ವರ್ಷವಾದ್ರು ಬಿಡುಗಡೆಯಾಗದ ಆನೆಗೊಂದಿ ಉತ್ಸವ ಹಣ: ಸಚಿವ ತಂಗಡಗಿ, ಶಾಸಕ ರೆಡ್ಡಿ ನಡುವೆ ಟಾಕ್ ಪೈಟ್
2024ರ ಮಾರ್ಚ್‌ನಲ್ಲಿ ಅದ್ದೂರಿಯಾಗಿ ನಡೆದ ಆನೆಗೊಂದಿ ಉತ್ಸವದ 4.82 ಕೋಟಿ ರೂಪಾಯಿ ಬಿಲ್ ಇನ್ನೂ ಬಿಡುಗಡೆಯಾಗಿಲ್ಲ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮತ್ತು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಅವರ ನಡುವೆ ಈ ಬಗ್ಗೆ ವಾಗ್ಯುದ್ಧ ಶುರುವಾಗಿದೆ. ಸಚಿವರು ನಿಗದಿತ ಹಣಕ್ಕಿಂತ ಹೆಚ್ಚು ಖರ್ಚು ಮಾಡಲಾಗಿದೆ ಎಂದು ಆರೋಪಿಸಿದರೆ, ಶಾಸಕರು ಹಣ ಬಿಡುಗಡೆ ಮಾಡದಿರುವುದನ್ನು ಟೀಕಿಸಿದ್ದಾರೆ.

ಕೊಪ್ಪಳ, ಫೆಬ್ರವರಿ 09: ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ವಾಲಿಯ ಆನೆಗೊಂದಿ ರಾಜಧಾನಿಯಾಗಿತ್ತು. ಹನುಮನ ಜನ್ಮಸ್ಥಳ ಇರುವುದು ಕೂಡ ಆನೆಗೊಂದಿ ಸಮೀಪವೇ. ಇನ್ನು ವಿಜಯನಗರ ಅರಸರ ಮೊದಲ ರಾಜಧಾನಿ ಕೂಡಾ ಆನೆಗೊಂದಿಯಾಗಿತ್ತು. ಇಂತಹ ಪುರಾಣ ಪ್ರಸಿದ್ಧ ಆನೆಗೊಂದಿ ಇತಿಹಾಸವನ್ನು ತಿಳಿಸುವುದು ಮತ್ತು ಇತಿಹಾಸವನ್ನು ಮೆಲಕು ಹಾಕಲು ಕಳೆದ ವರ್ಷ ಎರಡು ದಿನಗಳ ಕಾಲ ಆನೆಗೊಂದಿ ಉತ್ಸವ (Anegundi Utsav) ಅದ್ದೂರಿಯಾಗಿ ಆಚರಿಸಲಾಗಿತ್ತು. ಆದರೆ, ಉತ್ಸವಕ್ಕೆ ಖರ್ಚು ಮಾಡಿದ ಹಣ ಇನ್ನೂವರಗೆ ಬಿಡುಗಡೆಯಾಗಿಲ್ಲ. ಇದೇ ಹಣದ ವಿಚಾರವಾಗಿ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಮತ್ತು ಶಾಸಕ ಜನಾರ್ಧನ ರೆಡ್ಡಿ (Janardhana Reddy) ನಡುವೆ ಟಾಕ್ ಪೈಟ್ ಜೋರಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ 2024 ರ ಮಾರ್ಚ್ 10 ಮತ್ತು 11 ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ಆನೆಗೊಂದಿ ಉತ್ಸವವನ್ನು ಆಚರಿಸಲಾಗಿತ್ತು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸ್ವತಃ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವರಾಗಿದ್ದರಿಂದ ಮುತುವರ್ಜಿ ವಹಿಸಿ ಉತ್ಸವವನ್ನು ಆಯೋಜಿಸಿದ್ದರು. ಇನ್ನು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಇರುವುದರಿಂದ, ಅದ್ದೂರಿಯಾಗಿ ಉತ್ಸವವನ್ನು ಆಚರಿಸಲಾಗಿತ್ತು. ಅನೇಕ ಚಿತ್ರ ನಟರು, ಹಾಸ್ಯ ಕಲಾವಿದರು, ಗಾಯಕರು ಬಾಗಿಯಾಗಿದ್ದರು. ಎರಡು ದಿನಗಳ ಕಾಲ, ಅದ್ದೂರಿಯಾಗಿ ನಿರ್ಮಾಣ ಮಾಡಿದ್ದ ವೇದಿಕೆಯಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆದರೆ, ಆನೆಗೊಂದಿ ಉತ್ಸವ ನಡೆದು ವರ್ಷವಾಗುತ್ತಾ ಬಂದರೂ, ಇನ್ನು ಕೂಡ ಆನೆಗೊಂದಿ ಉತ್ಸವದ ಬಿಲ್ ಬಿಡುಗಡೆಯಾಗಿಲ್ಲ.
ವೇದಿಕೆ ನಿರ್ಮಾಣ, ಕಲಾವಿದರ ಬಿಲ್ ಸೇರಿದಂತೆ ಬರೋಬ್ಬರಿ 4.82 ಕೋಟಿ ರೂ. ಸರ್ಕಾರದಿಂದ ಬಿಡುಗಡೆಯಾಗಬೇಕಿದೆ. ಅನೇಕ ಸ್ಥಳೀಯ ಕಲಾವಿದರಿಗೆ ವರ್ಷವಾದರೂ ಸಂಭಾವನೆ ಸಿಕ್ಕಿಲ್ಲ. ಆದರೆ, ಆನೆಗೊಂದಿ ಉತ್ಸವಕ್ಕೆ ಮಾಡಿದ ಖರ್ಚುವೆಚ್ಚದ ಬಗ್ಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮತ್ತು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ನಡುವೆ ಟಾಕ್ ಪೈಟ್ ಆರಂಭವಾಗಿದೆ.
“ಉತ್ಸವದಲ್ಲಿ ಭಾಗಿಯಾಗಿದ್ದ ಸಚಿವ ಶಿವರಾಜ್ ತಂಗಡಗಿ, 5 ಕೋಟಿ ರೂ. ನೀಡುವುದಾಗಿ ಹೇಳಿದ್ದರು. ಆದರೆ, ಇಲ್ಲಿಯವರಗೆ ಬಿಡುಗಡೆಯಾಗಿಲ್ಲ. ನಾನು ಊಟ ಸೇರಿದಂತೆ ಅನೇಕ ಖರ್ಚನ್ನು ಸ್ವಂತ ಹಣದಿಂದ ಮಾಡಿದ್ದೇನೆ. ವೇದಿಕೆ, ಕಲಾವಿದರ ಬಿಲ್ನ್ನು ಇನ್ನೂವರೆಗೂ ಬಿಡುಗಡೆ ಮಾಡುತ್ತಿಲ್ಲ. ಆನೆಗೊಂದಿ ಉತ್ಸವದ ಬಿಲ್ ಬಿಡುಗಡೆ ಮಾಡದೇ, ಇದೀಗ ಹಂಪಿ ಉತ್ಸವ ಮಾಡಲು ಮುಂದಾಗಿದ್ದಾರೆ. ಇದು ಸರ್ಕಾರಕ್ಕೆ ನಾಚಿಕೆಯಾಗಬೇಕು. ಈ ವರ್ಷ ಆನೆಗೊಂದಿ ಉತ್ಸವವನ್ನು ಸರ್ಕಾರದಿಂದ ಮಾಡದೇ ಇದ್ರೆ, ನಾನು ಧಾನಿಗಳ ನೆರವಿನಿಂದ ಮಾಡಿ, ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇನೆ ಅಂತ ಎಂದು ಶಾಸಕ ಜನಾರ್ಧನ ರೆಡ್ಡಿ ಸೆಡ್ಡು ಹೊಡೆದಿದ್ದಾರೆ.
ಇದನ್ನೂ ಓದಿ: ಕೊಪ್ಪಳ ಜಿಲ್ಲೆಯ ರೈತರಿಗೆ ಮುಳುವಾಯ್ತು ಕಾರ್ಖಾನೆ ಧೂಳು
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ನಡೆದ ಉತ್ಸವವಾದರೂ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ತಂಗಡಗಿ, ಕೊಪ್ಪಳ ಜಿಲ್ಲೆಯವರಾಗಿದ್ದರೂ ಆನೆಗೊಂದಿ ಉತ್ಸವದ ಬಿಲ್ ಮಾತ್ರ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಆದರೆ, ಜನಾರ್ಧನ ರೆಡ್ಡಿ ಆರೋಪವನ್ನು ಸಚಿವ ತಂಗಡಗಿ ಅಲ್ಲಗಳೆದಿದ್ದಾರೆ. “ಇಲಾಖೆಯಿಂದ ನಾವು ಕೇವಲ ಎರಡು ಕೋಟಿ ಹಣವನ್ನು ಉತ್ಸವಕ್ಕೆ ನೀಡುವುದಾಗಿ ಹೇಳಿದ್ದೆವು. ಆದರೆ, ಅವರು ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡಿದ್ದಾರೆ. ಏನೇನೋ ಹೇಳಿ, ನಾವು ಹೇಳಿದ್ದಕಿಂತ ಹೆಚ್ಚು ಹಣ ಖರ್ಚು ಮಾಡಿ, 4.82 ಕೋಟಿ ರೂ. ಬಿಲ್ ಮಾಡಿದ್ದಾರೆ. ಈ ಹಣ ಅವರು ಕೊಡ್ತಾರಾ?. ಆದರೂ. ಕೂಡ ಬಾಕಿ ಇರುವ ಬಿಲ್ ಬಿಡುಗಡೆ ಮಾಡುತ್ತೇವೆ. ಜೊತೆಗೆ ಈ ವರ್ಷ ಕೂಡಾ ಆನೆಗೊಂದಿ ಉತ್ಸವವನ್ನು ಆಚರಿಸುತ್ತೇವೆ ಎಂದು ಸಚಿವ ತಂಗಡಿಗಿ ಹೇಳಿದ್ದಾರೆ.
ಐತಿಹಾಸಿಕ ಪರಂಪರೆ ಸಾರುವ ಆನೆಗೊಂದಿ ಉತ್ಸವದ ಬಿಲ್ ವಿಚಾರ ಇದೀಗ ಇಬ್ಬರು ನಾಯಕರ ನಡುವಿನ ಮಾತಿನ ಚಕಮಕಿಗೆ ಕಾರಣವಾಗುತ್ತಿದೆ. ಹೀಗಾಗಿ, ಈ ಬಾರಿ ಆನೆಗೊಂದಿ ಉತ್ಸವದ ಬಗ್ಗೆ ಅನಿಶ್ಚಿತತೆ ಮೂಡುವಂತಾಗಿದೆ. ಹೀಗಾಗಿ, ಇಬ್ಬರು ನಾಯಕರು, ಸಮಸ್ಯೆ ಬಗೆಹರಿಸಿ, ಈ ವರ್ಷ ಕೂಡ ಆನೆಗೊಂದಿ ಉತ್ಸವವನ್ನು ಆಚರಿಸಲು ಮುಂದಾಗಬೇಕಿದೆ.



