
ಕೊಪ್ಪಳ, ಫೆಬ್ರವರಿ 08: ಅವರೆಲ್ಲಾ ಒಂದೇ ಗ್ರಾಮದವರು. ಅದರಲ್ಲೂ ಐವರು ಸ್ನೇಹಿತರು. ನಾಲ್ಕು ದಿನಗಳ ಹಿಂದೆ ಪಾರ್ಟಿ ಮಾಡಿದ್ದರು. ಐವರಲ್ಲಿ ಇಬ್ಬರು ಸಾವನ್ನಪ್ಪಿದ್ದರೆ (death), ಇನ್ನೊಬ್ಬ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಬಣ್ಣಕ್ಕೆ ಮಿಕ್ಸ್ ಮಾಡುವ ಸ್ಪಿರಿಟ್ (Spirit) ಕುಡಿದಿದ್ದಾರೆ ಎನ್ನಲಾಗುತ್ತಿದೆ. ಮತ್ತಿಬ್ಬರು ಅರೆಸ್ಟ್ ಆಗಿದ್ದಾರೆ. ಪಾರ್ಟಿಯಲ್ಲಿ ಇಬ್ಬರು ಸ್ಪಿರಿಟ್ ಕುಡಿಯದಿರುವುದು ಸದ್ಯ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಅಮರಯ್ಯ ಹಿರೇಮಠ, ರಮೇಶ್ ಹೊಸಹಳ್ಳಿ, ಶರಣಪ್ಪ ಹಂಚಿನಾಳ, ಮಾರುತಿ ಬಂಡಿ ಹಾಗೂ ಶರಣಪ್ಪ ಗುರಿಕಾರ ಕೊಪ್ಪಳ ತಾಲೂಕಿನ ಕೂಕನಪಳ್ಳಿ ನಿವಾಸಿಗಳು. ಇವರ ಪೈಕಿ ಅಮರಯ್ಯ ಹಿರೇಮಠ (35) ಮತ್ತು ರಮೇಶ್ ಹಿರೇಮಠ (25) ಸಾವನ್ನಪ್ಪಿದ್ದಾರೆ. ಶರಣಪ್ಪ ಹಂಚಿನಾಳ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ.
ಫೆಬ್ರವರಿ 4ರಂದು ಅಮರಯ್ಯ, ರಮೇಶ್ ಹಾಗೂ ಶರಣಪ್ಪ ಸ್ಪಿರಿಟ್ ಸೇವನೆ ಮಾಡಿದ್ದರು. ಸ್ಪಿರಿಟ್ ಸೇವನೆ ಮಾಡಿದ ಮರುದಿನವೇ ಅಸ್ವಸ್ಥರಾದ ಹಿನ್ನಲೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ ನಿನ್ನೆ ರಮೇಶ್ ಹೊಸಹಳ್ಳಿ ಹಾಗೂ ತಡರಾತ್ರಿ ಅಮರಯ್ಯ ಹಿರೇಮಠ ಮೃತಪಟ್ಟಿದ್ದಾರೆ. ಶರಣಪ್ಪ ಹಂಚಿನಾಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಒಟ್ಟು ಐವರು ಸ್ನೇಹಿತರು ಪಾರ್ಟಿ ಮಾಡಿದ್ದರು. ಆದರೆ ಇದರಲ್ಲಿ ಮಾರುತಿ ಬಂಡಿ ಹಾಗೂ ಶರಣಪ್ಪ ಗುರಿಕಾರ ಸ್ಪಿರಿಟ್ ಸೇವನೆ ಮಾಡಿರಲಿಲ್ಲ. ಹೀಗಾಗಿ ಈ ಘಟನೆ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ: ಚಾಮರಾಜನಗರ: 9 ಕಾಡಾನೆಗಳ ಹಿಂಡು ದಾಳಿಗೆ ರೈತ ಬಲಿ; ರೊಚ್ಚಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ
ಮೃತ ರಮೇಶ್ ತಂದೆ ಯಮನೂರಪ್ಪ ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಸ್ಪಿರಿಟ್ ನೀಡಿರುವ ಆರೋಪದಡಿ ಮಾರುತಿ ಹಾಗೂ ಶರಣಪ್ಪ ಗುರಿಕಾರನನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ ಮಾರುತಿಗೆ ಸ್ಪಿರಿಟ್ ಸಿಕ್ಕಿದ್ದು ಹೇಗೆ ಎನ್ನುವುದು ಸದ್ಯದ ಪ್ರಶ್ನೆ. ಮಾರುತಿ ಹೆದ್ದಾರಿ ಪಕ್ಕದಲ್ಲಿ ಲಾರಿಗಳ ವಾಶಿಂಗ್ ಕೆಲಸ ಮಾಡುತ್ತಿದ್ದ. ಮೂಲತಃ ಕೊಪ್ಪಳ ತಾಲೂಕಿನ ದದೇಗಲ್ ನಿವಾಸಿಯಾಗಿದ್ದು, ಆದರೆ ಕೂಕನಪಳ್ಳಿ ಗ್ರಾಮದಲ್ಲಿ ವಾಸಿಸುತ್ತಿದ್ದ.
ಈ ಘಟನೆ ಬಗ್ಗೆ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಇವರ ಜೊತೆಗಿದ್ದ ರಮೇಶ್ ಹೊಸಹಳ್ಳಿಯನ್ನ ವಿಚಾರಣೆ ಮಾಡಿದ್ದಾರೆ. ಯಾವುದೇ ದೂರು ದಾಖಲಾಗದಿದ್ದರೂ ಮುನಿರಾಬಾದ್ ಪೊಲೀಸರು ವಿಚಾರಣೆ ಮಾಡುತ್ತಾರೆ. ಆದರೆ ವಿಚಾರಣೆಗೆ ಹೋಗಿ ಬಂದ ಬಳಿಕ ರಮೇಶ್ ಅದೇ ಸ್ಪಿರಿಟ್ ಕುಡಿದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಾನೆ. ನಿನ್ನೆ ಮುಂಜಾನೆ ಆತ ಸಾವನ್ನಪ್ಪಿದ್ದಾನೆ. ಘಟನೆ ನಡೆದು ಎರಡು-ಮೂರು ದಿನಗಳಾಗಿದ್ದರೂ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಇದು ಕೂಡ ಹಲವು ಅನುಮಾನಕ್ಕೆ ಕಾರಣವಾಗಿತ್ತು.
ರಮೇಶ್ ಏಕೆ ಪೊಲೀಸರ ವಿಚಾರಣೆ ಬಳಿಕ ಮೃತಪಟ್ಟ ಅನ್ನೋದು ಕೂಡ ದೊಡ್ಡ ಪ್ರಶ್ನೆ ಆಗಿದೆ. ಈ ಐವರ ಪಾರ್ಟಿ ಹಿಂದೆ ಇರುವ ಉದ್ದೇಶ ಏನೂ ಅನ್ನೋದು ನಿಗೂಢವಾಗಿದೆ. ಸ್ಪಿರಿಟ್ ಆತನಿಗೆ ಸಿಕ್ಕಿದ್ದು ಹೇಗೆ ಅನ್ನೋದು ಪ್ರಶ್ನೆಯಾಗಿದೆ. ಇನ್ನು ಮಾರುತಿ ಪಕ್ಕಾ ಪ್ಲ್ಯಾನ್ ಮಾಡಿ ಸ್ಪಿರಿಟ್ ಸಂಗ್ರಹ ಮಾಡಿದ್ದ ಎನ್ನಲಾಗುತ್ತಿದೆ. ಕಳೆದ ಹದಿನೈದು ದಿನಗಳ ಹಿಂದೆಯೇ ಆತ ಸ್ಪಿರೀಟ್ ಸಂಗ್ರಹಿಸಿದ್ದ ಎನ್ನಲಾಗಿದೆ. ಕೂಕನಪಳ್ಳಿ ಗ್ರಾಮದಲ್ಲಿ ಮೊದಲೇ ಆತ ಸ್ಪಿರಿಟ್ ಸಂಗ್ರಹ ಮಾಡಿದ್ದ ಅನ್ನೋ ಮಾತುಗಳು ಕೇಳಿ ಬರ್ತಿವೆ.
ಇನ್ನು ಪೊಲೀಸರ ಮಾಹಿತಿ ಪ್ರಕಾರ, ಗೋವಾ ಡ್ರಿಂಕ್ಸ್ ಅಂದುಕೊಂಡು ಸ್ಪಿರಿಟ್ ಸೇವನೆ ಮಾಡಿದ್ದಾರೆ ಎನ್ನಲಾಗಿದೆ. ಬಣ್ಣಕ್ಕೆ ಮಿಕ್ಸ್ ಮಾಡುವ ಸ್ಪಿರಿಟ್ ಅನ್ನು ಲಾರಿ ಚಾಲಕ ಮಾರುತಿ ಬಳಿ ಕೊಟ್ಟಿದ್ದ. ಅದೇ ಬಾಟಲ್ ಅನ್ನು ಗೋವಾದ ಕಾಜು ಡ್ರಿಂಕ್ಸ್ ಎಂದು ಕುಡಿದಿದ್ದಾರೆ ಎನ್ನಲಾಗಿದೆ. ಸದ್ಯ ಇಬ್ಬರು ಮೃತಪಟ್ಟಿದ್ದು, ಇಬ್ಬರ ಮನೆಯಲ್ಲೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮೃತ ಅಮರಯ್ಯ ಕೆಇಬಿಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡತಿದ್ದ. ರಮೇಶ್ ಹೊಸಹಳ್ಳಿ ಮದುವೆ ವಯಸ್ಸಿಗೆ ಬಂದಿದ್ದ. ತಂದೆ ತಾಯಿಗೆ ಒಬ್ಬನೇ ಮಗ. ಮಗನನ್ನ ಕಳೆದುಕೊಂಡ ಹೆತ್ತವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ಇದನ್ನೂ ಓದಿ: ವೇಶ್ಯಾವಾಟಿಕೆ ನಡೆಸುವಂತೆ ಅತ್ತೆಯಿಂದ ಒತ್ತಾಯ: 11 ತಿಂಗಳ ಮಗು ಬಿಟ್ಟು ಗೃಹಿಣಿ ಆತ್ಮಹತ್ಯೆ
ಒಟ್ಟಾರೆ ಸ್ಪೀರಿಟ್ ಕುಡಿದು ಇಬ್ಬರು ಸಾನ್ನಪ್ಪಿರುವ ಪ್ರಕರಣ ಇದೀಗ ನಿಗೂಢವಾಗಿದೆ. ಸ್ಪಿರಿಟ್ ಕುಡಿದೆ ಸಾವನ್ನಪ್ಪಿದ್ರಾ ಅಥವಾ ಕುಡಿಯೋದ್ರಲ್ಲಿ ಏನಾದರೂ ಮಿಕ್ಸ್ ಮಾಡಿದಾರಾ ಅನ್ನೋ ಅನುಮಾನ ಹುಟ್ಟಿಕೊಂಡಿದೆ. ಸ್ಪಿರಿಟ್ ಸಿಕ್ಕಿದ್ದು ಕೂಡ ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದ್ದು, ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:08 pm, Sun, 8 February 26