ಈ ವೃದ್ದನಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯೇ ಮನೆ: ಇಲ್ಲಿರುವ ಸಿಬ್ಬಂದಿಗಳೇ ಸಂಬಂಧಿಕರು

| Updated By: ಗಂಗಾಧರ​ ಬ. ಸಾಬೋಜಿ

Updated on: Mar 17, 2025 | 7:53 PM

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಓರ್ವ ವೃದ್ಧ ಕಳೆದ9 ತಿಂಗಳಿಂದ ಆಸ್ಪತ್ರೆಯಲ್ಲೇ ಇದ್ದಾರೆ. ವೃದ್ಧನ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿ ಬಿಟ್ಟು ಹೋಗಿದ್ದಾರೆ. ಮಕ್ಕಳು ಮತ್ತು ಸಹೋದರ ಇದ್ದರೂ ಯಾರೂ ಅವರನ್ನು ವಾಪಸ್​ ಮನೆಗೆ ಕರೆದುಕೊಂಡು ಹೋಗಲು ಬಂದಿಲ್ಲ. ಸದ್ಯ ಆಸ್ಪತ್ರೆ ಸಿಬ್ಬಂದಿಗಳೆ ಅವರಿಗೆ ಸಹಾಯ ಮಾಡುತ್ತಿದ್ದಾರೆ.

ಈ ವೃದ್ದನಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯೇ ಮನೆ: ಇಲ್ಲಿರುವ ಸಿಬ್ಬಂದಿಗಳೇ ಸಂಬಂಧಿಕರು
ಈ ವೃದ್ದನಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯೇ ಮನೆ: ಇಲ್ಲಿರುವ ಸಿಬ್ಬಂದಿಗಳೇ ಸಂಬಂಧಿಕರು
Follow us on

ಕೊಪ್ಪಳ, ಮಾರ್ಚ್ 17: ಜೀವನದ ಸಂಧ್ಯಾಕಾಲದಲ್ಲಿರುವರನ್ನು ಮಕ್ಕಳು ಮತ್ತು ಕುಟುಂಬದವರು ನೋಡಿಕೊಳ್ಳುವದು ಜವಾಬ್ದಾರಿಯಾಗಿದೆ. ಆದರೆ ಅನೇಕರು ತಮ್ಮ ಸಂಬಂಧಿಗಳನ್ನು, ಹೆತ್ತವರನ್ನು (Parents) ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಅವರನ್ನು ಕರೆದುಕೊಂಡು ಹೋಗದೇ ಇರುವ ಘಟನೆಗಳು ರಾಜ್ಯದಲ್ಲಿ ಮೇಲಿಂದ ಮೇಲೆ ನಡೆಯುತ್ತಿವೆ. ಇದೀಗ ಇಂತಹದ್ದೆ ಒಂದು ಘಟನೆ ನಗರದಲ್ಲಿ ನಡೆದಿದೆ. ಕೊಪ್ಪಳಯ ಜಿಲ್ಲಾ ಆಸ್ಪತ್ರೆಯಲ್ಲಿ ವೃದ್ದನೋರ್ವ (old man) ಕಳೆದ ಒಂಬತ್ತು ತಿಂಗಳಿಂದ ಇದ್ದು, ಅವರಿಗೆ ಸಹೋದರ, ಮಕ್ಕಳು ಇದ್ದರೂ ಕೂಡ ಯಾರು ಬರ್ತಿಲ್ಲಾ.

ಒಂಬತ್ತು ತಿಂಗಳಿಂದ ಜಿಲ್ಲಾಸ್ಪತ್ರೆಯಲ್ಲೇ ವಾಸ

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಇರುವ ವೃದ್ದನ ಸ್ಥಿತಿ ನೋಡಿದರೆ ಎಂತವರಿಗೂ ಕಣ್ಣೀರು ಬರುತ್ತದೆ. ಮೈ ಮೇಲೆ ಸರಿಯಾಗಿ ಬಟ್ಟೆಯಿಲ್ಲ. ಎದ್ದು ಓಡಾಡೋ ಸ್ಥಿತಿಯಲ್ಲಿ ಕೂಡ ಇಲ್ಲಾ. ಮಲಗಿದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡಿಕೊಳುತ್ತಾರೆ. ಆದರೂ ಕೂಡ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಬೇಸರಿಸಿಕೊಳ್ಳದೆ ಅವರಿಗೆ ಊಟ, ಊಪಹಾರ, ಚಿಕಿತ್ಸೆ ನೀಡುತ್ತಿದ್ದಾರೆ. ತಿಂಗಳಲ್ಲಾ, ಎರಡು ತಿಂಗಳಲ್ಲಾ, ಬರೋಬ್ಬರಿ ಒಂಬತ್ತು ತಿಂಗಳಿಂದ ಮಲಗಿರುವ ಸ್ಥಿತಿಯಲ್ಲಿಯೇ ಇದ್ದಾರೆ. ಅಷ್ಟಕ್ಕೂ ಅವರ ಹೆಸರು ರಾಮಂಜನೇಯಲು ಅಂತ.

ಇದನ್ನೂ ಓದಿ
ರೆಸಾರ್ಟ್-ಹೋಮ್​ಸ್ಟೇಗಳಲ್ಲಿ ಭದ್ರತೆ, ಸುರಕ್ಷತೆ ಕುರಿತು ಸುತ್ತೋಲೆ
ಕೊಪ್ಪಳ ರೇಪ್​ ಕೇಸ್​: ಹೋಂ ಸ್ಟೇ, ರೆಸಾರ್ಟ್​ಗಳ ಮೇಲೆ ಪೊಲೀಸರ ದಾಳಿ
ಅಕ್ರಮ ದಂಧೆಗಳ ಅಡ್ಡೆಯಾದ ಕೊಪ್ಪಳದ ರೆಸಾರ್ಟ್, ಹೋಮ್ ಸ್ಟೇ, ಆರೋಪ
ಪ್ರವಾಸಿಗರ ಜೀವದ ಜೊತೆ ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರ ಚೆಲ್ಲಾಟ ಆರೋಪ

ಇದನ್ನೂ ಓದಿ: ಕೊಪ್ಪಳ ಘಟನೆ ಬಳಿಕ ಎಚ್ಚೆತ್ತ ಸರ್ಕಾರ: ರೆಸಾರ್ಟ್-ಹೋಮ್​ಸ್ಟೇಗಳಲ್ಲಿ ಭದ್ರತೆ, ಸುರಕ್ಷತೆ ಕುರಿತು ಸುತ್ತೋಲೆ

ನೆರೆಯ ವಿಜಯನಗರ ಜಿಲ್ಲೆಯ ಹೊಸಪೇಟೆ ನಿವಾಸಿಯಾಗಿರು ರಾಮಂಜನೇಯಲು, ಎಪ್ಪತ್ತೆರಡು ವರ್ಷ. ಕಬ್ಬಿಣದ ಕೆಲಸ ಮಾಡುತ್ತಿದ್ದರಂತೆ. ಆದರೆ 2024 ರ ಮೇ ತಿಂಗಳಲ್ಲಿ ಈತನನ್ನು 108 ನಲ್ಲಿ ಕರೆದುಕೊಂಡು ಬಂದು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬಿಟ್ಟು ಹೋಗಿರೋ ಸಂಬಂಧಿಗಳು ಮರಳಿ ಮತ್ತೆ ಆಸ್ಪತ್ರೆಯತ್ತ ಸುಳಿದಿಲ್ಲಾ. ಹೀಗಾಗಿ ಜಿಲ್ಲಾ ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ವಾರ್ಡ್ ವೊಂದರಲ್ಲಿ ಏಕಾಂಗಿಯಾಗಿ ಕಳೆದ ಒಂಬತ್ತು ತಿಂಗಳಿಂದ ಜೀವಂತ ಶವದಂತೆ ರಾಮಂಜನೇಯಲು ಬದುಕಿದ್ದಾರೆ. ಆಸ್ಪತ್ರೆಯಲ್ಲಿ ಸಿಗುವ ಊಟ, ಉಪಹಾರವನ್ನು ಸೇವಿಸಿ, ಅವರಿವರು ನೀಡುವ ಆಹಾರ ಪದಾರ್ಥಗಳನ್ನು ತಿಂದು ಬದುಕಿರೋ, ರಾಮಂಜನೇಯಲುಗೆ ಯಾವುದೇ ಗಂಭೀರ ಖಾಯಿಲೆಯಿಲ್ಲ. ಆದರೆ ಬಿದ್ದಿರೋದರಿಂದ ಎದ್ದು ಓಡಾಡಲು ಬಾರದಂತಹ ಸ್ಥಿತಿಯಲ್ಲಿದ್ದಾರೆ.

ನನ್ನ ಈ ದುಸ್ಥಿತಿಗೆ ಸಹೋದರನೇ ಕಾರಣ

ಇನ್ನು ರಾಮಂಜನೇಯಲು, ಚೆನ್ನಾಗಿಯೇ ಇದ್ದರಂತೆ. ಆದರೆ ಇವರ ಪತ್ನಿ ಅನೇಕ ವರ್ಷಗಳ ಹಿಂದೆಯೇ ಬಿಟ್ಟು ಹೋಗಿದ್ದಾರೆ. ಆರು ಮಕ್ಕಳು ಕೂಡ ಇದ್ದವಂತೆ. ಆದರೆ ನಾಲ್ಕು ಜನ ಸತ್ತಿದ್ದು, ಇಬ್ಬರು ಬದುಕಿದ್ದಾರೆ. ಸದ್ಯ ಅವರು ಎಲ್ಲಿದ್ದಾರೆ ಅಂತ ಗೊತ್ತಿಲ್ಲಾ, ನನ್ನ ಸದ್ಯದ ಸ್ಥಿತಿ ಬಗ್ಗೆ ಕೂಡ ಅವರಿಗೆ ಮಾಹಿತಿಯಿಲ್ಲ. ಆದರೆ ನನ್ನು ಈ ದುಸ್ಥಿತಿಗೆ ತನ್ನ ಸಹೋದರನೇ ಕಾರಣ ಅಂತ ರಾಮಂಜನೇಯಲು ಆರೋಪಿಸುತ್ತಿದ್ದಾರೆ.

ಹೊಸಪೇಟೆಯಲ್ಲಿ ಐದು ಮನೆಗಳಿದ್ದವು. ನನಗೆ ಎರಡು ಮನೆಗಳು ಬರಬೇಕಿತ್ತು. ಬಾಡಿಗೆ ನೀಡಿ ಜೀವನ ನಡೆಸುತ್ತಿದ್ದೆ. ಆದರೆ ತನ್ನ ಸಹೋದರ, ನನಗೆ ಮೋಸ ಮಾಡಿ, ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡು, ನನ್ನ ಹೊರಹಾಕಿದ್ದಾನೆ. ನನಗೆ ಬಿಡಿಗಾಸು ನೀಡಿಲ್ಲಾ, ಆಸ್ಪತ್ರೆಗೆ ದಾಖಲಿಸಿದವರು ಮತ್ತೆ ಬಂದಿಲ್ಲಾ ಅಂತ ರಾಮಂಜನೇಯಲು ನೋವಿನಿಂದ ಹೇಳಿಕೊಂಡಿದ್ದಾರೆ.

ಇನ್ನು ಕೊಪ್ಪಳ ಜಿಲ್ಲಾಸ್ಪತ್ರೆಯ ಸಿಬ್ಬಂದಿಯೇ, ರಾಮಂಜನೇಯಲುಗೆ ಬಟ್ಟೆ ನೀಡಿ, ಹಣ ನೀಡಿ, ಮರಳಿ ಹೊಸಪೇಟೆಗೆ ಹೋಗು ಅಂತ ಆಟೋ ಹತ್ತಿಸಿ ಕಳುಹಿಸಿದ್ದರಂತೆ. ಆದರೆ ಮಾರನೇ ದಿನವೇ ಮತ್ತೆ ಆತ ಜಿಲ್ಲಾ ಆಸ್ಪತ್ರೆಗೆ ಬಂದು ಸೇರಿದ್ದಾರೆ.

ಇದನ್ನೂ ಓದಿ: ಕೊಪ್ಪಳ ಘಡಿವಡಕಿಯಲ್ಲಿ ಹೀಗೊಂದು ಹರಕೆ: ರಥದ ಮೇಲಿಂದ ಮಕ್ಕಳನ್ನು ಎಸೆಯುತ್ತಾರೆ ನೋಡಿ!

ಕಳೆದ ಒಂಬತ್ತು ತಿಂಗಳಿಂದ ಆಸ್ಪತ್ರೆಯಲ್ಲಿ ನರಳುತ್ತಿರುವ ರಾಮಂಜನೇಯಲುನ ಸ್ಥಿತಿ ನೋಡಿ ಸ್ವತಃ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಯೇ ಮರುಕ ಪಟ್ಟಿದ್ದಾರೆ. ಆದರೆ ಆತನ ಆಸ್ತಿಯನ್ನು ಕಸಿದುಕೊಂಡು, ಮೋಸ ಮಾಡಿರುವ ಕುಟುಂಬದವರಿಗೆ ಮಾತ್ರ ಅವರನ್ನು ನೋಡುವ, ಮನೆಗೆ ಕರೆದುಕೊಂಡು ಹೋಗುವ ಮನಸ್ಸು ಮಾತ್ರ ಮಾಡಿಲ್ಲ. ಹೀಗಾಗಿ ದಿಕ್ಕಿಲ್ಲದ ರಾಮಾಂಜನೇಯಲುಗೆ ಜಿಲ್ಲಾ ಆಸ್ಪತ್ರೆಯೇ ಮನೆಯಾಗಿದ್ದು, ಇಲ್ಲಿನ ಸಿಬ್ಬಂದಿಯೇ ಸಂಬಂಧಿಗಳಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.