ಜೀವರಕ್ಷಕ ‘108’ರ ಸಿಬ್ಬಂದಿಗೇ ಡಿಸೆಂಬರ್​ನಿಂದ ವೇತನವಿಲ್ಲ, ದೈನಂದಿನ ಖರ್ಚಿಗೆ ಹಣವಿಲ್ಲದೇ ಪರದಾಟ

| Updated By: Ganapathi Sharma

Updated on: Mar 22, 2024 | 8:12 AM

‘108’ ಸಿಬ್ಬಂದಿಗೆ ರಾಜ್ಯದಾದ್ಯಂತ ಕಳೆದ ಡಿಸೆಂಬರ್​​ನಿಂದ ವೇತನವನ್ನೇ ಪಾವತಿಸಲಾಗಿಲ್ಲ. ಗುತ್ತಿಗೆ ಪಡೆದ ಕಂಪನಿ ಸರ್ಕಾರದಿಂದ ಹಣ ಬಂದಿಲ್ಲ ಎಂದರೆ, ಸರ್ಕಾರದ ವತಿಯಿಂದ ಹಣ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಅತ್ತ, ಇನ್ನೂ ವೇತನ ಕೊಡದಿದ್ದರೆ ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

ಜೀವರಕ್ಷಕ ‘108’ರ ಸಿಬ್ಬಂದಿಗೇ ಡಿಸೆಂಬರ್​ನಿಂದ ವೇತನವಿಲ್ಲ, ದೈನಂದಿನ ಖರ್ಚಿಗೆ ಹಣವಿಲ್ಲದೇ ಪರದಾಟ
ಜೀವರಕ್ಷಕ ‘108’ರ ಸಿಬ್ಬಂದಿಗೇ ಡಿಸೆಂಬರ್​ನಿಂದ ವೇತನವಿಲ್ಲ
Follow us on

ಕೊಪ್ಪಳ, ಮಾರ್ಚ್ 22: ಅಪಘಾತವಾಗಿರಲಿ, ಬೇರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿರಲಿ ಜನರಿಗೆ ಮೊದಲು ನೆನಪಾಗುವುದು ‘108’ (108 Ambulance). ಇನ್ನು ತೊಂದರೆ ಎಂದು ಕರೆ ಬಂದರೆ, ಕೂಡಲೇ ಸ್ಥಳಕ್ಕೆ ಹೋಗಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವು ಕೂಡಾ ಇದೇ ‘108’ರ ಸಿಬ್ಬಂದಿ (108 Staff) . ಜೀವರಕ್ಷಕರಾಗಿ ಕೆಲಸ ಮಾಡುವ ‘108’ ಸಿಬ್ಬಂದಿ, ಇದೀಗ ತಾವೇ ಜೀವನ ನಡೆಸಲು ಪರದಾಡುತ್ತಿದ್ದಾರೆ. ಕಳೆದ ಡಿಸೆಂಬರ್ ತಿಂಗಳಿಂದ ವೇತನ ಸಿಗದೇ ಪರದಾಡುತ್ತಿದ್ದಾರೆ. ವೇತನ ನೀಡದೇ ಇದ್ದರೆ ತಮ್ಮ ಕೆಲಸ ಸ್ಥಗಿತ ಮಾಡಬೇಕಾಗುತ್ತದೆ ಅಂತ ಎಚ್ಚರಿಕೆ ನೀಡುತ್ತಿದ್ದಾರೆ.

ರಾಜ್ಯಾದಂತ ‘108’ ಸಿಬ್ಬಂದಿ ವೇತನವಿಲ್ಲದೇ ಪರದಾಟ

ರಾಜ್ಯದಲ್ಲಿ ಹಳ್ಳಿಯಿರಲಿ, ನಗರವಿರಲಿ, ಯಾರಿಗೆ ಏನೇ ಆರೋಗ್ಯ ಸಮಸ್ಯೆಯಾದರೂ, ಅಪಘಾತವಾದರೂ ಜನ ಮೊದಲು ಕರೆ ಮಾಡುವದು ‘108’ ಸಿಬ್ಬಂದಿಗೆ. ‘108’ರ ಸಿಬ್ಬಂದಿ ಕೂಡಾ ಜನರ ಕಷ್ಟಕ್ಕೆ ಪ್ರತಿನಿತ್ಯ ಸ್ಪಂಧಿಸುವ ಕೆಲಸ ಮಾಡುತ್ತಾರೆ. ತಮ್ಮ ನೋವುಗಳನ್ನು ಮರೆತು, ಜನರ ಜೀವವನ್ನು ಕಾಪಾಡುವ ಕೆಲಸವನ್ನು ಹಗಲಿರಳು ಅನ್ನದೆ ಮಾಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಕೂಡಾ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದರು. ಪ್ರತಿನಿತ್ಯ ಬೇರೆಯವರ ನೋವು ನಲಿವುಗಳಿಗೆ ಸ್ಪಂಧಿಸುವ ಸಿಬ್ಬಂದಿ ಇದೀಗ ತಾವೇ ಪರದಾಡುತ್ತಿದ್ದಾರೆ. ಆದರೆ ಅವರ ಸಂಕಷ್ಟಕ್ಕೆ ಮಾತ್ರ ಯಾರು ಸ್ಪಂದಿಸದೇ ಇರುವುದು ಅವರ ನೋವಿಗೆ ಕಾರಣವಾಗಿದೆ. ಹೌದು ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿರುವ ‘108’ ಸಿಬ್ಬಂದಿಗೆ ಕಳೆದ ಡಿಸೆಂಬರ್ ತಿಂಗಳಿಂದ ವೇತನ ಸಿಕ್ಕಿಲ್ಲಾ. ಒಂದು ತಿಂಗಳ ವೇತನ ಸಿಗದೇ ಇದ್ದರೆ ಸಾಕಷ್ಟು ತೊಂದರೆಗಳಾಗುತ್ತವೆ. ಯಾಕಂದರೆ ‘108’ ರಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಶ್ರೀಮಂತರಲ್ಲಾ. ಹೆಚ್ಚಿನ ಸಂಬಳವೂ ದೊರೆಯುವುದಿಲ್ಲ. ಬರೋ ಸಂಬಳದಲ್ಲಿಯೇ ಮನೆ ಬಾಡಿಗೆ, ಮಕ್ಕಳ ಶಾಲೆ ಫೀಸ್, ಹಾಲು, ತರಕಾರಿ ಅಂತ ಖರ್ಚು ಮಾಡಬೇಕು. ಆದ್ರೆ ಡಿಸೆಂಬರ್ ತಿಂಗಳಿಂದ ವೇತನ ಇಲ್ಲದೇ ಇರೋದರಿಂದ, ದೈನಂದಿನ ಖರ್ಚಿಗೂ ಕೂಡಾ ಹಣ ಇಲ್ಲದೇ ಸಿಬ್ಬಂದಿ ಪರದಾಡುತ್ತಿದ್ದಾರೆ. ಅವರಿವರ ಬಳಿ ಸಾಲ ಪಡೆದು ಖರ್ಚು ವೆಚ್ಚವನ್ನು ನಿಭಾಯಿಸುವಂತ ಸ್ಥಿತಿಗೆ ಬಂದಿದ್ದಾರೆ. ದಿನದ 24 ಗಂಟೆ ಸೇವೆ ನೀಡುವ ನಮಗೆ, ಇದೀಗ ದೈನಂದಿನ ಖರ್ಚಿಗೆ ಹಣ ಇಲ್ಲದಂತಾಗಿದೆ ಅಂತ ಡ್ರೈವರ್ ಆಗಿ ಕೆಲಸ ಮಾಡುವ ಬಸವರಾಜ್ ಅಳಲು ತೋಡಿಕೊಂಡಿದ್ದಾರೆ.

ಸರ್ಕಾರ – ಕಂಪನಿ ಗುದ್ದಾಟದಲ್ಲಿ ಸಿಬ್ಬಂದಿಗೆ ಸಂಕಷ್ಟ

ರಾಜ್ಯಾದ್ಯಂತ 750ಕ್ಕೂ ಹೆಚ್ಚು ‘108’ ವಾಹನಗಳಿವೆ. ಕೊಪ್ಪಳದಲ್ಲಿ 80 ಜನ ಸಿಬ್ಬಂದಿ ಸೇರಿದಂತೆ ರಾಜ್ಯಾದ್ಯಂತ ಬರೋಬ್ಬರಿ 3500 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಒಂದು ವಾಹನದಲ್ಲಿ ಓರ್ವ ಡ್ರೈವರ್ ಮತ್ತು ಸ್ಟಾಫ್ ನರ್ಸ್ ಇರ್ತಾರೆ. ಇನ್ನು ಸರ್ಕಾರ ‘108’ ಗುತ್ತಿಗೆಯನ್ನು ಜಿವಿಕೆ ಅನ್ನೋ ಕಂಪನಿಗೆ ನೀಡಿದೆ. ಕಂಪನಿ ಇವರಿಗೆಲ್ಲಾ ಸರಿಸುಮಾರು ತಿಂಗಳಿಗೆ 28 ಸಾವಿರ ವೇತನವನ್ನು ನೀಡುತ್ತದೆಯಂತೆ. ಆದ್ರೆ ಇದೀಗ ಡಿಸೆಂಬರ್ ತಿಂಗಳಿಂದ ವೇತನವನ್ನೇ ಕಂಪನಿ ನೀಡಿಲ್ಲ. ಕಂಪನಿಯ ಅಧಿಕಾರಿಗಳಿಗೆ ಕೇಳಿದರೆ, ಸರ್ಕಾರದಿಂದ ದುಡ್ಡು ಬಂದಿಲ್ಲಾ, ಬಂದ ಮೇಲೆ ನೀಡ್ತೇವೆ ಅಂತ ಹೇಳ್ತಿದ್ದಾರಂತೆ. ಇತ್ತ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕೇಳಿದ್ರೆ, ನಾವು ಕಂಪನಿಗೆ ಹಣ ನೀಡಿದ್ದೇವೆ ಅಂತ ಹೇಳ್ತಿದ್ದಾರಂತೆ. ಇಬ್ಬರ ಗುದ್ದಾಟದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಮಾತ್ರ ವೇತನ ಸಿಗದೇ ನಲಗುವಂತಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್​​​​​​ಫಾರ್ಮ್​​ ಸ್ಕ್ರೀನ್​ ಡೋರ್​​,​ ಗೇಟ್ ಅಳವಡಿಕೆ ಒತ್ತಡ

ರಾಜ್ಯಾದ್ಯಂತ ‘108’ ಸಿಬ್ಬಂದಿ ಈಗಾಗಲೇ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಯನ್ನು ಕಳಿಸಿದ್ದು, ತಮ್ಮ ವೇತನ ಆದಷ್ಟು ಬೇಗನೆ ಸಿಗುವಂತೆ ವ್ಯವಸ್ಥೆ ಮಾಡಬೇಕು ಅಂತ ಮನವಿ ಮಾಡಿದ್ದಾರೆ. ಇನ್ನು ಹತ್ತು ದಿನದಲ್ಲಿ ವೇತನ ಸಿಗದೇ ಇದ್ದರೆ ಸೇವೆ ಬಂದ್ ಮಾಡುವದು ಕೂಡಾ ಅನಿವಾರ್ಯವಾಗಬಹುದು ಅನ್ನೋ ಎಚ್ಚರಿಕೆಯನ್ನು ನೀಡಿದ್ದಾರೆ. ಹೀಗಾಗಿ ಗುತ್ತಿಗೆ ನೀಡಿರುವ ಕಂಪನಿ ಜೊತೆ ಮಾತನಾಡಿ ಸಿಬ್ಬಂಧಿಗೆ ವೇತನ ಸಿಗುವಂತಹ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ