ಕೊಪ್ಪಳ: ಒಲಿಂಪಿಕ್ಸ್ನಲ್ಲಿ ಜಾವಲೀನ್ ಎಸೆತದಲ್ಲಿ ನೀರಜ್ ಚೋಪ್ರಾ (Neeraj Chopra) ಚಿನ್ನದ ಪದಕ ಗಳಿಸಿರುವುದು ಭಾರತೀಯರೆಲ್ಲರ ಹರ್ಷಕ್ಕೆ ಕಾರಣವಾಗಿದೆ. ಇಂದು ಭಾರತೀಯ ಕ್ರೀಡಾಪ್ರೇಮಿಗಳು ಹುಗ್ಗಿ ಊಟ ಉಂಡು ಸಂಭ್ರಮಿಸುತ್ತಾರೆ. ಕೊಪ್ಪಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ನಗರದ ಅಶೋಕ ವೃತ್ತದಲ್ಲಿ ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬಂಗಾರದ ಮನುಷ್ಯ ನೀರಜ್ ಚೋಪ್ರಾರ ಭಾವಚಿತ್ರ ಹಿಡಿದು ಘೋಷಣೆ ಕೂಗಿ ಸಂಭ್ರಮ ವ್ಯಕ್ತಪಡಿಸಿದರು. ಇದೇ ಸ್ಥಳದಲ್ಲಿಯೇ ಹಿಂದೂಪರ ಕಾರ್ಯಕರ್ತರು ಸಹ ಘೋಷಣೆ ಕೂಗಿ ನೀರಜ್ ಚೋಪ್ರಾ ಗೆಲುವನ್ನು ಸಂಭ್ರಮಿಸಿದರು. ಜತೆಗೆ ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿ ಭಾರತೀಯ ಹೆಮ್ಮೆಯ ಕ್ರೀಡಾಪಟುವಿನ ಗೆಲುವನ್ನು ಸಂಭ್ರಮಿಸಿದರು.
ಇಷ್ಟೊಂದು ದೊಡ್ಡ ಸಾಧನೆ ಮಾಡಿ, ಭಾರತೀಯರ ಪ್ರಶಂಸೆಗೆ ಪಾತ್ರರಾದ ಚಿನ್ನದ ಹುಡುಗ ನೀರಜ್ ಚೋಪ್ರಾ ಯಾರು? ಅವರ ಇತರ ಸಾಧನೆಗಳೇನು? ದೇಶಕ್ಕೆ, ಕ್ರೀಡೆಗೆ ಅವರ ಕೊಡುಗೆಗಳೇನು? ಇತ್ಯಾದಿಗಳ ಬಗ್ಗೆ ವಿವರಗಳನ್ನು ಇಲ್ಲಿ ನೀಡಲಾಗಿದೆ. ಬಂಗಾರ ತಂದವನ ಹಿನ್ನೆಲೆ ಏನು? ತಿಳಿದುಕೊಳ್ಳಿ.
ಭಾರತೀಯ ಸೇನೆಯ ಸುಬೇದಾರ್ ನೀರಜ್ ಚೋಪ್ರಾ
ನೀರಜ್ ಚೋಪ್ರಾ ಹರ್ಯಾಣ ರಾಜ್ಯದ, ಪಾಣಿಪತ್ ಜಿಲ್ಲೆಯ, ಖಾಂಡ್ರಾ ಗ್ರಾಮದವರು. ಅವರು 1997ರ ಡಿಸೆಂಬರ್ 24 ರಂದು ಜನಿಸಿದರು. ತಮ್ಮ ಕಲಿಕೆಯನ್ನು ಚಂಡೀಗಡದಲ್ಲಿ ಪೂರೈಸಿದರು. ಬಳಿಕ, 2016 ರಲ್ಲಿ ಜೂನಿಯರ್ ಕಮಿಷನ್ಡ್ ಅಧಿಕಾರಿಯಾಗಿ, ಸುಬೇದಾರ್ ರ್ಯಾಂಕ್ನೊಂದಿಗೆ ಭಾರತೀಯ ಸೇನೆ ಸೇರಿಕೊಂಡರು. ಅಷ್ಟೇ ಅಲ್ಲದೆ, ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ನೀರಜ್ ಚೋಪ್ರಾ ಪಿಎಮ್ ಕೇರ್ಸ್ ನಿಧಿಗೆ 2 ಲಕ್ಷ ರೂಪಾಯಿಗಳ ಕೊಡುಗೆಯನ್ನೂ ನೀಡಿದ್ದರು.
ಚೋಪ್ರಾ ಗೆದ್ದ ಈ ಮೊದಲ ಪದಕಗಳಿವು
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನ ತಂದುಕೊಟ್ಟ ಚೋಪ್ರಾ, 2017ರ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದರು. 2018ರ ಏಷ್ಯನ್ ಗೇಮ್ಸ್ನಲ್ಲಿ ಕೂಡ ಚಿನ್ನದ ಪದಕ ಗೆದ್ದಿದ್ದರು. ಚೋಪ್ರಾ 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಚಿನ್ನದ ಪದಕ ಪಡೆದಿದ್ದರು. ಅಥ್ಲೆಟಿಕ್ ಪಂದ್ಯವೊಂದರಲ್ಲಿ ಭಾರತೀಯ ಒಬ್ಬರಿಗೆ ಮೊತ್ತಮೊದಲ ಬಾರಿಗೆ ಒಲಿಂಪಿಕ್ ಚಿನ್ನದ ಪದಕ ಇಂದು ಲಭ್ಯವಾಗಿದೆ. ಅಭಿನವ್ ಬಿಂದ್ರಾ ಬಳಿಕ ವೈಯಕ್ತಿಕ ಸ್ಪರ್ಧೆಯೊಂದರಲ್ಲಿ ಎರಡನೇ ಬಾರಿಗೆ ಒಲಿಂಪಿಕ್ ಚಿನ್ನದ ಪದಕವನ್ನು ನೀರಜ್ ಚೋಪ್ರಾ ಪಡೆದಿದ್ದಾರೆ.
ಇದನ್ನೂ ಓದಿ:
Neeraj Chopra: ಚಿನ್ನದ ಹುಡುಗ ‘ಸುಬೇದಾರ್ ನೀರಜ್ ಚೋಪ್ರಾ’ ಬಗ್ಗೆ ನಿಮಗೆಷ್ಟು ಗೊತ್ತು?
(Neeraj Chopra wins Gold medal Celebration of Hindu and Congress activists in Koppal GGD)