ಕೊಪ್ಪಳದಲ್ಲಿ ಸೋತಿದ್ದೇ ಒಳ್ಳೆಯದಾಯ್ತೆಂದ ಸಿದ್ದರಾಮಯ್ಯ: ಕಾರಣವೇನು ಗೊತ್ತೇ?
ಸಿದ್ದರಾಮಯ್ಯ 1991 ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸಿದ್ದರಾಮಯ್ಯ ಲೋಕಸಭೆಗೆ ಸ್ಪರ್ಧಿಸಿದ್ದು ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಕ್ಷೇತ್ರದಿಂದ. 1991 ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ, 2,29,979 ಮತಗಳನ್ನು ಪಡೆದಿದ್ದರು. ಈ ಸೋಲೇ ಈಗ ಸಿಎಂ ಆಗಲು ಕಾರಣವಾಯ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಕೊಪ್ಪಳ, ಮೇ 4: ಸಿಎಂ ಸಿದ್ದರಾಮಯ್ಯ (Siddaramaiah) ರಾಜಕೀಯ ಜೀವನದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಗೆಲುವಿನ ರುಚಿ ಕಂಡಿರುವುದು ಎಲ್ಲರಿಗೂ ಗೊತ್ತಿದೆ. ಆದರೆ, ಅವರು ಒಮ್ಮೆ ಲೋಕಸಭೆ ಚುನಾವಣೆಗೆ (Lok Sabha Elections) ಕೂಡಾ ಸ್ಪರ್ಧಿಸಿ ಸೋತಿದ್ದಾರೆ. ಹಿಂದುಳಿದ ವರ್ಗಗಳ ಮತಗಳು ಹೆಚ್ಚಾಗಿರುವ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಿದ್ದರಾಮಯ್ಯ ಸೋತಿದ್ದರು. ಸೋತಿದ್ದೆಕ್ಕೆ ಎರಡು ಬಾರಿ ರಾಜ್ಯದಲ್ಲಿ ಮುಖ್ಯಮಂತ್ರಿಯಾದೆ, ಗೆದ್ದಿದ್ದರೆ ಚಾನ್ಸ್ ಮಿಸ್ ಮಾಡಿಕೊಳ್ಳುತ್ತಿದ್ದೆ ಎಂದು ಸಂತೋಷದಿಂದಲೇ ಸಿದ್ದರಾಮಯ್ಯ ಅನೇಕರ ಮುಂದೆ ಹೇಳಿಕೊಂಡಿದ್ದಾರೆ.
ಕೊಪ್ಪಳದಿಂದ ಸ್ಪರ್ಧಿಸಿ ಸೋತಿದ್ದ ಸಿದ್ದರಾಮಯ್ಯ
ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲು ಗೆಲುವಿನ ಸಿಹಿ ಕಹಿಯನ್ನು ಅನುಭವಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ಸಿದ್ದರಾಮಯ್ಯ,ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಕೂಡಾ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಇದೇ ಸಿದ್ದರಾಮಯ್ಯ 1991 ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದು ಅಚ್ಚರಿಯಾದ್ರು ಕೂಡಾ ಸತ್ಯ. ಹಾಗಂತ ಸಿದ್ದರಾಮಯ್ಯ ಲೋಕಸಭೆಗೆ ಸ್ಪರ್ಧಿಸಿದ್ದು ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಕ್ಷೇತ್ರದಿಂದ. 1991 ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ, 2,29,979 ಮತಗಳನ್ನು ಪಡೆದಿದ್ದರು. ಸಿದ್ದರಾಮಯ್ಯ ವಿರುದ್ದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ಪಾಟೀಲ್ ಅನ್ವರಿ 2,41,176 ಮತಗಳನ್ನು ಪಡೆದು ಗೆದ್ದಿದ್ದರು. ಅಂದು ನಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿಗಿಂತ ಹೆಚ್ಚಿನ ಮತಗಳನ್ನು ಪೆಡದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.
ಮೈಸೂರು ಮೂಲದ ಸಿದ್ದರಾಮಯ್ಯ, ದೂರದ ಕೊಪ್ಪಳ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಲು ಕಾರಣ, ಕೊಪ್ಪಳ ಕ್ಷೇತ್ರದಲ್ಲಿ ಕುರುಬ ಸಮಾಜ ಸೇರಿದಂತೆ ಹಿಂದುಳಿದ ವರ್ಗದ ಮತಗಳು ಹೆಚ್ಚಾಗಿದ್ದದ್ದು. ಜೊತೆಗೆ ಈ ಹಿಂದೆ ಜನತಾದಳದಿಂದ ಸ್ಪರ್ಧಿಸಿ ಗೆದ್ದಿದ್ದ ಬಸವರಾಜ್ ಪಾಟೀಲ್ ಅನ್ವರಿ, 1991 ರ ಚುನಾವಣೆ ಸಮಯದಲ್ಲಿ ಜನತಾದಳ ಬಿಟ್ಟು ಕಾಂಗ್ರೆಸ್ ಸೇರಿ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಹೀಗಾಗಿ ಪಕ್ಷ ಬಿಟ್ಟು ಹೋಗಿದ್ದ ಬಸವರಾಜ್ ಪಾಟೀಲ್ ಅನ್ವರಿಯನ್ನು ಸೋಲಿಸಲು, ಜನತಾದಳದ ನಾಯಕರು ಸಿದ್ದರಾಮಯ್ಯರನ್ನು ಕೊಪ್ಪಳ ಕ್ಷೇತ್ರದಿಂದ ನಿಲ್ಲಿಸಿದ್ದರು. ಅಂದಿನಿಂದ ಕೊಪ್ಪಳ ಕ್ಷೇತ್ರದಲ್ಲಿ ಹಿಂದುಳಿದ ವರ್ಗ ವರ್ಸಸ್ ಮೇಲ್ವರ್ಗದ ಚುನಾವಣೆ ನಡೆಯುತ್ತಿದೆ. ಹಿಂದುಳಿದ ವರ್ಗದ ಸಿದ್ದರಾಮಯ್ಯ ಅಂದು ಸೋತರೆ, ಲಿಂಗಾಯತ ಸಮುದಾಯದ ಬಸವರಾಜ್ ಪಾಟೀಲ್ ಅನ್ವರಿ ಗೆದಿದ್ದರು. ಇನ್ನು ಅಂದಿನ ಸೋಲಿನ ಬಗ್ಗೆ ಕೆಲ ದಿನಗಳ ಹಿಂದೆ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ನಾನು ಅಂದು ಸೋತಿದ್ದೆ ಚೆನ್ನಾಗಾಯ್ತು.ಗೆದ್ದಿದ್ದರೆ ಲೋಕಸಬೆಗೆ ಹೋಗಿ ಬಿಡ್ತಿದ್ದೆ. ರಾಜ್ಯದಲ್ಲಿ ಎರಡು ಬಾರಿ ಸಿಎಂ ಆಗುವ ಅದೃಷ್ಟ ಸಿಗ್ತಿರಲಿಲ್ಲಾ. ಸೋತಿದ್ದು ಕೂಡಾ ಒಳ್ಳೆಯದಾಯ್ತು ಅಂತ ನಗುತ್ತಲೆ ಕೊಪ್ಪಳ ಜನರಿಗೆ ಹೇಳಿದ್ದರು.
ಇದನ್ನೂ ಓದಿ: ಬಿಜೆಪಿಗೆ ಮತ ಹಾಕೋ ಮೂಲಕ ತಂಗಡಗಿಗೆ ಕಪಾಳಕ್ಕೆ ಹೊಡೆದಂತಾಗಬೇಕು: ಬಿವೈ ವಿಜಯೇಂದ್ರ
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದ ಸಿದ್ದರಾಮಯ್ಯ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಕೊಪ್ಪಳ ಇಲ್ಲವೇ ಕುಷ್ಟಗಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಚಿಂತನೆ ಕೂಡಾ ನಡೆಸಿದ್ದರು. ಹಿಂದುಳಿದ ವರ್ಗದ ಮತಗಳ ಹೆಚ್ಚಾಗಿದ್ದರಿಂದ, ಈ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ್ಧಿಸುವಂತೆ ಬೆಂಬಲಿಗರು ಒತ್ತಡ ಕೂಡಾ ಹಾಕಿದ್ದರು. ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ, ತವರು ಜಿಲ್ಲೆಯ ವರುಣಾದಿಂದಲೇ ಸ್ಪರ್ಧಿಸಲು ನಿರ್ಧಾರ ಮಾಡಿದ್ದರು. ಆದ್ರೆ ಇಂದಿಗೂ ಕೊಪ್ಪಳಕ್ಕೆ ಬಂದಾಗೊಮ್ಮೆ, ಸಿದ್ದರಾಮಯ್ಯ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸಿದ್ದು, ಪ್ರಚಾರ ಮಾಡಿದ್ದರ ನೆನಪುಗಳನ್ನು ಹೇಳುತ್ತಲೇ ಇರುತ್ತಾರೆ. ಅಂದು ಅವರ ಪರವಾಗಿ ಕೆಲಸ ಮಾಡಿದವರನ್ನು ಗುರುತಿಸಿ ಇಂದಿಗೂ ಸಿದ್ದರಾಮಯ್ಯ ಮಾತನಾಡಿಸುತ್ತಾರೆ. ರಾಜಕೀಯದಲ್ಲಿ ಒಮ್ಮೆಮ್ಮೆ ಸೋಲು ಕೂಡಾ ಬದುಕಿನ ದಾರಿ ಬದಲಿಸುತ್ತೆ ಅನ್ನೋದಕ್ಕೆ ಸಿದ್ದರಾಮಯ್ಯ ಸಾಕ್ಷಿಯಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ