ಗಂಗಾವತಿಯಲ್ಲಿ ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ರಫ್ತು: ಪತ್ತೆಯಾಗದ ಆರೋಪಿಗಳು, ಜಿಲ್ಲಾಧಿಕಾರಿ ಹೇಳಿದ್ದೇನು?
ಕೊಪ್ಪಳ ಜಿಲ್ಲೆಯ ಗಂಗಾವತಿಯ ಕನಕಗಿರಿ ರಸ್ತೆಯಲ್ಲಿನ ಸರ್ಕಾರಿ ಎಪಿಎಂಸಿ ಗೋದಾಮಿನಿಂದ ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ರಫ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿ 15 ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ಹಾಗಾಗಿ ಪೊಲೀಸರು ಪ್ರಭಾವಿಗಳ ಒತ್ತಡಕ್ಕೆ ಮಣಿದರಾ ಎಂಬ ಆರೋಪ ಕೇಳಿ ಬರುತ್ತಿವೆ.

ಕೊಪ್ಪಳ, ಸೆಪ್ಟೆಂಬರ್ 14: ಜಿಲ್ಲೆಯ ಗಂಗಾವತಿಯ ಕನಕಗಿರಿ ರಸ್ತೆಯಲ್ಲಿನ ಸರ್ಕಾರಿ ಎಪಿಎಂಸಿ ಗೋದಾಮಿನಿಂದ ಅನ್ನಭಾಗ್ಯ (Anna Bhagya) ಯೋಜನೆಯ ಅಕ್ಕಿ ವಿದೇಶಕ್ಕೆ ರಫ್ತು (Rice Smuggling) ಮಾಡುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಲಾಲ್ ಎನ್ನುವ ಬ್ರಾಂಡ್ ಹೆಸರಿನ ಪ್ಯಾಕೆಟ್ಗೆ ಅನ್ನಭಾಗ್ಯ ಅಕ್ಕಿ ತುಂಬಿಸಿ ವಿದೇಶಕ್ಕೆ ರಫ್ತು ಮಾಡುತ್ತಿತ್ತು. ಈ ಕುರಿತಾಗಿ ದೂರು ದಾಖಲಾಗಿ ಹದಿನೈದು ದಿನ ಕಳೆದಿದೆ. ಇದುವರೆಗೂ ಆರೋಪಿಗಳ ಪತ್ತೆಯಿಲ್ಲ. ಹೀಗಾಗಿ ಪ್ರಭಾವಿಗಳ ಒತ್ತಡಕ್ಕೆ ಪೊಲೀಸರು ಮಣಿದರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ರಫ್ತು ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಸರ್ಕಾರಿ ಗೋದಾಮಿನ ಕಿರಿಯ ಸಹಾಯಕ ಸೋಮಶೇಖರ್ ರನ್ನ ಅಮಾನತ್ತು ಮಾಡಲಾಗಿತ್ತು. ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ್ರನ್ನು ವರ್ಗಾವಣೆ ಮಾಡಲಾಗಿತ್ತು. ರೈಸ್ ಮಿಲ್ ಮಾಲಿಕ ಉಮೇಶ್ ಸಿಂಗನಾಳ ಹಾಗೂ ಗೋದಾಮಿನ ಹೊರಗುತ್ತಿಗೆ ನೌಕರ ಮಹಮದ್ ಜುಬೇರ್ ನಾಪತ್ತೆ ಆಗಿದ್ದಾರೆ.
ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಕೊಪ್ಪಳದಿಂದ ದುಬೈಗೆ ಕಳ್ಳ ಸಾಗಾಟ? ‘ಟಿವಿ9’ ವರದಿ ಬೆನ್ನಲ್ಲೇ ನಾಲ್ವರ ವಿರುದ್ಧ ಎಫ್ಐಆರ್
ಮೊದಲು ಕಿರಿಯ ಸಹಾಯಕ ಸೋಮಶೇಖರ್ ಹಾಗೂ ರೈಸ್ ಮಿಲ್ ಮಾಲೀಕ, ಲಾರಿ ಮಾಲೀಕ, ಲಾರಿ ಚಾಲಕನ ಮೇಲೆ ಮಾತ್ರ ದೂರು ದಾಖಲಾಗಿತ್ತು. ಪ್ರಕರಣ ತೀವೃತೆ ಪಡೆಯುತ್ತಿದ್ದಂತೆ ರೈಸ್ ಮಿಲ್ ಮಾಲೀಕರ ಹೆಸರು ಸೇರಿಸಿ ಗಂಗಾವತಿ ನಗರ ಠಾಣೆಗೆ ಶಿರೇಸ್ತೇದಾರ ಸುಹಾಸ್ ಮತ್ತೆ ದೂರು ನೀಡಿದ್ದ. ದೂರು ದಾಖಲಾಗಿ ಹದಿನೈದು ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ.
ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಹೇಳಿದ್ದಿಷ್ಟು
ಈ ಕುರಿತಾಗಿ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಪ್ರತಿಕ್ರಿಯಿಸಿದ್ದು, ಇಸಿ ಆ್ಯಕ್ಟ್ ಅಡಿ ಈಗಾಗಲೇ 330 ಟನ್ ಅನ್ನಭಾಗ್ಯ ಅಕ್ಕಿ ಜಪ್ತಿ ಮಾಡಿದ್ದೇವೆ. ಗೋದಾಮು ಮ್ಯಾನೇಜರ್ನನ್ನು ಅಮಾನತು ಮಾಡಲಾಗಿದೆ. ಆಹಾರ ಇಲಾಖೆಯ ಡಿಡಿ ವರ್ಗಾವಣೆ ಮಾಡಲಾಗಿದೆ. ರೈಸ್ ಮಿಲ್ ಮಾಲೀಕರು, ಹೊರಗುತ್ತಿಗೆ ನೌಕರರ ವಿರುದ್ಧ ಕೇಸ್ ಹಾಕಲಾಗಿದೆ ಎಂದರು.
ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಸಾಗಾಟ ಲಾರಿಗಳ ಮುಷ್ಕರ ವಾಪಸ್: ಬಾಕಿ ಹಣ ಬಿಡುಗಡೆ ಘೋಷಣೆ ಬೆನ್ನಲ್ಲೇ ಕ್ರಮ
ನಾಪತ್ತೆಯಾಗಿರುವ ಮತ್ತಿಬ್ಬರಿಗಾಗಿ ಪೊಲೀಸರಿಂದ ಹುಡುಕಾಟ ನಡೆದಿದ್ದು, ಆರೋಪಿಗಳನ್ನು ಅರೆಸ್ಟ್ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಮಾನತುಗೊಂಡ ಸೋಮಶೇಖರ್ ವಿರುದ್ಧ ಇಲಾಖೆ ತನಿಖೆ ನಡೀತಿದೆ. ಅವರ ಪಾತ್ರ ಕಂಡು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.