ಆಂಜನೇಯ ಜನ್ಮಸ್ಥಳ ವಿವಾದದ ನಡುವೆ ಮತ್ತೊಂದು ವಿವಾದ ಉದ್ಭವ; ಪಂಪಾ ಸರೋವರ ಕುರಿತು ಗುಜರಾತ್ ಪ್ರವಾಸೋದ್ಯಮ ವಿವಾದಾತ್ಮಕ ಟ್ವೀಟ್

ಪಂಚ ಸರೋವರಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಹರಿಯುವ ತುಂಗಭದ್ರ ನದಿಯ ದಕ್ಷಿಣ ಭಾಗದಲ್ಲಿ ಇರುವ ಪಂಪಾ ಸರೋವರ ಹಿಂದೂಗಳ ಪವಿತ್ರ ಸರೋವರಗಳಲ್ಲಿ ಒಂದು ಎಂದು ಈವರೆಗೆ ಪರಿಗಣಿಸಲಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಐದು ಪವಿತ್ರ ಸರೋವರಗಳಿದ್ದು, ಅವುಗಳನ್ನು ಪಂಚ ಸರೋವರ ಎಂದು ಕರೆಯಲಾಗುತ್ತದೆ.

ಆಂಜನೇಯ ಜನ್ಮಸ್ಥಳ ವಿವಾದದ ನಡುವೆ ಮತ್ತೊಂದು ವಿವಾದ ಉದ್ಭವ; ಪಂಪಾ ಸರೋವರ ಕುರಿತು ಗುಜರಾತ್ ಪ್ರವಾಸೋದ್ಯಮ ವಿವಾದಾತ್ಮಕ ಟ್ವೀಟ್
ಪಂಪಾ ಸರೋವರ ಕುರಿತು ಗುಜರಾತ್ ಪ್ರವಾಸೋದ್ಯಮ ವಿವಾದಾತ್ಮಕ ಟ್ವೀಟ್
TV9kannada Web Team

| Edited By: Ayesha Banu

Jul 12, 2022 | 8:33 PM

ಆಂಜನೇಯನ ಜನ್ಮಸ್ಥಳ ವಿವಾದ(Hanuman Birth Place Controversy) ಜೀವಂತವಾಗಿರುವಾಗಲೇ ಗುಜರಾತ್ ಪ್ರವಾಸೋದ್ಯಮ ಇಲಾಖೆ(Gujarat Tourism) ಪಂಪಾಸರೋವರದ(Pampa Sarovar) ಕುರಿತು ಮಾಡಿರುವ ಟ್ವೀಟ್ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ಜಿಲ್ಲೆಯಲ್ಲಿಯೂ ಪಂಪಾ ಸರೋವರವಿದೆ. ಆದರೆ, ತಮ್ಮಲ್ಲಿರುವ ಸರೋವರವನ್ನೇ ಮೂಲ ಪಂಪಾ ಸರೋವರವೆಂದು ಪರೋಕ್ಷವಾಗಿ ಟ್ವೀಟ್‌ನಲ್ಲಿ ಹೇಳಿಕೊಂಡಿದೆ.

ಪಂಪಾ ಸರೋವರ ಹಿಂದೂ ಪುರಾಣದಲ್ಲಿ ಉಲ್ಲೇಖವಾಗಿರುವ ಐದು ಪವಿತ್ರ ಸರೋವರಗಳಲ್ಲಿ ಒಂದು. ಹಿಂದೂ ಪುರಾಣದ ಪ್ರಕಾರ ಪಂಪಾ ಸರೋವರವನ್ನು ಶಿವನ ಪತ್ನಿ ಪಾರ್ವತಿಯ ಒಂದು ರೂಪವಾದ ಪಂಪಾ, ಶಿವನಿಗೆ ತನ್ನ ಭಕ್ತಿ ತೋರ್ಪಸುವುದಕ್ಕೆ ತಪಸ್ಸು ಮಾಡಿದ ಸ್ಥಳ ಎಂದು ಹೇಳಲಾಗುತ್ತದೆ. ಈ ಪಂಚ ಸರೋವರಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಹರಿಯುವ ತುಂಗಭದ್ರ ನದಿಯ ದಕ್ಷಿಣ ಭಾಗದಲ್ಲಿ ಇರುವ ಪಂಪಾ ಸರೋವರ ಹಿಂದೂಗಳ ಪವಿತ್ರ ಸರೋವರಗಳಲ್ಲಿ ಒಂದು ಎಂದು ಈವರೆಗೆ ಪರಿಗಣಿಸಲಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಐದು ಪವಿತ್ರ ಸರೋವರಗಳಿದ್ದು, ಅವುಗಳನ್ನು ಪಂಚ ಸರೋವರ ಎಂದು ಕರೆಯಲಾಗುತ್ತದೆ. ಆದರೆ, ಈ ಪಂಪಾ ಸರೋವರ ಕುರಿತು ಗುಜರಾತ್ ಪ್ರವಾಸೋದ್ಯಮ ಬೇರೆಯದ್ದೇ ಟ್ವೀಟ್ ಮಾಡಿರುವುದರಿಂದ ವಿವಾದ ಉದ್ಭವವಾಗಿದೆ.

ಟ್ವೀಟ್‌ನಲ್ಲಿ ಏನಿದೆ? ಗುಜರಾತ್ ರಾಜ್ಯದ ಡ್ಯಾಂಗ್ ಜಿಲ್ಲೆಯಲ್ಲಿ ಪೂರ್ಣಾ ನದಿಯಿಂದ ಪಂಪಾ ಸರೋವರ ನಿರ್ಮಿತವಾಗಿದೆ. ಶ್ರೀರಾಮನು ತನ್ನ ವನವಾಸದ ಸಮಯದಲ್ಲಿ ಮಾತೆ ಶಬರಿಯನ್ನು ಭೇಟಿಯಾದ ಕಥೆಗಳಿಂದ ಆವತವಾಗಿರುವ ಕೆರೆಯಾಗಿದೆ. ಶಾಂತಿಯುತ ನೈಸರ್ಗಿಕ ಸೌಂದರ್ಯದಿಂದ ಆವತವಾಗಿರುವ ಪಂಪಾ ಸರೋವರದಲ್ಲಿ ದೈವಿಕ ಇತಿಹಾಸವು ನಿಮ್ಮನ್ನು ಕಾಯುತ್ತಿದೆ ಎಂದು ಗುಜರಾತ್ ಪ್ರವಾಸೋದ್ಯಮ ಇಲಾಖೆ ಬರೆದುಕೊಂಡಿದೆ. ಅಂದರೇ ಪರೋಕ್ಷವಾಗಿ ಪಂಪಾ ಸರೋವರದ ಮೂಲ ಇರುವುದು ಇಲ್ಲಿ ಎನ್ನುವ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುವುದಕ್ಕೆ ಆಸ್ಥೆ ವಹಿಸಿದೆ. ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ನದಿ ಪಕ್ಕದಲ್ಲಿಯೂ ಪಂಪಾ ಸರೋವರವಿದ್ದು, ಈ ಭಾಗದಲ್ಲಿ ತನ್ನದೇ ಐತಿಹ್ಯಗಳನ್ನು ಹೊಂದಿದೆ. ರಾಮಾಯಣ, ಮಹಾಭಾರತ ಕಾಲದಿಂದಲೇ ಇದೇ ಪಂಪಾ ಸರೋವರ ಹಿಂದುಗಳ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ.

ಇನ್ನು ಈ ವಿವಾದದ ಬಗ್ಗೆ ಕೊಪ್ಪಳದ ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರವರು ಮಾತನಾಡಿದ್ದು, ಪಂಪಾ ಸರೋವರ ಗುಜರಾತ್ ರಾಜ್ಯದಲ್ಲಿದೆ ಎಂದು ಬಿಂಬಿಸಿಕೊಳ್ಳುವ ಕ್ರಮ ಸರಿಯಲ್ಲ. ರಾಜ್ಯ ಸರಕಾರ ಈ ಕುರಿತು ಸ್ಪಷ್ಟ ನಿಲುವು ತಾಳಿ ಅಂಜನಾದ್ರಿಯಲ್ಲಿ ಹನುಮ ಜನಿಸಿದ್ದು ಎಂದು ಹೇಳುವ ಜೊತೆಗೆ ಪಂಪಾ ಸರೋವರದ ಕುರಿತು ಬೇರೆ ರಾಜ್ಯಗಳು ಸುಖಾಸುಮ್ಮನೆ ತಗಾದೆ ತೆಗೆಯದಂತೆ ಎಚ್ಚರಿಕೆ ನೀಡಬೇಕು ಎಂದರು.

ಹೊಸ ವಿವಾದಕ್ಕೆ ನಾಂದಿ ಈಚೆಗೆ ಹನುಮನ ಜನ್ಮಸ್ಥಳ ಅಂಜನಾದ್ರಿ ಕುರಿತು ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳು ಇಲ್ಲದ ವಿವಾದ ಹುಟ್ಟುಹಾಕಿದ್ದವು. ಹನುಮ ಜನಿಸಿದ್ದು ತಮ್ಮಲ್ಲೇ ಎಂದು ಬಹಿರಂಗವಾಗಿ ಹೇಳಿಕೆ ಕೊಡುವ ಮೂಲಕ ಹನುಮ ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದವು. ಆದರೀಗ ಗುಜರಾತ್ ರಾಜ್ಯದ ಪ್ರವಾಸೋದ್ಯಮ ಇಲಾಖೆ ಪಂಪಾಸರೋವರ ಕುರಿತು ನೇರವಾಗಿ ಹೇಳದೆಯೇ ಪರೋಕ್ಷವಾಗಿ ಟ್ವೀಟ್ ಮಾಡುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ಅಂಜನಾದ್ರಿ ವಿಚಾರದಲ್ಲಿ ಸರಕಾರ ತನ್ನ ನಿಲುವನ್ನು ಈವರೆಗೂ ಸ್ಪಷ್ಟಪಡಿಸಿಲ್ಲ. ಅಭಿವದ್ಧಿಗೆ ಅನುದಾನ ಬಿಡುಗಡೆಗೊಳಿಸುವ ಮಾತುಗಳನ್ನು ಹೇಳಿದೆಯೇ ವಿನಃ ಹನುಮ ಜನ್ಮಸ್ಥಳ ಅಂಜನಾದ್ರಿ ಎಂದು ಅಕ್ಕ-ಪಕ್ಕದ ರಾಜ್ಯಗಳಿಗೆ ತಿಳುವಳಿಕೆ ಮೂಡಿಸುತ್ತಿಲ್ಲ. ಈಚೆಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಜಿಲ್ಲೆಯ ಜನಪ್ರತಿನಿಗಳ ಸಮ್ಮುಖದಲ್ಲಿ ಸಭೆ ಕರೆಯಲಾಗಿದ್ದರೂ ಅಲ್ಲಿಯೂ ವಿವಾದ ತಣ್ಣಗಾಗಿಸುವ ಪ್ರಯತ್ನ ನಡೆದಿಲ್ಲ. ಅಂಜನಾದ್ರಿ ಅಭಿವದ್ಧಿ ಕುರಿತು ಮಾತ್ರ ಚರ್ಚೆ ಮಾಡಲಾಗಿದೆ. ಇದರ ಮಧ್ಯದಲ್ಲಿ ಗುಜರಾತ್ ರಾಜ್ಯ ಪರೋಕ್ಷವಾಗಿ ಪಂಪಾ ಸರೋವರ ತಮ್ಮಲ್ಲಿದೆ ಎಂದು ಬಿಂಬಿಸಿಕೊಳ್ಳುತ್ತಿದೆ. ಇದೆಲ್ಲದಕ್ಕೂ ಸರಕಾರ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada