ಮಾರ್ಚ್ 11, 12ರಂದು ಕೊಪ್ಪಳ ಜಿಲ್ಲೆಯ ಆನೆಗೊಂದಿ ಉತ್ಸವ: ಶಾಸಕ ಜನಾರ್ದನ ರೆಡ್ಡಿ ಮಾಹಿತಿ
ಮಾರ್ಚ್ 11, 12ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ‘ಆನೆಗೊಂದಿ ಉತ್ಸವ’ ನಡೆಯಲಿದೆ ಎಂದು ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಮಾಹಿತಿ ನೀಡಿದ್ದಾರೆ. ಆನೆಗೊಂದಿ ಉತ್ಸವ ಈ ಭಾಗದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿರಿಮೆ ಸಾರುವ ಹೆಮ್ಮೆಯ ಆಚರಣೆಯಾಗಿದೆ. ಆನೆಗೊಂದಿ ವಿಜಯ ನಗರ ಅರಸರ ಮೊದಲ ರಾಜಧಾನಿಯಾಗಿತ್ತು.
ಕೊಪ್ಪಳ, ಫೆಬ್ರವರಿ 17: ಕನ್ನಡ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಮಾರ್ಚ್ 11, 12ರಂದು ಜಿಲ್ಲೆಯ ಗಂಗಾವತಿ ತಾಲೂಕಿನ ‘ಆನೆಗೊಂದಿ ಉತ್ಸವ’ (anegundi utsava) ನಡೆಯಲಿದೆ ಎಂದು ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ಸವಕ್ಕೆ ಸ್ಥಳೀಯ, ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರು ಬರುತ್ತಾರೆ. ಆನೆಗೊಂದಿ ವಿಜಯ ನಗರ ಅರಸರ ಮೊದಲ ರಾಜಧಾನಿಯಾಗಿತ್ತು. ಆನೆಗೊಂದಿ ಉತ್ಸವ ಈ ಭಾಗದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿರಿಮೆ ಸಾರುವ ಹೆಮ್ಮೆಯ ಆಚರಣೆಯಾಗಿದೆ.
ನಾನು ವಾಪಸ್ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ
ಬಿಜೆಪಿ ಜೊತೆ ಕೆಆರ್ಪಿಪಿ ವಿಲೀನ ವಿಚಾರವಾಗಿ ಮಾತನಾಡಿದ ಅವರು, ನಾನು ವಾಪಸ್ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಕೆಆರ್ಪಿಪಿಯನ್ನು ಬಿಜೆಪಿಯಲ್ಲಿ ವಿಲೀನ ಕೂಡ ಮಾಡುವುದಿಲ್ಲ. ಆದರೆ ದೇಶದ ಅಭಿವೃದ್ಧಿಗೆ ಬಿಜೆಪಿ ಜತೆ ಹೊಂದಾಣಿಕೆಗೆ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಕನಸು ಬಿದ್ದರೂ ನಾನು ಕಾಂಗ್ರೆಸ್ಗೆ ಹೋಗುತ್ತೇನೆ ಎನ್ನುವುದು ಸುಳ್ಳು
ನನ್ನ ಜೊತೆ ಚರ್ಚಿಸಿರುವ ಹಿರಿಯರಿಗೆ ನನ್ನ ವಿಚಾರವನ್ನು ಹೇಳಿದ್ದೇನೆ. ನನ್ನ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ 20 ವರ್ಷಗಳ ಸಂಬಂಧವಿದೆ. ಆದರೆ ನಾನು ಬಿಜೆಪಿಗೆ ಆಗಲಿ, ಕಾಂಗ್ರೆಸ್ಗೆ ಆಗಲಿ ಹೋಗುವುದಿಲ್ಲ.
ಇದನ್ನೂ ಓದಿ: ಕೊಪ್ಪಳ ಜಿಲ್ಲೆಯ ಜನರಿಗೆ ಸಿಹಿ-ಕಹಿ ಬಜೆಟ್: ಅಂಜನಾದ್ರಿಗೆ 100 ಕೋಟಿ, ಆರ್ಥಿಕ ಸಲಹೆಗಾರನ ಕ್ಷೇತ್ರಕ್ಕೆ ಭರ್ಜರಿ ಅನುದಾನ
ನಾನು ಕಾಂಗ್ರೆಸ್ಗೆ ಹೋಗ್ತೇನೆ ಅಂತಾ ಕನಸು ಬಿದ್ದರೂ ಅದು ಸುಳ್ಳು. ರಾಜ್ಯಸಭೆ ಚುನಾವಣೆ ಬಗ್ಗೆ ನನ್ನ ಜೊತೆ ಯಾರೂ ಮಾತನಾಡಿಲ್ಲ. ಕ್ಷೇತ್ರಕ್ಕೆ ಅನುದಾನ ನೀಡಲು ಸಿಎಂ ಸಿದ್ದರಾಮಯ್ಯ ತಾರತಮ್ಯ ಮಾಡುತ್ತಿಲ್ಲ ಎಂದಿದ್ದಾರೆ.
ಮಾರ್ಚ್ 02 ಮತ್ತು 03 ರಂದು ‘ಕನಕಗಿರಿ ಉತ್ಸವ’
‘ಆನೆಗೊಂದಿ ಉತ್ಸವ’ಕ್ಕೂ ಮುಂಚೆ ಅಂದರೆ ಮಾರ್ಚ್ 02 ಮತ್ತು 03 ರಂದು ಐತಿಹಾಸಿಕ ‘ಕನಕಗಿರಿ ಉತ್ಸವ’ ನಿಗದಿ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಉತ್ಸವ ನಡೆಯಲಿದೆ. ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವ ಸಿದ್ದತಾ ಸಭೆ ಮಾಡಲಾಗಿದ್ದು, ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಉತ್ಸವದ ಲೋಗೋ ಹಾಗೂ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಸಭೆಯಲ್ಲಿ ಉತ್ಸವದ ತಯಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಯಾರನ್ನು ದಯವಿಟ್ಟು ಟಾರ್ಗೆಟ್ ಮಾಡಬೇಡಿ: ಸಚಿವ ಶಿವರಾಜ್ ತಂಗಡಗಿ
ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಶಿವರಾಜ್ ತಂಗಡಗಿ, ನಾನು ಕೂಡ ಎಸ್ಸಿ ಜನಾಂಗದಲ್ಲಿದ್ದೇನೆ, ಮೀಸಲಾತಿ ಕ್ಷೇತ್ರದಿಂದ ಗೆದ್ದಿದ್ದೇನೆ. ದಯವಿಟ್ಟು ನಮಗೆ ತಾರತಮ್ಯ ಮಾಡಬೇಡಿ. ಯಾರನ್ನು ದಯವಿಟ್ಟು ಟಾರ್ಗೆಟ್ ಮಾಡಬೇಡಿ. ಟಾರ್ಗೆಟ್ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತವಿದೆ. ಅಂಬೇಡ್ಕರ್ ಒಂದು ಸಮಾಜಕ್ಕೆ ಮಾತ್ರ ಸೀಮಿತವಲ್ಲ. ಅವರು ಎಲ್ಲರಿಗೂ ಸೇರಿದವರು. ಗ್ರಾಮದಲ್ಲಿ ಹೋರಾಟದ ಜೊತೆಗೆ ಶಾಂತಿ ಸಹಬಾಳ್ವೆತೆಯಿಂದ ಇರಬೇಕು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.