ಕೊಪ್ಪಳ: ಕನ್ನಡ ಮಾತನಾಡಿ ಎಂದಿದ್ದಕ್ಕೆ ಪ್ರಯಾಣಿಕನ ಮೇಲೆ ಕಲೆಕ್ಟರ್​ನಿಂದ ಹಲ್ಲೆ, ಮೊಬೈಲ್ ಕಿತ್ತುಕೊಂಡು ದಬ್ಬಾಳಿಕೆ

ಮೈಸೂರಿನಿಂದ ಕೊಪ್ಪಳಕ್ಕೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬರು ಕನ್ನಡ ಮಾತನಾಡು ಎಂದಿದ್ದಕ್ಕೆ ಟಿಕೆಟ್ ಕಲೆಕ್ಟರ್‌ನಿಂದ ಹಲ್ಲೆಗೊಳಗಾಗಿರುವಂತಹ ಘಟನೆ ಯಲಹಂಕ ಬಳಿ ರೈಲಿನಲ್ಲಿ ನಡೆದಿದೆ. ಪ್ರಯಾಣಿಕನ ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಘಟನೆ ಖಂಡಿಸಿ ಇಂದು ಕೊಪ್ಪಳದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಲಾಗಿದೆ.

ಕೊಪ್ಪಳ: ಕನ್ನಡ ಮಾತನಾಡಿ ಎಂದಿದ್ದಕ್ಕೆ ಪ್ರಯಾಣಿಕನ ಮೇಲೆ ಕಲೆಕ್ಟರ್​ನಿಂದ ಹಲ್ಲೆ, ಮೊಬೈಲ್ ಕಿತ್ತುಕೊಂಡು ದಬ್ಬಾಳಿಕೆ
ಟಿಕೆಟ್ ಕಲೆಕ್ಟರ್‌
Edited By:

Updated on: Apr 26, 2025 | 1:45 PM

ಕೊಪ್ಪಳ, ಏಪ್ರಿಲ್​ 26: ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ ಕನ್ನಡಿಗರ (Kannadigaru) ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಕನ್ನಡ ಮಾತಾಡು ಅಂದಿದಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಕಂಡಕ್ಟರ್ ಮೇಲೆ‌ ಹಲ್ಲೆ ಮಾಡಲಾಗಿತ್ತು. ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಕೆಲ ದಿನಗಳ ಹಿಂದೆ ಬೆಂಗಳೂರಲ್ಲಿ ವಿಂಗ್ ಕಮಾಂಡರ್ ಕನ್ನಡಿನ ಮೇಲೆ ಹಲ್ಲೆ ಮಾಡಿದ್ದರು. ಇದೀಗ ಅದೇ ತರಹ ಮತ್ತೊಂದು ಘಟನೆ ರಾಜ್ಯದಲ್ಲಿ ನಡೆದಿದೆ. ಕನ್ನಡ ಮಾತಾಡಿ ಎಂದಿದ್ದಕ್ಕೆ ಓರ್ವ ಟಿಕೆಟ್ ಕಲೆಕ್ಟರ್ ಪ್ರಯಾಣಿಕನ (passenger) ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಕನ್ನಡ ನೆಲದಲ್ಲಿದ್ದು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕೊಪ್ಪಳದ ಪ್ರಯಾಣಿಕ ಕನ್ನಡ ಮಾತಾಡು ಎಂದಿದ್ದಕ್ಕೆ ಟಿಕೆಟ್ ಕಲೆಕ್ಟರ್ ಹಲ್ಲೆ ಮಾಡಿದ್ದಾರೆ. ಹಂಪಿ‌ ಎಕ್ಸಪ್ರೆಸ್ ರೈಲಿನಲ್ಲಿ ಏ 24 ರಂದು ಮೈಸೂರಿನಿಂದ ಕೊಪ್ಪಳಕ್ಕೆ ಪ್ರಯಾಣಿಕ ಸಂಚರಿಸುತ್ತಿದ್ದರು. ಈ ವೇಳೆ ರೈಲು ಯಲಹಂಕ ಸಮೀಪ ತಲುಪಿದೆ. ಟಿಕೆಟ್ ತಪಾಸಣೆಗೆ ಬಂದ ಕಲೆಕ್ಟರ್ ಎಲ್ಲರ ಟಿಕೆಟ್ ತಪಾಸಣೆ ಮಾಡುತ್ತಿದ್ದು, ಈ ವೇಳೆ ರೈಲಿನಲ್ಲಿದ್ದ ಕೊಪ್ಪಳ ಮೂಲದ ಪ್ರಯಾಣಿಕ ಮೊಹಮದ್ ಭಾಷಾ ಟಿಕೆಟ್ ಕಲೆಕ್ಟರ್ ಗೆ ಕನ್ನಡ ಮಾತಾಡು ಎಂದಿದ್ದಾರೆ. ಕನ್ನಡ ಬರಲ್ಲ ಎಂದಿದ್ದಾರೆ. ಹೀಗಾಗಿ ರೊಚ್ಚಿಗೆದ್ದ ಟಿಕೆಟ್ ಕಲೆಕ್ಟರ್ ಕೂಡಲೇ ಮಹಮ್ಮದ್ ಭಾಷಾ ಅವರ ಮೊಬೈಲ್ ಕಿತ್ತುಕೊಂಡು, ಹಲ್ಲೆ ಮಾಡಿದ್ದಾರೆ.

ಮಹಮ್ಮದ್ ಭಾಷಾ ಹೇಳಿದ್ದಿಷ್ಟು 

ಈ ಬಗ್ಗೆ ಮಹಮ್ಮದ್ ಭಾಷಾ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಕಲೆಕ್ಟರ್​ಗೆ ನಾನು ಕನ್ನಡ ಮಾತಾಡಿ ಎಂದೆ. ಅವರು ಕನ್ನಡ ಬರಲ್ಲ ಎಂದು ನನ್ನ ಮೊಬೈಲ್ ಕಿತ್ತುಕೊಂಡರು. ಅಲ್ಲದೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಂದ್: ಮರಾಠಿಗರಿಂದ ಕನ್ನಡಿಗರನ್ನು ಕೆರಳಿಸುವ ಪೋಸ್ಟ್

ಮಹಮದ್ ಭಾಷಾ ಕೆಲಸದ ನಿಮಿತ್ಯ ಮೈಸೂರ್​ಗೆ ಹೋಗಿದ್ದರು. ವಾಪಸ್ ಬರುವಾಗ ಘಟನೆ ನಡೆದಿದ್ದು, ಘಟನೆ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಕನ್ನಡ ನೆಲದಲ್ಲಿ ಕನ್ನಡಿಗನ ಮೇಲೆ ದೌರ್ಜನ್ಯ ಖಂಡಿಸಿ ಇಂದು ಕೊಪ್ಪಳ ರೈಲ್ವೆ ನಿಲ್ದಾಣದ ಬಳಿ ಕನ್ಮಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿ, ದೌರ್ಜನ್ಯವೆಸಗಿದ ಟಿಕೆಟ್ ಕಲೆಕ್ಟರ್ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಹೋಳಿ ಹಬ್ಬದ ದಿನವೇ ಮಹಾರಾಷ್ಟ್ರದಲ್ಲಿ ಕಿಡಿಗೇಡಿಗಳ ಪುಂಡಾಟ: ಕರ್ನಾಟಕ ಬಸ್ ಮೇಲೆ ಬಾಟಲಿ ತೂರಾಟ

ಪ್ರತಿಭಟನೆಯಲ್ಲಿ ಪ್ರಯಾಣಿಕ‌ ಮಹಮದ್ ಭಾಷಾ ಕೂಡ ಭಾಗಿಯಾಗಿದ್ದರು. ಪ್ರಯಾಣಿಕನ ಮೇಲೆ ದೌರ್ಜನ್ಯ ಮಾಡಿದ ಟಿಕೆಟ್ ಕಲೆಕ್ಟರ್ ಅಮಾನತ್ತು ಮಾಡುವಂತೆ ಹಿರಿಯ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಪದೇ ಪದೇ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಕನ್ನಡಿಗರು ಭಯದ ವಾತಾವರಣದಲ್ಲಿದ್ದು, ಕೂಡಲೇ ಕಲೆಕ್ಟರ್ ವಿರುದ್ದ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಕರವೇ ಮುಖಂಡ ಗೀರಿಶಾನಂದ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.