ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೊಪ್ಪಳ ಯುವಕ; ಕುಟುಂಬ, ಜಿಲ್ಲೆಯ ಜನರಲ್ಲಿ ಮನೆ ಮಾಡಿದ ಸಂತಸ

| Updated By: ಆಯೇಷಾ ಬಾನು

Updated on: Jan 04, 2024 | 11:26 AM

ಕೊಪ್ಪಳ ತಾಲೂಕಿನ ಕಾತರಕಿ ಗುಡ್ಲಾನೂರ ಗ್ರಾಮದ ಇಪ್ಪತ್ತಾರು ವರ್ಷದ ನಾಗಮೂರ್ತಿಸ್ವಾಮಿ ಪಂಚಾನನಗುರು ಅನ್ನೋ ಓರ್ವ ಶಿಲ್ಪಿ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ನೇಕರಿಗೆ ರಾಮ ಮಂದಿರ ನೋಡುವ ಅವಕಾಶಕ್ಕಾಗಿ ಕಾದರೆ, ತಮ್ಮ ಕುಟುಂಬಕ್ಕೆ ರಾಮ ಮಂದಿರ ನಿರ್ಮಾಣದಲ್ಲಿಯೇ ಅವಕಾಶ ಸಿಕ್ಕಿರುವುದು, ತಮ್ಮ ಸೌಭಾಗ್ಯ ಎಂದು ನಾಗಮೂರ್ತಿ ಸ್ವಾಮಿ ಸಹೋದರ ವಿರುಪಾಕ್ಷಿಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.

ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೊಪ್ಪಳ ಯುವಕ; ಕುಟುಂಬ, ಜಿಲ್ಲೆಯ ಜನರಲ್ಲಿ ಮನೆ ಮಾಡಿದ ಸಂತಸ
ನಾಗಮೂರ್ತಿಸ್ವಾಮಿ ಪಂಚಾನನಗುರು
Follow us on

ಕೊಪ್ಪಳ, ಜ.04: ಭವ್ಯ ರಾಮ ಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳದಿವೆ (Ayodhya Ram Mandir). ರಾಮ ಮಂದಿರವನ್ನು ನೋಡಬೇಕು. ರಾಮನ (Lord Rama) ದರ್ಶನ ಪಡೆಯಬೇಕು ಅನ್ನೋದು ಕೋಟ್ಯಂತರ ಜನರ ಆಶಯವಾಗಿದೆ. ಆದರೆ ರಾಮ ಮಂದಿರ ನಿರ್ಮಾಣ ಕಾರ್ಯ ಸಿಗೋದು ಅದೃಷ್ಟದ ವಿಷಯವೇ. ಇಂತಹದೊಂದು ಅದೃಷ್ಟ ಕೊಪ್ಪಳ ಜಿಲ್ಲೆಯ ಓರ್ವ ಶಿಲ್ಪಿಗೆ ದೊರೆತಿದೆ. ಇದು ಕೊಪ್ಪಳ ಜಿಲ್ಲೆಯ ಜನರ ಸಂತಸಕ್ಕೆ ಕಾರಣವಾಗಿದೆ.

ಕೊಪ್ಪಳ ತಾಲೂಕಿನ ಕಾತರಕಿ ಗುಡ್ಲಾನೂರ ಗ್ರಾಮದ ಇಪ್ಪತ್ತಾರು ವರ್ಷದ ನಾಗಮೂರ್ತಿಸ್ವಾಮಿ ಪಂಚಾನನಗುರು ಅನ್ನೋ ಓರ್ವ ಶಿಲ್ಪಿ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ರಾಮ ಮಂದಿರದ ಗರ್ಭಗುಡಿ ಮುಂದಿರುವ ಮಂಟಪದ ಕಂಬಗಳ ಕೆತ್ತನೆಯ ಕೆಲಸವನ್ನು ನಾಗಮೂರ್ತಿ ಸ್ವಾಮಿ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಧಾರವಾಡ ಮೂಲದ ಶಿಲ್ಪಿಯಿಂದ ಇಂತಹದೊಂದು ಅವಕಾಶ ಬಂದಾಗ, ಸಂತೋಷದಿಂದ ಒಪ್ಪಿಕೊಂಡಿದ್ದ ನಾಗಮೂರ್ತಿ ಸ್ವಾಮಿ, ತಿಂಗಳ ಹಿಂದೆಯೋ ಅಯೋಧ್ಯೆಗೆ ಹೋಗಿ, ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಮುಂಜಾನೆ ಎಂಟು ಗಂಟೆಯಿಂದ ರಾತ್ರಿ ಎಂಟು ಗಂಟೆವರಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಶಿಲ್ಪ ತಯಾರಿಕೆ, ವಾಸ್ತುಶಿಲ್ಪಗಳ ನಿರ್ಮಾಣ ಕಾರ್ಯ ಮಾಡುತ್ತಿದ್ದ ನಾಗಮೂರ್ತಿ ಸ್ವಾಮಿ ಅವರಿಗೆ, ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಅವಕಾಶ ಸಿಕ್ಕಿರುವುದು ಕುಟುಂಬದವರ ಸಂತಸಕ್ಕೆ ಕಾರಣವಾಗಿದೆ. ಅನೇಕರಿಗೆ ರಾಮ ಮಂದಿರ ನೋಡುವ ಅವಕಾಶಕ್ಕಾಗಿ ಕಾದರೆ, ತಮ್ಮ ಕುಟುಂಬಕ್ಕೆ ರಾಮ ಮಂದಿರ ನಿರ್ಮಾಣದಲ್ಲಿಯೇ ಅವಕಾಶ ಸಿಕ್ಕಿರುವುದು, ತಮ್ಮ ಸೌಭಾಗ್ಯ ಎಂದು ನಾಗಮೂರ್ತಿ ಸ್ವಾಮಿ ಸಹೋದರ ವಿರುಪಾಕ್ಷಿಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.

ನಾಗಮೂರ್ತಿ ಸ್ವಾಮಿ ಕುಟುಂಬ ಹಿಂದಿನಿಂದಲೂ ಕೂಡಾ ವಾಸ್ತಶಿಲ್ಪ ಮತ್ತು ಮೂರ್ತಿ ಕೆತ್ತನೆಯ ಕೆಲಸ ಮಾಡಿಕೊಂಡು ಬಂದಿದೆ. ನಾಗಮೂರ್ತಿ ಸ್ವಾಮಿಯವರ ತಂದೆ ಸಂಸಾರಣಸ್ವಾಮಿ ಕೂಡಾ ಗ್ರಾಮದಲ್ಲಿ ಗಣೇಶ ಮೂರ್ತಿ ಸೇರಿದಂತೆ ಅನೇಕ ಮೂರ್ತಿಗಳನ್ನು ಸಿದ್ದಗೊಳಿಸುತ್ತಿದ್ದರು. ತಂದೆಯಿಂದ ಪ್ರೇರಣೆ ಪಡೆದ ನಾಗಮೂರ್ತಿ ಸ್ವಾಮಿ ಕೂಡಾ ಚಿಕ್ಕ ವಯಸ್ಸಿನಿಂದಲೇ ಶಿಲ್ಪಕಲೆಯಲ್ಲಿ ಆಸಕ್ತಿಯನ್ನು ತೋರಿದ್ದರು. ಕಳೆದ ಹತ್ತು ವರ್ಷಗಳಿಂದ ವಾಸ್ತಶಿಲ್ಪಗಳು ಮತ್ತು ಮೂರ್ತಿಗಳ ಕೆತ್ತನೆಯ ಕೆಲಸವನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: ಹನುಮಂತನ ಅಪ್ಪಣೆ ಪಡೆದು ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ಮೋದಿ, ಅಷ್ಟಕ್ಕು ಹನುಮಂತನ ಅಪ್ಪಣೆ ಯಾಕೆ ಮುಖ್ಯ?

ರಾಮನಿಗೂ ಕೊಪ್ಪಳನ್ನೂ ಇದೆ ಅವಿನಾಭಾವ ಸಂಬಂಧ

ಇನ್ನು ರಾಮನಿಗೂ ಕೊಪ್ಪಳಕ್ಕೂ ಅವಿನಾಭಾವ ಸಂಬಂಧವಿದೆ. ರಾಮನ ಬಂಟ ಹನುಮಂತನ ಜನ್ಮಸ್ಥಳ ಇರೋದು ಇದೇ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ. ರಾಮನಿಗೆ ಸಂಕಷ್ಟದ ದಿನಗಳಲ್ಲಿ ಸಹಾಯ ಮಾಡಿದ್ದು, ಇದೇ ಆಂಜನೇಯ ಮತ್ತು ಕಪಿ ಸೈನ್ಯ. ರಾಮನ ಅನೇಕ ಕುರುಹುಗಳು ಕೊಪ್ಪಳದಲ್ಲಿವೆ. ಇದೀಗ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೂಡಾ ಕೊಪ್ಪಳದ ಶಿಲ್ಪಿ ಕೆಲಸ ಮಾಡ್ತಿರುವದು ಸಹಜವಾಗಿ ಗ್ರಾಮ ಮಾತ್ರವಲ್ಲಾ, ಇಡೀ ಕೊಪ್ಪಳ ಜಿಲ್ಲೆಯ ಜನರ ಸಂಭ್ರಮಕ್ಕೆ ಕಾರಣವಾಗಿದೆ ಎಂದು ಗ್ರಾಮದ ಯರಿಯಪ್ಪಗೌಡ ತಿಳಿಸಿದರು.

ರಾಮ ಮಂದಿರ ನಿರ್ಮಾಣ ಕಾರ್ಯ ಮುಗಿಯೋವರಗೆ ಕೂಡಾ ನಾಗಮೂರ್ತಿ ಸ್ವಾಮಿ ಅಯೋಧ್ಯೆಯಲ್ಲಿದ್ದುಕೊಂಡು ಕೆಲಸ ಮಾಡಲು ನಿರ್ಧರಿಸಿದ್ದಾರೆ. ಇನ್ನು ನಿರ್ಮಾಣದ ಸಮಯದಲ್ಲಿ ಫೋನ್ ಬಳಕೆಗೆ ಕೂಡಾ ಅವಕಾಶ ಇಲ್ಲದೇ ಇರೋದರಿಂದ, ರಾತ್ರಿ ಸಮಯದಲ್ಲಿ ಮಾತ್ರ ಕುಟುಂಬದವರ ಜೊತೆ ನಾಗಮೂರ್ತಿ ಸ್ವಾಮಿ ಕರೆ ಮಾಡಿ ಮಾತನಾಡುತ್ತಿದ್ದಾರಂತೆ. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಅವಕಾಶ ಸಿಕ್ಕಿರುವುದು, ಕುಟುಂಬಕ್ಕೆ ಮಾತ್ರವಲ್ಲಾ, ಇಡೀ ಕೊಪ್ಪಳ ಜಿಲ್ಲೆಯ ಜನರ ಸಂತಸ ನೂರ್ಮಡಿ ಮಾಡಿದೆ.

ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:25 am, Thu, 4 January 24