ಮೋದಿ ಪ್ರಧಾನಿಯಾಗಿ ಮುಂದುವರಿಯಬೇಕೋ? ಬೇಡವೋ? ಊರಲ್ಲಿ ನಿಮ್ಮ ಅಪ್ಪ-ಅಮ್ಮ ಮತ ಹಾಕಲು ಹೇಳಿ: ಶಾಲೆಯಲ್ಲಿ ಸಚಿವ ಹಾಲಪ್ಪ ಆಚಾರ್ ಪ್ರಚಾರ
ಗೆದಿಗೇರಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ್ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡುವಾಗ ಪರೋಕ್ಷವಾಗಿ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಿದ್ದಾರೆ.
ಕೊಪ್ಪಳ: ರಾಜ್ಯ ವಿಧಾನ ಸಭಾ ಚುನಾವಣೆ(Karnataka Assembly Elections 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರ ಜೋರಾಗಿದೆ. ಪ್ರಜಾಧ್ವನಿ ಯಾತ್ರೆ, ಪಂಚರತ್ನ ರಥಯಾತ್ರೆ, ವಿಜಯ ಸಂಕಲ್ಪ ಯಾತ್ರೆಗಳ ಮೂಲಕ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರಕ್ಕೆ ಇಳಿದಿದ್ದಾರೆ. ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ (Halappa Achar) ಸ್ವಕ್ಷೇತ್ರದ ಸರ್ಕಾರಿ ಶಾಲೆಯಲ್ಲೂ ಚುನಾವಣೆ ಪ್ರಚಾರ ಮಾಡಿದ್ದಾರೆ. ಶಾಲೆಯ ಕಾರ್ಯಕ್ರಮದಲ್ಲಿ ಪರೋಕ್ಷವಾಗಿ ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರ ವ್ಯಾಪ್ತಿಯ ಗೆದಿಗೇರಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ್ ಭಾಗಿಯಾಗಿದ್ದರು. ಈ ವೇಳೆ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡುವಾಗ ಪರೋಕ್ಷವಾಗಿ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಿದ್ದಾರೆ. ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಗುಣಗಾನ ಮಾಡಿದ್ದಾರೆ. ಸಚಿವರು ಮಾತ್ನಾಡಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ನಿಂತು ಆಜಾನ್ ಕೂಗಿದ ಯುವಕ, ವಿಡಿಯೋ ವೈರಲ್
ಈ ದೇಶವನ್ನು ಅಭಿವೃದ್ಧಿಶೀಲ ದೇಶವನ್ನಾಗಿ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. 24×7 ಈ ದೇಶಕ್ಕಾಗಿ ತನ್ನನ್ನು ಸಮರ್ಪಣೆ ಮಾಡಿಕೊಂಡಿದ್ದಾರೆ. ಅವರು ತಮ್ಮ ನಿವಾಸದಲ್ಲಿ ಇರದೆ, ಒಂದು ನಿಮಿಷವನ್ನೂ ವ್ಯರ್ಥ ಮಾಡುತ್ತಿಲ್ಲ. ಈ ದೇಶವನ್ನು ವಿಶ್ವದಲ್ಲಿ ನಂಬರ್ ಒನ್ ಮಾಡಲು ಸಂಕಲ್ಪ ತೊಟ್ಟಿದ್ದಾರೆ. ಹಗಲು ರಾತ್ರಿ ಈ ದೇಶಕ್ಕಾಗಿ ಕೆಲಸ ಮಾಡುವ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ. ಹೀಗಾಗಿ ಹೇಳಿ ಮೋದಿ ನಮಗೆ ಬೇಕಾ ಬೇಡಾ? ಎಂದು ಶಾಲಾ ಮಕ್ಕಳಿಗೆ ಹಾಲಪ್ಪ ಆಚಾರ್ ಪ್ರಶ್ನೆ ಮಾಡಿದ್ದಾರೆ.
ಹಾಗೂ ಬೇಕು ಅಂದ್ರೆ ಏನ್ ಮಾಡಬೇಕು? ಈಗ ಚುನಾವಣೆ ಬರುತ್ತೆ, ಊರಲ್ಲಿರುವ ನಿಮ್ಮಪ್ಪ, ನಿಮ್ಮವ್ವ ಎಲ್ಲರಿಗೂ ಹೇಳಿ. ನರೇಂದ್ರ ಮೋದಿ ಈ ದೇಶದೊಳಗೆ ಮುಂದುವರೆಬೇಕೋ? ಬೇಡವೋ?. ಈ ದೇಶ ಶ್ರೀಮಂತವಾಗಿರಬೇಕಂದ್ರೆ ಎಂಥ ನಿರ್ಣಯ ತೆಗೆದುಕೊಳ್ಳಬೇಕು ಅಂತಾ ಹೇಳಿ. ನೀವು ನಿಮ್ಮಪ್ಪ, ನಿಮ್ಮವ್ವ ಊರಿನಲ್ಲಿರುವವರಿಗೆ ಹೇಳಿದರೆ ಕರೆಕ್ಟ್ ಆಗುತ್ತೆ ಇಲ್ಲಂದ್ರ ಇದು ಆಗುವುದಿಲ್ಲ. ಹಿಂದಿನ ಸರ್ಕಾರ ಹೇಗಿತ್ತು, ಈಗಿನ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ. ನಿಮ್ಮ ತಾಯಿ, ನಿಮ್ಮ ತಂದಿ, ನಿಮ್ಮ ಅಣ್ಣತಮ್ಮಂದಿರಿಗೆ ಎಲ್ಲರಿಗೆ ಹೇಳಬೇಕು. ಇದನ್ನ ಬಿಡಿಸಿ ಹೇಳಿ, ಇನ್ನೇನು ಒಂದು ತಿಂಗಳೊಳಗ ಚುನಾವಣೆ ಬರುತ್ತೆ. ಈ ದೇಶ ವಿಶ್ವದಲ್ಲಿ ನಂಬರ್ ಓನ್ ಆಗ್ಬೇಕಾ? ಬೇಡವೋ? ಆಗ್ಬೇಕೋ ಬೇಡವೋ ಮತ್ತೊಮ್ಮೆ ನರೇಂದ್ರ ಮೋದಿ ಎಂದು ನಿಮ್ಮೂರಲ್ಲಿ ಹೇಳಿ ಎಂದು ಶಾಲಾ ಮಕ್ಕಳಿಗೆ ಬಿಜೆಪಿ ಪರ ಚುನಾವಣೆ ಪ್ರಚಾರ ಮಾಡಲು ಸಚಿವ ಹಾಲಪ್ಪ ಆಚಾರ್ ಕರೆ ಕೊಟ್ಟಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:25 pm, Sun, 19 March 23