ಅಯ್ಯಪ್ಪ ಮಾಲೆ ಧರಿಸಿ ವಂಚನೆ ಪ್ರಕರಣ ಹೆಚ್ಚಳ, ಮಂಗಳೂರು ಆಯ್ತು ಈಗ ಕೋಲಾರದಲ್ಲೂ ಸಿಕ್ಕಿಬಿದ್ದರು
ಶಬರಿಮಲೆ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರೋದು ಅಯ್ಯಪ್ಪ ಸ್ವಾಮಿ ಮತ್ತು ಮಾಲೆ ಧರಿಸುವ ಭಕ್ತರು. ಆದ್ರೆ, ಅಯ್ಯಪ್ಪ ಮಾಲೆ ಧರಿಸಿ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಮೊನ್ನೇ ಅಷ್ಟೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿ, ಸಂಸ್ಥೆಯೊಂದರ ಹೆಸರನ್ನು ದುರುಪಯೋಗಪಡಿಸಿಕೊಂಡು ದೇಣಿಗೆ ಸಂಗ್ರಹಿಸುವಾಗ ಸಿಕ್ಕಿಬಿದ್ದಿದ್ದರು. ಇದೀಗ ಕೋಲಾರದಲ್ಲೂ ಸಹ ಇಬ್ಬರು ಸಿಕ್ಕಿಬಿದ್ದಿದ್ದಾರೆ.
ಕೋಲಾರ, (ಡಿಸೆಂಬರ್ 11): ಕೋಲಾರ (Kolar) ತಾಲೂಕಿನ ತೊಟ್ಲಿ ಗ್ರಾಮದ ಬಳಿ ಅಯ್ಯಪ್ಪ ಮಾಲೆ(Ayyappa Swamy Male) ಧರಿಸಿ ದೇವರ ಯಂತ್ರ ಕೊಡುವ ನೆಪದಲ್ಲಿ ಹಣ, ಮೊಬೈಲ್ ದೋಚಲು ಯತ್ನಿಸುತ್ತಿದ್ದ ಇಬ್ಬರು ಯುವಕರು ಸಿಕ್ಕಿಬಿದ್ದಿದ್ದಾರೆ. ಅಯ್ಯಪ್ಪ ಮಾಲೆ ಧರಿಸಿ ವಂಚನೆ ಮಾಡುತ್ತಿದ್ದ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಂಧ್ರ ಪ್ರದೇಶ ಮೂಲದ ನರಸಿಂಹ ಮತ್ತು ಗಣೇಶ್ ಎನ್ನುವರನ್ನು ಜನರು ಹಿಡಿದು ಕೋಲಾರ ಗ್ರಾಮಾಂತರ ಪೊಲೀಸರಿಗೆ ನೀಡಿದ್ದಾರೆ.
ನರಸಿಂಹ ಮತ್ತು ಗಣೇಶ್ ಎನ್ನುವ ಯುವಕರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ದೇವರ ಯಂತ್ರಗಳನ್ನು ಕೊಡುವ ನೆಪದಲ್ಲಿ ಹಣ, ಮೊಬೈಲ್ ದೋಚಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ತೊಟ್ಲಿ ಗ್ರಾಮಸ್ಥರು ಇಬ್ಬರನ್ನು ಹಿಡಿದಿದ್ದಾರೆ.
ಇದನ್ನೂ ಓದಿ: ಮಂಗಳೂರು: ಅಯ್ಯಪ್ಪ ಮಾಲೆ ಧರಿಸಿ ದೇಣಿಗೆ ಸಂಗ್ರಹಿಸಿ ವಂಚಿಸುತ್ತಿದ್ದ ಆರೋಪಿಗಳ ಸೆರೆ
ದಕ್ಷಿಣ ಕನ್ನಡದಲ್ಲೂ ದೇಣಿಗೆ ಸಂಗ್ರಹ
ಅಯ್ಯಪ್ಪ ಮಾಲೆ (Ayyappa Male) ಧರಿಸಿ, ಸಂಸ್ಥೆಯೊಂದರ ಹೆಸರನ್ನು ದುರುಪಯೋಗಪಡಿಸಿಕೊಂಡು ದೇಣಿಗೆ ಸಂಗ್ರಹಿಸುತ್ತಿದ್ದ ಇಬ್ಬರು ಯುವಕರನ್ನು ಹಿಡಿದು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದರು. ಯುವಕರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ, ಬೆಂಗಳೂರಿನ ಸ್ವಾಮಿ ವಿವೇಕಾನಂದ ಸೋಷಿಯಲ್ ಸರ್ವಿಸ್ ಟ್ರಸ್ಟ್ (ರಿ) ಹೆಸರಿನಲ್ಲಿ ದೇಣಿಗೆ ಕೇಳುತ್ತಿದ್ದರು.
ಯುವಕರು ಬೆಂಗಳೂರಿನ ಸ್ವಾಮಿ ವಿವೇಕಾನಂದ ಸೋಷಿಯಲ್ ಸರ್ವಿಸ್ ಟ್ರಸ್ಟ್ (ರಿ) ಹೆಸರಲ್ಲಿ ನಿಡ್ಲೆ ಗ್ರಾಮದ ಧನುಷ್ ಎಂಬವರ ಬಳಿ ದೇಣಿಗೆ ಕೇಳಿದ್ದಾರೆ. ಅನುಮಾನಗೊಂಡ ಧನುಷ್ ಸಂಸ್ಥೆಯ ಮೊಬೈಲ್ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಸಂಸ್ಥೆಯವರು ನಾವು ಯಾರನ್ನೂ ಕಳುಹಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ