
ಕೊಪ್ಪಳ, ಅಕ್ಟೋಬರ್ 8: ಇತ್ತೀಚೆಗೆ ಕಾಲ್ತುಳಿತಗಳ (Stampede) ಪ್ರಕರಣಗಳು ಹೆಚ್ಚಾಗಿವೆ. ಇದೀಗ ಕೊಪ್ಪಳದ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದುಬಂದಿದ್ದು,ಕಾಲ್ತುಳಿತಂದಹ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಹಲವು ಭಕ್ತರು ಜನಜಂಗುಳಿಯಲ್ಲಿ ಸಿಲುಕಿ ಉಸಿರಾಟ ತೊಂದರೆಯಿಂದ ಬಳಲಿದ್ದಾರೆ.
ಸೀಗೆ ಹುಣ್ಣಿಮೆ ಹಿನ್ನೆಲೆ ಕಲ್ಯಾಣ ಕರ್ನಾಟಕ ಹಾಗೂ ಕೊಪ್ಪಳದ ಆರಾಧ್ಯದೇವಿ ರಾಜ್ಯದಲ್ಲಿ ಶಕ್ತಿ ದೇವತೆಗಳಲ್ಲಿ ಒಂದಾಗಿರುವ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದು ಬಂದಿತ್ತು. ದರ್ಶನಕ್ಕೆ ಬಂದ ಭಕ್ತರಿಂದ ಒಂದಿಷ್ಟು ನೂಕುನುಗ್ಗಲು, ಕಾಲ್ತುಳಿತಂದಹ ಸ್ಥಿತಿ ನಿರ್ಮಾಣವಾಗಿತ್ತು. ದೇವಿ ದರ್ಶನಕ್ಕೆ ಮಂಗಳವಾರ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದ ಹಿನ್ನೆಲೆ ಟ್ರಾಫಿಕ್ ಜಾಮ್ನಿಂದ ಭಕ್ತರು ಪರದಾಡುವಂತಾಯಿತು. ಸೋಮವಾರ ರಾತ್ರಿಯಿಂದಲೇ ಭಕ್ತರು ಹುಲಿಗೆಮ್ಮ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರು. ಅದಲ್ಲದೇ ದೇವಸ್ಥಾನದ ಆವರಣದಲ್ಲಿ ಭಕ್ತರ ಹಾಗೂ ವಾಹನಗಳ ದಟ್ಟಣೆ ಹೆಚ್ಚಾದ ಹಿನ್ನೆಲೆ ಜನಜಂಗುಳಿಯಲ್ಲಿ ಸಿಲುಕಿ ಉಸಿರಾಟ ತೊಂದರೆಯಿಂದ ಹಲವು ಭಕ್ತರು ಪರದಾಡಿದ ಘಟನೆ ಕಂಡುಬಂದಿದೆ.
ಈ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ ವಾಹನಗಳ ದಟ್ಟಣೆಯನ್ನು ನಿಯಂತ್ರಣ ಮಾಡಿದರು. ಲಾಠಿ ಹಿಡಿದ ಅವರು ನಿಲ್ಲಿಸಿದ ವಾಹನಗಳಿಗೆ ಎಚ್ಚರಿಕೆ ನೀಡಿ ಮುಂದಕ್ಕೆ ಸಾಗಿಸುವಂತೆ ಸೂಚಿಸಿದರು. ಪ್ರತಿ ಹುಣ್ಣಿಮೆ, ಮಂಗಳವಾರ, ಶುಕ್ರವಾರದ ದಿನಗಳಂದು ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ಕರ್ನಾಟಕದಿಂದ ಲಕ್ಷಾಂತರ ಭಕ್ತರು ಹುಲಿಗೆಮ್ಮ ದೇವಸ್ಥಾನಕ್ಕೆ ಬರುತ್ತಾರೆ. ಹತ್ತಿರದಲ್ಲಿಯೇ ರೈಲ್ವೆ ಮೇಲ್ಸೆತುವೆ ನಿರ್ಮಾಣ ಆಗುತ್ತಿದ್ದು, ಸಾಕಷ್ಟು ವಿಳಂಬವಾಗುತ್ತಿದೆ. ಇದರಿಂದ ಸಾಕಷ್ಟು ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಕೋಟಿ ಆದಾಯವಿದ್ದರೂ, ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಭಕ್ತರು ಪರದಾಡುವ ಸ್ಥತಿ ಇದೆ. ಹಾಗಾಗಿ ಭಕ್ತರು ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 10:18 am, Wed, 8 October 25