ಕೊಪ್ಪಳ: ಬಂಗಾರ ಕದ್ದು ಕಲ್ಲು ಕೊಟ್ಟು ಹೋದ ನಕಲಿ ಪೊಲೀಸರು! ಚಿನ್ನಾಭರಣ ಕಳೆದುಕೊಂಡು ಮಹಿಳೆ ಕಂಗಾಲು
ಪೊಲೀಸರ ಸೋಗಿನಲ್ಲಿ ಬಂದ ವಂಚಕರನ್ನು ಅರಿಯದೇ ಮಹಿಳೆಯೊಬ್ಬರು ಚಿನ್ನಾಭರಣ ಕಳೆದುಕೊಂಡ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ನಡೆದಿದೆ. ಬಂಗಾರದ ಚೈನ್ ಅನ್ನು ಭದ್ರವಾಗಿ ಕಟ್ಟಿಕೊಡುತ್ತೇವೆಂದು ಮಹಿಳೆಗೆ ಕಲ್ಲು ಕಟ್ಟಿಕೊಟ್ಟು ಯಾಮಾರಿಸಲಾಗಿದೆ. ಮನೆಗೆ ತೆರಳಿ ನೋಡಿದ ಮಹಿಳೆ ಕಲ್ಲುಗಳನ್ನು ಕಂಡು ಆಘಾತಗೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಪ್ಪಳ, ಫೆಬ್ರವರಿ 18: ಮೋಸ ಹೋಗುವವರು ಇರುವ ವರಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಇತ್ತೀಚಿಗಂತೂ ವಂಚಕರು ಜನರನ್ನು ಮೋಸ ಮಾಡಲು ಹತ್ತಾರು ವಾಮಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಪೊಲೀಸರ ಹೆಸರಲ್ಲಿ ಕೂಡಾ ವಂಚನೆ ಮಾಡುವ ಪ್ರಕರಣಗಳು ಇದೀಗ ಹೆಚ್ಚಾಗುತ್ತಿವೆ. ಕೊಪ್ಪಳದಲ್ಲಿ ಪೊಲೀಸರ ಹೆಸರು ಹೇಳಿಕೊಂಡು ವಂಚಕರು ಮಹಿಳೆಯ ಬಂಗಾರದ ಆಭರಣ ಕದ್ದು, ಕಲ್ಲು ಕೊಟ್ಟು ಕಳುಹಿಸಿದ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ನಿವಾಸಿ ಸುಮಾ ಅಲಬೂರ ಎಂಬವರ ಒಂದೂವರೆ ತೊಲೆಯ ಬಂಗಾರದ ಸರವನ್ನು ಪೊಲೀಸರ ಸೋಗಿನಲ್ಲಿ ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಪೊಲೀಸರ ಸೋಗಿನಲ್ಲಿ ಬಂದ ಕಳ್ಳರು
ಸೋಮವಾರ ಮಧ್ಯಾಹ್ಮ ಸುಮಾ ಒಬ್ಬರೇ ಮನೆಯಿಂದ ಬ್ಯಾಂಕ್‌ಗೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಇಬ್ಬರು ಬಂದು, ತಾವು ಪೊಲೀಸ್ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದಾರೆ. ಪಟ್ಟಣದಲ್ಲಿ ಕಳ್ಳತನದ ಹಾವಳಿ ಹೆಚ್ಚಾಗಿದೆ. ಆಭರಣ ಮೈಮೇಲೆ ಧರಿಸಿ ಓಡಾಡಬೇಡಿ. ಹೀಗೆ ಓಡಾಡಿದರೆ ಯಾರಾದರೂ ಕಳ್ಳರು ಕದ್ದು ಪರಾರಿಯಾಗುತ್ತಾರೆ ಎಂದು ಹೇಳಿದ್ದಾರೆ.
ಅನುಮಾನಗೊಂಡ ಮಹಿಳೆ, ನೀವು ಪೊಲೀಸ್ ಸಮವಸ್ತ್ರದಲ್ಲಿಲ್ಲವಲ್ಲಾ ಎಂದಿದ್ದಾರೆ. ಪೊಲೀಸ್ ಸಮವಸ್ತ್ರದಲ್ಲಿ ಬಂದರೆ ಕಳ್ಳರು ಸಿಗುವುದಿಲ್ಲ. ಆದ್ದರಿಂದ ಆ ಬಟ್ಟೆ ಹಾಕಿಲ್ಲ ಎಂದು ಕಳ್ಳರು ಮಹಿಳೆಗೆ ಸಮಜಾಯಿಷಿ ಹೇಳಿ ನಂಬಿಸಿದ್ದಾರೆ. ಪಕ್ಕದಲ್ಲಿದ್ದ ಇನ್ನೊಬ್ಬ ವ್ಯಕ್ತಿಗೆ ಇದೇ ರೀತಿ ಹೇಳಿ ಆತ ಬಿಚ್ಚಿಕೊಟ್ಟ ಉಂಗುರವನ್ನು ಪೇಪರ್ ಹಾಳೆಯಲ್ಲಿ ಸುತ್ತಿ ಮರಳಿ ಕೊಟ್ಟಿದ್ದಾರೆ.
ಬಳಿಕ ಸುಮಾ ಅವರ ಕೊರಳಲ್ಲಿದ್ದ ಬಂಗಾರದ ಸರವನ್ನು ಅವರಿಂದ ಪಡೆದು, ಪೇಪರ್ ಹಾಳೆಯಲ್ಲಿ ಮಡಚಿಕೊಡುವುದಾಗಿ ನಂಬಿಸಿ ಕಲ್ಲು ಸುತ್ತಿದ ಹಾಳೆಯ ಕವರ್ ನೀಡಿ ಮನೆಯಲ್ಲಿ ಭದ್ರವಾಗಿ ಇರಿಸುವಂತೆ ಹೇಳಿ ಸರ ಕದ್ದು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ಅಂಗನವಾಡಿಯಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿ ಸಾವು!
ಮಹಿಳೆ ಮನೆಗೆ ಹೋಗಿ ಹಾಳೆ ಬಿಚ್ಚಿ ನೋಡಿದಾಗ ಅದರಲ್ಲಿ ಕಲ್ಲುಗಳು ಇರುವುದು ಕಂಡು ಕಂಗಾಲಾಗಿದ್ದಾರೆ. ಕೂಡಲೇ ಕುಕನೂರು ಪೋಲಿಸ್ ಠಾಣೆಗೆ ತೆರಳಿ ನಡೆದ ವಿಷಯ ತಿಳಿಸಿದ್ದಾರೆ. ಪೊಲೀಸರ ಸೋಗಿನಲ್ಲಿ ಕಳ್ಳರು ತೋರಿದ ಚಳಕದಿಂದ ಸುಮಾ ಆತಂಕಗೊಂಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.