ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಭೀತಿ, ವೈದ್ಯರ ಎಚ್ಚರಿಕೆ!
ಬೆಂಗಳೂರಿನಲ್ಲಿ ಕಿರಿಯ ವಯಸ್ಸಿನಲ್ಲೇ ತಂಬಾಕು ಮತ್ತು ಧೂಮಪಾನದ ವ್ಯಸನಕ್ಕೆ ಒಳಗಾಗುತ್ತಿರುವ ಕಾರಣ ಯುವ ಜನರಲ್ಲಿ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ ಎಂದು ಕಿಡ್ವಾಯಿ ಆಸ್ಪತ್ರೆ ವೈದ್ಯರು ಎಚ್ಚರಿಸಿದ್ದಾರೆ. ನಾಲಿಗೆ, ಬಾಯಿ ಹಾಗೂ ಲಿವರ್ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದ್ದು, ಸಿಗರೇಟ್‌ಗೆ ಪರ್ಯಾಯವಾಗಿ ಬಳಸುವ ವೇಪಿಂಗ್ (ಇ-ಸಿಗರೇಟ್) ಕೂಡ ಶ್ವಾಸಕೋಶಕ್ಕೆ ಅಷ್ಟೇ ಅಪಾಯಕಾರಿ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು, ಮೇ 31: ನಗರದಲ್ಲಿ ಇತ್ತೀಚೆಗೆ ಕ್ಯಾನ್ಸರ್ (Cancer) ಕೇಸ್ಗಳು ಹೆಚ್ಚಾಗಿದ್ದು, ಬಹುತೇಕ ಕ್ಯಾನ್ಸರ್ ರೋಗಿಗಳಲ್ಲಿ ತಂಬಾಕು ಸೇವನೆ ಕಂಡುಬಂದಿದೆ. ಧೂಮಪಾನ ಹಾಗೂ ತಂಬಾಕು ಸೇವನೆಯು ಕೇವಲ ಶ್ವಾಸಕೋಶದ ಕ್ಯಾನ್ಸರ್‌ಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಇದು ಜಠರ, ಯಕೃತ್ (ಲಿವರ್), ಮೂತ್ರಪಿಂಡ (ಕಿಡ್ನಿ), ಮೇದೋಜ್ಜೀರಕ ಗ್ರಂಥಿ (ಪ್ಯಾಂಕ್ರಿಯಾಸ್) ಹಾಗೂ ರಕ್ತದ ಕ್ಯಾನ್ಸರ್ ಸೇರಿದಂತೆ ದೇಹದ ವಿವಿಧ ಅಂಗಾಂಗಗಳ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಬೆಂಗಳೂರಿನ ಹಿರಿಯ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಮುಖ್ಯಾಂಶಗಳು
- ಕರ್ನಾಟಕದ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 40.4ರಷ್ಟು ತಂಬಾಕಿನಿಂದ ಉಂಟಾಗುತ್ತಿವೆ.
- ಬೆಂಗಳೂರಿನಲ್ಲಿ ಪುರುಷರಲ್ಲಿ ನಾಲಿಗೆ ಮತ್ತು ಬಾಯಿ ಕ್ಯಾನ್ಸರ್ ಗಣನೀಯವಾಗಿ ಹೆಚ್ಚಾಗಿದೆ.
- ಇ-ಸಿಗರೇಟ್ ಸುರಕ್ಷಿತವಲ್ಲ, ಅದು ಶ್ವಾಸಕೋಶದ ಗಂಭೀರ ಕಾಯಿಲೆಗೆ ಕಾರಣವಾಗಬಹುದು.
ಕಿಡ್ವಾಯಿ ಸ್ಮಾರಕ ಸರಣಿ ಸಂಸ್ಥೆಯ (KMIO) ನಿರ್ದೇಶಕರಾದ ಡಾ. ನವೀನ್ ಟಿ ಹೇಳುವಂತೆ ಭಾರತೀಯ ಪುರುಷರಲ್ಲಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಶೇ 62ರಷ್ಟು ಮತ್ತು ಮಹಿಳೆಯರಲ್ಲಿ ಶೇ 33.2ರಷ್ಟು ಕ್ಯಾನ್ಸರ್‌ಗಳು ತಂಬಾಕು ಬಳಕೆಯಿಂದಲೇ ಉಂಟಾಗುತ್ತಿವೆ. ವಿಶೇಷವಾಗಿ ಕರ್ನಾಟಕದಲ್ಲಿ ಪತ್ತೆಯಾಗುತ್ತಿರುವ ಹೊಸ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 40.4ರಷ್ಟು ತಂಬಾಕು ಸಂಬಂಧಿತವಾಗಿವೆ. ಇನ್ನು ಕಿಡ್ವಾಯಿ ಆಸ್ಪತ್ರೆಯೊಂದರಲ್ಲೇ ಚಿಕಿತ್ಸೆ ಪಡೆಯುತ್ತಿರುವ ಒಟ್ಟು ರೋಗಿಗಳಲ್ಲಿ ಶೇ 50.3ರಷ್ಟು ಪ್ರಕರಣಗಳು ತಂಬಾಕಿನಿಂದಲೇ ಉಂಟಾಗಿವೆ ಎಂದು ಅವರು ಕಳವಳಕಾರಿ ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ.
ಯುವ ಪೀಳಿಗೆಗೆ ಹೆಚ್ಚಿದ ಅಪಾಯ
ಸಾಮಾನ್ಯವಾಗಿ ತಂಬಾಕು ಸಂಬಂಧಿತ ಕ್ಯಾನ್ಸರ್‌ಗಳು 15 ರಿಂದ 20 ವರ್ಷಗಳ ನಿರಂತರ ಬಳಕೆಯ ನಂತರ, ಅಂದರೆ 54 ವರ್ಷ ದಾಟಿದವರಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಆದರೆ, ಪ್ರಸ್ತುತ ದಿನಗಳಲ್ಲಿ ಯುವಕ-ಯುವತಿಯರು ಹದಿಹರೆಯದಲ್ಲೇ ಈ ವ್ಯಸನಗಳಿಗೆ ದಾಸರಾಗುತ್ತಿರುವುದರಿಂದ, 20 ಮತ್ತು 30 ರ ಹರೆಯದ ಯುವಜನರಲ್ಲೂ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ.
ಸಿಗರೇಟ್ ವ್ಯಸನದಿಂದ ಮುಕ್ತಿ ಪಡೆಯಲು ಅನೇಕರು ‘ವೇಪಿಂಗ್’ (Vaping) ಅಥವಾ ‘ಇ-ಸಿಗರೇಟ್’ ಮೊರೆ ಹೋಗುತ್ತಿದ್ದಾರೆ. ಆದರೆ ಇದು ಮತ್ತಷ್ಟು ಅಪಾಯಕಾರಿ ಎನ್ನುತ್ತಾರೆ ಮಣಿಪಾಲ್ ಆಸ್ಪತ್ರೆಯ ಸರ್ಜಿಕಲ್ ಆಂಕಾಲಜಿಸ್ಟ್ ಡಾ. ಮಾಧವಿ ನಾಯರ್. ಇ-ಸಿಗರೇಟ್‌ಗಳು ಸುರಕ್ಷಿತ ಎಂಬ ತಪ್ಪು ಕಲ್ಪನೆ ಯುವಕರಲ್ಲಿದೆ. ಆದರೆ ಇದು ದೇಹಕ್ಕೆ ಅತಿ ಹೆಚ್ಚು ನಿಕೋಟಿನ್ ಒದಗಿಸಿ ವ್ಯಸನವನ್ನು ಹೆಚ್ಚಿಸುವುದಲ್ಲದೆ, ಶ್ವಾಸಕೋಶದ ಗಂಭೀರ ಕಾಯಿಲೆಗಳಿಗೆ (EVALI) ಕಾರಣವಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.





