ಗಂಗಾವತಿ ಕ್ಷೇತ್ರದಲ್ಲಿ ಬಗೆಹರಿಯದ ಕಾಂಗ್ರೆಸ್ ಬಣ ಬಡಿದಾಟ; ಸಿಎಂ ಮಾತಿಗೂ ಡೋಂಟ್ ಕೇರ್ ಅಂದ ನಾಯಕರು
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ಚುನವಾಣೆಯಲ್ಲಿ ಕೂಡ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಾರೆ. ಆದ್ರೆ, ಈ ಬಾರಿಯಾದರೂ ಕೊಪ್ಪಳದಲ್ಲಿ ಗೆಲ್ಲಬೇಕು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ. ಜೊತೆಗೆ ಸ್ವತಃ ಸಿದ್ದರಾಮಯ್ಯ, ಜಿದ್ದಿಗೆ ಬಿದ್ದು ತಮ್ಮ ಆಪ್ತನಿಗೆ ಟಿಕೆಟ್ ಕೊಡಿಸಿದ್ದರಿಂದ ಕೊಪ್ಪಳ ಕ್ಷೇತ್ರ ಸಿದ್ದರಾಮಯ್ಯನವರಿಗೂ ಪ್ರತಿಷ್ಟೆಯಾಗಿದೆ. ಆದ್ರೆ, ಜಿಲ್ಲೆಯಲ್ಲಿ ಕೆಲ ಪ್ರಮುಖ ನಾಯಕರ ಕಿತ್ತಾಟ, ಸಿಎಂಗೆ ತಲೆಬಿಸಿ ಹೆಚ್ಚಿಸಿದೆ.
ಕೊಪ್ಪಳ, ಮೇ.01: ಕೊಪ್ಪಳ ಕ್ಷೇತ್ರದ ಗಂಗಾವತಿಯಲ್ಲಿ ಕಾಂಗ್ರೆಸ್ ಎರಡು ಭಾಗವಾಗಿದೆ. ಒಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯ(Iqbal Ansari) ಬಣವಾಗಿದ್ದರೆ, ಇನ್ನೊಂದಡೆ ಮಾಜಿ ಎಂಎಲ್ಸಿ ಎಚ್ಆರ್ ಶ್ರೀನಾಥ್,(HR Srinath) ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಸೇರಿದಂತೆ ಅನೇಕ ಮುಖಂಡರು ಒಂದು ಬಣವಾಗಿದ್ದಾರೆ. ಎರಡು ಬಣಗಳು ಕೂಡ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಲೇ ಇದ್ದಾರೆ. ಎರಡು ಬಣಗಳನ್ನು ಒಂದುಗೂಡಿಸಲು ಜಿಲ್ಲೆಯ ನಾಯಕರು ಅನೇಕ ರೀತಿಯ ಕಸರತ್ತು ನಡೆಸಿದರೂ ಸಾಧ್ಯವಾಗಿಲ್ಲ. ಒಬ್ಬರ ಮುಖವನ್ನು ಇನ್ನೊಬ್ಬರು ನೋಡಲಾರದ ಸ್ಥಿತಿಗೆ ಎರಡು ಬಣದ ನಾಯಕರು ಬಂದಿದ್ದಾರೆ.
ಇನ್ನು ಗಂಗಾವತಿ ಕ್ಷೇತ್ರದಲ್ಲಿ ಎರಡು ಬಣದವರು ಕೂಡಾ ಪ್ರತ್ಯೇಕವಾಗಿಯೇ ಪ್ರಚಾರ ಮಾಡುತ್ತಿದ್ದಾರೆ. ಆದ್ರೆ, ನಿನ್ನೆ(ಏ.30) ರಾತ್ರಿ ಗಂಗಾವತಿ ಪಟ್ಟಣದಲ್ಲಿ ಪ್ರಜಾಧ್ವನಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಬಾಗಿಯಾಗಿದ್ದರು. ಜಿಲ್ಲೆಯ ನಾಯಕರು ಎರಡು ಬಣದ ನಾಯಕರನ್ನು ಕೂಡ ವೇದಿಕೆಗೆ ಕರೆಸುವಲ್ಲಿ ಸಫಲರಾಗಿದ್ದರು. ಆದ್ರೆ, ತಮ್ಮ ವಿರೋಧಿ ಬಣದ ನಾಯಕರು ವೇದಿಕೆ ಮೇಲೆ ಬಂದಿದ್ದು, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ತಮ್ಮ ಸ್ವಾಗತ ಭಾಷಣದಲ್ಲಿ ವಿರೋಧಿಗಳ ಹೆಸರನ್ನು ಕೂಡ ಅನ್ಸಾರಿ ಹೇಳಲಿಲ್ಲ. ಕೊನೆಗೆ ಶಿವರಾಜ್ ತಂಗಡಗಿ ಅನ್ಸಾರಿ ಬಣದ ನಾಯಕರನ್ನು ಸ್ವಾಗತ ಮಾಡಿದರು.
ಇದನ್ನೂ ಓದಿ:ಕೊಪ್ಪಳ ಲೋಕಸಭಾ ಕ್ಷೇತ್ರ ಮಾಜಿ ಸಂಸದನಿಗೆ ಗಾಳ ಹಾಕಿದ ಬಿಜೆಪಿ ನಾಯಕರು
ಇನ್ನು ಭಾಷಣದಲ್ಲಿ ಕೂಡ ಅನ್ಸಾರಿ, ಕೆಲವರು ಜನಾರ್ಧನ ರೆಡ್ಡಿ ಜೊತೆ ಡೀಲ್ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು ಇದ್ದಾರೆ. ಅವರಿಂದ ಪಕ್ಷಕ್ಕೆ ಹಾನಿಯಾಗುತ್ತೆ ಎಚ್ಚರ ಎಂದು ಹೇಳಿದರು. ವೇದಿಕೆಯ ಮೇಲೆ ತಮ್ಮನ್ನು ಉದ್ದೇಶಿಸಿಯೇ ಅನ್ಸಾರಿ ಮಾತನಾಡಿದ್ದ ಮಾತು ಎಚ್ಆರ್ ಶ್ರೀನಾಥ್ ಸೇರಿದಂತೆ ಅನ್ಸಾರಿ ವಿರೋಧಿ ಬಣದವರ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಎಚ್ಆರ್ ಶ್ರೀನಾಥ್ ಭಾಷಣ ಮಾಡಲು ಮುಂದಾಗಿದ್ದರು, ಆಗ ಅನ್ಸಾರಿ ಬೆಂಬಲಿಗರು ಭಾಷಣಕ್ಕೆ ಅಡ್ಡಿ ಪಡಿಸುವ ಕೆಲಸ ಮಾಡಿ, ಕುರ್ಚಿಗಳನ್ನು ಎತ್ತಿ ಎಸೆದು ಕೂಗಾಟ, ಚೀರಾಟ ನಡೆಸಿದರು. ಹೀಗಾಗಿ ಎರಡೇ ನಿಮಿಷಕ್ಕೆ ಎಚ್ಆರ್ ಶ್ರೀನಾಥ್ ತಮ್ಮ ಭಾಷಣ ಮೊಟಕು ಗೊಳಿಸಿದರು.
ಇಕ್ಬಾಲ್ ಅನ್ಸಾರಿ ಅಸಮಾಧಾನಕ್ಕೆ ಕಾರಣವಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಚ್ ಆರ್ ಶ್ರೀನಾಥ್ ಸೇರಿದಂತೆ ಅನೇಕರು ಜನಾರ್ಧನ ರೆಡ್ಡಿ ಜೊತೆಗೆ ಡೀಲ್ ಮಾಡಿಕೊಂಡು ತನ್ನನ್ನು ಸೋಲಿಸಿದ್ದಾರೆಂದು. ಹೀಗಾಗಿ ಅವಕಾಶ ಸಿಕ್ಕಾಗಲೆಲ್ಲ ಅನ್ಸಾರಿ, ವಿರೋಧಿ ಬಣದವರ ವಿರುದ್ದ ಗುಡುಗುತ್ತಲೇ ಇದ್ದಾರೆ. ಇನ್ನೊದಂಡೆ ಅನ್ಸಾರಿ ವಿರುದ್ದ ಎಚ್ ಆರ್ ಶ್ರೀನಾಥ್ ಕೂಡ ಹರಿಹಾಯುವ ಕೆಲಸ ಮಾಡುತ್ತಲೇ ಇದ್ದಾರೆ. ಆದ್ರೆ, ನಾಯಕರ ಕಿತ್ತಾಟ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರಿಗೆ ಮುಜುಗರ ತರುವಂತಾಗಿದೆ.
‘ಇನ್ನು ಸಿದ್ದರಾಮಯ್ಯ, ಕೊಪ್ಪಳ ಕ್ಷೇತ್ರದಲ್ಲಿ ತಮ್ಮ ಆಪ್ತ ರಾಜಶೇಖ ಹಿಟ್ನಾಳ್ಗೆ ಟಿಕೆಟ್ ಕೊಡಿಸಿದ್ದಾರೆ. ಈ ಬಾರಿ ಹಿಟ್ನಾಳ್ ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ಎಲ್ಲಾ ನಾಯಕರಿಗೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಈ ಬಾರಿಯಾದರೂ ಗೆಲ್ಲಬೇಕು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ಆದ್ರೆ, ಗಂಗಾವತಿ ಕ್ಷೇತ್ರದಲ್ಲಿ ನಡೆಯುತ್ತಿರುವ ಬಣ ಬಡಿದಾಟ, ಇದೀಗ ನಾಯಕರ ತಲೆಬಿಸಿ ಹೆಚ್ಚಿಸುತ್ತಿದೆ. ಪ್ರತಿಷ್ಟೆಯನ್ನು ಬಿಟ್ಟು ಎರಡು ಬಣಗಳು ಕೂಡಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಬೇಕು ಎಂದು ಸ್ವತಃ ಸಿದ್ದರಾಮಯ್ಯ ಹೇಳಿದರೂ ಕೂಡ, ಎರಡು ಬಣಗಳ ನಾಯಕರು ತಮ್ಮ ಜಿದ್ದು ಬಿಡುತ್ತಿಲ್ಲ. ಇದು ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ಸೇರಿದಂತೆ ನಾಯಕರಿಗೆ ತಲೆಬಿಸಿ ಹೆಚ್ಚಿಸಿದೆ. ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗುತ್ತಾ ಎನ್ನುವ ಆತಂಕಕ್ಕೆ ಕಾರಣವಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ