ಕೊಪ್ಪಳ: ಅಂಗನವಾಡಿಯಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿ ಸಾವು!
ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದ ಅಂಗನವಾಡಿಯಲ್ಲಿ ಆಟವಾಡುತ್ತಿದ್ದ ಐದು ವರ್ಷದ ಅಲಿಯಾ ಮಹ್ಮದ್ ರಿಯಾಜ್ ಎಂಬ ಬಾಲಕಿ ದಿಢೀರನೆ ಮೃತಪಟ್ಟಿದ್ದಾಳೆ. ಆರಂಭದಲ್ಲಿ ಅಂಗನವಾಡಿ ಸಿಬ್ಬಂದಿಯನ್ನು ದೂಷಿಸಿದ್ದ ಪೋಷಕರು, ವೈದ್ಯರ ಪರೀಕ್ಷೆಯ ನಂತರ ಬಾಲಕಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಸಾವು ಸಂಭವಿಸಿದೆ ಎಂದು ತಿಳಿದುಕೊಂಡಿದ್ದಾರೆ. ಬಾಲಕಿಯ ಅಕಾಲಿಕ ಮರಣದಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.

ಕೊಪ್ಪಳ, ಫೆಬ್ರವರಿ 18: ಇತ್ತೀಚೆಗೆ ಚಿಕ್ಕ ಮಕ್ಕಳು, ಯುವಕರು ಅಕಾಲಿಕ ಸಾವಿಗೆ ತುತ್ತಾಗುತ್ತಿದ್ದಾರೆ. ಅಂಗನವಾಡಿಯಲ್ಲಿ (Anganwadi) ಆಟವಾಡುತ್ತಿದ್ದ ಬಾಲಕಿ ದಿಡೀರನೆ ಬಿದ್ದು ಮೃತಪಟ್ಟ ಘಟನೆ ಕುಷ್ಟಗಿ (Kushtagi) ತಾಲೂಕಿನ ಬಳೂಟಗಿ ಗ್ರಾಮದಲ್ಲಿ ನಡೆದಿದೆ. ಅಲಿಯಾ ಮಹ್ಮದ್ ರಿಯಾಜ್ (5) ಮೃತ ಬಾಲಕಿ. ಸೋಮವಾರ (ಫೆ.17) ಮುಂಜಾನೆ ದೈನಂದಿನಂತೆ ಬಾಲಕಿ ಅಂಗನವಾಡಿಗೆ ಹೋಗಿದ್ದಳು. ಮುಂಜಾನೆ ಉಪಹಾರ ಸೇವಿಸಿದ್ದ ಬಾಲಕಿ ಚಟುವಟಿಕೆಯಿಂದಲೇ ಇದ್ದಳು. ಅಂಗನವಾಡಿಯಲ್ಲಿ ಎಲ್ಲ ಮಕ್ಕಳಂತೆ ಆಟವಾಡಿಕೊಂಡಿದ್ದಳು.
ಆದರೆ, ಮಧ್ಯಾಹ್ನ ಆಟವಾಡುತ್ತಿದ್ದಾಗ ದಿಢೀರನೆ ಕುಸಿದು ಬಿದ್ದಿದ್ದಾಳೆ. ಪೀಟ್ಸ್ ಬಂದವರಂತೆ ಆಡಿದ್ದಾಳೆ. ಬಾಲಕಿಯನ್ನು ನೋಡಿ ಅಂಗನವಾಡಿ ಸಹಾಯಕಿ ಓಡಿ ಬಂದಿದ್ದಾಳೆ. ಕೂಡಲೇ ಪಾಲಕರಿಗೆ ಮಾಹಿತಿ ನೀಡಲಾಗಿದೆ. ಕೂಡಲೆ ಬಾಲಕಿಯನ್ನು ಸಮೀಪದ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆಸ್ಪತ್ರೆಗೆ ಹೋಗುವ ಮುನ್ನವೇ ಬಾಲಕಿ ಮೃತಪಟ್ಟಿದ್ದಳು.
ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಬಾಲಕಿ ದೇಹವನ್ನು ಪರಿಶೀಲಿಸಿದ್ದಾರೆ. ಗಾಯದ ಗುರುತುಗಳೇನಾದರೂ ಇವೆಯಾ ಅಂತ ಪರಿಶೀಲಿಸಿದ್ದಾರೆ. ಜೊತೆಗೆ ಎಕ್ಸರೇ ಮಾಡಿ, ಬಾಲಕಿ ಏನಾದರೂ ನುಂಗಿದ್ದಾಳಾ ಎಂದು ಕೂಡ ಪರಿಶೀಲನೆ ಮಾಡಿದ್ದಾರೆ. ಆದರೆ, ದೇಹದೊಳಗೆ ಏನೇನು ಇರಲಿಲ್ಲ ಎಂಬುವುದು ಗೊತ್ತಾಗಿದೆ.
ಇದನ್ನೂ ಓದಿ: ಸಾಲ ವಾಪಸ್ ನೀಡದಿದ್ದಕ್ಕೆ 17 ವರ್ಷದ ಬಾಲಕಿಯನ್ನು ಮದುವೆಯಾದವ ಅರೆಸ್ಟ್
ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಮಗು ಮೃತಪಟ್ಟಿದೆ ಅಂತ ವೈದ್ಯರು ಪಾಲಕರಿಗೆ ಮಾಹಿತಿ ನೀಡಿದ್ದಾರೆ. ದಿಢೀರನೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಕೆಲವರಿಗೆ ಈ ರೀತಿಯಾಗುತ್ತದೆ. ಬಾಲಕಿ ಸಾವಿಗೆ ಇದೇ ಕಾರಣ ಅಂತ ಪೋಷಕರಿಗೆ ತಿಳಿಸಿದ್ದಾರೆ. ಆರಂಭದಲ್ಲಿ ಅಂಗನವಾಡಿ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದ ಪೋಷಕರು, ವೈದ್ಯರ ಮಾಹಿತಿ ನಂತರ ಸುಮ್ಮನಾಗಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:38 am, Tue, 18 February 25