ಕೊಪ್ಪಳ, ಮೇ.07: ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಗೆ (Koppal Lok Sabha Election) ಇಂದು ಮತದಾನ ನಡೆಯುತ್ತಿದೆ. ಜಿಲ್ಲೆಯ ಬಹುತೇಕ ಕಡೆ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಆದರೆ ಜಿಲ್ಲೆಯ ಮೂರು ಕಡೆ ಮತದಾರರು ಮತದಾನ ಬಹಿಷ್ಕಾರ (Bycott) ಮಾಡಿದ್ದಾರೆ. ಮುಂಜಾನೆ ಹತ್ತು ಗಂಟೆಯಾದರು ಕೂಡ ಒಬ್ಬನೇ ಒಬ್ಬ ಮತದಾರ ಕೂಡ ಮತಗಟ್ಟೆಗೆ ಆಗಮಿಸಿ ಮತ ಹಾಕಿಲ್ಲ. ಹೀಗಾಗಿ ಮೂರು ಕಡೆ, ಬೂತ್ ಗಳು ಮತದಾರರು ಇಲ್ಲದೇ ಬಿಕೋ ಅಂತಿವೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ವಿಠಲಾಪುರ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಿದ್ದಾರೆ. ಪಟ್ಟಣದ ವಾರ್ಡ್ 18ರ ನಿವಾಸಿಗಳು ಮತದಾನ ಮಾಡದಿರಲು ನಿರ್ಧರಿಸಿದ್ದಾರೆ. ಹೌದು ಕಳೆದ ವಾರ ವಿಠಲಾಪುರ ಬಡಾವಣೆ ನಿವಾಸಿಯಾಗಿದ್ದ ಲಕ್ಷ್ಮಿ ಅನ್ನೋ ಗರ್ಭಿಣಿ ಮಹಿಳೆ ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದಳು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಬಡಾವಣೆ ನಿವಾಸಿಗಳು ಆಗ್ರಹಿಸಿದ್ದರು. ಆದರೆ ಒಂದು ವಾರವಾದ್ರು ಕೂಡಾ ತಪ್ಪಿತಸ್ಥ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಮಾತ್ರ ಮತದಾನ ಮಾಡ್ತೇವೆ ಅಂತ ಬಡಾವಣೆ ನಿವಾಸಿಗಳು ಹೇಳ್ತಿದ್ದಾರೆ.
ಇದನ್ನೂ ಓದಿ: ಯುವ ಮತದಾರರಿಗಾಗಿ ನೂತನ ಮತಗಟ್ಟೆ: ಬಲೂನ್, ಚಿತ್ರಗಳಿಂದ ಮತಗಟ್ಟೆ ಅಲಂಕಾರ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಗ್ರಾಮಸ್ಥರು ವಾಸಿಸುವ ಮನೆಗಳಿಗೆ ಹಕ್ಕು ಪತ್ರ ನೀಡದ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕರಿಸಿದ್ದಾರೆ. ಗ್ರಾಮದಲ್ಲಿ 480 ಮತದಾರರಿದ್ದು ಎರಡೂ ಬೂತ್ಗಳಲ್ಲಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಲೋಕಸಭಾ ಚುನಾವಣೆ ಸೇರಿ ಮುಂದಿನ ಚುನಾವಣೆಯಲ್ಲಿ ನಮ್ಮ ಬೇಡಿಕೆ ಈಡೇರಿಕೆ ಆಗೋವರಗೆ ಮತದಾನ ಮಾಡಲ್ಲಾ ಅಂತ ಗ್ರಾಮಸ್ಥರು ಹೇಳಿದ್ದಾರೆ. ಮುಂಜಾನೆ ಹತ್ತು ಗಂಟೆಯಾದರೂ ಒಂದು ಮತದಾನವಾಗಿಲ್ಲ. ಕಳೆದ ಅನೇಕ ದಶಕಗಳಿಂದ ವಾಸಿಸುತ್ತಿದ್ದರು ಕೂಡಾ ತಾವು ವಾಸಿಸುವ ಸ್ಥಳ ತಮ್ಮ ಹೆಸರಲ್ಲಿ ಇಲ್ಲ. ಹೀಗಾಗಿ ನಾವು ಮತ ಹಾಕಲ್ಲ ಅಂತ ಗ್ರಾಮಸ್ಥರು ಹೇಳಿದ್ದಾರೆ.
ಇನ್ನು ಮತ್ತೊಂದೆಡೆ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ 19ನೇ ವಾರ್ಡ್ನ ಗುದ್ನೇಪ್ಪನ ಮಠದ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಿದ್ದಾರೆ. ಬೆಳಿಗ್ಗೆಯಿಂದ ಇದುವರೆಗೂ ಒಬ್ಬರೂ ಮತದಾನ ಮಾಡಿಲ್ಲ. ಪಟ್ಟಣದ ಗುದ್ನೇಪ್ಪನಮಠದ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟುವ ಆದೇಶ ಹಿಂಪಡೆಯಬೇಕು. ತಾಲೂಕಾಡಳಿತ ಸೌಧ, ಕೋರ್ಟ್, ಬುದ್ಧ, ಬಸವ ಅಂಬೇಡ್ಕರ್ ಭವನ ಕಟ್ಟಡಕ್ಕೆ ಜಾಗ ನಿಗದಿ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ಬಾಡಿಗೆ ರೂಪದಲ್ಲಿ ಕಟ್ಟಡಕ್ಕೆ ಆದೇಶ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಗುದ್ನೇಪ್ಪನಮಠ ದೇವಸ್ಥಾನದ ಜಾಗ ಕೈ ಬಿಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. 1040 ಮತಗಳಿರುವ ಗುದ್ನೇಪ್ಪನಮಠದ ಬೂತ್ ನಲ್ಲಿ ಒಂದು ಮತದಾನವೂ ನಡೆದಿಲ್ಲ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ