
ಕೊಪ್ಪಳ, ಏಪ್ರಿಲ್ 22: ಜಿಲ್ಲೆಯ ಕನಕಗಿರಿಯಲ್ಲಿ ಸರ್ಕಾರಿ ಶಿಷ್ಟಾಚಾರಕ್ಕೆ ಎಳ್ಳುನೀರು ಬಿಟ್ಟ ಘಟನೆಯೊಂದು ನಡೆದಿದೆ. ಕನಕಗಿರಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ (Shivaraj Tangadagi) ಪುತ್ರ ಶಶಾಂಕ್ ನಡೆಸಿದ ದರ್ಬಾರ್ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದ ಈ ನಡೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಿನ್ನೆ ಕನಕಗಿರಿ ಉತ್ಸವದ ಪೂರ್ವಭಾವಿ ಸಭೆ ನಡೆಯಿತು. ಈ ವೇಳೆ ಸಚಿವ ಶಿವರಾಜ ತಂಗಡಗಿ ಅವರ ಪುತ್ರ ಶಶಾಂಕ್ ವೇದಿಕೆಯ ಮೇಲೆ ಕುಳಿತ್ತಿದ್ದರು, ಆದರೆ ಅದೇ ಸಭೆಯಲ್ಲಿ ಕ್ಷೇತ್ರದ ಜವಾಬ್ದಾರಿ ಹೊತ್ತಿರುವ ತಹಶೀಲ್ದಾರ್ ವಿಶ್ವನಾಥ್ ಮುರಡಿ ಮತ್ತು ತಾಲ್ಲೂಕು ಪಂಚಾಯತ್ ಇಓ ರಾಜಶೇಖರ್ಗೆ ಕುಳಿತುಕೊಳ್ಳಲು ಕುರ್ಚಿಯೇ ಇರಲಿಲ್ಲ.
ಸರಕಾರಿ ಶಿಷ್ಟಾಚಾರದ ಪ್ರಕಾರ ಸರಕಾರಿ ಸಭೆಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಆದ್ಯತೆ ಇರಬೇಕು. ಆದರೆ ಇಲ್ಲಿ ಸಚಿವರ ಪುತ್ರನಿಗೆ ‘ರಾಜ ಮರ್ಯಾದೆ’ ನೀಡಿದ ಜಿಲ್ಲಾಡಳಿತ, ಹಿರಿಯ ಅಧಿಕಾರಿಗಳು ವೇದಿಕೆ ಮೇಲೆ ನಿಲ್ಲುವಂತೆ ಮಾಡಿದೆ. ಇನ್ನು ಸಚಿವ ಶಿವರಾಜ್ ತಂಗಡಗಿ ಪುತ್ರ ಕುತಿರುವುದು ನನ್ನ ಗಮನಕ್ಕೆ ಇಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಸಚಿವ ಶಿವರಾಜ್ ತಂಗಡಗಿಗೆ ಎದೆ ನೋವು, ಆಸ್ಪತ್ರೆಗೆ ದಾಖಲು
ಸಚಿವರ ಮಗ ಎಂಬ ಒಂದೇ ಕಾರಣಕ್ಕೆ ಅಧಿಕಾರಿಗಳನ್ನು ಗೌರವವಿಲ್ಲದೆ ನಿಲ್ಲಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಚಿವರಿಗಿಂತ ಅವರ ಮಗನೇ ಪವರ್‌ಫುಲ್ ಆಗಿದ್ದಾರಾ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರ ಪುತ್ರನಿಗೆ ಏನು ಕೆಲಸ ಅನ್ನೋದು ಇದೀಗ ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಸರ್ಕಾರಿ ಅಧಿಕಾರಿಗಳೇ ತಾವು ನಿಂತ ಫೋಟೋಗಳನ್ನ ಸ್ಟೇಟಸ್ ಹಾಕೊಂಡಿದ್ದರು, ಅವರ ಪಕ್ಕದಲ್ಲಿಯೇ ಮಂತ್ರಿ ಮಗ ಕುರ್ಚಿಯಲ್ಲಿ ಕುಳಿತಿದ್ದಾನೆ, ಆದರೆ ಮೂವರು ಅಧಿಕಾರಿಗಳು ಮಾತ್ರ ಎದ್ದುನಿಂತಿದ್ದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ.
ಇನ್ನು ಈ ವಿಚಾರವಾಗಿ ಖುದ್ದು ಸಚಿವ ಶಿವರಾಜ್ ತಂಗಡಗಿ ಮಾತಾನಾಡಿದ್ದು, ಮಗ ಮಾಡಿದ್ದು ತಪ್ಪು. ಸರ್ಕಾರಿ ಕಾರ್ಯಕ್ರಮದ ಮೂಲೆಯಲ್ಲಿ ಕೂರಲು ಮಗನಿಗೆ ಅವಕಾಶವಿಲ್ಲ, ಅವನು ಅಲ್ಲಿ ಕೂತಿದ್ದೇ ತಪ್ಪು. ಮಗ ಜನ ಪ್ರತಿನಿಧಿ ಅಲ್ಲ, ನಾನು ಜನ ಪ್ರತಿನಿಧಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: 50 ಎಕರೆ ಸವಾಲು ಹಾಕಿದ ಬಿಜೆಪಿ ಮಾಜಿ ಶಾಸಕರಿಗೆ ವಿಡಿಯೋ ಬಿಡ್ಲಾ ಎಂದ ಸಚಿವ ತಂಗಡಗಿ
ಒಟ್ಟಿನಲ್ಲಿ ಕನಕಗಿರಿಯಲ್ಲಿ ನಡೆದ ಈ ಘಟನೆ ಜಿಲ್ಲಾಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಸಚಿವರ ಓಲೈಕೆಗೆ ಬಿದ್ದ ಅಧಿಕಾರಿಗಳು ತಮ್ಮ ಹುದ್ದೆಯ ಮರ್ಯಾದೆಯನ್ನು ಗಾಳಿಗೆ ತೂರಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ಮಗನ ರಾಜಕೀಯ ಭವಿಷ್ಯ ರೂಪಿಸಲು ಸಚಿವರೇ ಮಗನನ್ನ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದರಾ ಎನ್ನುವ ಅನುಮಾನಗಳು ಶುರುವಾಗಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.