
ಕೋಲಾರ, ಆಗಸ್ಟ್ 31: ಒಂದೆಡೆ ಮಾರುಕಟ್ಟೆಯಲ್ಲಿ ಕೆಂಪು ಸುಂದರಿ ಟೊಮೆಟೋ (Tomato) ರಾಶಿರಾಶಿ ಬಿದ್ದಿದ್ದರೆ, ಮತ್ತೊಂದೆಡೆ ಅತಿ ಕಡಿಮೆ ಬೆಲೆಗೆ (150 ರಿಂದ 200 ರೂ.) ಹರಾಜಾಗುತ್ತಿದೆ. ಇನ್ನೊಂದೆಡೆ, ಮಳೆಯಿಂದ ಹಾಳಾಗಿರುವ ಟೊಮೆಟೋ. ಕೋಲಾರದ (Kolar) ಎಪಿಎಂಸಿ ಮಾರುಕಟ್ಟೆಯಲ್ಲೀಗ ಈ ದೃಶ್ಯ ಸಾಮಾನ್ಯವಾಗಿದೆ. ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಹತ್ತು ಹದಿನೈದು ದಿನಗಳ ಹಿಂದೆ ಬಾಕ್ಸ್ ಟೊಮೆಟೋ ದರ 700-800 ರೂ.ವರೆ ಇತ್ತು. ಆದರೆ ಕೇವಲ ಎರಡು ಮೂರು ದಿನಗಳಿಂದ ಈಗ ಬೆಲೆ ದಿಢೀರ್ ಕುಸಿತ ಕಂಡಿದೆ. 15 ಕೆ.ಜಿ ಟೊಮೆಟೋ ಬಾಕ್ಸ್ ಕೇವಲ 150 ರಿಂದ 200 ರೂಪಾಯಿಗೆ ಹರಾಜಾಗುತ್ತಿದೆ.
ಹದಿನೈದು ದಿನಗಳ ಹಿಂದಷ್ಟೇ ಕೆಂಪು ಸುಂದರಿ ಬೆಲೆ ಏರಿಕೆಯಾಗಿತ್ತು. ಇದು ಸಹಜವಾಗಿಯೇ ಜಿಲ್ಲೆಯ ರೈತರಲ್ಲಿ ಮತ್ತು ವರ್ತಕರಲ್ಲಿ ಸಂತಸ ಮೂಡಿಸಿತ್ತು. ಆದರೆ ಕಳೆದ ಹದಿನೈದು ದಿನಗಳಿಂದ ವಾತಾವರಣದಲ್ಲಿನ ಏರುಪೇರು, ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ಗುಣಮಟ್ಟ ಕಳೆದುಕೊಂಡ ಟೊಮೆಟೋಗೆ ಬೆಲೆ ಇಲ್ಲದಂತಾಗಿದೆ.
ಹೊರ ರಾಜ್ಯಗಳಲ್ಲಿ, ಅದರಲ್ಲೂ ಉತ್ತರ ಭಾರತದ ರಾಜ್ಯಗಳಾದ ರಾಜಸ್ಥಾನ, ಉತ್ತರಪ್ರದೇಶ, ಹರಿಯಾಣ, ದೆಹಲಿ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಟೊಮೆಟೋಗೆ ಬೇಡಿಕೆ ಇದೆ. ಆದರೆ ಮಳೆಯಿಂದಾಗಿ ಗುಣಮಟ್ಟ ಇಲ್ಲದ ಕಾರಣ ಟೊಮೆಟೋಗೆಗೆ ಬೆಲೆ ಇಲ್ಲದೆ 150-200 ರೂಪಾಯಿಗೆ ಬಿಕರಿಯಾಗುತ್ತಿದೆ. ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳಿವೆ. ಹಾಗಾಗಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಟೊಮೆಟೋಗೆ ಬೆಳೆದಿದ್ದ ರೈತರಿಗೆ ಸದ್ಯ ನಿರಾಸೆಯಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿದ್ದ ಟೊಮೆಟೋಗೆ ಬೆಲೆ ಕುಸಿತದಿಂದ ರೈತ ನಷ್ಟಕ್ಕೆ ಸಿಲುಕಿದ್ದಾನೆ.
ಇನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಈ ಸೀಸನ್ನಲ್ಲಿ ಅತಿ ಹೆಚ್ಚು ಟೊಮೆಟೋಗೆ ಬೆಳೆಯುತ್ತಾರೆ. ಆದರೆ ಇತ್ತೀಚೆಗೆ ವಾತಾವರಣದಲ್ಲಿನ ಏರುಪೇರು, ಮಳೆ ಹಾಗೂ ರೋಗಬಾಧೆಯಿಂದಾಗಿ ಟೊಮೆಟೋ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಫಸಲು ಬಂದಿಲ್ಲ. ಇನ್ನು ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕಳೆದ ವರ್ಷ ಇದೇ ತಿಂಗಳಲ್ಲಿ ಟೊಮೆಟೋಗೆ ಈಗಿರುವ ಬೆಲೆಗಿಂತ ದುಪ್ಪಟ್ಟು ದರ ಇತ್ತು. ಅದರಂತೆ ಹದಿನೈದು ಕೆಜಿಯ ಬಾಕ್ಸ್ ಟೊಮೆಟೋಗೆ 400 ರಿಂದ 600 ರೂಪಾಯಿಗೆ ಮಾರಾಟವಾಗುತ್ತಿತ್ತು. ಅಷ್ಟೇ ಪ್ರಮಾಣದಲ್ಲಿ ಆವಕ ಕೂಡಾ ಇತ್ತು. ಕಳೆದ ವರ್ಷ ಈ ಅವದಿಯಲ್ಲಿ ದಿನಕ್ಕೆ 25 ರಿಂದ 30 ಸಾವಿರ ಕ್ವಿಂಟಾಲ್ ಟೊಮೆಟೋ ಮಾರುಕಟ್ಟೆಗೆ ಬರುತ್ತಿತ್ತು. ಅದರೆ, ಈವರ್ಷ ಅದರ ಅರ್ಧದಷ್ಟು ಅಂದರೆ ಕೇವಲ 10 ರಿಂದ 15 ಸಾವಿರ ಕ್ವಿಂಟಾಲ್ ಮಾತ್ರ ಮಾರುಕಟ್ಟೆಗೆ ಬರುತ್ತಿದೆ.
ಇದನ್ನೂ ಓದಿ: ಶಿಫಾರಸ್ಸಿನ ಮೇರೆಗೆ ವರ್ಗಾವಣೆ ಮಾಡುವುದು ತಪ್ಪಲ್ಲ: ತಹಶೀಲ್ದಾರ್ಗೆ ಹೈಕೋರ್ಟ್ ಪಾಠ
ಒಟ್ಟಾರೆ ಕೆಂಪು ಸುಂದರಿ, ಕಿಚನ್ ಕ್ವೀನ್ ಎಂದೆಲ್ಲ ಹೆಸರು ಪಡೆದಿರುವ ಟೊಮೆಟೋ ತನ್ನ ಬೆಲೆಯ ಏರಿಳಿತದಿಂದ ರೈತರ ಉಸಿರು ಕೂಡ ಏರಿಳಿಯುವಂತೆ ಮಾಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಳೆಯಿಂದಾಗಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು, ಸೀಸನ್ ಎಂದು ಟೊಮೆಟೋ ಬೆಳೆದಿದ್ದ ರೈತರು ಮಳೆಯಿಂದ ತೀವ್ರ ನಷ್ಟಕ್ಕೆ ಸಿಲುಕಿರುವುದಂತೂ ಸುಳ್ಳಲ್ಲ.