ರಮೇಶ್ ಕುಮಾರ್ ಭೂಮಿ ವಿವಾದ ಸರ್ವೆ ಗೊಂದಲ: ಒತ್ತುವರಿಯಾಗಿದೆ ಎಂದ DCF, ಇಲ್ಲ ಎನ್ನುತ್ತಿರುವ DC
ರಮೇಶ್ ಕುಮಾರ್ ಅವರ ಅರಣ್ಯ ಭೂಮಿ ವಿವಾದದ ಜಂಟಿ ಸರ್ವೆ ಎರಡು ದಿನಗಳ ಕಾಲ ನಡೆದು ಪೂರ್ಣಗೊಂಡಿದೆ. ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವೆ ಒಮ್ಮತವಿಲ್ಲ. ಕಂದಾಯ ಇಲಾಖೆ ಸ್ಥಿತಿಗತಿ ಸರಿಯಿದೆ ಎಂದರೆ, ಅರಣ್ಯ ಇಲಾಖೆ 1937 ಮತ್ತು 1944ರ ನೋಟಿಫಿಕೇಶನ್‌ಗಳನ್ನು ಉಲ್ಲೇಖಿಸಿದೆ. ವಿವಿಧ ವಿಧಾನಗಳಿಂದ ಸರ್ವೆ ನಡೆಸಲಾಗಿದೆ. ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಸಲಾಗುವುದು.
ಕೋಲಾರ, ಜನವರಿ 16: ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ರಮೇಶ್ ಕುಮಾರ್ (Ramesh Kumar) ಅರಣ್ಯ ಭೂಮಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಕಾಲ ನಡೆದ ಜಂಟಿ ಸರ್ವೆ ಕಾರ್ಯ ಕೊನೆಗೂ ಅಂತ್ಯವಾಗಿದೆ. ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸರ್ವೆ ಮಾಡಿ ಮುಗಿಸಿದರು ಇಬ್ಬರಲ್ಲೂ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿಲ್ಲ. ಹಾಗಾದರೆ ನಿಜಕ್ಕೂ ಆಗಿದ್ದೇನು? ಇಲ್ಲಿದೆ ಮಾಹಿತಿ.
ಕಳೆದ ಎರಡು ದಶಕಗಳಿಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಅರಣ್ಯ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ಮೇರೆಗೆ ಎರಡು ದಿನಗಳಿಂದ ನಡೆದ ಜಂಟಿ ಸರ್ವೆ ಕಾರ್ಯ ಮುಕ್ತಾಯವಾಗಿದೆ. ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ, ಡಿಎಫ್ಓ ಸರೀನಾ ಹಾಗೂ ಡಿಡಿಎಲ್‌ಆರ್ ಸಂಜಯ್ ಅವರ ನೇತೃತ್ವದಲ್ಲಿ ಜಂಟಿ ಸರ್ವೆ ಮುಕ್ತಾಯವಾಗಿದೆ. ಆದರೆ ಜಂಟಿ ಸರ್ವೇ ಕಾರ್ಯ ಕಂದಾಯ ಹಾಗೂ ಅರಣ್ಯ ಇಲಾಖೆಗಳ ಮಧ್ಯೆ ಒಮ್ಮತ ಮೂಡಿಲ್ಲ.
ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದ್ದಿಷ್ಟು
ಕಂದಾಯ ಇಲಾಖೆ ಮೇಲ್ನೋಟಕ್ಕೆ ಎಲ್ಲವು ಸರಿ ಇದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ ಬಳಿ ಫಾರೆಸ್ಟ್ ಸೆಟ್ಲಮೆಂಟ್ ಮ್ಯಾಪ್ ಹಾಗೂ 1937 ರಲ್ಲಿ ಆಗಿರುವ ನೋಟಿಫಿಕೇಶನ್ ಪ್ರಕಾರ ಮಾತ್ರವೇ ದಾಖಲೆಗಳನ್ನು ಹಾಜರುಪಡಿಸಿದ್ದಾರೆ. ಆದರೂ 1944 ರಲ್ಲಿ ಫಾರೆಸ್ಟ್ ನೋಟಿಫಿಕೇಶನ್ ಪ್ರಕಾರವಾಗಿ ನಾವು ಸರ್ವೆ ಕಾರ್ಯ ಮಾಡಲಾಗಿದೆ. ಸರ್ವೆ ಹೇಗೆ ಮಾಡಬೇಕು ಅನ್ನೋದರ ಕುರಿತು ಅದರಲ್ಲೇ ಟಿಪ್ಪಣಿ ಸಹ ಇದೆ. ಹಾಗಾಗಿ ಅದರಂತೆ ಸರ್ವೆಕಾರ್ಯ ಮಾಡಿ ಮುಗಿಸಿದ್ದೇವೆ. ಇನ್ನು ಅರ್ಜಿದಾರರಾದ ರಮೇಶ್ ಕುಮಾರ್ ಅವರು ಸರ್ವೆ ಚೈನ್ ಬಗ್ಗೆ ತಕರಾರು ತೆಗೆದಿರುವ ಹಿನ್ನೆಲೆಯಲ್ಲಿ ಫಾರೆಸ್ಟ್ನ ಗಂಟರ್ ಚೈನ್, ಕಂದಾಯ ಇಲಾಖೆ ಚೈನ್ ಹಾಗೂ ನೂತನ ರೋವರ್ ಯಂತ್ರದ ಮೂಲಕ ಮೂರು ವಿಧಾನದಲ್ಲಿ ಸರ್ವೆ ಮಾಡಿ ಮುಗಿಸಿದ್ದೇವೆ. ಸರ್ವೆಗೆ ಸಂಬಂಧಿಸಿದ ವರದಿಯನ್ನು ಸಿದ್ದಪಡಿಸಿ ಎರಡು-ಮೂರು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತೇವೆ. ಆ ನಂತರ ಸರ್ಕಾರ ಹೈಕೋರ್ಟ್ಗೆ ಸಲ್ಲಿಕೆ ಮಾಡಲಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದ್ದಾರೆ.
ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ 64 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪ
ಇನ್ನು ಇಂದು ಎರಡನೇ ದಿನ 9 ಗಂಟೆಗೆ ಆರಂಭವಾದ ಸರ್ವೆ ಕಾರ್ಯದಲ್ಲಿ ಬಿಸಿಲು, ಮುಳ್ಳು, ಬೆಟ್ಟ-ಗುಡ್ಡ ಎನ್ನದೆ ಅಧಿಕಾರಿಗಳು ಸರ್ವೆ ಕಾರ್ಯದಲ್ಲಿ ತೊಡಗಿದ್ದರು. ಇನ್ನು ತಾವು ಸರ್ವೆ ಮಾಡಿಕೊಂಡು ಹೋದ ಮಾರ್ಗದಲ್ಲಿ ಗಡಿ ಗುರುತು ಮಾಡಿಕೊಂಡು ಅಲ್ಲೊಂದು ಕೆಂಪು ಬಾವುಟ ಹಾಕಿಕೊಂಡು ಹೋಗಿದ್ದಾರೆ. ಈ ವೇಳೆ ರಮೇಶ್ ಕುಮಾರ್ ಅವರ ಕೋಳಿ ಫಾರಂ ಪ್ರದೇಶ ಅವರ ತೋಟದ ಒಳಗಿನ ಕೆಲವು ಪ್ರದೇಶದಲ್ಲೂ ಗುರುತು ಮಾಡಲಾಗಿದೆ. ಹಾಗಾಗಿ ಅದೆಲ್ಲವೂ ಭೂಮಾಪನ ಇಲಾಖೆ ಅಧಿಕಾರಿಗಳು ನಕ್ಷೆ ಸಿದ್ದಪಡಿಸಿದ ನಂತರವೇ ಎಷ್ಟು ಒತ್ತುವರಿಯಾಗಿದೆ. ಎಲ್ಲೆಲ್ಲಿ ಒತ್ತುವರಿಯಾಗಿದೆ ಅನ್ನೋದು ಕಂದಾಯ ಇಲಾಖೆ ಅಧಿಕಾರಿಗಳ ಮಾತಾಗಿದೆ.
ಡಿಎಫ್ಓ ಸರಿನಾ ಹೇಳಿದ್ದಿಷ್ಟು
ಇನ್ನು ಈ ಸರ್ವೆ ಕಾರ್ಯಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಹೊಸಹುಡ್ಯ ಸರ್ವೆ ನಂಬರ್ 1 ಮತ್ತು 2 ರಲ್ಲಿ ಅರಣ್ಯ ಇಲಾಖೆ ಭೂಮಿ ಒತ್ತುವರಿಯಾಗಿದೆ ಎಂದು ನೇರವಾಗಿ ಡಿಎಫ್ಓ ಸರಿನಾ ಹೇಳಿದ್ದಾರೆ. ಅರಣ್ಯ ಭೂಮಿ ಒತ್ತುವರಿ ಆಗಿರುವುದರಲ್ಲಿ ಯಾವುದೇ ಅನುಮಾನ ಬೇಡ, ಜಂಟಿ ಸರ್ವೆಕಾರ್ಯ ಸರಿಯಾಗಿ ಆಗಿದೆ. ಆದರೆ ಡಿಡಿಎಲ್‌ಆರ್ ಅವರು ನೀಡುವ ನಕ್ಷೆಯಲ್ಲಿ ಅರಣ್ಯ ಭೂಮಿ ಎಷ್ಟು ಒತ್ತುವರಿಯಾಗಿದೆ ಅನ್ನೋದನ್ನು ತೋರಿಸದಿದ್ದರೆ ನಾನು ಜಂಟಿ ಸರ್ವೆ ವರದಿಗೆ ಸಹಿ ಹಾಕುವುದಿಲ್ಲ ಎಂದು ಡಿಸಿಎಫ್ ಸರೀನಾ ನೇರವಾಗಿ ತಮ್ಮ ವಾದ ಮಂಡನೆ ಮಾಡಿದ್ದಾರೆ.
ಸರ್ವೇ ನಂಬರ್ 1 ರಲ್ಲಿ 315 ಎಕರೆ ಹಾಗೂ ಸರ್ವೇ ನಂಬರ್ 2 ರಲ್ಲಿ 113 ಎಕರೆ ಗುರುತಿಸಲು ನೋಟಿಫಿಕೇಶನ್ ಇದೆ. ಅರ್ಜಿದಾರರಾದ ರಮೇಶ್ ಕುಮಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹೇಳುವಂತೆ ಸೆಟ್ಲಮೆಂಟ್ ಮ್ಯಾಪ್ ಅವಶ್ಯಕತೆ ಇಲ್ಲ. ಪಹಣಿಯಲ್ಲಿ ಅರಣ್ಯ ಇಲಾಖೆ ಎಂದು ನಮೂದಾಗಿದೆ ಅಷ್ಟು ಸಾಕು. ಅಲ್ಲದೆ ಚೈನ್ ವಿಚಾರವಾಗಿ ಅರ್ಜಿದಾರರು ಮಾಡಿರುವ ತಕರಾರಿಗೆ ಸಂಬಂಧಿಸಿದಂತೆ ಇಡೀ ದೇಶದಲ್ಲಿ ಗಂಟರ್ ಚೈನ್ನಲ್ಲೇ ಅರಣ್ಯ ಇಲಾಖೆ ಸರ್ವೆ ಮಾಡೋದು ಹಾಗಾಗಿ ಅವರ ವಾದ ಪರಿಗಣಿಸುವಂತಹದ್ದಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೆ ಮತ್ತೆ ಭೂಸಂಕಷ್ಟ? ಜ. 15 ರೊಳಗೆ ಸರ್ವೆ ಮುಗಿಸಲು ಹೈಕೋರ್ಟ್ ಆದೇಶ
ರಮೇಶ್ ಕುಮಾರ್ ಅವರ ಅರಣ್ಯ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಹೈಕೊರ್ಟ್ ಆದೇಶದಂತೆ ಯಾವುದೇ ತಕರಾರು ಇಲ್ಲದೆ ಜಂಟಿ ಸರ್ವೆ ಕಾರ್ಯ ಮುಗಿದಿದೆ. ಆದರೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ನಡುವೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಅಂತಿಮವಾಗಿ ವರದಿ ಸಿದ್ದವಾದ ಮೇಲೆ ಮಾತ್ರವೇ ಒತ್ತುವರಿ ಆಗಿದೆಯಾ, ಇಲ್ಲವಾ ಎಂಬುವುದು ಸ್ಪಷ್ಟ ಉತ್ತರ ಸಿಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:13 pm, Thu, 16 January 25