K Shivaram: ಕೊಪ್ಪಳದ ಫಸ್ಟ್ ಜಿಲ್ಲಾಧಿಕಾರಿ, ಇತಿಹಾಸದ ಪುಟಗಳಲ್ಲಿ ಅಜರಾಮರಾಗಿ ಉಳಿದ ಕೆ ಶಿವರಾಮ್
ಖ್ಯಾತ ನಟ, ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಮ್ ನಿಧನ: ಕೆ.ಶಿವರಾಮ್ ಅವರು ದಕ್ಷ ಆಡಳಿತಗಾರಾಗಿದ್ದರು. ಆಡಳಿತ ಮತ್ತು ಸೇವೆಗೆ ಮತ್ತೊಂದು ಹೆಸರು ಕೆ.ಶಿವರಾಮ್ ಎಂದು ಜನರು ಮಾತನಾಡುವ ಹಾಗೆ ಕಾರ್ಯ ನಿರ್ವಹಿಸಿ ನಾಡಿನಲ್ಲಿ ಉತ್ತಮ ಐಎಎಸ್ ಅಧಿಕಾರಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು. ಜೀವನ, ಪ್ರೀತಿ ಹಾಗೂ ವಿಶೇಷ ಮಾನವೀಯ ಗುಣಗಳನ್ನು ಹೊಂದಿದ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು. ಅವರ ನಿಧನದ ಸುದ್ದಿ ಕೇಳಿ ಕೊಪ್ಪಳ ಜಿಲ್ಲೆಯ ಜನರು ದುಃಖ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ, ಫೆಬ್ರವರಿ 29: ದಕ್ಷ ಅಧಿಕಾರಿ ಅಂತಲೇ ಹೆಸರಾಗಿದ್ದ ಸುಪ್ರಸಿದ್ದ ಕೆ.ಶಿವರಾಮ್ (K Shivaram) ಬಾರದ ಲೋಕಕ್ಕೆ ಹೋಗಿದ್ದಾರೆ. ಕೆ.ಶಿವರಾಮ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರು ಕೆಲಸ ಮಾಡಿದ ಜಿಲ್ಲೆಗಳ ಜನರು ಸಂತಾಪ ಸೂಚಿಸಿದ್ದಾರೆ. ನೆಚ್ಚಿನ ಅಧಿಕಾರಿ ತಮ್ಮ ಜಿಲ್ಲೆಯಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸುತ್ತಿದ್ದಾರೆ. ಇನ್ನು ಕೆ.ಶಿವರಾಮ್ ನಿಧನದ ಸುದ್ದಿ ಕೊಪ್ಪಳ ಜಿಲ್ಲೆಯ ಜನರಿಗೆ ಶಾಕ್ ನೀಡಿದಂತಾಗಿದೆ. ಯಾಕಂದ್ರೆ ಕೊಪ್ಪಳಕ್ಕೂ, ಕೆ.ಶಿವರಾಮ್ ಅವರಿಗೆ ತುಂಬಾ ನಂಟಿದೆ.
ಕೊಪ್ಪಳ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ ಕೆ.ಶಿವರಾಮ್
1997 ರಲ್ಲಿ ರಾಯಚೂರು ಜಿಲ್ಲೆಯನ್ನು ವಿಭಾಗಿಸಿ ನೂತನ ಕೊಪ್ಪಳ ಜಿಲ್ಲೆಯನ್ನು ರಚಿಸಲಾಗಿತ್ತು. ಈ ಸಮಯದಲ್ಲಿ ಕೊಪ್ಪಳ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಕೆ.ಶಿವರಾಮ್ ಅವರು ಅನ್ನೋದು ವಿಶೇಷ. ಕೊಪ್ಪಳ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಕೆ.ಶಿವರಾಮ್ ಅವರು ನಿಧನಕ್ಕೆ ಕೊಪ್ಪಳ ಜಿಲ್ಲಾಡಳಿತದ ಪರವಾಗಿ ಸದ್ಯ ಕೊಪ್ಪಳ ಜಿಲ್ಲಾಧಿಕಾರಿಯಾಗಿರುವ ನಲಿನ್ ಅತುಲ್ ಅವರು ಗೌರವಪೂರ್ವಕವಾಗಿ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಕೆ ಶಿವರಾಮ್ ನಿಧನಕ್ಕೆ ಕಾರಣವೇನು? ಅಂತಿಮ ದರ್ಶನ ಎಲ್ಲಿ?
ಕೆ.ಶಿವರಾಮ್ ಅವರು ಈ ನಾಡು ಕಂಡ ನೆಚ್ಚಿನ ಹಿರಿಯ ಐಎಎಸ್ ಅಧಿಕಾರಿಯಾಗಿದ್ದರು. 1997ರ ಅವಧಿಯಲ್ಲಿ ಅವಿಭಜಿತ ರಾಯಚೂರು ಜಿಲ್ಲೆಯಿಂದ ಕೊಪ್ಪಳವು ಬೇರ್ಪಡೆಯಾಗಿ ನೂತನ ಜಿಲ್ಲೆಯಾಗಿ ಉದಯವಾದಾಗ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರು ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ‘ಕೊಪ್ಪಳ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ’ ಎನ್ನುವ ವಿಶೇಷತೆಗೆ ಪಾತ್ರರಾಗಿದ್ದರು.
ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ಹೊತ್ತಿದ ಕೊಪ್ಪಳ ಜಿಲ್ಲೆಯನ್ನು ‘ನೂತನ ಜಿಲ್ಲೆ’ ಎಂದು ಸರ್ಕಾರವು ಘೋಷಿಸಲ್ಪಟ್ಟಾಗ ಜಿಲ್ಲೆಯ ಜನತೆಗೆ ಸಂಭ್ರಮದ ಜೊತೆಗೆ ಬಹಳಷ್ಟು ನಿರೀಕ್ಷೆಗಳಿರುತ್ತವೆ. ಆ ವೇಳೆ ಕೆ.ಶಿವರಾಮ್ ಅವರು ಜನರ ಸಂಭ್ರಮದ ಜೊತೆಗೆ ಬೆರೆತು ಹಲವಾರು ಸವಾಲುಗಳನ್ನು ಸಹ ಸಮರ್ಥವಾಗಿ ನಿರ್ವಹಣೆ ಮಾಡಿದ್ದರಿಂದ ಜಿಲ್ಲೆಯಾಗಿ ಘೋಷಣೆಯಾದ ಕೆಲವೇ ವರ್ಷಗಳಲ್ಲಿ ಕೊಪ್ಪಳ ಜಿಲ್ಲೆಯು ಜಿಲ್ಲಾಡಳಿತ ಭವನ ಕಾಣುವಂತಾಗಿದ್ದು ಕೂಡ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿದಿದೆ.
ಇದನ್ನೂ ಓದಿ: K Shivaram Passes Away: ನಟ, ರಾಜಕಾರಣಿ ಕೆ. ಶಿವರಾಮ್ ನಿಧನ; ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹೀರೋ
ಕೆ.ಶಿವರಾಮ್ ಅವರು ದಕ್ಷ ಆಡಳಿತಗಾರಾಗಿದ್ದರು. ಆಡಳಿತ ಮತ್ತು ಸೇವೆಗೆ ಮತ್ತೊಂದು ಹೆಸರು ಕೆ.ಶಿವರಾಮ್ ಎಂದು ಜನರು ಮಾತನಾಡುವ ಹಾಗೆ ಕಾರ್ಯ ನಿರ್ವಹಿಸಿ ನಾಡಿನಲ್ಲಿ ಉತ್ತಮ ಐಎಎಸ್ ಅಧಿಕಾರಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು. ಜೀವನ, ಪ್ರೀತಿ ಹಾಗೂ ವಿಶೇಷ ಮಾನವೀಯ ಗುಣಗಳನ್ನು ಹೊಂದಿದ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು.
ನೌಕರ ವರ್ಗದ ಬಗ್ಗೆ ಅಪಾರ ಕಾಳಜಿ ಹೊಂದಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಿರಿಯ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರ ನಿಧನದ ಸುದ್ದಿ ಕೇಳಿ ಕೊಪ್ಪಳ ಜಿಲ್ಲೆಯ ಜನರು ದುಃಖ ವ್ಯಕ್ತಪಡಿಸಿದ್ದಾರೆ. ಕೆ.ಶಿವರಾಮ್ ಅವರು ಜಿಲ್ಲಾಧಿಕಾರಿಗಳಾಗಿದ್ದ ವೇಳೆ ಸೇವೆಯಲ್ಲಿದ್ದ ಅಧಿಕಾರಿ ವರ್ಗದವರು ಸಹ ದುಃಖಿತರಾಗಿದ್ದಾರೆ. ಕೊಪ್ಪಳ ಜಿಲ್ಲಾಡಳಿತವು ಗೌರವಪೂರ್ವಕವಾಗಿ ಸಂತಾಪ ತಿಳಿಸುತ್ತದೆ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:14 pm, Thu, 29 February 24