ ಎರಡು ದಶಕಗಳಿಂದ ರಮೇಶ್ ಕುಮಾರ್ ಅವರು ತಮ್ಮ ಹುಟ್ಟೂರು ಅಡ್ಡಗಲ್ ಗ್ರಾಮದ ಬಳಿ ಇರುವ ಹೊಸಹುಡ್ಯ ಸರ್ವೆ ನಂ-1 ಮತ್ತು 2 ರಲ್ಲಿ ಬೇರೆ ಬೇರೆ ರೈತರಿಂದ ಖರೀದಿ ಮಾಡಿದ್ದ ಭೂಮಿ ಪೈಕಿ ಸುಮಾರು 61.39 ಎರಕೆ ಅರಣ್ಯ ಭೂಮಿ ಒತ್ತುವರಿ ಆಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಈ ವಿಚಾರವಾಗಿ ಅರಣ್ಯ ಇಲಾಖೆ ಕೂಡ ರಮೇಶ್ ಕುಮಾರ್ ಅವರ ವಿರುದ್ದ ಕಾನೂನು ಹೋರಾಟ ನಡೆಸುತ್ತಿದೆ.
ಇದನ್ನೂ ಓದಿ: ರಮೇಶ್ ಕುಮಾರ್ ಭೂಮಿ ವಿವಾದ ಸರ್ವೆ ಗೊಂದಲ: ಒತ್ತುವರಿಯಾಗಿದೆ ಎಂದ DCF, ಇಲ್ಲ ಎನ್ನುತ್ತಿರುವ DC
ಸದ್ಯ ಎರಡು ದಶಕಗಳ ಕಾನೂನು ಹೋರಾಟದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್ ಆದೇಶದಂತೆ 2025 ಜನವರಿ 15 ಮತ್ತು 16 ರಂದು ಜಂಟಿ ಸರ್ವೆ ಕಾರ್ಯ ಅರ್ಜಿದಾರರ ಸಮ್ಮುಖದಲ್ಲೇ ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ, ಡಿಸಿಎಫ್ ಸರೀನಾ ಹಾಗೂ ಡಿಡಿಎಲ್ಆರ್ ಸಂಜರ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಮಾಡಲಾಗಿತ್ತು. ಅದರಂತೆ ಜಂಟಿ ಸರ್ವೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿತ್ತು. ಸರ್ಕಾರ ಇಂದು ಜಂಟಿ ಸರ್ವೆ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದೆ. ಹಾಗಾಗಿ ಎಲ್ಲರಲ್ಲೂ ಜಂಟಿ ಸರ್ವೆ ವರದಿಯಲ್ಲೇನಿ ಅನ್ನೋ ಕುತೂಹಲ ಹೆಚ್ಚಾಗಿದೆ. ರಮೇಶ್ ಕುಮಾರ್ ಅವರ ಎರಡು ದಶಕಗಳ ಕಾನೂನು ಹೋರಾಟಕ್ಕೆ ಜಯ ಸಿಗುತ್ತಾ ಇಲ್ಲಾ, ಅವರು ತಮ್ಮ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಬೇಕಾಗುತ್ತಾ ಅನ್ನೋ ಪ್ರಶ್ನೆ ಮೂಡಿವೆ.
ಇನ್ನು ಜಂಟಿ ಸರ್ವೆ ವೇಳೆ ಅರ್ಜಿದಾರ ರಮೇಶ್ ಕುಮಾರ್ ಅವರು ಸರ್ವೆ ಮಾಡುವ ಚೈನ್ ಬಗ್ಗೆ ತಕರಾರು ತೆಗೆದಿದ್ದರು. ಅರಣ್ಯ ಇಲಾಖೆಯ ಗಂಟರ್ ಚೈನ್ನಲ್ಲಿ ಸರ್ವೆ ಮಾಡುವ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಅರಣ್ಯ ಇಲಾಖೆಯ ಗಂಟರ್ ಚೈನ್, ಕಂದಾಯ ಅರಣ್ಯ ಚೈನ್ ಹಾಗೂ ಆಧುನಿಕ ರೋವರ್ ಯಂತ್ರದ ಮೂಲಕ ಮೂರು ವಿಧದಲ್ಲಿ ಸರ್ವೆ ಮಾಡಿ ವರದಿ ಸಿದ್ದಪಡಿಸಲಾಗಿದೆ.
ಸದ್ಯ ಮೂರು ಸರ್ವೆ ಪ್ರಕರಣಗಳಲ್ಲೂ ದಾಖಲೆಗಳಲ್ಲಿರುವಷ್ಟೇ ಜಮೀನು ಇರುವುದು ಎಂದು ತಿಳಿದು ಬಂದಿದ್ದು, ಸರ್ವೆ ಕಾರ್ಯ ಸರಿಯಾಗಿಯೇ ನಡೆದಿದೆ ಎನ್ನಲಾಗಿದೆ. ಹಾಗಾಗಿ ಸರ್ವೆ ವಿಚಾರದಲ್ಲಿ ಯಾವುದೇ ತಕರಾರು ಇಲ್ಲ, ಹೈಕೋರ್ಟ್ ಯಾವ ಸರ್ವೆ ವರದಿಯನ್ನಾದರೂ ಪರಿಗಣಿಸುವ ಅವಕಾಶವಿದೆ. ಜಂಟಿ ಸರ್ವೆಯಲ್ಲಿರುವ ಕೆಲವು ಮಾಹಿತಿ ಬಲ್ಲಮೂಲಗಳಿಂದ ಲಭ್ಯವಾಗಿದ್ದು, ಅದರಂತೆ 1964 ರ ಸೆಟ್ಲಮೆಂಟ್ ಆಕಾರ್ ಬಂದ್ ಪ್ರಕಾರವಾಗಿ ಹೊಸಹುಡ್ಯ ಸರ್ವೆ ನಂಬರ್ 1 ರಲ್ಲಿ 315 ಎಕರೆ ಹಾಗೂ ಸರ್ವೆ ನಂ-2 ರಲ್ಲಿ 247 ಎಕರೆ ಇದ್ದು. ಈ ಪೈಕಿ ಸರ್ವೆ ನಂಬರ್ 1 ರಲ್ಲಿ ಈಗಲೂ 315 ಎಕರೆ ಇದ್ದು ಸರ್ವೆ ನಂಬರ್ 2 ರಲ್ಲಿ 21 ಸರ್ವೆ ನಂಬರ್ಗಳು ಪೋಡಿಯಾಗಿ ದುರಸ್ಥಿಯಾಗಿದೆ.
ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ 64 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪ
ಇನ್ನು ಅಂತಿಮವಾಗಿ ರಮೇಶ್ ಕುಮಾರ್ ಖರೀದಿ ಮಾಡಿರುವ ಜಮೀನಿನಲ್ಲಿ ಸರ್ವೆ ನಂ-2 ರಲ್ಲಿ ಒಟ್ಟು 120 ಎಕರೆ ಅರಣ್ಯವಿದ್ದು ಆ ಪೈಕಿ ರಮೇಶ್ ಕುಮಾರ್ 54.23 ಗುಂಟೆಯಲ್ಲಿ ಸ್ವಾಧಿನದಲ್ಲಿರುತ್ತಾರೆ ಹಾಗೂ ಸರ್ವೆ ನಂ-1 ರಲ್ಲಿ ಒಟ್ಟು 315 ಎಕರೆ ಅರಣ್ಯವಿದ್ದು ಅದರಲ್ಲಿ ರಮೇಶ್ ಕುಮಾರ್ 6 ಎಕರೆ ಸ್ವಾಧೀನದಲ್ಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಂದರೆ ಒಟ್ಟು ರಮೇಶ್ ಕುಮಾರ್ ಖರೀದಿ ಮಾಡಿರುವ ಭೂಮಿಯಲ್ಲಿ 60.23 ಎಕರೆ ಅರಣ್ಯ ಭೂಮಿ ಇದೆ ಅನ್ನೋ ತೀರ್ಮಾನಕ್ಕೆ ಬರಲಾಗಿದೆ ಅನ್ನೋ ಮಾಹಿತಿ ವರದಿಯಲ್ಲಿ ಉಲ್ಲೇಖವಾಗಿದೆ ಅನ್ನೋದು ತಿಳಿದು ಬಂದಿದೆ. ಸದ್ಯ ಜಂಟಿ ಸರ್ವೆ ವರದಿಯನ್ನು ಸರ್ಕಾರ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದು, ಹೈಕೋರ್ಟ್ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಒಟ್ಟಾರೆ ರಮೇಶ್ ಕುಮಾರ್ ಅವರ ಅರಣ್ಯ ಭೂಮಿ ಒತ್ತುವರಿ ವಿವಾದ ಸದ್ಯ ಒಂದು ತಾರ್ಕಿಕ ಅಂತ್ಯಕ್ಕೆ ಬಂದಿದ್ದು ಇಷ್ಟು ದಿನ ಇದ್ದ ಹಲವು ಗೊಂದಲಗಳಿಗೆ ತೆರೆ ಎಳೆಯಲಾಗುತ್ತಿದೆ. ಸದ್ಯ ಸರ್ಕಾರದ ಮೂಲಕ ಹೈಕೋರ್ಟ್‌ಗೆ ಸಲ್ಲಿಸಿರುವ ಜಂಟಿ ಸರ್ವೆ ವರದಿಯನ್ವಯ ಹೈಕೋರ್ಟ್ ತೀರ್ಮಾನ ಏನಾಗಿರುತ್ತದೆ, ಅದಕ್ಕೆ ರಮೇಶ್ ಕುಮಾರ್ ಅವರ ನಿಲುವು ಏನಾಗಿರುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.