ಕೊಪ್ಪಳ ಜಿಲ್ಲೆಯ ಜನರಿಗೆ ಸಿಹಿ-ಕಹಿ ಬಜೆಟ್: ಅಂಜನಾದ್ರಿಗೆ 100 ಕೋಟಿ, ಆರ್ಥಿಕ ಸಲಹೆಗಾರನ ಕ್ಷೇತ್ರಕ್ಕೆ ಭರ್ಜರಿ ಅನುದಾನ

| Updated By: ಗಣಪತಿ ಶರ್ಮ

Updated on: Feb 16, 2024 | 1:16 PM

Karnataka Budget 2024: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರರಾಗಿರುವ ಬಸವರಾಜ್ ರಾಯರೆಡ್ಡಿ ಅವರ ಕ್ಷೇತ್ರಕ್ಕೆ ಕರ್ನಾಟಕ ಬಜೆಟ್​​ನಲ್ಲಿ ಉತ್ತಮ ಅನುದಾನ ದೊರೆತಿದೆ. ಆದರೆ, ಒಟ್ಟಾರೆಯಾಗಿ ಕೊಪ್ಪಳ ಜಿಲ್ಲೆಗೆ ಸಿದ್ದರಾಮಯ್ಯ ಅವರು ಬಜೆಟ್​ನಲ್ಲಿ ಸಿಹಿ, ಕಹಿ ಎರಡನ್ನೂ ಕೊಟ್ಟಿದ್ದಾರೆ. ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಸೇರಿದಂತೆ ಬಜೆಟ್​ ಘೋಷಣೆಗಳ ವಿವರ ಇಲ್ಲಿದೆ.

ಕೊಪ್ಪಳ ಜಿಲ್ಲೆಯ ಜನರಿಗೆ ಸಿಹಿ-ಕಹಿ ಬಜೆಟ್: ಅಂಜನಾದ್ರಿಗೆ 100 ಕೋಟಿ, ಆರ್ಥಿಕ ಸಲಹೆಗಾರನ ಕ್ಷೇತ್ರಕ್ಕೆ ಭರ್ಜರಿ ಅನುದಾನ
ಅಂಜನಾದ್ರಿ ಬೆಟ್ಟ (ಸಂಗ್ರಹ ಚಿತ್ರ)
Follow us on

ಕೊಪ್ಪಳ, ಫೆಬ್ರವರಿ 16: ರಾಜ್ಯ ಸರ್ಕಾರದ ಬಜೆಟ್ (Karnataka Budget) ಮೇಲೆ ಇಂದು ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ (Koppal) ಜಿಲ್ಲೆಯ ಜನರು ಬೆಟ್ಟದಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದ್ರೆ ಎಲ್ಲಾ ನಿರೀಕ್ಷೆಗಳು ಸಾಕಾರವಾಗದಿದ್ದರೂ ಕೂಡಾ, ಕೆಲವು ಯೋಜನೆಗಳಿಗೆ ಸರ್ಕಾರ ಹಣ ನೀಡಿರುವುದು ಸಿಹಿಯಾಗಿದ್ದರೆ, ಜಿಲ್ಲೆಯ ಜನರ ಅನೇಕ ನಿರೀಕ್ಷಿತ ಯೋಜನೆಗಳಿಗೆ ಬಿಡಿಗಾಸು ಕೂಡಾ ನೀಡದೇ ಇರೋದು ಜಿಲ್ಲೆಯ ಜನರಿಗೆ ಸಿಹಿ ಕಹಿ ಅನುಭವ ನೀಡಿದೆ.

ಬಜೆಟ್​​ನಲ್ಲಿ ಕೊಪ್ಪಳ ಜಿಲ್ಲೆಗೆ ಸಿಕ್ಕಿದ್ದೇನು?

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ನಂತರ, ರಾಮನ ಬಂಟ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಅಭಿವೃದ್ದಿ ಮಾಡುವಂತೆ ದೊಡ್ಡ ಮಟ್ಟದ ಆಗ್ರಹವಿತ್ತು. ಹಿಂದಿನ ಬಿಜೆಪಿ ಸರ್ಕಾರ ಕೂಡಾ ಅನುಧಾನ ನೀಡಿದ್ರು ಕೂಡಾ ಬಿಡುಗಡೆಯಾಗಿರಲಿಲ್ಲಾ. ಆದ್ರೆ ಇಂದು ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಅಂಜನಾದ್ರಿಯ ಅಭಿವೃದ್ದಿಗೆ ಗ್ರೀನ್ ಸಿಗ್ನಲ್ ನೀಡಿದೆ. ಪೌರಾಣಿಕ ಮತ್ತು ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿರುವ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ದಿ ಪಡಿಸಲು 100 ಕೋಟಿ ರೂಪಾಯಿ ಹಣ ನೀಡಿದೆ.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರರಾಗಿರುವ ಬಸವರಾಜ್ ರಾಯರೆಡ್ಡಿ ಕ್ಷೇತ್ರಕ್ಕೆ ಸಿಎಂ ಹೆಚ್ಚಿನ ಅನುಧಾನವನ್ನು ನೀಡಿದ್ದು, ಆಪ್ತ ಸ್ನೇಹಿತನಿಗೆ ಅನು ದಾನದ ಉಡುಗರೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ 50 ಕೋಟಿ ವೆಚ್ಚದಲ್ಲಿ ಕೃಷಿ ಮಾರಾಟ ಇಲಾಖೆಯ ಮೂಲಕ ಶೀಥಲಗೃಹ ನಿರ್ಮಾಣಕ್ಕೆ ಹಣ ನೀಡಿದೆ.

ಬಸವರಾಜ್ ರಾಯರೆಡ್ಡಿ ಪ್ರತಿನಿಧಿಸುವ ಯಲಬುರ್ಗಾ ಮತ್ತು ಕುಕನೂರು ತಾಲೂಕಿನ 38 ಕೆರಗಳಲ್ಲಿ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ದಿಗೆ ಕೆರೆ ತುಂಬಿಸುವ ಯೋಜನೆಯಡಿ, 970 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

ಯಲಬುರ್ಗಾ ಮತ್ತು ಕುಕನೂರು ತಾಲೂಕಿನಲ್ಲಿ ಕೆರೆ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ರಾಜ್ಯದ ವಿವಿಧ ಜಿಲ್ಲೆಗಳ ಜೊತೆಗೆ 850 ಕೋಟಿ ಅನುಧಾನ ನೀಡಲಾಗಿದೆ.

ಇನ್ನು ತುಂಗಭದ್ರಾ ಜಲಾಯಶದಲ್ಲಿ ಹೋಳು ತುಂಬಿಕೊಂಡಿರುವದರಿಂದ, ನವಲಿ ಜಲಾಶಯ ನಿರ್ಮಾಣ ಮಾಡಬೇಕು. ಆ ಮೂಲಕ ಹರಿದು ಹೋಗ್ತಿರುವ ನೀರನ್ನು ತಡೆದು ಹಿಡಿಯಬೇಕು ಅನ್ನೋ ಆಗ್ರಹ ಅನೇಕ ವರ್ಷಗಳಿಂದ ಇದೆ. ಅದಕ್ಕಾಗಿ ಈಗಾಗಲೇ 15600 ಕೋಟಿ ವೆಚ್ಚದ ಡಿ ಪಿ ಆರ್ ಕೂಡಾ ಸಿದ್ದವಾಗಿದೆ. ಈ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದ್ದು, ಇದನ್ನು ಕೂಡಾ ಸಿಎಂ ತಮ್ಮ ಬಜೆಟ್ ನಲ್ಲಿ ಉಲ್ಲೇಖಿಸಿದ್ದಾರೆ. ನವಲಿ ಜಲಾಶಯ ನಿರ್ಮಾಣದ ಬಗ್ಗೆ ತೆಲಂಗಾಣ ಮತ್ತು ಆಂದ್ರಪ್ರದೇಶ ಸರ್ಕಾರದ ಜೊತೆ ಮಾತನಾಡಿ, ಯೋಜನೆ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ.

ಉನ್ನತ ಶಿಕ್ಷಣ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ವತಿಯಿಂದ ಕೊಪ್ಪಳ, ಬೀದರ್, ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಯಲ್ಲಿ, ವಿಶ್ಯವಿದ್ಯಾಲಯಗಳ ಘಟಕ ಕಾಲೇಜುಗಳನ್ನು ಅವಶ್ಯವಿರೋ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಸ್ಥಾಪಿಸಲಾಗುವದು ಎಂದು ಘೋಷಣೆ ಮಾಡಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ತೀವ್ರ ಅಸ್ವಸ್ಥೆಯಿಂದ ಬಳಲುತ್ತಿರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್ ಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದ್ದು, 187 ಕೋಟಿ ರೂಪಾಯಿ ವೆಚ್ಚದಲ್ಲಿ ಕೊಪ್ಪಳ ಸೇರಿದಂತೆ ಧಾರವಾಡ, ಮಂಡ್ಯ, ಮೈಸೂರು, ದಾವಣಗೆರೆಯಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲು ಸರ್ಕಾರ ಮುಂದಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಮೋಪೋಲಿಯಾ ಮತ್ತು ಥೈಲೈಸ್ಮಿಯಾ ರೋಗಿಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯಗಳ ಕೊರತೆಯಿರುವದರಿಂದ ಕಲಬುರಗಿ ಮತ್ತು ಕೊಪ್ಪಳದ ಐ ಸಿ ಡಿ ಟಿ ಕೇಂದ್ರಗಳ ಬಲವರ್ಧನೆಗೆ 7 ಕೋಟಿ ರೂಪಾಯಿ ಹಣವನ್ನು ಒದಗಿಸಲಾಗುವದು.

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪಿಸಲು ಸರ್ಕಾರ ಮುಂದಾಗಿದ್ದು, 2025-26 ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕೂಡಾ ಪ್ರಯೋಗಾಲಯ ಸ್ಥಾಪಿಸಲು ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ವೃದ್ಧರಿಗೆ ಅನ್ನ ಸುವಿಧಾ ಘೋಷಿಸಿದ ಸಿದ್ದರಾಮಯ್ಯ: ಮನೆ ಬಾಗಿಲಿಗೆ ಬರಲಿದೆ ಆಹಾರ ಧಾನ್ಯ

ಕೊಪ್ಪಳ, ಗದಗ, ಚಾಮರಾಜನಗರ ಜಿಲ್ಲೆಗಳಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳು ನಿರ್ಮಾಣವಾಗಿದ್ದು, ಈ ಆಸ್ಪತ್ರೆಗಳಿಗೆ ಅವಶ್ಯವಿರುವ ವೈದ್ಯಕಿಯ ಉಪಕರಣ ಮತ್ತು ಪಿಠೋಪಕರಣಗಳ ಖರೀದಿಗಾಗಿ 150 ಕೋಟಿ ಹಣ ನೀಡಲಾಗುವದು.

ಜಿಟಿಟಿಸಿ ಬಹುಕೌಶಲ್ಯ ಅಭಿವೃದ್ದಿ ಕೇಂದ್ರಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೊಪ್ಪಳ ತಾಲೂಕಿನ ತಳಕಲ್ ನಲ್ಲಿ ಮತ್ತು ಕಲಬುರಗಿ, ಮೈಸೂರು ಜಿಲ್ಲೆಯಲ್ಲಿ ಆರಂಭಿಸಲು350 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು.

ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್, ಗ್ರ್ಯಾಚುಯಿಟಿ: ಬಜೆಟ್​​ನಲ್ಲಿ ಸಿಎಂ ಘೋಷಣೆ

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸದ ಬಜೆಟ್ ನಲ್ಲಿ ಅಂಜನಾದ್ರಿಯ ಅಭಿವೃದ್ದಿಗೆ ನೂರು ಕೋಟಿ ಹಣ ನೀಡಿದ್ದು ಸೇರಿದಂತೆ ಕೆಲ ಯೋಜನೆಗಳಿಗೆ ಹಣ ನೀಡಿದ್ದು ಜಿಲ್ಲೆಯ ಜನರಿಗೆ ಖುಷಿ ತಂದಿದೆ. ಆದ್ರೆ ಜಿಲ್ಲೆಯಲ್ಲಿ ಇನ್ನು ಅನೇಕ ಏತ ನೀರಾವರಿ ಯೋಜನೆಗಳಿಗೆ ಬಿಡಿಗಾಸು ನೀಡಿಲ್ಲಾ. ಯಲಬುರ್ಗಾ ಮತ್ತು ಕುಕನೂರು ತಾಲೂಕು ಹೊರತು ಪಡಿಸಿ ಬೇರೆ ತಾಲೂಕಿನಲ್ಲಿರುವ ಕೆರೆ ತುಂಬಿಸಲು ಹಣ ನೀಡಿಲ್ಲಾ. ನೆರೆಯ ರಾಯಚೂರು, ವಿಜಯಪುರ ಜಿಲ್ಲೆಯ ವಿಮಾನ ನಿಲ್ದಾಣಗಳಿಗೆ ಅನುಧಾನ ನೀಡಿದ್ರು ಕೂಡಾ, ಕೊಪ್ಪಳ ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲಾ. ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ಯಾವುದೇ ನಗರದ ಅಭಿವೃದ್ದಿಗೆ ಹಣ ನೀಡದೆ ಇರುವುದು ಜಿಲ್ಲೆಯ ಜನರ ಸಿಟ್ಟಿಗೆ ಕಾರಣವಾಗಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ