AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರಿಗೆ ಮಹಾದಾಸೋಹ: ಅಚ್ಚುಕಟ್ಟಾದ ವ್ಯವಸ್ಥೆಗೆ ನಿಬ್ಬೆರಗಾದ ಜನ

ಕೊಪ್ಪಳದ ಗವಿಮಠದ ಜಾತ್ರೆಯನ್ನು ದಕ್ಷಿಣದ ಕುಂಭಮೇಳ ಅಂತಲೇ ಕರೆಯುತ್ತಾರೆ. ಈ ಜಾತ್ರೆಯನ್ನು ನೋಡುವದೇ ಕಣ್ಣಿಗೆ ಹಬ್ಬ. ಏಕೆಂದರೆ ರಥೋತ್ಸವ ದಿನ ಐದು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗಿಯಾದರೆ, ಉಳಿದ ದಿನವು ಕೂಡ ಪ್ರತಿನಿತ್ಯ ಲಕ್ಷಾಂತರ ಭಕ್ತರು ಮಠಕ್ಕೆ ಬರುತ್ತಾ  ಜನವರಿ 27 ರಿಂದ ಜಾತ್ರೆ ಆರಂಭವಾಗಿದ್ದು, ತಿಂಗಳ ಕಾಲ ನಡೆಯಲಿದೆ.

ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರಿಗೆ ಮಹಾದಾಸೋಹ: ಅಚ್ಚುಕಟ್ಟಾದ ವ್ಯವಸ್ಥೆಗೆ ನಿಬ್ಬೆರಗಾದ ಜನ
ಮಹಾದಾಸೋಹ
ಸಂಜಯ್ಯಾ ಚಿಕ್ಕಮಠ
| Edited By: |

Updated on: Jan 30, 2024 | 7:24 PM

Share

ಕೊಪ್ಪಳ, ಜನವರಿ 30: ರಾಜಕೀಯ ಕಾರ್ಯಕ್ರಮ, ಸರ್ಕಾರಿ ಕಾರ್ಯಕ್ರಮಗಳಲ್ಲಿ ದೊಡ್ಡ ಮಟ್ಟದಲ್ಲಿ ಆಹಾರ ಹಾಳಾಗುವ ಸುದ್ದಿಗಳನ್ನೇ ನೋಡಿದ್ದೇವೆ. ಊಟದ ಅಸ್ತವ್ಯಸ್ಥತೆ, ಊಟ ಸಿಗದೇ ಜನರ ಪರದಾಟ ಸಾಮಾನ್ಯವಾಗಿರುತ್ತದೆ. ಆದರೆ ಆ ಮಠದ ಜಾತ್ರೆಗೆ ಪ್ರತಿನಿತ್ಯ ಲಕ್ಷ ಲಕ್ಷ ಜನ ಬರ್ತಿದ್ದಾರೆ. ಹಗಲು ರಾತ್ರಿಯೆನ್ನದೇ ಪ್ರತಿನಿತ್ಯ ಲಕ್ಷಾಂತರ ಜನರಿಗೆ ಭೂರಿ ಬೋಜನವನ್ನು ಬಡಿಸಲಾಗುತ್ತಿದೆ. ಸಣ್ಣ ಗದ್ದಲವಿಲ್ಲದೇ ನಡೆಯುತ್ತಿರುವ ಗವಿಮಠದ ದಾಸೋಹ, ದೇಶದಲ್ಲಿಯೇ ಹೆಸರಾಗಿದೆ. ಗವಿಮಠ (Gavimath) ದ ಜಾತ್ರೆಗೆ ಬಂದವರು ಊಟ ಸಿಕ್ಕಿಲ್ಲ ಎನ್ನುವ ಉದಾಹರಣೆಯೇ ಇಲ್ಲ. ಅಷ್ಟರ ಮಟ್ಟಿಗೆ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

ಕೊಪ್ಪಳ ಗವಿಮಠದಲ್ಲಿ ಮಹಾದಾಸೋಹ

ಕೊಪ್ಪಳದ ಗವಿಮಠದ ಜಾತ್ರೆಯನ್ನು ದಕ್ಷಿಣದ ಕುಂಭಮೇಳ ಅಂತಲೇ ಕರೆಯುತ್ತಾರೆ. ಈ ಜಾತ್ರೆಯನ್ನು ನೋಡುವದೇ ಕಣ್ಣಿಗೆ ಹಬ್ಬ. ಏಕೆಂದರೆ ರಥೋತ್ಸವ ದಿನ ಐದು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗಿಯಾದರೆ, ಉಳಿದ ದಿನವು ಕೂಡ ಪ್ರತಿನಿತ್ಯ ಲಕ್ಷಾಂತರ ಭಕ್ತರು ಮಠಕ್ಕೆ ಬರುತ್ತಾ  ಜನವರಿ 27 ರಿಂದ ಜಾತ್ರೆ ಆರಂಭವಾಗಿದ್ದು, ತಿಂಗಳ ಕಾಲ ನಡೆಯಲಿದೆ. ಪ್ರತಿನಿತ್ಯ ಕೂಡಾ ದೊಡ್ಡ ಮಟ್ಟದಲ್ಲಿ ಭಕ್ತರ ಸಂಖ್ಯೆ ಮಠಕ್ಕೆ ಬರುತ್ತದೆ. ಇನ್ನು ಮಠಕ್ಕೆ ಬರೋ ಭಕ್ತರಿಗೆ ಪ್ರತಿನಿತ್ಯ ಮಹಾದಾಸೋಹದ ವ್ಯವಸ್ಥೆ ಮಾಡಲಾಗಿದೆ. ದಾಸೋಹ ಅಂದ್ರೆ ಕೇವಲ ಅನ್ನ ಸಾರು ಅಲ್ಲ. ಗವಿಮಠದ ಮಹಾದಾಸೋಹದಂತಹ ದಾಸೋಹ, ರಾಜ್ಯವಲ್ಲ ಇಡೀ ದೇಶದಲ್ಲಿಯೇ ಎಲ್ಲಿಯೂ ಕೂಡ ನಡೆಯಲ್ಲ. ಅಷ್ಟೊಂದು ಭಿನ್ನ ವಿಭಿನ್ನ ಊಟವನ್ನು ಮಠದ ಭಕ್ತರಿಗೆ ನೀಡಲಾಗುತ್ತದೆ.

ಮಹಾದಾಸೋಹದಲ್ಲಿ ಭೂರಿ ಭೋಜನ

ಪ್ರತಿನಿತ್ಯ ಜಾತ್ರೆಗೆ ಬರುವ ಭಕ್ತರಿಗೆ, ರೊಟ್ಟಿ, ಎರಡು ರೀತಿಯ ಪಲ್ಲೆ, ಮಾದಲಿ, ಕಡಬು, ಶೇಂಗಾ ಹೋಳಿಗೆ, ತುಪ್ಪ, ಕೆಂಪು ಚಟ್ನಿ, ಹುಣಸೆ ಚಟ್ನಿ, ಅನ್ನ, ಸಾರು, ಹಿಂಡಿ, ಉಪ್ಪನ ಕಾಯಿಯನ್ನು ಬಡಿಸಲಾಗುತ್ತದೆ. ಯಾವುದೇ ದೊಡ್ಡ ಮದುವೆ ಸಮಾರಂಭಗಳಿಗೆ ಕಡಿಮೆ ಇಲ್ಲದಂತೆ ಮಠದ ಜಾತ್ರೆಯಲ್ಲಿ ಭೂರಿ ಭೋಜನದ ವ್ಯವಸ್ಥೆಯನ್ನು ಮಾಡುವುದು ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಮಾತ್ರ. ಹಾಗಂತ ಇಷ್ಟೊಂದು ವೆರೈಟಿ ಆಹಾರ ಕೇವಲ ಕೆಲವೇ ಜನರಿಗೆ ಮಾತ್ರವಲ್ಲ ಬದಲಾಗಿ ಜಾತ್ರೆಗೆ ಬರುವ ಲಕ್ಷ ಲಕ್ಷ ಭಕ್ತರಿಗೆ ಇದೇ ಊಟವನ್ನು ಬಡಿಸಲಾಗುತ್ತದೆ.

ಇದನ್ನೂ ಓದಿ: ಕೊಪ್ಪಳದ ಅಜ್ಜನ ಜಾತ್ರೆಗೆ ಅದ್ದೂರಿ ಚಾಲನೆ: ಎಲ್ಲೆಲ್ಲೂ ಭಕ್ತಗಣ, ವಿಡಿಯೋ ನೋಡಿ

ಈ ವರ್ಷ ಜನವರಿ 21 ರಿಂದಲೇ ಮಹಾದಾಸೋಹ ಆರಂಭವಾಗಿದ್ದು, ಫೆಬ್ರವರಿ 9ರವರಗೆ ನಡೆಯಲಿದೆ. ಇಲ್ಲಿವರಗೆ ನಾಲ್ಕು ನೂರು ಕ್ವಿಂಟಲ್​ಗೂ ಅಧಿಕ ಅಕ್ಕಿಯನ್ನು ಬಳಸಿ ಅನ್ನ ಮಾಡಲಾಗಿದ್ದು, ಸ್ವಲ್ಪವು ಕೂಡ ವೇಸ್ಟ್ ಮಾಡಿಲ್ಲ. ಲಕ್ಷ ಲಕ್ಷ ರೊಟ್ಟಿ, ಶೇಂಗಾ ಹೋಳಿಗೆ, ಕ್ವಿಂಟಲ್ ಗಟ್ಟಲೆ ಮಾದಲಿಯನ್ನು ಭಕ್ತರಿಗೆ ಬಡಿಸಲಾಗಿದೆ.

ಮುಂಜಾನೆ ಆರು ಗಂಟೆಗೆ ಆರಂಭವಾಗುವ ಗವಿಮಠದ ಮಹಾದಾಸೋಹ, ರಾತ್ರಿ ಒಂದು ಗಂಟೆವರಗೆ ಕೂಡ ಓಪನ್ ಇರುತ್ತದೆ. ಭಕ್ತರು ಯಾವುದೇ ಸಮಯದಲ್ಲಿ ಬಂದ್ರು ಕೂಡ ಅವರಿಗೆ, ರುಚಿ, ಶುಚಿಯಾದ, ಹೊಟ್ಟೆ ತುಂಬಾ ಊಟ ನೀಡಬೇಕು ಅನ್ನೋದು ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶವರ ಸ್ವಾಮೀಜಿಯ ಆಶಯವಾಗಿದೆ. ಅವರ ಆಶಯಕ್ಕೆ ತಕ್ಕಂತೆ ಜಾತ್ರೆಯ ಸಮಯದಲ್ಲಿ, ಭೂರಿ ಭೋಜನದ ವ್ಯವಸ್ಥೆಯನ್ನು ಅನೇಕ ವರ್ಷಗಳಿಂದ ಮಠದಲ್ಲಿ ಮಾಡಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಕೊಪ್ಪಳದ ಗವಿಮಠ ಗವಿಸಿದ್ದೇಶ್ವರ ಜಾತ್ರೆಗೆ ಸುತ್ತೂರುಶ್ರೀಗಳಿಂದ ಚಾಲನೆ: ಲಕ್ಷಾಂತರ ಭಕ್ತರು ಭಾಗಿ

ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಸಿಬ್ಬಂದಿ, ಅಡುಗೆ ತಯಾರಿ, ಅಡುಗೆ ಬಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಮಠದ ದಾಹೋಸವನ್ನು ಕಂಡು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕೂಡಾ ಅನೇಕ ಭಕ್ತರು, ಮಠಕ್ಕೆ ಆಗಮಿಸಿ ದಾಹೋಸದದಲ್ಲಿ ಸೇವೆಯನ್ನು ಮಾಡುತ್ತಾರೆ. ಇನ್ನು ಮಠದ ದಾಸೋಹಕ್ಕೆ ಸಾವಿರಾರು ಭಕ್ತರು, ಲಕ್ಷ ಲಕ್ಷ ರೊಟ್ಟಿ, ಶೇಂಗಾ ಹೋಳಿಗೆ, ಮಾದಲಿಯನ್ನು ತಂದು ನೀಡುತ್ತಾರೆ. ಭಕ್ತರು ನೀಡಿರೋ ಆಹಾರ ಪದಾರ್ಥಗಳು ಮತ್ತು ಮಠದಿಂದ ಸಿದ್ದಗೊಳಿಸಲಾಗುವ ಅನೇಕ ಆಹಾರ ಪದಾರ್ಥಗಳೆಲ್ಲವನ್ನು ಸೇರಿಸಿ, ಮಹಾ ದಾಸೋದಲ್ಲಿ ಭಕ್ತರಿಗೆ ನೀಡಲಾಗುತ್ತದೆ ಅಂತಾರೆ ದಾಸೋಹದ ವ್ಯವಸ್ಥೆಯನ್ನು ನೋಡಿಕೊಳ್ಳುವ ರುದ್ರೇಶ್.

ಗವಿಮಠದ ಜಾತ್ರೆ, ರಥೋತ್ಸವದಷ್ಟೇ ಪ್ರಸಿದ್ದಿಯನ್ನು ಮಠದ ಮಾಹಾ ದಾಸೋಹ ಕೂಡ ಪಡೆದುಕೊಂಡಿದೆ. ಜಾತ್ರೆಯಲ್ಲಿ ಮಠದ ದಾಸೋಹ ಪ್ರಸಾದವಾಗಿದ್ದರು ಕೂಡ ಭೂರಿ ಬೋಜನವನ್ನು ಭಕ್ತರು ಹೊಟ್ಟೆ ತುಂಬಾ ಸವಿದು, ಜೈ ಗವಿಸಿದ್ದೇಶ್ವರ ಮಹರಾಜ್ ಕಿ ಜೈ ಅಂತ ಜೈಕಾರ ಹಾಕುವದು ವಿಶೇಷವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.