
ಕೊಪ್ಪಳ, ಸೆಪ್ಟೆಂಬರ್ 27: ತ್ರಿವಿಧ ದಾಸೋಹಕ್ಕೆ ಹೆಸರಾದ ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ನ್ಯೂಸ್ ಹರಡಲಾಗುತ್ತಿದ್ದು, ಕಿಡಿಗೇಡಿಗಳ ವಿರುದ್ಧ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಡಿಜಿಟಲ್ ಚಾನೆಲ್ವೊಂದರ ವಿರುದ್ದ ನಗರ ಠಾಣೆಯಲ್ಲಿ FIR ದಾಖಲಾಗಿದೆ. ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಶ್ರೀಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದ ಬೆನ್ನಲ್ಲೇ ಈ ಅಪಪ್ರಚಾರ ಮಾಡಲಾಗುತ್ತಿದೆ.
ಈ ಬಾರಿಯ ದಸರಾ ಮಹೋತ್ಸವವನ್ನು ಗವಿಮಠದ ಶ್ರೀಗಳು ಉದ್ಘಾಟಿಸಲಿದ್ದಾರೆ ಎಂದು ಅಧಿವೇಶನದಲ್ಲಿ ಸಿಎಂ ಡಿಕೆ ಶಿವಕುಮಾರ್ ಅಧಿಕೃತವಾಗಿ ಘೋಷಿಸಿದ್ದರು. ಇದಕ್ಕೆ ನಾಡಿನಾದ್ಯಂತ ಅಪಾರ ಭಕ್ತರು ಸಂತಸ ವ್ಯಕ್ತಪಡಿಸಿದ್ದರು. ಆದರೆ, ‘ಶ್ರೀಗಳು ದಸರಾ ಉದ್ಘಾಟನೆಯನ್ನು ತಿರಸ್ಕರಿಸಿದ್ದಾರೆ, ಕಾರ್ಖಾನೆಗಳ ವಿಚಾರವಾಗಿ ಕೊಪ್ಪಳವನ್ನು ರಕ್ಷಣೆ ಮಾಡಿದರೆ ಮಾತ್ರ ಉದ್ಘಾಟನೆಗೆ ಬರುವುದಾಗಿ ಶ್ರೀಗಳು ಸರ್ಕಾರಕ್ಕೆ ಷರತ್ತು ವಿಧಿಸಿದ್ದಾರೆ’ ಎಂಬ ಸುಳ್ಳು ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.
ಈ ಕುರಿತು ಟಿವಿ9 ಗವಿಮಠದ ಉನ್ನತ ಮೂಲಗಳನ್ನು ಸಂಪರ್ಕಿಸಿದಾಗ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿವೆ. ಇತ್ತ ಸುಳ್ಳು ಸುದ್ದಿ ಗಮನಕ್ಕೆ ಬರುತ್ತಿದ್ದಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮತ್ತು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿ, ‘ಇದು ಶುದ್ಧ ಸುಳ್ಳು ಮಾಹಿತಿ’ ಎಂದು ಸ್ಪಷ್ಟಪಡಿಸಿದ್ದಾರೆ.
ಗವಿಮಠದ ಶ್ರೀಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕೊಪ್ಪಳ ಪೊಲೀಸರು ಅಲರ್ಟ್ ಆಗಿದ್ದಾರೆ. ಕೊಪ್ಪಳ ನಗರ ಠಾಣೆಯ ಇನ್‌ಸ್ಪೆಕ್ಟರ್ ಸುರೇಶ್ ಅವರ ದೂರಿನ ಮೇರೆಗೆ ಡಿಜಿಟಲ್ ಚಾನೆಲ್ವೊಂದರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
‘ಸಾರ್ವಜನಿಕ ಶಾಂತಿ ಕದಡುವ ಹಾಗೂ ಗಣ್ಯರ ವಿರುದ್ಧ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಭಾಗ್ಲಾ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ಅವರು ದಸರಾ ಉದ್ಘಾಟಕರ ಹೆಸರನ್ನು ಘೋಷಣೆ ಮಾಡಿದ ದಿನ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಮೌನ ಅನುಷ್ಠಾನದಲ್ಲಿದ್ದರು. ಸದ್ಯ ಶ್ರೀಗಳು ಭಕ್ತರ ಮನೆಗೆಂದು ಬೇರೆ ಜಿಲ್ಲೆಗೆ ತೆರಳಿದ್ದು, ಮಠದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ, ಸೋಮವಾರದಂದು ಸಚಿವ ಶಿವರಾಜ್ ತಂಗಡಗಿ ಶ್ರೀಗಳನ್ನು ಭೇಟಿಯಾಗಿ ಅಧಿಕೃತವಾಗಿ ದಸರಾ ಉದ್ಘಾಟನೆಗೆ ಆಹ್ವಾನ ನೀಡಲಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ‘ಗವಿಮಠದ ಶ್ರೀಗಳು ಅತ್ಯಂತ ಸಂತೋಷದಿಂದ ದಸರಾ ಉದ್ಘಾಟನೆಗೆ ಬರಲು ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:30 pm, Sun, 27 September 26