ಕೋಲಾರದಲ್ಲಿ ಆರಂಭವಾಗಲಿದೆ ಮಿನಿ ಹೆಲಿಕಾಪ್ಟರ್ ನಿರ್ಮಾಣ ಮಾಡುವ ಟಾಟಾ ಕಂಪನಿ ಘಟಕ
ಟಾಟಾ ಕಂಪನಿಯು ಕೋಲಾರದಲ್ಲಿ ಮಿನಿ ಹೆಲಿಕಾಪ್ಟರ್‌ಗಳ ಉತ್ಪಾದನಾ ಘಟಕವನ್ನು ಆರಂಭಿಸಲಿದೆ. 2026ರ ವೇಳೆಗೆ ಕಾರ್ಯಾರಂಭಿಸುವ ಈ ಘಟಕವು ವಾರ್ಷಿಕವಾಗಿ 10 ಹೆಚ್ 125 ಮಾದರಿಯ ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಈ ಘಟಕವು ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಕೋಲಾರದ ಆರ್ಥಿಕ ಪ್ರಗತಿಗೆ ಪ್ರಮುಖ ಕೊಡುಗೆ ನೀಡಲಿದೆ. ಈಗಾಗಲೇ ಐಫೋನ್ ಜೋಡಣೆ ಮತ್ತು ರಕ್ಷಣಾ ಉಪಕರಣಗಳ ಘಟಕಗಳು ಕೋಲಾರದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಕೋಲಾರ, ಜುಲೈ 30: ಮಿನಿ ಹೆಲಿಕಾಪ್ಟರ್ (Mini Helicopter) ನಿರ್ಮಾಣ ಮಾಡುವ ಟಾಟಾ ಕಂಪನಿಯ (TATA Company) ಘಟಕ ಕೋಲಾರದಲ್ಲಿ (Kolar) ತಲೆ ಎತ್ತಲಿದೆ. ಇನ್ನೊಂದು ವರ್ಷದಲ್ಲಿ ತನ್ನ ಕಾರ್ಯಾರಂಭ ಮಾಡಲು ಸಿದ್ದತೆ ನಡೆಸಿರುವ ಟಾಟಾ ಕಂಪನಿ ಈಗಾಗಲೇ ಘಟಕದ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ. ಈ ಮೂಲಕ ಕೋಲಾರದಲ್ಲಿ ಟಾಟಾ ಕಂಪನಿಯ ಮೂರನೇ ಪ್ರತಿಷ್ಠಿತ ಘಟಕ ಆರಂಭವಾಗಲಿದೆ.
ಈಗಾಗಲೇ ಐಫೋನ್ ಜೋಡಣಾ ಘಟಕ ಟಾಟಾ ಎಲೆಕ್ಟ್ರಾನಿಕ್ಸ್, ರಕ್ಷಣಾ ಇಲಾಖೆಗೆ ಬೇಕಾಗಿರುವ ಯಂತ್ರಗಳನ್ನು ನಿರ್ಮಾಣ ಮಾಡುವ ಟಾಟಾ ಪವರ್ ಕಂಪನಿಗಳು ಕೋಲಾರದಲ್ಲಿ ಆರಂಭವಾಗಿವೆ. ಇದೀಗ, ದೇಶದ ಮೊದಲ ಮಿನಿ ನಾಗರಿಕ ಹೆಲಿಕಾಪ್ಟರ್ “ಹೆಚ್125 ಹೆಲಿಕಾಪ್ಟರ್” ನಿರ್ಮಾಣ ಕಂಪನಿಯನ್ನು ಕೋಲಾರದಲ್ಲಿ ಆರಂಭ ಮಾಡಲು ಟಾಟಾ ಗ್ರೂಪ್ಸ್ ಮುಂದಾಗಿದೆ. ಕೋಲಾರ ತಾಲೂಕು ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಪವರ್ ಕಂಪನಿಯ ಎದುರಲ್ಲೇ 16 ಎಕರೆ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಘಟಕ ಆರಂಭವಾಗಲಿದೆ. ಇದೇ ಕಂಪನಿ ಮುಂದಿನ ದಿನಗಳಲ್ಲಿ ರಕ್ಷಣಾ ಇಲಾಖೆಗೆ ಬೇಕಾದ ಹೆಲಿಕಾಪ್ಟರ್‌ಗಳನ್ನು ಸಹಿತ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ ಎನ್ನಲಾಗಿದೆ.
ಟಾಟಾ ಕಂಪನಿ ಈಗಾಗಲೇ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಐಪೋನ್ ಜೋಡಣಾ ಘಟಕ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯನ್ನು ಆರಂಭ ಮಾಡಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ನಂತರ, ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ರಕ್ಷಣಾ ಇಲಾಖೆಗೆ ಬಹುಬೇಡಿಕೆಯ ಉಪಕರಣಗಳನ್ನು ನಿರ್ಮಾಣ ಮಾಡುವ ಟಾಟಾ ಪವರ್ ಕಂಪನಿಯನ್ನು ಆರಂಭವಾಗಿದ್ದು, ಸಾವಿರಾರು ಜನರಿಗೆ ಉದ್ಯೋಗ ದೊರೆತಿದೆ. ಈಗ ಇದೇ ಟಾಟಾ ಕಂಪನಿ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ದೇಶದಲ್ಲೇ ಮೊದಲ ಮಿನಿ ಏರ್ ಬಸ್ ಅಂದರೆ ಮಿನಿ ನಾಗರಿಕ ಹೆಲಿಕಾಪ್ಟರ್ ನಿರ್ಮಾಣ ಘಟಕ, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ ಲಿಮಿಟೆಡ್ ಆರಂಭ ಮಾಡಲಿದೆ.
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ ಲಿಮಿಟೆಡ್ ಘಟಕ 2026ರ ವೇಳೆಗೆ ಕಾರ್ಯಾರಂಭ ಮಾಡಲಿದ್ದು ವರ್ಷಕ್ಕೆ 10 H125 ಮಾದರಿಯ ಮಿನಿ ಹೆಲಿಕಾಪ್ಟರ್‌ಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ. ಮುಂದಿನ ದಿನಗಳಲ್ಲಿ ಕಂಪನಿ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಣೆ ಮಾಡಲಿದೆ.
ಇದನ್ನೂ ಓದಿ: ಕೋಲಾರ ಮಹಿಳೆಯ ದೇಹದಲ್ಲಿ ವಿಶ್ವದಲ್ಲೇ ಎಲ್ಲೂ ಕಾಣಸಿಗದ ವಿಭಿನ್ನ ರಕ್ತ! ಸಿಆರ್ಐಬಿ ರಕ್ತ ಗುಂಪಿನ ಬಗ್ಗೆ ನಿಮಗೆ ಗೊತ್ತೇ…
ಈ ಘಟಕವನ್ನು ತಮ್ಮ ರಾಜ್ಯದಲ್ಲಿ ಆರಂಭವಿಸುವಂತೆ ವಿವಿಧ ರಾಜ್ಯಗಳಿಂದ ಆಹ್ವಾನ ಬಂದರೂ, ಸಾಕಷ್ಟು ಅವಕಾಶಗಳು ಇದ್ದರೂ ಕೂಡಾ ಟಾಟಾ ಕಂಪನಿ ಚಿನ್ನದ ನಾಡು ಕೋಲಾರದಲ್ಲಿ ಹೆಲಿಕಾಪ್ಟರ್ ಉತ್ಪಾದನಾ ಘಟಕ ನಿರ್ಮಾಣ ಮಾಡಲು ಮನಸ್ಸು ಮಾಡಿದೆ ಅನ್ನೋದು ಸಂತೋಷದ ವಿಚಾರ. ಇದಕ್ಕೆ ಪೂರಕವಾಗಿ ವೇಮಗಲ್ ಕೈಗಾರಿಕಾ ಪ್ರದೇಶ ಸಾಕಷ್ಟು ಅಭಿವೃದ್ದಿಯಾಗಿದ್ದು, ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿದೆ. ಜೊತೆಗೆ ಚೆನೈ-ಬೆಂಗಳೂರು ಎಕ್ಸಪ್ರೆಕ್ಸ್ ಹೈವೆಗೆ ತೀರ ಹತ್ತಿರವಿದೆ. ಆ ಕಾರಣಕ್ಕೆ ಟಾಟಾ ಕಂಪನಿ ಬೇರೆ ಬೇರೆ ಸ್ಥಳಗಳಲ್ಲಿ ಘಟಕ ನಿರ್ಮಾಣ ಮಾಡಲು ಬೇಡಿಕೆ ಬಂದರೂ ಚಿನ್ನದ ನಾಡು ಕೋಲಾರದಲ್ಲಿ ಮಿನಿ ಹೆಲಿಕಾಪ್ಟರ್ ನಿರ್ಮಾಣ ಕಂಪನಿ ಆರಂಭಿಸಲು ಮನಸ್ಸು ಮಾಡಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ಒಟ್ಟಾರೆಯಾಗಿ ಕೋಲಾರ ಜಿಲ್ಲೆಯಲ್ಲಿ ಟಾಟಾ ಕಂಪನಿ ಒಂದಾದರ ಮೇಲೊಂದರಂತೆ ತನ್ನ ಪ್ರಮುಖ ಘಟಕಗಳನ್ನು ನಿರ್ಮಾಣ ಮಾಡಿ ಜಿಲ್ಲೆಯ ಯುವಕ-ಯುವತಿಯರಿಗೆ ಉದ್ಯೋಗದಾತವಾಗಿದೆ. ಜೊತೆಗೆ ಕೋಲಾರ ಜಿಲ್ಲೆಯ ಹೆಸರನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 pm, Wed, 30 July 25




