ಹುಂಜಗಳನ್ನು ಜೈಲಿಗಟ್ಟಿ ನಗೆಪಾಟಲಿಗೆ ಈಡಾದ ಕೊಪ್ಪಳ ಪೊಲೀಸರು ಮತ್ತೆ ಅವುಗಳನ್ನು ಫಾರ್ಮ್ ಗೆ ಬಿಟ್ಟು ಬಂದ್ರು!
ಕಾರಟಗಿ ಸಮೀಪದಲ್ಲಿರರುವ ಕೋಳಿ ಫಾರ್ಮ್ ಗೆ ಹುಂಜಗಳನ್ನು ಬಿಡಲಾಗಿದೆ. ಕೋಳಿ ಕಾಳಗದ ಜೂಜು ಹಿನ್ನಲೆಯಲ್ಲಿ ಮೂರು ಹುಂಜಗಳನ್ನು ಕಾರಟಗಿ ಪೊಲೀಸರು ವಶಕ್ಕೆ ಪಡೆದಿದ್ದರು.
ಕೊಪ್ಪಳ: ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದ ಪೊಲೀಸರು ಜೂಜುಕೋರರನ್ನು ಬಿಟ್ಟು ಹುಂಜಗಳನ್ನು ಬಂಧಿಸಿ ನಗೆಪಾಟಲಿಗೆ ಈಡಾದ ಘಟನೆ ಕೊಪ್ಪಳದಲ್ಲಿ ನಡೆದಿತ್ತು. ಸದ್ಯ ಈಗ ಪೊಲೀಸರು ಹುಂಜಗಳನ್ನು ಜೈಲಿನಿಂದ ಬಿಡುಗಡೆ ಮಾಡಿ ಕೋಳಿ ಫಾರ್ಮ್ ಗೆ ಬಿಟ್ಟು ಬಂದಿದ್ದಾರೆ.
ಕಾರಟಗಿ ಸಮೀಪದಲ್ಲಿರರುವ ಕೋಳಿ ಫಾರ್ಮ್ ಗೆ ಹುಂಜಗಳನ್ನು ಬಿಡಲಾಗಿದೆ. ಕೋಳಿ ಕಾಳಗದ ಜೂಜು ಹಿನ್ನಲೆಯಲ್ಲಿ ಮೂರು ಹುಂಜಗಳನ್ನು ಕಾರಟಗಿ ಪೊಲೀಸರು ವಶಕ್ಕೆ ಪಡೆದಿದ್ದರು. ಕೋಳಿ ಕಾಳಗದ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವೇಳೆ ವಶಪಡಿಸಿಕೊಂಡಿದ್ದ ಕೋಳಿಗಳನ್ನು ಕಾರಟಗಿ ಪೊಲೀಸ್ ಠಾಣೆಯ ಬಂಧಿಖಾನೆಯಲ್ಲಿ ಬಂಧಿಸಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಹಿನ್ನಲೆ ಹುಂಜಗಳನ್ನು ಕೋಳಿ ಫಾರ್ಮ್ ನಲ್ಲಿ ಬಿಡಲಾಗಿದೆ.
ಘಟನೆ ಹಿನ್ನೆಲೆ
ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರು ಎಂಬಂತೆ ಕೊಪ್ಪಳ ಜಿಲ್ಲೆ ಕಾರಟಗಿ ಠಾಣೆ ಪೊಲೀಸರು ಕರ್ತವ್ಯ ಮೆರೆದಿದ್ದಾರೆ. ಇವರ ಈ ನಿಷ್ಠೆಗೆ ಜನ ನಗಾಡಿದ್ದಾರೆ. ಪನ್ನಾಪುರ ಬಳಿಯ ಬಸವಣ್ಣ ಕ್ಯಾಂಪ್‍ನಲ್ಲಿ ಕೋಳಿ ಕಾಳಗ ನಡೀತಿತ್ತು. ಆಗ ನಿನ್ನೆ(ಜ.17) ಸಂಜೆ ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಜೂಜುಕೋರರನ್ನ ಬಿಟ್ಟು ಹುಂಜಗಳನ್ನ ಅರೆಸ್ಟ್ ಮಾಡಿದ್ದರು. ಅಲ್ಲದೆ ಸೆಲ್ನಲ್ಲಿ ಹುಂಜಗಳನ್ನು ಕೂಡಿ ಹಾಕಿ ನಗೆಪಾಟಿಲಿಗೀಡಾಗಿದ್ದರು. ಇನ್ನು ದಾಳಿ ವೇಳೆ ಜೂಜುಕೋರರು ಎಸ್ಕೇಪ್ ಆಗಿದ್ದು ಕೋಳಿಗಳು ಸಿಕ್ಕಿಬಿದ್ದಿದ್ದವು.
ಸಂಕ್ರಾಂತಿ, ಯುಗಾದಿ, ದೀಪಾವಳಿ ಹಬ್ಬದ ನೆಪದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಕಡೆ ನಿಷೇಧಿತ ಕೋಳಿ ಕಾಳಗ ನಡೆಸಲಾಗುತ್ತದೆ. ಕೋಳಿ ಕಾಳಗಕ್ಕೆ ಕೋಟ್ಯಂತರ ರೂಪಾಯಿ ಜೂಜು ವಹಿವಾಟು ನಡೆಯುತ್ತೆ. ರಾಜಕೀಯ ಮುಖಂಡರೇ ಕೋಳಿ ಕಾಳಗ ಆಯೋಜನೆ ಮಾಡುತ್ತಾರೆ. ಈ ಕಾರಣಕ್ಕೆ ಪೊಲೀಸರು ಅವರನ್ನು ಅಲ್ಲೇ ಬಿಟ್ಟು, ಕೋಳಿ, ಬೈಕ್ ಗಳನ್ನು ಮಾತ್ರ ಜಪ್ತಿ ಮಾಡಿ ಪ್ರಕರಣ ದಾಖಲಿಸುವ ನಾಟಕ ಆಡ್ತಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದರು. ಇನ್ನು ಕಳೆದ ಕೆಲ ದಿನಗಳ ಹಿಂದಷ್ಟೆ ಇದೇ ಠಾಣೆ ಸರಹದ್ದಿನಲ್ಲಿ ಬಿಜೆಪಿ ಮುಖಂಡನೊರರ್ವ ಕಾಳಗ ನಡೆಸಿ ಸಿಕ್ಕಿಬಿದ್ದಿದ್ದ. ಅಷ್ಟಾದ್ರು ಪೊಲೀಸರು ಮಾತ್ರ ಕಠಿಣ ಕ್ರಮ ಕೈಗೊಳ್ಳದೇ ಈ ರೀತಿ ನಗೆಪಾಟಲಿನ ಕೆಲಸ ಮಾಡಿದ್ದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ