ಕರ್ನಾಟಕ ಬಂದ್: ಮರಾಠಿಗರಿಂದ ಕನ್ನಡಿಗರನ್ನು ಕೆರಳಿಸುವ ಪೋಸ್ಟ್
ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದವು. ಈ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮಹಾರಾಷ್ಟ್ರದ ಶಿವಸೇನೆಯ ಯುವಸೇನೆಯ ಉದ್ರೇಕಕಾರಿ ಪೋಸ್ಟ್ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಯಿತು. ಪೊಲೀಸರ ಎಚ್ಚರಿಕೆಯ ನಂತರವೂ ಪೋಸ್ಟ್ ತೆಗೆಯದಿರುವುದು ಖಂಡನೀಯ.

ಬೆಳಗಾವಿ, ಮಾರ್ಚ್ 23: ಕೆಎಸ್‌ಆರ್‌ಟಿಸಿ ಬಸ್ (KSRTC Bus) ನಿರ್ವಾಹಕನ ಮೇಲಿನ ಹಲ್ಲೆ ಖಂಡಿಸಿ, ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ (Karnataka Bandh) ನಡೆಸಿದವು. ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಕುರಿತಾಗಿ ಮಹಾರಾಷ್ಟ್ರದ ಶಿವಸೇನೆಯ (Shivasene) ಯುವಸೇನೆಯಿಂದ ಪೋಸ್ಟ್ವೊಂದು ಹಾಕಿದ್ದು, ಕನ್ನಡಿಗರನ್ನು ಕೆರಳಿಸಿದೆ. “ಬೆಳಗಾವಿ ಬಂದ್ ಮಾಡುವ ತಾಕತ್ ಕೇವಲ ಮರಾಠಿಗರ ರಕ್ತದಲ್ಲಿದೆ. ಉಳಿದವರಿಂದ ಬಂದ್ ಸಾಧ್ಯವಿಲ್ಲ” ಎಂದು ಯುವಸೇನಾ ಇನ್ಸ್ಟಾಗ್ರಾಂ ಪೇಜ್ನಲ್ಲಿ ಶಿವಸೇನೆ ಪುಂಡರು ಪೋಸ್ಟ್ ಮಾಡಿದ್ದಾರೆ.
ಎಚ್ಚರಿಕೆ ನೀಡಿದ ನಂತರವೂ ಪೋಸ್ಟ್
ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಶನಿವಾರ ಸಾಮಾಜಿಕ ಜಾಲತಾಣಗಳ ಅಡ್ಮಿನ್ಗಳ ಸಭೆ ಕರೆದಿದ್ದರು. ಸಭೆಯಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಪೋಸ್ಟ್ ಹಾಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ಆಯುಕ್ತರ ಎಚ್ಚರಿಕೆ ನಂತರವೂ ಮತ್ತೆ ಪುಂಡಾಟವಾಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಬಂದ್, ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ
ಕರ್ನಾಟಕ ಬಂದ್‌ಗೆ ಕಾರಣವೇನು?
ಕಳೆದ ತಿಂಗಳು, ಬೆಳಗಾವಿಯಿಂದ ಬಾಳೇಕುಂದ್ರಿಗೆ ಚಲಿಸುತ್ತಿದ್ದ ಬಸ್ಸಿನ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮೇಲೆ ಮರಾಠಿ ಪರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಮರಾಠಿಯಲ್ಲಿ ಮಾತನಾಡದ ಕಾರಣ ಹಲ್ಲೆ ನಡೆಸಿದ್ದರು. ಈ ಘಟನೆಯ ನಂತರ, ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಅಂತರರಾಜ್ಯ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಕಂಡಕ್ಟರ್ ಮೇಲಿನ ದಾಳಿಯು ಎರಡು ರಾಜ್ಯಗಳ ನಡುವಿನ ಭಾಷಾ ವಿವಾದಗಳ ಬಗ್ಗೆ ಮತ್ತೆ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ಪ್ರದೇಶದಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಕೋಮು ಸಾಮರಸ್ಯವನ್ನು ಕದಡುವ ಮರಾಠಿ ಪರ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟವು ಈ ಬಂದ್ ಮಾಡಿತು.